ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಳ ಮದುವೆ ಸುಮಧುರ ಬಾಳುವೆ

Last Updated 1 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಸಂಜೆಗತ್ತಲೆಯಾಗಿತ್ತು. ಮೈಯೆಲ್ಲ ನಡುಗುತ್ತಿತ್ತು, ಮನದ ಕಂಪನ ನಿಯಂತ್ರಿಸಲಾಗುತ್ತಿರಲಿಲ್ಲ. ವೇದಿಕೆ ಮೇಲೆ ನಾನು, ಭಾವಿ ಪತ್ನಿ ಶೀಲಾ, ವಿಚಾರವಾದಿ ಕೆ.ರಾಮದಾಸ್ ಮತ್ತು ನಾನು ಕೆಲಸ ನಿರ್ವಹಿಸುತ್ತಿದ್ದ ಪತ್ರಿಕೆಯ ಸಂಪಾದಕರು. ಮುಂದೆ ಹಿರಿಯರು, ಗೆಳೆಯರು, ಸಹೋದ್ಯೋಗಿಗಳು ಸೇರಿದಂತೆ ಸುಮಾರು ಮೂವತ್ತು ಮಂದಿ. ರಾಮದಾಸ್‌ ಅವರು ಮಂತ್ರಮಾಂಗಲ್ಯ ನಡೆಸಿಕೊಟ್ಟರು. ನಾನು ಸಂಭ್ರಮದ ಅಲೆಯಲ್ಲಿ ತೇಲುತ್ತಿದ್ದೆ. ಪ್ರೀತಿಸಿದ ಗೆಳತಿ ಕೊನೆಗೂ ಸುಸೂತ್ರವಾಗಿ ಬಾಳಿಗೆ ಹೆಜ್ಜೆ ಇಟ್ಟಳು ಎಂಬುದು ಸಂಭ್ರಮಕ್ಕೆ ಒಂದು ಕಾರಣವಾದರೆ, ಬಾಲ್ಯದಲ್ಲೇ ಕನಸು ಕಂಡ ರೀತಿಯಲ್ಲಿ ಮದುವೆಯಾಗಲು ಸಾಧ್ಯವಾದುದು ಮತ್ತೊಂದು ಕಾರಣ.

ಮೈಸೂರಿನ ಕೆ.ರಾಮದಾಸ್‌ ಮನೆಯ ಛಾವಣಿ ಮೇಲೆ ‘ಮಾನವ ಮಂಟಪ’ದಲ್ಲಿ ನಡೆದ ಆ ಮದುವೆಗೆ ಶುಭ–ಅಶುಭ ದಿನದ ಹಂಗು ಇರಲಿಲ್ಲ. ಮುಹೂರ್ತದ ಲೆಕ್ಕಾಚಾರವೂ ಇರಲಿಲ್ಲ. ಕಾಸರಗೋಡಿನಿಂದ ಕಷ್ಟಪಟ್ಟು ‘ಓಡಿ ಬಂದ’ ಆಯಾಸವನ್ನೂ ಲೆಕ್ಕಿಸದೆ ಮುಸ್ಸಂಜೆಯಲ್ಲಿ ನಡೆದ ಮದುವೆ ಅದು. ಸಂಜೆಯ ಮೊದಲು ಮದುವೆಯಾಗುವುದು ಅನಿವಾರ್ಯವಾಗಿತ್ತು. ಅದಕ್ಕೆ ಎರಡು ಕಾರಣಗಳು. ಒಂದು–ಮದುವೆಯ ಬಂಧನಕ್ಕೆ ಸಿಲುಕದೆ ಆ ರಾತ್ರಿ ಒಟ್ಟಿಗೆ ಕಳೆಯಲು ಮನಸ್ಸು ಒಪ್ಪುತ್ತಿರಲಿಲ್ಲ. ಎರಡನೆಯದು–ನಾವು ಮೈಸೂರು ಸೇರಿದ ವಿಷಯ ತಿಳಿದು ಊರಿನಿಂದ ಕೆಲವರು ಹೊರಟಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ‘ರಕ್ಷಣೆ’ಗಾಗಿ ಮದುವೆಯ ಔಪಚಾರಿಕತೆಯನ್ನು ಅಂದೇ ಮುಗಿಸುವುದು. ಅದು ಅಂತರ ಧರ್ಮೀಯ ವಿವಾಹ!

ಆ ಮದುವೆಯ ವೆಚ್ಚ ಕೇವಲ ₨ 600! ಒಂದು ಹೊಸ ಸೀರೆಗೆ ₨ 400, ಓಡಾಟದ ವೆಚ್ಚ ₨ 200. ಚಹಾ, ಹೂವಿನ ಹಾರ ಇತ್ಯಾದಿ ವ್ಯವಸ್ಥೆಯನ್ನು ಗೆಳೆಯರೇ ಮಾಡಿದ್ದರು. ಸರಳ ಮದುವೆಗಳನ್ನು ಪ್ರೋತ್ರಾಹಿಸುತ್ತಿದ್ದವರೊಬ್ಬರು ತಾಳಿಯನ್ನು ಕಾಣಿಕೆಯಾಗಿ ನೀಡಲು ಮುಂದಾಗಿದ್ದರೂ ಸರಳಾತಿ ಸರಳವಾಗಿಯೇ ಮದುವೆಯಾಗಬೇಕು ಎಂಬ ಬಯಕೆಯಿಂದ ಅದನ್ನು ನಯವಾಗಿ ತಿರಸ್ಕರಿಸಿದ್ದೆವು. ಎಲ್ಲ ಬಂಧಗಳಿಂದ ಮುಕ್ತವಾಗಿ ಸಂಸಾರದ ಸಾರ ತಿಳಿಯಲು ಒಂದಾದ ನಾವು ಇಂದಿಗೂ ಸುಮಧುರ ದಾಂಪತ್ಯ ಜೀವನ ನಡೆಸುತ್ತಿದ್ದೇವೆ. ಸಮಾಜ, ಜೀವನ, ಮದುವೆ, ಹೆಣ್ಣು ಇತ್ಯಾದಿ ವಿಷಯಗಳಲ್ಲಿ ಮನಸ್ಸಿನಲ್ಲಿ ಚಿಕ್ಕ ವಯಸ್ಸಿನಲ್ಲೇ ಸ್ಪಷ್ಟವಾದ ಕಲ್ಪನೆ ಇತ್ತು. ಸಾಮಾಜಿಕ ಕಳಕಳಿ ರಕ್ತದಲ್ಲಿ ಸೇರಲು ನಿರಕ್ಷರಕುಕ್ಷಿ ಅಮ್ಮನೇ ಕಾರಣ.

ಮದುವೆ ಸ್ವರ್ಗದಲ್ಲಿ ನಡೆಯುತ್ತದೆ ನಿಜ. ಆದರೆ ಅದನ್ನು ಭುವಿಯಲ್ಲಿ ಸಾಕ್ಷಾತ್ಕರಿಸುವಾಗ ಆದರ್ಶವನ್ನು ಪಾಲಿಸಬೇಕು ಎಂಬುದು ನನ್ನ ಸಿದ್ಧಾಂತವಾಗಿತ್ತು. ಮದುವೆಯಾಗುವುದಾದರೆ ಪರಿಚಿತಳಾದ, ಅರ್ಥೈಸಿಕೊಂಡ ಹೆಣ್ಣನ್ನು ಎಂಬ ನಿರ್ಬಂಧ ಹಾಕಿಕೊಂಡಿದ್ದೆ. ಸಮಾನ ಮನಸ್ಕ ಹಡುಗಿಯನ್ನೇ ಜೀವನ ಸಂಗಾತಿ ಮಾಡಿಕೊಂಡೆ.

ಮದುವೆಗೆ ಅನೇಕ ಆಯಾಮಗಳಿವೆ. ಒಂದೊಂದು ಧರ್ಮಗಳು ಅದಕ್ಕೆ ಒಂದೊಂದು ವ್ಯಾಖ್ಯಾನ ನೀಡಿವೆ. ಎಲ್ಲದರ ಆಚೆ ಅಗೋಚರ ಶಕ್ತಿಯೊಂದು ಈ ಬಂಧವನ್ನು ಗಟ್ಟಿಗೊಳಿಸಲು ಕೆಲಸ ಮಾಡಬೇಕಾಗಿದೆ. ಆಡಂಬರದಿಂದ ಮದುವೆಯಾದರೆ ಮದುಮಕ್ಕಳು ಖುಷಿಯಾಗಿ ವೈವಾಹಿಕ ಜೀವನದ ಆರಂಭದಲ್ಲೇ ಯಶಸ್ವಿ ಹೆಜ್ಜೆ ಇರಿಸುತ್ತಾರೆ ಎಂಬ ಪೋಷಕರ ಭಾವನೆಗೂ ಧಕ್ಕೆ ಬಂದಿದೆ. ವಿಧಿ ಪ್ರಕಾರ ಎಲ್ಲವೂ ನಡೆದರೆ ದಾಂಪತ್ಯ ಸುಖಕರವಾಗಿರುತ್ತದೆ ಎಂಬ ನಂಬಿಕೆಯೂ ಸುಳ್ಳಾಗುತ್ತಿದೆ. ಜಾತಕ ನೋಡದೆ, ಕಟ್ಟುಪಾಡುಗಳನ್ನು ಬದಿಗಿರಿಸಿದ ನಾವು ಇಂದಿಗೂ ಸೌಹಾರ್ದದ ಜೀವನ ನಡೆಸುತ್ತಿರುವುದೇ ಇದಕ್ಕೊಂದು ನಿದರ್ಶನ. ಸರಳ ಮದುವೆ ಜವಾಬ್ದಾರಿಯನ್ನೂ ಬದ್ಧತೆಯನ್ನೂ ಬಯಸುತ್ತದೆ. ಅದು ಎಲ್ಲರಿಂದ ಅಸಾಧ್ಯವೇನೂ ಅಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT