ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂವ ಅರಸುವ ಕಾಲದ ನೆಲ...

ಮೊದಲನೆಯ ಬಹುಮಾನ ಪಡೆದ ಪ್ರಬಂಧ
Last Updated 13 ಜನವರಿ 2017, 19:30 IST
ಅಕ್ಷರ ಗಾತ್ರ

 ಸಂಕ್ರಾಂತಿ ಲಲಿತಪ್ರಬಂಧ ಸ್ಪರ್ಧೆ – 2017ರ ಫಲಿತಾಂಶ
‘ಪ್ರಜಾವಾಣಿ’ಯು ಮಹಿಳೆಯರಿಗಾಗಿಯೇ ನಡೆಸುತ್ತ ಬಂದಿರುವ ಲಲಿತಪ್ರಬಂಧ ಸ್ಪರ್ಧೆಯ ಫಲಿತಾಂಶಗಳನ್ನು ಪ್ರಕಟಿಸಲು ಸಂತೋಷವಾಗುತ್ತಿದೆ. ನಾಡಿನ ಎಲ್ಲ ಪ್ರದೇಶಗಳಿಂದಲೂ ಸುಮಾರು ಐದುನೂರು ಪ್ರಬಂಧಗಳು ಸ್ಪರ್ಧೆಗೆ ಬಂದಿದ್ದವು.  ವಿದ್ಯಾರ್ಥಿಗಳು, ಗೃಹಿಣಿಯರು, ಲೇಖಕಿಯರು, ಉದ್ಯೋಗಸ್ಥ ಮಹಿಳೆಯರು, ವಯೋವೃದ್ಧರು – ಹೀಗೆ ಸಮಾಜದ ಬೇರೆ ಬೇರೆ ಸ್ತರದ ಮಹಿಳೆಯರು ಭಾಗವಹಿಸಿ, ಸ್ಪರ್ಧೆಯ ಅನನ್ಯತೆಯನ್ನೂ ಆವಶ್ಯಕತೆಯನ್ನೂ ಎತ್ತಿಹಿಡಿದ್ದಾರೆ. ಹಿರಿಯ ಲೇಖಕ ಶ್ರೀನಿವಾಸ ವೈದ್ಯ ಮತ್ತು ಕವಯಿತ್ರಿ–ಅಧ್ಯಾಪಕಿ ಗೀತಾ ವಸಂತ ತೀರ್ಪುಗಾರರಾಗಿದ್ದರು. ಬಹುಮಾನಿತರಿಗೆ ಅಭಿನಂದನೆಗಳು. 
– ಸಂಪಾದಕ

**
-ಆಶಾ ಜಗದೀಶ್
ಅದನ್ನು ನನ್ನಮ್ಮ ಬಹಳ ಇಷ್ಟ ಪಟ್ಟು ತಂದು ಹಚ್ಚಿ ಬೆಳೆಸಿದ್ದಳು. ಎರಡೆರಡೇ ಎಲೆ ಚಿಗಿತು ಹೊರಬಂದಾಗಲೂ ಅಮ್ಮ ದಂಡೆ ಕಟ್ಟಿ ಮುಡಿಯುವ ದಿನ ಹತ್ತಿರಕ್ಕೆ ಬಂತೇನೋ ಎಂದು ಖುಷಿಗೊಳ್ಳುತ್ತಿದ್ದಳು. ಆದರೆ ಅವಳೆಂದೂ ತಲೆ ತುಂಬ ಹೂ ಮುಡಿದವಳೇ ಅಲ್ಲ. ಯಾರಾದರೂ ತಂದು ‘ಮುಡಿ’ ಎಂದು ಕೈಗಿತ್ತರೆ ‘ಅಯ್ಯೋ ಬಾಡಿ ಹೋಗ್ತವೆ’ ಅಂತ ಅಸಾಧ್ಯ ಕರುಣೆಯಿಂದ ದೇವರ ಪಾದದ ಮೇಲೆ ಇಡುತ್ತಿದ್ದವಳು. ಅಪರೂಪಕ್ಕೆ ಎಂದಾದರೊಮ್ಮೆ ತನ್ನ ನೀಳ ಜಡೆಗೆ ಹೂವಿನ ಭಾಗ್ಯ ಕರುಣಿಸುತ್ತಿದ್ದಳು. ಅಂಥಾ ಅಮ್ಮ ಇಷ್ಟು ಮುತುವರ್ಜಿಯಿಂದ ಈ ದುಂಡುಮಲ್ಲಿಗೆಯ ಬಳ್ಳಿಯನ್ನು ತಾರಸಿಗೆ ಹತ್ತಿಸಲು ಕೃಷಿ ಮಾಡತೊಡಗಿದ್ದಳು (ಅವಳು ನಮ್ಮನ್ನು ಬೆಳೆಸಿದ್ದೂ ಹಾಗೇ... ಆ ಸಸಿ ಮಾತ್ರದ ಸಸಿಯೊಂದಕ್ಕೆ ಒದ್ದು ನಡೆಯುವ ಸ್ವಾರ್ಥ ಬರದಿರಲಿ...). ಅವಳಿಗೆ ಹೂ ಗಿಡದಲ್ಲಿದ್ದರೇನೇ ಖುಷಿ, ನೆಮ್ಮದಿ. ನೆಲಕ್ಕೆ ಉದುರಿದ ಹೂಗಳ ಮೇಲೂ ಅವಳಿಗೆ ಎಂಥದೋ ಅನುಕಂಪ.  ಮನೆಯ ಮುಂದಿನ ಪುಟ್ಟ ಜಾಗದಲ್ಲಿಯೇ ಅವಳ ಮೆಚ್ಚಿನ ಹೂಗಳೆಲ್ಲವೂ ಜಾಗ ಪಡೆದು, ಅರಳಿ ನಿಂತಿದ್ದವು. ಅವುಗಳ ಲಾಲನೆ ಪಾಲನೆ ಆರೈಕೆಯೇ ಅವಳ ಮುಖ್ಯ ಕಾಲಾಯಾಪನೆ. ಬರಿದೆ ಕಾಲಾಯಾಪನೆ ಎಂದರೆ ಶುಷ್ಕವೆನಿಸಿಬಿಡಬಹುದು. ಅವುಗಳೊಡನೆ ಅವಳಿಗೆ ಭಾವನಾತ್ಮಕ ಸಂಬಂಧವೂ ಇತ್ತು. ಗಿಡಗಳೂ ಸಹ  ಅವಳಂತೆ. ... ಒಂದಿನ ಅವಳು ಮನೆಯಿಂದ ಕಾಲು ತೆಗೆದರೂ ಸಾಕು, ಬಾಡಿ ನಿಲ್ಲುತ್ತಿದ್ದವು.
 
ಅಮ್ಮನ ಇಂತಿಪ್ಪ ಈ ಮಲ್ಲಿಗೆ ಬಳ್ಳಿಗೆ ಒಮ್ಮೆ, ಬಾಣಂತನಕ್ಕೆಂದು ಬರುವ ಮಗಳಿಗೆ ತಾಯಾಗುವ, ತವರಾಗುವ ಅವಕಾಶ ಒಲಿದು ಬಂತು. ಅಮ್ಮನ ಸಂಭ್ರಮಕ್ಕೆ ಎಣೆಯಿಲ್ಲದಾಯಿತು. ತನ್ನ ಮಲ್ಲಿಗೆ ಬಳ್ಳಿಗೆ, ಅದು ಹೂಬಿಡುವ ಮೊದಲೇ ಇಂಥ ಒಂದು ಅದೃಷ್ಟ ಹುಡುಕಿ ಬಂತೆಂದು ಖುಷಿಯಿಂದ ಕರುಬಿದಳು. ಗುಬ್ಬಚ್ಚಿಯೊಂದು ತನ್ನ ಗರ್ಭಿಣಿಪತ್ನಿಯೊಂದಿಗೆ, ದುಂಡುಮಲ್ಲಿಗೆಯ ಪೊದೆಯಲ್ಲಿ ಗೂಡು ಕಟ್ಟಿಕೊಂಡು, ಸುಖಪ್ರಸವಕ್ಕಾಗಿ ಬಂದಿತ್ತು. ಬಂದ ಕೆಲವೇ ದಿನಗಳಲ್ಲಿ ಹೆಣ್ಣುಗುಬ್ಬಚ್ಚಿ ಮೂರು ಮೊಟ್ಟೆಯಿಟ್ಟು, ಕಾವು ಕೊಟ್ಟು, ಪುಟ್ಟ ಪುಟ್ಟ ಮರಿಗಳಿಗೆ ಅಮ್ಮನಾದಳು. ನನ್ನಮ್ಮನಿಗೆ ತಾನೇ ಅಮ್ಮನಾದಂಥ, ಅಜ್ಜಿಯಾದಂಥ, ಮಗುವಾದಂಥ ಸಂಭ್ರಮ. ತಾನೂ ತನ್ನ ಮಲ್ಲಿಗೆಗಿಡದೊಂದಿಗೆ ಬಾಣಂತನಕ್ಕೆ ತಯಾರಾಗಿ ನಿಂತಳು. ಅವಳ ದಿನಚರಿ ಬದಲಾಯಿತು. ತನ್ನ ಗೆಳತಿ, ಕೂಸು ಎಲ್ಲವೂ ಆಗಿದ್ದ ಮಲ್ಲಿಗೆಬಳ್ಳಿಗೆ, ‘ಕೊಂಬೆ ಇತ್ತ ಚಾಚ ಬೇಡವ ...’, ‘ಸ್ವಲ್ಪ ಬಾಗಿ ನೆರಳು ಮಾಡೇ... ಪಾಪ ಎಳೇ ಮರಿಗಳು...’ ಎನ್ನುತ್ತಾ ಮುಚ್ಚಟೆಯಿಂದ ಮರಿಗಳನ್ನು ಕಾಣತೊಡಗಿದಳು. ಮರಿಗಳು ಎಪರಾ ತೆಪರಾ ಹಾರುತ್ತಾ ಮುಗ್ಗರಿಸುವಾಗ ಅಬೋಧವಾಗಿ ನಕ್ಕಳು. ತನ್ನದೇ ರೀತಿಯಲ್ಲಿ ಅವುಗಳಿಗೆ ಹಾರುವುದನ್ನು ಹೇಳಿಕೊಡತೊಡಗಿದಳು. ಅವುಗಳಿಗದೆಷ್ಟು ಅರ್ಥವಾಯಿತೋ....? ಒಂದು ದಿನ ರೆಕ್ಕೆ ಬಿಚ್ಚಿ ಹರಲೂ ಕಲಿತುಬಿಟ್ಟವು, ಮತ್ತೆ ಪರಿವಾರ ಸಮೇತ ಹಾರಿಯೂ ಹೋಗಿಬಿಟ್ಟವು... ಅಂದು ಒಂದಿಡೀ ದಿನ ಅಮ್ಮ ಊಟವನ್ನೇ ಮಾಡಲಿಲ್ಲ... ಕಣ್ಣೀರು ಸುರಿಸುತ್ತಾ ಉಳಿದಳು. ಅವಳ ಮಲ್ಲಿಗೆಗಿಡವೂ ಅವಳ ದುಃಖದಲ್ಲಿ ಶಾಮೀಲಾಯಿತು. ಕೊನೆಗೆ ಇಬ್ಬರೂ ಒಬ್ಬರನ್ನೊಬ್ಬರು ಸಂತೈಸಿಕೊಂಡು ಹೊಸ ಅತಿಥಿತಿಗಳ ಬರುವಿಕೆಗಾಗಿ ಕಾಯುತ್ತಾ ತಮ್ಮ ನಿತ್ಯ ಕಾಯಕದಲ್ಲಿ ವ್ಯಸ್ತರಾದರು.
 
ಹೂವೆನ್ನುವ ಹೂಮನದ ಗೆಳತಿಯರು, ಎಷ್ಟು ಜನ ಮುಪ್ಪಿನಲ್ಲಿ ಒಂಟಿಯಾದ ಅಮ್ಮಂದಿರನ್ನು ಒಡನಾಡಿಗಳಾಗಿ ಸಂತೈಸಿಲ್ಲ! ಬಾಲ್ಯದಿಂದ ನಾನೂ ಅವುಗಳ ಸುಳಿಯಲ್ಲಿ ಸಿಕ್ಕು ಎಷ್ಟು ಬಾರಿ ‘ಹಾಯ್’ ಎಂದು ಸುಖಿಸಿಲ್ಲ.... ಚಿಕ್ಕಂದಲ್ಲಿ ಅಪ್ಪ ಅಮ್ಮನೊಟ್ಟಿಗೆ ನಾವೆಲ್ಲ ತಾತನೂರಿಗೆ ಹೋಗುತ್ತಿದ್ದೆವು. ತಾತನೂರಿನ ನಮ್ಮ ಕಣದಲ್ಲಿ ಆಕಾಶಮಲ್ಲಿಗೆಯ ಮೂರು ಮರಗಳಿದ್ದವು. ಅವುಗಳ ಹೂವಿನ ಉದ್ದ ತೊಟ್ಟನ್ನು ನಾಲ್ಕು ಕಾಲಿನ ಜಡೆಯಂತೆ ಹೆಣೆಯುವುದು ಎಷ್ಟು ಚೆಂದ.... ರಜೆಗೆ ಬಂದಾಗೆಲ್ಲ ಈ ಹೂಗಳಲ್ಲಿ ಜಡೆ ಹೆಣೆಯುವುದೆಂದರೆ ನಂಗೆ ಪಂಚಪ್ರಾಣ. ಹೂಗಳ ಇಂಥ ಮೋಹದಿಂದಲೇ ಸೇವಂತಿಗೆಹೂವನ್ನು ಹೆಣೆಯುವುದನ್ನೂ ಕಲಿತದ್ದು. ಅದೊಂದು ಅಪೂರ್ವ ಹೆಣಿಗೆ...  ಹಾತೊರೆದು ಕಲಿತಿದ್ದೆ. ಆಮೇಲೆ ನನ್ನ ಉದ್ದನೆ ಜಡೆಯುದ್ದಕ್ಕೂ ಹೂ ಹೆಣೆದುಕೊಂಡು ಮುಡಿದು ಹೋಗಿದ್ದು, ಬೀಗಿದ್ದು, ಮೆರೆದದ್ದು – ಅದೆಲ್ಲ ಬೇರೆಯದೇ ಕತೆಯಾಗುವಷ್ಟಿದೆ. 
 
ಆದರೂ ಮಾಮೂಲಿ ಹೂ ಕಟ್ಟುವುದು ನನಗೆ ಬರುತ್ತಿರಲಿಲ್ಲ. ಒಮ್ಮೆ ಅದೂ ಆಯಿತು. ನಾನು ನಾಲ್ಕನೆ ತರಗತಿಯಲ್ಲಿದ್ದಾಗ, ಎರಡನೇ ಬೆಂಚಿನಲ್ಲಿ ನನ್ನ ಪಕ್ಕವೇ ಕುಳಿತುಕೊಳ್ಳುತ್ತಿದ್ದ ವನಿತಾ ಇದ್ದಳಲ್ಲ, ಅವಳನ್ನು ನನ್ನಪ್ಪ ‘ವನಿತಾವಾಸು’, ‘ವಾಸು ಹಂಡ್ರೆಡ್’ ಅಂತೆಲ್ಲ ರೇಗಿಸುತ್ತಿದ್ದರು. ಈಗ ಅದನ್ನಲ್ಲ ಹೇಳಲು ಹೊರಟದ್ದು, ಅವಳ ಅಜ್ಜಿಯೇ ನನಗೆ ಹೂದಂಡೆ ಕಟ್ಟುವುದನ್ನು ಮೊಟ್ಟ ಮೊದಲ ಬಾರಿಗೆ ಹೇಳಿಕೊಟ್ಟ ಗುರು. ಜಗಲಿಯ ಮೇಲೆ ಅವಳ ಅಜ್ಜಿ ಹೂ ಕಟ್ಟುತ್ತಿದ್ದರು. ಕುತೂಹಲದಿಂದ ಅಲ್ಲೇ ಬಚ್ಚಿಟ್ಟುಕೊಂಡು ನಾನದನ್ನು ನೋಡುತ್ತಾ ನಿಂತಿದ್ದೆ. ಅದನ್ನು ಅಜ್ಜಿ ಗಮನಿಸಿಬಿಟ್ಟರು. ಮೃದುವಾಗಿ ಕರೆದರು. ‘ಏನು’ ಎಂದು ಕೇಳಿದರು. ಹೂ ಕಟ್ಟುವುದನ್ನು ಕಲಿಯಬೇಕೆಂದು ಹೇಳಿದೆ. ಹೇಳಿಕೊಟ್ಟರು ಅಷ್ಟೇ... ಪ್ರಯೋಗಕ್ಕಿಳಿದೆ. ಅವತ್ತು ನಾನೇ ಕಟ್ಟಿದ ಹೂವನ್ನು ಮುಡಿದು ಮನೆಗೆ ಬರುವಾಗ ಎಲ್ಲರೂ ನನ್ನನ್ನೇ ನೋಡುತ್ತಿರುವಂತೆಯೂ, ‘ಅಬ್ಬಾ! ಎಷ್ಟು ಚೆನ್ನಾಗಿ ಹೂ ಕಟ್ಟಿದ್ದಾಳೆ..,’ ಎಂದು ಯಾರೋ ಹೊಗಳಿದಂತೆಯೂ, ಭ್ರಮೆಯಾಗಿ ಒಂದು ನಮೂನಿ ಗರ್ವವೇ ಮೂಡಿಬಿಟ್ಟಿತ್ತು. ಇನ್ನು ಯಾರಾದರೂ ತಡೆದು ಅದೇ ವಿಷಯ ತೆಗೆದು ಮಾತಾಡಿದ್ದರೆ ಸಾಕಿತ್ತು, ನನ್ನ ಕಂತೆ–ಪುರಾಣಗಳೆಲ್ಲ ಬಿಚ್ಚಿಕೊಳ್ಳುವುದಕ್ಕೆ.....
 
ಮನೆ ಮುಂದೆ ಎಷ್ಟೊಂದು ವೆರೈಟಿ ಗುಲಾಬಿ, ದಾಸವಾಳ, ಸೇವಂತಿಗೆ, ಮಲ್ಲಿಗೆ, ಡೇರೆ, ತುಂಬೆ, ಗೌರಿಗಳು.... ಇದ್ದರೂ ಕಮಲಜ್ಜಿ ಅದನ್ನು ಮುಟ್ಟಲೂ ಬಿಡುತ್ತಿರಲಿಲ್ಲ. ಇದರ ಪರಿಣಾಮ ಹೂಕಳ್ಳರದ್ದೊಂದು ಗುಂಪನ್ನು ಕಾಯಬೇಕಾದ ಪ್ರಸಂಗವೂ ಅವರಿಗೆ ಒದಗುತ್ತಿತ್ತು. ರಜೆ ಬಂತೆಂದರೆ ಸಾಕು ಅವರೊಂದಿಗೆ ತೋಟದಲ್ಲಿ ಗಿಡ ನೆಡುವುದು, ಪಾತಿ ಸರಿ ಮಾಡುವುದು, ಕಳೆ ಕೀಳುವುದು, ನೀರು ಗೊಬ್ಬರ ಹಾಕುವುದು ಎಂದೆಲ್ಲಾ ಕೆಲಸಗಳಲ್ಲಿ, ನಾವೂ ಬಾಲಂಗೋಚಿಗಳಂತೆ ಹೋಗಿ ಕೈಯಾಡಿಸುತ್ತಿದ್ದೆವು. ಈ ತೋಟದಲ್ಲೊಂದು ಚಿಕ್ಕ  ಕೊಳ.... ಕಮಲ, ತಾವರೆ, ನೈದಿಲೆ, ಮೀನು, ಹಂಸಗಳಿಂದ ಕೂಡಿದ ಪಾಂಡ್‌ನ್ನು, ತೋಟದ ಈ ಚಿಕ್ಕ ಸಿಮೆಂಟ್ ರಿಂಗಿನ ತೊಟ್ಟಿಗೆ ಹೋಲಿಸಿಕೊಂಡು ಎಷ್ಟು ಸಂಭ್ರಮ ಪಡುತ್ತಿದ್ದೆವು ನಾವೆಲ್ಲ! ಅದರೊಳಗೊಂದು ಚೆಂದದ ಬಣ್ಣದ ಮೀನು... ಅಬ್ಬಾ! ಎಷ್ಟು ಚೆಂದವಿತ್ತು.... ಪಕ್ಕದಲ್ಲೇ ಒಂದು ಮಲ್ಲಿಗೆಬಳ್ಳಿ, ಮನೆಯ ನೆತ್ತಿಯವರೆಗೆ ಅದರ ದಾರಿ... ಎಷ್ಟೇ ಪ್ರೀತಿಯಿದ್ದರೂ ಇದನ್ನು ಕಡಿಸಿಬಿಡಲು ಅಪ್ಪ ಯೋಚಿಸುತ್ತಿದ್ದರು. ಅದಕ್ಕೂ ಕಾರಣವಿದೆ. ಒಮ್ಮೆ, ಅದು ಚಳಿಗಾಲ, ನೆಲಕ್ಕೂ ಹೆಂಚಿಗೂ ಏಣಿಯಂತಿದ್ದ ಮಲ್ಲಿಗೆಬಳ್ಳಿಯನ್ನು ಹತ್ತಿ ಕೆರೆಹಾವೊಂದು ಹೆಂಚುಗಳೊಳಗೆ ಸೇರಿಕೊಂಡು, ಎಂಥ ಉಪದ್ರ ಕೊಟ್ಟಿತ್ತೆಂದರೆ, ಅಬ್ಬ ಈಗಲೂ ಎದೆ ಝಲ್ ಎನ್ನುತ್ತದೆ. ಈ ಘಟನೆಯಲ್ಲಿ ಯಾರ್‍್ಯಾರಿಗೆ ಹಾವೆಂದರೆ ಭಯವಿಲ್ಲ, ಯಾರ್‍್ಯಾರಿಗೆ ಗರುಡರೇಖೆ ಇದೆ, ಎಂಬೆಲ್ಲ ವಿಷಯಗಳು ಬಯಲಿಗೆ ಬಂದಿದ್ದು ಈಗಲೂ ನೆನಪಿದೆ. 
 
ಕಮಲಜ್ಜಿ ಮನೆಯ ಸೂಜಿಮಲ್ಲಿಗೆ, ಮೈಸೂರುಮಲ್ಲಿಗೆ, ಕಾಡುಮಲ್ಲಿಗೆ, ದುಂಡುಮಲ್ಲಿಗೆ, ಕಾಕಡಾ; ತಾತನ ಕಣದಲ್ಲಿ ನಾಟಿಕೊಂಡಿದ್ದ ಏಳು ಸುತ್ತಿನ ಮಲ್ಲಿಗೆ ಉಸ್ಸಪ್ಪ... ಇನ್ನೂ ಯಾವ್ಯಾವುವೋ ಮಲ್ಲಿಗೆಗಳು..... ತೋಟದ ಈ ಗಿಡಗಳಿಗಂತೂ ದೇವರ ಅಡಿ, ಹೆಂಗಳೆಯರ ಮುಡಿ ಏರಿ ಕೃತಾರ್ಥರಾಗುವ ಭಾಗ್ಯ. ಆದರೆ ಹೊಲದಲ್ಲಿ ಅರಳಿ ದೃಷ್ಟಿ ಬಾಚುತ್ತಿದ್ದ ಸೂರ್ಯಕಾಂತಿ, ಕುರೆಸಾನ್ನಿ... ಪಾಪ ಅವು ಲಾಭ ಮಾಡಿಕೊಟ್ಟರೆ ಸಾಕಷ್ಟೇ... ಅವುಗಳ ಹೂತನಕ್ಕೆ ಸಿಗಬೇಕಾದ ಮರ್ಯಾದೆ ಯಾರಿಗೂ ಬೇಕಿಲ್ಲ. ಹ್ಞಾ... ಸೂರ್ಯಕಾಂತಿ ಎಂದಾಕ್ಷಣ ನೆನಪಾಗುವ ಮತ್ತೊಂದು ಅಂಶವೆಂದರೆ ಗೌರೀಹಬ್ಬಗಳು.
 
ಗೌರೀಹಬ್ಬಗಳ ಬಗ್ಗೆ ಸಿಟಿ–ಹುಡುಗಿಯರಿಗೆ ತಿಳಿದಿರುವುದು ಕಡಿಮೆಯೇ. ಆದರೆ ಈ ವಿಶಿಷ್ಟ ಹಬ್ಬವನ್ನ ಯಾಕಾದರೂ ಆಚರಿಸುವುದಿಲ್ಲವೋ,  ಗೊತ್ತಿಲ್ಲ! ಆದರೆ ಹೆಣ್ಣುಮಕ್ಕಳಂತೂ ಹಿರಿಯರ ಸಪೋರ್ಟು ಮತ್ತು ಸುಪರ್ದಿನಲ್ಲಿ ಸಖತ್ ಎಂಜಾಯ್ ಮಾಡಬಹುದಾದ ಚೆಂದದ ಹಬ್ಬ ಇದು. ದೇವರ ಮೇಲಿನ ಭಕ್ತಿಗಿಂತ ಚೆಂದ ರೆಡಿಯಾಗಿ ಓಡಾಡುವ ಸಂಭ್ರಮಕ್ಕೇ ಹುಡುಗಿಯರು ಇಷ್ಟ ಪಡುವ ಹಬ್ಬ. 
 
ಈ ಹಬ್ಬವನ್ನ ಸಣ್ಣ ಗೌರಿ, ದೊಡ್ಡ ಗೌರಿ ಎಂದು ಎರಡೆರೆಡು ಬಾರಿ ಆಚರಿಸಲಾಗುತ್ತದೆ. ಮೊದಲು ಸಣ್ಣ ಗೌರಿ, ನಂತರ ದೊಡ್ಡ ಗೌರಿಯನ್ನು ಕರೆತರುತ್ತಾರೆ. ಮಾರ್ಲಾಮಿ ಹಬ್ಬಕ್ಕೆ ಐದು ದಿನ ಮುಂಚೆ ಸಣ್ಣ ಗೌರಿಯನ್ನು ಕೂರಿಸುತ್ತಾರೆ. ಮಾರ್ಲಾಮಿ ಹಬ್ಬದ ದಿನ ಹುಣ್ಣಿಮೆಯಂದು ಗೌರಿಯನ್ನು ಪೂಜಿಸಿ ಕಳಿಸಲಾಗುತ್ತದೆ. ಮತ್ತೆ ಕಾರ್ತೀಕಮಾಸದಲ್ಲಿ ಬರುವ ಹುಣ್ಣಿಮೆಗೆ, ಐದು ದಿನ ಮುಂಚೆ ದೊಡ್ಡ ಗೌರಿಯನ್ನು ಕೂರಿಸುತ್ತಾರೆ ಮತ್ತು ಹುಣ್ಣಿಮೆಯಂದು ಗೌರಿಯನ್ನು ಕಳಿಸುತ್ತಾರೆ.

ಮೊದಲೇ ಹೆಣ್ಣುಮಕ್ಕಳಿಗೆ ಸೀರೆಯೆಂದರೆ ಎಂಥದ್ದೋ ಮೋಹ. ಈ ಹಬ್ಬದಲ್ಲಿ ಊರಿನ ಮೂರು ನಾಲ್ಕು ವರ್ಷದ ಪುಟ್ಟ ಹೆಣ್ಣುಮಕ್ಕಳಿಂದ, ಹರೆಯದ ಹುಡುಗಿಯರವರೆಗೂ ಎಲ್ಲರೂ ಸೀರೆಯುಟ್ಟು ಗೌರಿ ಹುಡುಗಿಯರಾಗಿ ಮಣ್ಣಿನ ಗೌರಮ್ಮನನ್ನು, ಬುಡ್ಡೆ ಕಲ್ಲನ್ನು, ಮರದ ಕುದುರೆಯನ್ನೂ, ಬಸವಣ್ಣದೇವರನ್ನೂ ಸೂರ್ಯಕಾಂತಿ ಹೂ, ಕುರೆಸಾನ್ನಿ ಹೂ, ಟಂಕ್ಟೆ ಹೂಗಳಿಂದ ಪೂಜಿಸಿ, ಒಂದೊಂದು ದಿನ ಒಂದೊಂದು ರೀತಿಯ, ಅಂದರೆ ಒಂದಿನ ನಿಂಬೆಹಣ್ಣು, ಒಂದಿನ ಬುಡಮೆಕಾಯಿ, ಒಂದಿನ ತೊಂಡೆಕಾಯಿ, ಒಂದಿನ ಮಣ್ಣು, ಒಂದಿನ ತಂಬಿಟ್ಟು, ಒಂದಿನ ಎಳ್ಳು – ಹೀಗೆ ಐದು ದಿನ ಐದು ಬಗೆಯ ಆರತಿ ಬೆಳಗುತ್ತಾರೆ. ತಟ್ಟೆಯ ತುಂಬ ಹೂ ತುಂಬಿ, ನಡುವೆ ಎರಡು ದೀಪ ಹಚ್ಚಿಟ್ಟುಕೊಂಡು ಗುಡಿಗೆ ಬರುತ್ತಾರೆ. ಮೊದಲು ಬುಡ್ಡೆ ಕಲ್ಲಿಗೆ ಹೂ ಎರೆದು ಆರತಿ ಬೆಳಗಿ, ಆಮೇಲೆ ಕೆಮ್ಮಣ್ಣು ಗೌರಿಗೆ ಉಳಿದೆಲ್ಲ ಹೂಗಳನ್ನು ಮುಡಿಸಿ, ಆರತಿ ಬೆಳಗಿ, ಎರಡು ದೀಪಗಳಲ್ಲಿ ಒಂದನ್ನು ಗೌರಿಯ ಮುಂದೆ ಇಟ್ಟು, ಮತ್ತೊಂದನ್ನು ಮನೆಯ ತಲೆಬಾಗಿಲ ಹೊಸಿಲಿನ, ಬಲ ಬದಿಯಲ್ಲಿ ಇಟ್ಟು ಒಳ ಹೋಗುತ್ತಾರೆ. ಗೌರೀಹಬ್ಬದ ಕೊನೆಯ ದಿನ ಅಂದರೆ ಐದನೆ ದಿನ ಗೌರಿಹುಡುಗಿಯರೆಲ್ಲರೂ ಜರತಾರಿ ಸೀರೆಯುಟ್ಟು ಗೌರಿಯನ್ನು ಪೂಜಿಸುತ್ತಾರೆ. ಕೊನೆಯ ದಿನದ ಪೂಜೆಯನ್ನು ಜೋರಾಗಿ ಮಾಡಲು ಊರ ಜನರಿಂದ ಚಿಲ್ಲರೆ ಕಾಸನ್ನೂ ಪಡೆಯುತ್ತಾರೆ. ಜನರೂ ಈ ಸಂಭ್ರಮದಲ್ಲಿ ಖಷಿಯಿಂದ ಪಾಲ್ಗೊಳ್ಳುತ್ತಾರೆ. ಕೊನೆಯ ದಿನ ಗುಡಿಯೊಳಗೆ ಜೋಕಾಲಿ ಕಟ್ಟಿ, ಗೌರಿ ಹುಡುಗಿಯರನ್ನು ಜೋಕಾಲಿ ಆಡಿಸಲಾಗುತ್ತದೆ. ಈ ಎಲ್ಲ ಸಂಭ್ರಮವೂ ಕಳೆದಾದ ಮೇಲೆ ಶಾಸ್ತ್ರೋಕ್ತವಾಗಿ ಗೌರಿ ಮಣ್ಣನ್ನು ನೀರಿಗೆ ಬಿಟ್ಟು ಬರುತ್ತಾರೆ. ಚೆಂದದ ಹಬ್ಬ ಮುಗಿಯುತ್ತದೆ. ವರ್ಷಕ್ಕೆಲ್ಲ ಆಗುವಷ್ಟು ಸವಿನೆನಪಾಗಿ ಉಳಿಯುತ್ತದೆ.

ಈಗ ಈ ಹೂಪುರಾಣವೆಲ್ಲ ನೆನಪಾಗುತ್ತಿರುವಾಗ ಕಣ್ಣ ಮುಂದೆ ’ಅವಳು’ ಬಂದು ನಿಂತಿದ್ದಾಳೆ, ತನ್ನ ಗುಲಾಬಿಯ ಬಗ್ಗೆ ಹೇಳೆಂದು. ಗುಲಾಬಿ ಎಂದರೆ ಅವಳಿಗೆ ಪ್ರಾಣ. ಅವಳ ಹುಟ್ಟು ಹಬ್ಬಕ್ಕೆ ನಾನೇ ನನ್ನ ಕೈಯ್ಯಾರೆ ಗುಲಾಬಿ ಗಿಡ ಬೆಳೆಸಿ, ಅದರಲ್ಲಿ ಬಿಟ್ಟ ಹೂವನ್ನು ಅವಳಿಗೆ ಉಡುಗೊರೆಯಾಗಿ ಕೊಡಬೇಕೆಂದು, ಎಷ್ಟು ಆಸೆಪಟ್ಟು ತಂದು ನೆಟ್ಟಿದ್ದೆ! ಕಮಲಗೆಂಪು ಬಣ್ಣದ ಜೊತೆ, ಅಚ್ಚ ಗುಲಾಬಿಬಣ್ಣ ಬೆರೆತ ಚೆಂದದ ಹೂವಿನ ಗಿಡ ಅದು. ಇನ್ನೂ ನಾಲ್ಕೈದೇ ತಿಂಗಳಿವೆ. ಅವಳ ಹುಟ್ಟುಹಬ್ಬಕ್ಕೆ, ನೆಟ್ಟು ಬೆಳೆಸಿದರೆ ಹೂ ಆದೀತು ಎಂಬುದು ನನ್ನ ಎಣಿಕೆಯಾಗಿತ್ತು.

ಆದರೆ ನಮ್ಮ ಎಣಿಕೆಯೇ ಒಂದಾದರೆ ವಿಧಿಯ ಲೆಕ್ಕವೇ ಬೇರೆ. ನಮಗಾ ಭಾಷೆಯೂ ಬರುವುದಿಲ್ಲ. ಚೇತು(ಚೇತನ) ಇದ್ದಕ್ಕಿದ್ದಂತೆ ಹಾಸಿಗೆ ಹಿಡಿದು ಮಲಗಿಬಿಟ್ಟಿದ್ದಳು. ಕೊನೆಗೆ ಅದು ಬ್ರೈನ್ಟ್ಯೂಮರ್ ಎಂದು ತಿಳಿದಾಗ ಆದ ದಿಗ್ಭ್ರಾಂತಿ ಅಷ್ಟಿಷ್ಟಲ್ಲ. ನಮ್ಮಳುವಿಗೆ, ಕಣ್ಣೀರಿಗೆ ಜೀವ ಉಳಿಸುವ ತಾಕತ್ತಿಲ್ಲ ಎಂಬುದು ಅದೇ ಮೊದಲ ಬಾರಿಗೆ ನನ್ನರಿವಿಗೆ ಬಂದದ್ದು. ಅವಳಿಗೆ ತನ್ನ ಅವಯವಗಳ ಮೇಲೆ ತನಗೇ ಸ್ವಾಧೀನ ತಪ್ಪುತ್ತಿತ್ತು. ಅವಳ ನೀಳ ಕೇಶರಾಶಿ ಸಂಪೂರ್ಣ ಉದುರಿ ತಲೆ ಗುಂಡಾಗುತ್ತಾ ಹೋಯಿತು. ದೃಷ್ಟಿಯೂ ಮಂಜಾಯಿತು. ಮರೆವು, ತೊದಲು ಆವರಿಸಿತು. ನನಗೆ ಚೇತು ಮತ್ತೆ ಮಗುವಾದಳು ಎಂದೆನಿಸುತ್ತಿತ್ತು. ಅವಳನ್ನು ಮತ್ತೆ ಮೊದಲಿಂದ ಬೆಳೆಸಬಹುದು, ಬಾಲ್ಯಾದಿಗಳನ್ನು ದಾಟಿಸಿ ಅವಳ ಬೆಳವಣಿಗೆಯನ್ನು ಕಾಣಬಹುದು – ಎಂಬೆಲ್ಲಾ ಹುಚ್ಚುಚ್ಚು ಕಲ್ಪನೆಗಳು. ಒಂದಿನ ಅವನ್ನೆಲ್ಲಾ ಹರಿದು, ಚಿಂದಿಚಿಂದಿ ಮಾಡಿ, ಒಲೆಗಟ್ಟಿ, ನೀರು ಕಾಸಿ, ತಲೆಗೊಯ್ದುಕೊಂಡುಬಿಟ್ಟೆ. ಅವತ್ತು ಅವಳ ದೇಹ ಚೇತನ ಕಳೆದುಕೊಂಡಿತ್ತು. ನಾನು ನನ್ನ ಚೇತನಳನ್ನು ಕಳೆದುಕೊಂಡಿದ್ದೆ. ಮಣ್ಣಿಗೆ ಹೋಗಲೆಂದು ಹೊಸಿಲು ದಾಟಿದಾಗ, ಅವಳಿಗೆಂದು ನೆಟ್ಟಿದ್ದ ಗುಲಾಬಿ ಗಿಡದಲ್ಲಿ, ಅಗ ತಾನೇ ಅರಳಿ ನಿಂತಿದ್ದ ಗುಲಾಬಿ, ಅರೆ ಬಿರಿದು ನಗೆ ತುಳುಕಿಸುತ್ತಿತ್ತು. ಮತ್ತೆ ನಾನದನ್ನು ಕೊಯ್ದು, ಜೋಪಾನವಾಗಿ ಒಯ್ದು, ಅವಳ ಮುಡಿಯಲ್ಲಿಟ್ಟು ಬಂದೆ.

**

ಸ್ಪರ್ಧೆಯ ಫಲಿತಾಂಶ
* ಮೊದಲನೆಯ ಬಹುಮಾನ: ಹೂವು ಅರಸುವ ಕಾಲದ ನೆಲ..
-ಆಶಾ ಜಗದೀಶ್‌
* ಎರಡನೆಯ ಬಹುಮಾನ: ಎಲ್ಲಿಂದ ಬಂದೆವ್ವಾ?
-ಹೇಮಲತಾ ಎಸ್‌. ಪೂಜಾರಿ
* ಮೂರನೆಯ ಬಹುಮಾನ: ನನ್ನ ಬಾಲ್ಯ ಕದ್ದ ಕಾಗೆಗಳು
-ಗೀತಾ ಕುಂದಾಪುರ

ಮೆಚ್ಚಿಗೆ ಪಡೆದ ಪ್ರಬಂಧಗಳು
1. ತಾರಸಿ ಮೇಲಿನ ಅನಂತ ನಡಿಗೆ/ ಮೀನಾಕ್ಷಿ ಹೆಂಗವಳ್ಳಿ
2.  ಭಾವಚಿತ್ರಗಳ  ಭಾವಲೋಕದಲ್ಲಿ/ ಸ್ಮಿತಾ ಅಮೃತರಾಜ್ ಸಂಪಾಜೆ
3.  ನಾನ್ಹೇಗೆ ಮರೆಯಲಿ/ ಅಭಿಜ್ಞಾ ಸತೀಶ್‌
4.  ಓಪನ್ ಕಿಚನ್‌ನ ಪ್ರವಚನ/ ಶ್ವೇತಾ ಸುರೇಶ ಪಾಟೀಲ
5.  ಓಲೆಯ  ಸರಬರ/ ಶಾರದಾ ವಿ. ಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT