ಗುರುವಾರ , ನವೆಂಬರ್ 14, 2019
19 °C
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯಲ್ಲಿ ಜಿಲ್ಲಾ ಪ್ರಧಾನ ನ್ಯಾಯಾಧೀಶ ಜಿ.ಬಸವರಾಜ ಅಭಿಮತ

ಮನಸ್ಸಿನ ನಿಗ್ರಹ‌ದಿಂದ ಆತ್ಮಹತ್ಯೆಗೆ ತಡೆ

Published:
Updated:
Prajavani

ಚಾಮರಾಜನಗರ: ‘ಸೂಕ್ಷ್ಮ ಮನಸ್ಥಿತಿ ಹೊಂದಿರುವ ಇಂದಿನ ಮಕ್ಕಳು, ವಿದ್ಯಾರ್ಥಿಗಳಿಗೆ ‘ಮಾನಸಿಕ ಆರೋಗ್ಯ’ದ ಕುರಿತು ಹೆಚ್ಚಿನ ಕಾರ್ಯಾಗಾರಗಳು ನಡೆಸುವ ಅಗತ್ಯವಿದೆ’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಜಿ.ಬಸವರಾಜ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾಡಳಿತ ಭವದಲ್ಲಿರುವ ಹಳೆ ಕೆಡಿಪಿ ಸಭಾಂಗಣದಲ್ಲಿ ಕಾನೂನು ಇಲಾಖೆ, ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಇನ್ನಿತರ ಇಲಾಖೆಗಳ ಸಹಯೋಗದಡಿ ಬುಧವಾರ ಹಮ್ಮಿಕೊಂಡಿದ್ದ ‘ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.

‘ಪ್ರಸ್ತುತ ಆತ್ಮಹತ್ಯೆ ಪ್ರಕರಣಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಮುಂದಿದೆ. ಆದ್ದರಿಂದ ದುಷ್ಟ ಮನಸ್ಥಿತಿಯ ನಿಗ್ರಹ ಹಾಗೂ ಮಾನಸಿಕವಾಗಿ ಸದೃಢರಾಗಲು ಶಿಕ್ಷಣ ಇಲಾಖೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ವಿದ್ಯಾರ್ಥಿ ದೆಸೆಯಿಂದಲೇ ಮನಸ್ಸನ್ನು ಗಟ್ಟಿಗೊಳಿಸಲು ಮಕ್ಕಳು ಮುಂದಾದರೆ ಆತ್ಮಹತ್ಯೆ ಪ್ರಕರಣಗಳನ್ನು ಕಡಿಮೆ ಮಾಡಬಹುದು’ ಎಂದರು.

ಪಂಚೇಂದ್ರಿಯ ನಿಗ್ರಹ: ‘ಮನುಷ್ಯರಲ್ಲಿ ಪಂಚೇಂದ್ರಿಯ ನಿಗ್ರಹ ಇಲ್ಲದಿದ್ದರೆ ಅಪರಾಧ, ದುಷ್ಕೃತ್ಯ ನಡೆಯುತ್ತದೆ. ಇದು ಮನುಷ್ಯನ ಸಹಜ ಸ್ವಭಾವ ಎಂದು ಕರೆಯಬೇಕಾಗುತ್ತದೆ. ಅದನ್ನು ತಡೆಗಟ್ಟುವುದೇ ಮನುಷ್ಯತ್ವ. ಈ ಮನುಷ್ಯತ್ವವನ್ನು ಮಾನಸಿಕವಾಗಿ, ದೈಹಿಕವಾಗಿ ಗುಣಪಡಿಸಲು ಸೂಕ್ತ ವೈದ್ಯರನ್ನು ಸಂಪರ್ಕಿಸಬೇಕು. ಮಾನಸಿಕ ರೋಗಿಗಳಿಗೆ ನಮ್ಮ ಕಾನೂನು ಮಟ್ಟದಲ್ಲಿ ರಾಷ್ಟ್ರೀಯ ಹಾಗೂ ತಾಲ್ಲೂಕುಮಟ್ಟದವರೆಗೆ ಎಲ್ಲ ಕಾನೂನು ಸೇವಾ ಪ್ರಾಧಿಕಾರದಲ್ಲಿ ಉಚಿತ ಸೇವೆ ಸಿಗಲಿದೆ ಎಂದ ಅವರು, ಮಾನಸಿಕ ಅಸ್ವಸ್ಥರಿಗೆ ಮನೆಯಿಂದಲೇ ಚಿಕಿತ್ಸೆ ಆರಂಭವಾಗಬೇಕು’ ಎಂದು ತಿಳಿಸಿದರು. 

ಘನತೆ, ಸ್ಥಾನಮಾನ ಮುಖ್ಯವಲ್ಲ: ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮಾತನಾಡಿ, ‘ದೈಹಿಕ ಆರೋಗ್ಯ ಸದೃಢತೆಗೆ ಮಾನಸಿಕ ಆರೋಗ್ಯ ನಿರ್ಣಾಯಕ ಪಾತ್ರವಹಿಸುತ್ತದೆ. ಮನೆಗಳಲ್ಲಿರುವ ಮಾನಸಿಕ ಅಸ್ವಸ್ಥರ ಬಗ್ಗೆ ಕಾಳಜಿ ಇರಬೇಕು. ಘನತೆ, ಗೌರವಕ್ಕೆ ಧಕ್ಕೆ ಆಗುತ್ತದೆ ಎಂದು ಅವರನ್ನು ನಿರ್ಲಕ್ಷ್ಯವಹಿಸುವುದು ಸರಿಯಲ್ಲ. ಇದನ್ನು ಹೋಗಲಾಡಿಸಬೇಕು’ ಎಂದರು.

‘ಎಲ್ಲರಲ್ಲೂ ಒತ್ತಡ ಇರುತ್ತದೆ. ಒತ್ತಡದಲ್ಲಿ ಕರ್ತವ್ಯ ನಿರ್ವಹಿಸಿದರೆ ಮಾನಸಿಕ ರೋಗಗಳು ಹೆಚ್ಚುತ್ತವೆ. ಆದ್ದರಿಂದ, ಮಾನಸಿಕವಾಗಿ ಖಿನ್ನತೆಗೆ ಒಳಗಾಗದೆ ವೈದ್ಯರೊಂದಿಗೆ ಸಮಾಲೋಚನೆ ನಡೆಸಿ ಧೈರ್ಯವಾಗಿ ಎಲ್ಲ ಸಮಸ್ಯೆಗಳನ್ನು ಎದುರಿಸಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ.ವಿಶಾಲಾಕ್ಷಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಇಂದುಶೇಖರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಚ್.ನಾರಾಯಣರಾವ್, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ರವಿ, ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ರಾಜು, ಮನೋವೈದ್ಯರಾದ ಡಾ.ಸುಷ್ಮ, ಭರತ್‌ ಇದ್ದರು.

ಪ್ರಕರಣ ಸಾಬೀತು ಮಾಡುವುದು ಕಷ್ಟ

‘ಮಾನಸಿಕ ಅಸ್ವಸ್ಥ ಕೊಲೆ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿದ್ದರೆ ಅಂತಹ ಸಂದರ್ಭದಲ್ಲಿ ಈ ವ್ಯಕ್ತಿ ಮಾನಸಿಕ ಅಸ್ವಸ್ಥ ಎನ್ನುವುದನ್ನು ಸಾಬೀತು ಮಾಡುವುದು ಕಷ್ಟ. ಕೊಲೆ ಅಪರಾಧ ಸಂದರ್ಭದಲ್ಲಿ ಈತ ನಿಜವಾಗಿಯೂ ಮಾನಸಿಕ ಅಸ್ವಸ್ಥನಾಗಿದ್ದ ಎನ್ನುವ ಪೂರಕವಾದ ಸಾಕ್ಷ್ಯಾಧಾರ ಒದಗಿಸಿ ಪ್ರತಿವಾದದಲ್ಲಿ ಸಾಬೀತು ಮಾಡುವುದು ಕಷ್ಟ’ ಎಂದು ಬಸವರಾಜ ಹೇಳಿದರು.

‘ಅರ್ಧ ನಿಮಿಷದಲ್ಲಿ ದುರ್ಘಟನೆ ನಡೆದು ಬಿಡುತ್ತದೆ. ಜೀವಾವಧಿ ಶಿಕ್ಷೆ ಅಥವಾ ಮರಣ ದಂಡನೆ ಅನುಭವಿಸುವ ಸ್ಥಿತಿ ಬರಬಹುದು. ಆದ್ದರಿಂದ ಮನೆಯಲ್ಲಿ ಇಂತಹ ಮಾನಸಿಕ ಅಸ್ವಸ್ಥರು ಯಾರೇ ಇದ್ದರೂ ಸರ್ಕಾರದ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಚಿಕಿತ್ಸೆ ಕೊಡಿಸಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಆಸ್ತಿಗಳ ರಕ್ಷಣೆ: ಮಾನಸಿಕ ಅಸ್ವಸ್ಥರ ಪ್ರಕರಣಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲಾಗುತ್ತದೆ. ಜೊತೆಗೆ ಅವರ ಆಸ್ತಿಗಳನ್ನು ದುರುಪಯೋಗ ಪಡಿಸಿಕೊಳ್ಳಲು ಸಾಧ್ಯವಿಲ್ಲ. ನಿರಂತರವಾಗಿ ಚಿಕಿತ್ಸೆ ಪಡೆಯುವ ಮಾನಸಿಕ ಅಸ್ವಸ್ಥರ ಯಾವುದೇ ಆಸ್ತಿಯನ್ನು ನ್ಯಾಯಾಲಯ ಸಂರಕ್ಷಿಸಲಿದೆ’ ಎಂದು ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)