ಸಮುದಾಯಗಳ ನೆರವಿನಿಂದ ರೋಗ ನಿರ್ಮೂಲನೆ ಸಾಧ್ಯ

ಭಾನುವಾರ, ಮೇ 26, 2019
28 °C
ವಿಶ್ವ ಮಲೇರಿಯ ದಿನಾಚರಣೆಯಲ್ಲಿ ಜಿಲ್ಲಾ ನಿಯಂತ್ರಣಾಧಿಕಾರಿ ಡಾ.ಎನ್.ಕಾಂತರಾಜು ಅಭಿಮತ

ಸಮುದಾಯಗಳ ನೆರವಿನಿಂದ ರೋಗ ನಿರ್ಮೂಲನೆ ಸಾಧ್ಯ

Published:
Updated:
Prajavani

ಚಾಮರಾಜನಗರ: ‘ಮಲೇರಿಯ ಹರಡುವಿಕೆ ಕುರಿತು ಸಾರ್ವಜನಿಕರು, ಸಮುದಾಯದವರಿಗೆ ಹೆಚ್ಚಿನ ಅರಿವು ಮೂಡಿದರೆ ಈ ರೋಗವನ್ನು ನಿರ್ಮೂಲನೆ ಮಾಡಲು ಸಾಧ್ಯ’ ಎಂದು ಜಿಲ್ಲಾ ಮಲೇರಿಯ ನಿಯಂತ್ರಣಾಧಿಕಾರಿ ಡಾ.ಎನ್‌.ಕಾಂತರಾಜು ಗುರುವಾರ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾಡಳತ ಭವನದಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸಭಾಂಗಣದಲ್ಲಿ ‘ವಿಶ್ವ ಮಲೇರಿಯ ದಿನಾಚರಣೆ’ ಅಂಗವಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಮಲೇರಿಯ ನಿಯಂತ್ರಣ ಕಾರ್ಯಕ್ರಮದಲ್ಲಿ ಅನೇಕ ಕಾರ್ಯತಂತ್ರಗಳನ್ನು ಹಮ್ಮಿಕೊಳ್ಳಲಾಗಿದೆ. ಸಮುದಾಯಗಳ ಸಹಭಾಗಿತ್ವ, ಮಲೇರಿಯ ರೋಗ ಪತ್ತೆ ಮಾಡಿ ಚಿಕಿತ್ಸೆ ನೀಡುವುದು, ಸೊಳ್ಳೆ ನಿಯಂತ್ರಣ ಕ್ರಮಗಳು, ಜೈವಿಕ ನಿಯಂತ್ರಣ ಕ್ರಮಗಳು, ಸ್ವಯಂ ರಕ್ಷಣಾ ವಿಧಾನಗಳು, ಪರಿಸರ ನೈರ್ಮಲ್ಯ, ಅಂತರ ಇಲಾಖೆಗಳ ಸಮನ್ವಯ... ಇವುಗಳಿಂದ ರೋಗ ನಿಯಂತ್ರಣ ಸಾಧ್ಯವಾಗಲಿದೆ’ ಎಂದರು.

ಉಚಿತ ಚಿಕಿತ್ಸೆ: ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಮಲೇರಿಯ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತದೆ. ಈ ರೋಗವನ್ನು ರಕ್ತ ಪರೀಕ್ಷೆಯ ಮೂಲಕ ಕಂಡುಹಿಡಿದು ‘ಶೀಘ್ರ ಪತ್ತೆ, ತ್ವರಿತ ಚಿಕಿತ್ಸೆ’ ಎಂಬ ಧ್ಯೇಯವಾಕ್ಯದಡಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಸಾರ್ವಜನಿಕರು ಮಲೇರಿಯ ರೋಗದ ಬಗ್ಗೆ ತಿಳಿದುಕೊಂಡು ಸೂಕ್ತ ರಕ್ಷಣಾ ಮಾರ್ಗಗಳನ್ನು ಅನುಸರಿಸಬೇಕು’ ಎಂದು ಸಲಹೆ ನೀಡಿದರು.

‘ವಿಶ್ವದಾದ್ಯಂತ ಮಲೇರಿಯ ದಿನಾಚರಣೆ ಆಚರಿಸಲಾಗುತ್ತಿದೆ. ಸಾರ್ವಜನಿಕರು ಹಾಗೂ ಸಮುದಾಯದವರು, ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ಅಂತರ ಇಲಾಖೆಗಳ ಸಮನ್ವಯ ಅಧಿಕಾರಿಗಳು ಜನರಿಗೆ ಅರಿವು ಮೂಡಿಸಲು ಮುಂದಾಗಬೇಕು ಎನ್ನುವುದು ಇದರ ಉದ್ದೇಶವಾಗಿದೆ. ಸಾರ್ಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಶಾಲಾ–ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ನೀಡಲಾಗುತ್ತಿದೆ. ಅನೇಕ ಅರಿವು ಜಾಥಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ನಗರಸಭೆಯವರಿಗೂ ಅರಿವು ಮೂಡಿಸುವ ಪ್ರಯತ್ನವನ್ನು ಮಾಡಲಾಗಿದೆ’ ಎಂದರು.

ಶುಚಿತ್ವ ಕಾಪಾಡಿ: ‘ಪ್ಲಾಸ್ಮೋಡಿಯಂ ಎಂಬ ಪರಾವಲಂಬಿ ಜೀವಿಯಿಂದ ಮಲೇರಿಯ ಉಂಟಾಗುತ್ತದೆ. ಈ ರೋಗ ಅನಾಫಿಲೀಸ್‌ ಜಾತಿಗೆ ಸೇರಿದ ಹೆಣ್ಣು ಸೊಳ್ಳೆಗಳಿಂದ ಹರಡುತ್ತದೆ. ಈ ಸೊಳ್ಳೆಗಳು ತನ್ನ ಸಂತಾನೋತ್ಪತ್ತಿಗಾಗಿ ಮನುಷ್ಯನ ರಕ್ತ ಹೀರುತ್ತವೆ. 10ರಿಂದ 15 ದಿನಗಳ ಬಳಿಕ ರೋಗಾಣು ಬೆಳವಣಿಗೆ ಹೊಂದಿ ರೋಗ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಸೊಳ್ಳೆಗಳ ತಾಣವಾಗುವ ಸ್ವಾಭಾವಿಕ ನೀರಿನ ತಾಣಗಳಾದ ಕೆರೆ, ಬಾವಿ, ನದಿ, ಕಾಲುವೆ, ಹೊಂಡ, ಟೈರ್‌, ಸಣ್ಣ ಪ್ರಮಾಣದಲ್ಲಿ ನೀರು ನಿಲ್ಲುವ ಸ್ಥಳಗಳನ್ನು ಗುರುತಿಸಿ ಎಲ್ಲಿಯೂ ನೀರು ನಿಲ್ಲದಂತೆ ಎಚ್ಚರವಹಿಸಬೇಕು’ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್, ಜಿಲ್ಲಾ ಕಣ್ಗಾವಲು ಘಟಕದ ಅಧಿಕಾರಿ ಡಾ.ನಾಗರಾಜು, ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ರಾಜು, ಆರೋಗ್ಯ ಮೇಲ್ವಿಚಾರಕ ಎಂ.ನಾಗರಾಜು. ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಮಹದೇವ್, ಡಾ.ಅಂಕಪ್ಪ ಇದ್ದರು.

2019ರಲ್ಲಿ ಮಲೇರಿಯ ಪ್ರಕರಣ ದಾಖಲಾಗಿಲ್ಲ

ಚಾಮರಾಜನಗರ ಜಿಲ್ಲೆಯಲ್ಲಿ 2000ದಲ್ಲಿ 65 ಮಲೇರಿಯ ಪ್ರಕರಣಗಳು ದಾಖಲಾಗಿತ್ತು. 2017ರಲ್ಲಿ 30 ಪ್ರಕರಣ ಹಾಗೂ 2018ರಲ್ಲಿ 5 ಪ್ರಕರಣ ದಾಖಲಾಗಿತ್ತು. ಬಳಿಕ ಈವರೆಗೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. 2019ರಲ್ಲಿ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ ಎಂದು ಡಾ.ಎನ್.ಕಾಂತರಾಜು ಹೇಳಿದರು. 

ನಿರ್ಮೂಲನೆ ಮುಖ್ಯ ಉದ್ದೇಶ: 2016–2025 ರಾಜ್ಯ ಮಟ್ಟದಲ್ಲಿ ಹಾಗೂ 2016–2030 ರಾಷ್ಟ್ರಮಟ್ಟದಲ್ಲಿ ಮಲೇರಿಯಾ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ರೋಗ ಹತೋಟಿಗಾಗಿ ಕೈಗೊಂಡ ಕ್ರಮಗಳು ಮತ್ತು ಸಾಧನೆಗಳ ಬಗ್ಗೆ ಪ್ರಚಾರ ಪಡಿಸುವುದು ಕೂಡ ಇದರ ಉದ್ದೇಶವಾಗಿದೆ ಎಂದರು.

2019ರಲ್ಲಿ ಮಲೇರಿಯ ಪ್ರಕರಣ ದಾಖಲಾಗಿಲ್ಲ

ಚಾಮರಾಜನಗರ ಜಿಲ್ಲೆಯಲ್ಲಿ 2000ದಲ್ಲಿ 65 ಮಲೇರಿಯ ಪ್ರಕರಣಗಳು ದಾಖಲಾಗಿತ್ತು. 2017ರಲ್ಲಿ 30 ಪ್ರಕರಣ ಹಾಗೂ 2018ರಲ್ಲಿ 5 ಪ್ರಕರಣ ದಾಖಲಾಗಿತ್ತು. ಬಳಿಕ ಈವರೆಗೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. 2019ರಲ್ಲಿ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ ಎಂದು ಡಾ.ಎನ್.ಕಾಂತರಾಜು ಹೇಳಿದರು. 

ನಿರ್ಮೂಲನೆ ಮುಖ್ಯ ಉದ್ದೇಶ: 2016–2025 ರಾಜ್ಯ ಮಟ್ಟದಲ್ಲಿ ಹಾಗೂ 2016–2030 ರಾಷ್ಟ್ರಮಟ್ಟದಲ್ಲಿ ಮಲೇರಿಯವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ರೋಗ ಹತೋಟಿಗಾಗಿ ಕೈಗೊಂಡ ಕ್ರಮಗಳು ಮತ್ತು ಸಾಧನೆಗಳ ಬಗ್ಗೆ ಪ್ರಚಾರ ಪಡಿಸುವುದು ಕೂಡ ಇದರ ಉದ್ದೇಶವಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !