ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ದಿನ... ಎಂದು?

Last Updated 1 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಸಣಕಲು ದೇಹ, ಜಿಡ್ಡುಗಟ್ಟಿದ ಮುಖ, ತಲೆಗೆ ಎಣ್ಣೆ ಕಾಣದೆ ಗಂಟುಕಟ್ಟಿದ ಕೂದಲು, ಚಪ್ಪಲಿ ಹಾಕದೆ ಒಡೆದ ಹಿಮ್ಮಡಿ, ಸೀರೆ ಸೆರಗು ಟೊಂಕಕ್ಕೆ ಕಟ್ಟಿ  ಬಿರುಬಿಸಿಲನ್ನು ಲೆಕ್ಕಿಸದೇ ಹೊಟ್ಟೆಪಾಡಿಗಾಗಿ ಪ್ಲಾಸ್ಟಿಕ್ ಬಿಂದಿಗೆಗಳನ್ನು ಭುಜಕ್ಕೆ ಏರಿಸಿ ಹೊರಟ ಮಹಿಳೆಗೆ `ಏನವ್ವಾ, ಮಾರ್ಚ್ 8 ಮಹಿಳಾ ದಿನ ಆಚರಿಸ್ತಾರೆ,  ಅದರ ಬಗ್ಗೆ ನಿಂಗೆ ಗೊತ್ತೇ?' ಎಂದಾಗ ಮುಸಿಮುಸಿ ನಕ್ಕು.

`ಹಂಗಂದ್ರೇನು?' ಎಂಬ ಮರು ಪ್ರಶ್ನೆ. `ಆ ದಿನ ಈ ದಿನ ಅಂಥ ಕುಂತ್ರಾ ಹ್ಯಾಂಗ್ರಿ, ಹೊಟ್ಟೆಗೆ ಹಿಟ್ಟು ಎಲ್ಲಿಂದ ಬರತೈತರಿ...' ಎಂದು ಗುನುಗುತ್ತಾ ಮುಂದೆ ಸಾಗಿದಳು.ಎಷ್ಟೋ ವಿದ್ಯಾವಂತ ಮಹಿಳೆಯರಿಗೂ ಮಹಿಳಾ ದಿನಾಚರಣೆಯ ಆಶಯಗಳು ತಿಳಿದೇ ಇಲ್ಲ.

ಕೆಲವರಿಗೆ ತಿಳಿಯುವ ಆಸಕ್ತಿಯೂ ಇಲ್ಲ. ಸರಿಯಾದ ಮಾಹಿತಿ ಇಲ್ಲದೆ ಹಲವರು `ಮಹಿಳಾ ದಿನಾಚರಣೆ ಅವಶ್ಯವೇ? ವರ್ಷಕ್ಕೆ ಒಂದು ದಿನ ಆಚರಣೆ ಮಾಡುವುದರಿಂದ ಈ ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀಯರಿಗೆ ಸಮಾನತೆ ದೊರೆತಂತಾಗುವುದೇ...? ಎಂದು ಕೇಳುವ ಪ್ರಶ್ನೆ ಬಾಣದಂತೆ ಬಂದು ಇರಿಯುತ್ತದೆ.

ಸಂಘರ್ಷದ ಸ್ಮರಣೆ
ಇದೊಂದು ಹೋರಾಟದ ದಿನ. ನ್ಯೂಯಾರ್ಕ್‌ನಲ್ಲಿ ಕ್ಲಾರಾ ಜೆಟ್‌ಕಿನ್ ಎಂಬ ಮಹಿಳೆ ಸಿದ್ಧ ಉಡುಪು ತಯಾರಿಕಾ ಕಾರ್ಖಾನೆಯ ನೂರಾರು ಮಹಿಳಾ ಕಾರ್ಮಿಕರನ್ನು ಸೇರಿಸಿಕೊಂಡು ಸಮಾನ ವೇತನಕ್ಕಾಗಿ, 8 ತಾಸಿನ ಕೆಲಸಕ್ಕಾಗಿ, ಹೆರಿಗೆ ಸೌಲಭ್ಯಗಳಿಗಾಗಿ ತಿಂಗಳುಗಟ್ಟಲೆ ಹೋರಾಟ ನಡೆಸಿ ಗೆಲುವು ಸಾಧಿಸಿದ ದಿನ.

ಆಚರಿಸಲು ಇದು ಹಬ್ಬವಲ್ಲ, ಸಮೃದ್ಧ ಬದುಕಿನ ಆನಂದದ ಆಚರಣೆಯೂ ಅಲ್ಲ. ಸಂಘರ್ಷದಿಂದ ಸಾಧಿಸಿದ ಸ್ಮರಣೆ ಅಷ್ಟೇ. ಈ ಒಂದು ದಿನವನ್ನು ನೆಪವಾಗಿ ಇಟ್ಟುಕೊಂಡು ವಿಶ್ವ ಸಂಸ್ಥೆ 1975ರಲ್ಲಿ `ವಿಶ್ವ ಮಹಿಳಾ ದಿನ' ಆಚರಣೆಗೆ ಕರೆ ಕೊಟ್ಟಿತು. ಅನೇಕ ದೇಶಗಳು ಇದನ್ನು ಅಳವಡಿಸಿಕೊಂಡವು.

ನಿಜವಾಗಿ ಹೇಳಬೇಕೆಂದರೆ ಕಾರ್ಯನಿರತ (ದುಡಿಯುವ) ಮಹಿಳೆಯರನ್ನು ಗೌರವಿಸಿ, ಪ್ರೋತ್ಸಾಹಿಸುವುದಕ್ಕಾಗಿ `ಮಹಿಳಾ ದಿನ' ಆಚರಿಸಲಾಗುತ್ತದೆ. ಮಹಿಳೆಯರ ಆರ್ಥಿಕ, ಸಾಮಾಜಿಕ, ರಾಜಕೀಯ ಸಾಧನೆಯ ಸಂಕೇತ ಈ ದಿನ.

  ಕೆಲವು ರಾಷ್ಟ್ರಗಳಲ್ಲಿ ತಮ್ಮ ಸಂಪ್ರದಾಯ, ಸಂಸ್ಕೃತಿ ಎನ್ನುವಂತೆ ಈ ದಿನವನ್ನು ಆಚರಿಸಿದರೆ, ಇನ್ನು ಕೆಲವು ದೇಶಗಳಲ್ಲಿ ತಾಯಂದಿರ ದಿನ, ಪ್ರೇಮಿಗಳ ದಿನದ ಹಾಗೆ ಆಚರಿಸುವುದು, ಒಬ್ಬರಿಗೊಬ್ಬರು ಶುಭಾಶಯ ಹಂಚಿಕೊಳ್ಳುವುದು ರೂಢಿ.

ಅದರಂತೆ ನಮ್ಮಲ್ಲೂ ಕಾಲಕಾಲಕ್ಕೆ ಮಹಿಳಾ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ಅದನ್ನು ಒಂದು ಅರ್ಥಪೂರ್ಣವಾದ ಆಚರಣೆಯಾಗಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಕಡಿಮೆ ಎಂದೇ ಹೇಳಬಹುದು.

ಸಬಲೀಕರಣ ಎಂದರೆ...

1975ರಿಂದ 85ರವರೆಗಿನ ಒಂದು ದಶಕವನ್ನು ಮಹಿಳಾ ದಶಕವನ್ನಾಗಿ ಗುರುತಿಸಲಾಯಿತು. ಅಂದಿನಿಂದೀಚೆಗೆ ಹಲವಾರು ಮಹಿಳಾಪರ ಸಂಘಟನೆಗಳು ಹುಟ್ಟಿಕೊಂಡ ಪರಿಣಾಮ, ಮಹಿಳಾ ಸಬಲೀಕರಣ ಪ್ರಬಲ ಅಂಶವಾಗಿ ಮಾರ್ಪಟ್ಟಿತು.

ಆದರೂ ಇಂತಹ ಅನೇಕ ಅಂತರ ರಾಷ್ಟ್ರೀಯ ಪ್ರಯತ್ನಗಳ ನಡುವೆಯೂ ಮಹಿಳೆಯ ಸ್ಥಿತಿಗತಿ, ಸ್ಥಾನಮಾನವನ್ನು ಮೇಲಕ್ಕೇರಿಸುವುದು ಈ ಪುರುಷ ಪ್ರಧಾನ ಸಮಾಜದಲ್ಲಿ ಸಾಧ್ಯವಾಗಿಲ್ಲ. ಮಹಿಳೆಯರ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಪಾತ್ರಗಳನ್ನು ಅತ್ಯಂತ ಕಿರಿದಾದ ದೃಷ್ಟಿಕೋನದಿಂದ ವ್ಯಾಖ್ಯಾನಿಸಲಾಗಿದೆ. 

21ನೇ ಶತಮಾನ ಭಾರತದ ರಾಜಕೀಯ ರಂಗದಲ್ಲಿ ವಿಶಿಷ್ಟವಾದ ಇತಿಹಾಸ ಬರೆದಿದೆ. ರಾಜಕೀಯದ ಆಯಕಟ್ಟಿನ ಸ್ಥಳಗಳಲ್ಲಿ ಮಹಿಳೆಯರಿಗೆ ಅವಕಾಶವೇ ಇರಲಿಲ್ಲ. ಆದರೆ ಈಗ ಬದಲಾವಣೆಯ ಗಾಳಿ ಬೀಸುತ್ತಿದೆ. ಪ್ರಮುಖ ಹುದ್ದೆಗಳಲ್ಲಿ ಮಹಿಳಾಮಣಿಗಳೇ ರಾರಾಜಿಸುತ್ತಿದ್ದಾರೆ.

ಇದೆಲ್ಲದರ ನಡುವೆಯೂ ನಮ್ಮ ದೇಶದಲ್ಲೂ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ಇದಕ್ಕೆ ಕಾರಣ ಹುಡುಕುತ್ತಾ ಹೋದರೆ ಸಿಗುವ ಉತ್ತರ ಅತ್ಯಂತ ಸರಳವಾದುದು.

ಮಹಿಳಾ ಅಭಿವೃದ್ಧಿ ಎಂದರೆ ಕೇವಲ ಬೆರಳೆಣಿಕೆಯ ಮಹಿಳೆಯರಿಗೆ ಅವಕಾಶ ಕಲ್ಪಿಸುವುದಲ್ಲ, ಸಬಲೀಕರಣ ಎಂದರೆ ಗಂಡನನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳುವುದು ಎಂದಲ್ಲ, ಸಮಾನಾವಕಾಶ ಎಂದರೆ ಗಂಡ ಸಂಬಳವನ್ನು ಹೆಂಡತಿಯ ಕೈಗಿಡುವುದು ಎಂದರ್ಥವಲ್ಲ.

ಮಹಿಳಾ ಹೋರಾಟಕ್ಕೆ ಅನೇಕ ಮಹಿಳಾ ಪರ ಸಂಘಟನೆಗಳೂ ಇಂತಹ ಬಾಲಿಶ, ಅಪ್ರಬುದ್ಧ ಅರ್ಥ ವಿವರಣೆಗಳನ್ನು ನೀಡುವ ಮೂಲಕ ಅಧೋಗತಿಗೆ ಕಾರಣವಾಗಿವೆ ಎನ್ನಬಹುದು.

`ದೆಹಲಿ ಅತ್ಯಾಚಾರ ಘಟನೆ ಸಾಂಕೇತಿಕ ಮಾತ್ರ. ಈಗಾಗಲೇ ಸಾಕಷ್ಟು ಅತ್ಯಾಚಾರ ಪ್ರಕರಣಗಳು ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿ ಉಳಿದಿವೆ. ತ್ವರಿತ ನ್ಯಾಯಾಲಯಕ್ಕೆ ರವಾನಿಸಿ, ಅಪರಾಧಿಗಳಿಗೆ ಬೇಗನೇ ಶಿಕ್ಷೆ ಕೊಡುವಂತಾಗಬೇಕು.

ಅದಕ್ಕಾಗಿಯೇ ಒಂದು ಕಾನೂನನ್ನು ಜಾರಿಗೊಳಿಸಬೇಕು' ಎಂದು ಆಗ್ರಹಿಸುತ್ತಾರೆ  ಪ್ರಜ್ಞಾ ಕಾನೂನು ಸಲಹಾ ಸಮಿತಿ ಅಧ್ಯಕ್ಷೆ ಡಾ. ಪ್ರೊ. ಮೀನಾಕ್ಷಿ ಬಾಳಿ.
`ಮಹಿಳಾ ಪರ ಸಂಘರ್ಷ ಎನ್ನುವುದು ಒಂದು ದಿನದ ಕಾರ್ಯಕ್ರಮ ಮಾಡಿ ಮುಗಿಸುವಂತದ್ದಲ್ಲ.

ಶೇ 33 ಮಹಿಳಾ ಮೀಸಲಾತಿ ಮಸೂದೆ ಕಳೆದ 20 ವರ್ಷಗಳಿಂದಲೂ ನೆನೆಗುದಿಗೆ ಬ್ದ್ದಿದಿದೆ. ಇದಕ್ಕಿಂತ ಭಾರತೀಯ ಪ್ರಜಾಪ್ರಭುತಕ್ಕೆ ನಾಚಿಕೆಗೇಡಿತನ ಸಂಗತಿ ಮತ್ತೊಂದಿಲ್ಲ' ಎನ್ನುತ್ತಾರೆ.

ಅರೆಬೆತ್ತಲೆ ಪ್ರದರ್ಶನ

`ಮಾಧ್ಯಮಗಳು, ಸೆಲೆಬ್ರಿಟಿ ಪ್ರದರ್ಶನಗಳು, ಗೋಡೆಗಳ ಮೇಲೆ ಪ್ರಕಟವಾಗುವ ಫಲಕಗಳಲ್ಲಿ ಮಹಿಳೆಯನ್ನು ಅಶ್ಲೀಲವಾಗಿ ಚಿತ್ರಿಸಲಾಗುತ್ತಿದೆ. ವ್ಯಾಪಾರ ವೃದ್ಧಿಗೆ ಮಹಿಳೆಯ ದೇಹ ಪ್ರದರ್ಶನ ಅನಿವಾರ್ಯವೇ ಎಂಬ ಚಿಂತನೆ ನಡೆಯಬೇಕಿದೆ.

ಉತ್ತಮ ಪೋಷಾಕಿನಲ್ಲಿ ಪುರುಷ, ಬಿಕಿನಿ ಧರಿಸಿ ಮಲಗಿದ ಹೆಣ್ಣು... ಇಲ್ಲೆಲ್ಲಾ ಮಹಿಳೆಯನ್ನು ಕಾಮದ ಗೊಂಬೆಯಂತೆ ಕಾಣಲಾಗುತ್ತಿದೆ. ಇದು ಶೋಷಣೆಯ ಪರಾಕಾಷ್ಠೆ. ಎಷ್ಟೋ ವೇಳೆ ಮಹಿಳೆಯರಿಗೇ ತಿಳಿಯದ ರೀತಿಯಲ್ಲಿ ಸ್ಪೈ ಕ್ಯಾಮೆರಾ, ಮೊಬೈಲ್‌ಗಳ ಮೂಲಕ ಚಿತ್ರೀಕರಿಸಿ ಕಂಪ್ಯೂಟರ್, ಅಂತರ್ಜಾಲದಲ್ಲಿ ಪ್ರದರ್ಶಿಸಿ ಅವಮಾನಕ್ಕೆ ಗುರಿ ಮಾಡಲಾಗುತ್ತಿದೆ.

ಇಂತಹ ಕೃತ್ಯಗಳ ವಿರುದ್ಧ ಪ್ರಜ್ಞಾವಂತ ಮಹಿಳೆಯರು ಪ್ರತಿಭಟಿಸಬೇಕು' ಎನ್ನುತ್ತಾರೆ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯದರ್ಶಿ, ಅಂಗನವಾಡಿ ನೌಕರರ ಸಂಘದ ಗುಲ್ಬರ್ಗ ಜಿಲ್ಲಾಧ್ಯಕ್ಷೆ ಗೌರಮ್ಮ.

ಜಾಗತಿಕ ಮಟ್ಟದಲ್ಲಿ ಈ ಬಗೆಯ ತಿಳಿವಳಿಕೆ, ಬೆಳವಣಿಗೆಗಳು ಹೆಚ್ಚುತ್ತಿದ್ದರೂ ಭಾರತದಂಥ ಸಂಕೀರ್ಣ ಸಂಸ್ಕೃತಿಯ ದೇಶದಲ್ಲಿ ಶತಮಾನಗಳ ಸಾಂಪ್ರದಾಯಿಕ ನಂಬಿಕೆಗಳು, ಪುರುಷ ಪ್ರಧಾನ ಜೀವನಶೈಲಿ ಇನ್ನೂ ಹಾಸುಹೊಕ್ಕಾಗಿದೆ.

ಮಹಿಳೆ ಸ್ವಂತಿಕೆ, ಸ್ವಾಭಿಮಾನದಿಂದ ಬದುಕಲು ಅವಕಾಶ ನೀಡುವ ಕಾಯ್ದೆ ಬರಬೇಕಿದೆ. ಕಾಯ್ದೆಯಿಂದಲೂ ಸಾಧಿಸಲಾಗದ್ದನ್ನು ಜನರ ಸಹಕಾರ ಮನೋಭಾವದಿಂದ ಸಾಧಿಸಿದರೆ ಮಾತ್ರ ದಿನಾಚರಣೆ ಅರ್ಥಪೂರ್ಣ ಆಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT