ಮಾಂಸಾಹಾರ ತಗ್ಗಿಸಿ– ಪ್ರಕೃತಿ ಉಳಿಸಿ: ‘ನೇಚರ್’ ಜರ್ನಲ್‌ನಲ್ಲಿ ಅಧ್ಯಯನ ಪ್ರಕಟ

7

ಮಾಂಸಾಹಾರ ತಗ್ಗಿಸಿ– ಪ್ರಕೃತಿ ಉಳಿಸಿ: ‘ನೇಚರ್’ ಜರ್ನಲ್‌ನಲ್ಲಿ ಅಧ್ಯಯನ ಪ್ರಕಟ

Published:
Updated:
Deccan Herald

ಪ್ಯಾರಿಸ್: ಹವಾಮಾನ ವೈಪರೀತ್ಯಕ್ಕೆ ಕಡಿವಾಣ ಹಾಕಲು, ಜಾಗತಿಕ ಮಟ್ಟದಲ್ಲಿ ಮಾಂಸಾಹಾರ ಸೇವನೆ ಪ್ರಮಾಣ ಕಡಿಮೆ ಆಗಬೇಕು ಎಂದು ಹೊಸ ಅಧ್ಯಯನವೊಂದು ಹೇಳಿದೆ.

‘ಭೂಮಿಯ ಮೇಲ್ಮೈ ತಾಪಮಾನ ಹೆಚ್ಚುತ್ತಿರುವುದನ್ನು ತಡೆಗಟ್ಟುವ ಕಠಿಣ ಸವಾಲು ಎದುರಿಸುತ್ತಿರುವ ಈ ಸಂದರ್ಭದಲ್ಲಿ, ನಿರ್ದಿಷ್ಟವಾಗಿ ಪಶ್ಚಿಮದ ರಾಷ್ಟ್ರಗಳು ಮಾಂಸಾಹಾರ ಸೇವನೆಯನ್ನು ಶೇ 90ರಷ್ಟು ಕಡಿಮೆ ಮಾಡಬೇಕಾದ ಅಗತ್ಯವಿದೆ’ ಎಂದು ವಿಜ್ಞಾನಿಗಳು ಅಧ್ಯಯನದಲ್ಲಿ ಸಲಹೆ ನೀಡಿದ್ದಾರೆ.

ಮನುಷ್ಯರು ಸೇವಿಸುವ ಆಹಾರದಿಂದ ಪರಿಸರದ ಮೇಲೆ ಹೇಗೆ ಪರಿಣಾಮ ಉಂಟಾಗುತ್ತದೆ ಎನ್ನುವ ಕುರಿತು ಈವರೆಗೆ ನಡೆದಿರುವ ಅಧ್ಯಯನಗಳಲ್ಲೇ ಇದು ವಿಸ್ತೃತವಾದುದಾಗಿದ್ದು, ನೇಚರ್ ಜರ್ನಲ್‌ನಲ್ಲಿ ಪ್ರಕಟವಾಗಿದೆ.

‘ಈಗಾಗಲೇ ಆಹಾರ ಉದ್ದಿಮೆಗಳಿಂದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮಗಳಾಗುತ್ತಿವೆ. ಮಾಂಸಾಹಾರ ಸೇವನೆ ಪ್ರಮಾಣದಲ್ಲಿ ಗಣನೀಯ ಇಳಿಕೆ ಆಗದಿದ್ದರೆ, ಈ ಶತಮಾನದ ಮಧ್ಯಭಾಗದ ವೇಳೆಗೆ ಪರಿಸರದ ಮೇಲಾಗುವ ಹಾನಿ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಜತೆಗೆ 2050ರ ವೇಳೆಗೆ ಭೂಮಿ ಮೇಲಿನ ಜನಸಂಖ್ಯೆ 1,000 ಕೋಟಿ ತಲುಪುವ ಅಂದಾಜಿದೆ. ಈ ಎಲ್ಲಾ ಅಂಶಗಳಿಂದ ಒಟ್ಟಾರೆಯಾಗಿ ಮನುಕುಲಕ್ಕೆ ಆಹಾರ ಪೂರೈಕೆ ಸಾಮರ್ಥ್ಯ ಕುಗ್ಗಬಹುದು’ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.

‘ಹಸಿರುಮನೆಗೆ ಹಾನಿ’

‘ನಿರ್ದಿಷ್ಟವಾಗಿ ಮಾಂಸಾಹಾರ ಉತ್ಪಾದನೆ ಪ್ರಕ್ರಿಯೆಯಿಂದ ಹಸಿರುಮನೆಗೆ ಹಾನಿ ಉಂಟುಮಾಡುವಂತಹ ಅನಿಲಗಳು ಬಿಡುಗಡೆ ಆಗುತ್ತವೆ, ದೊಡ್ಡ ಮಟ್ಟದಲ್ಲಿ ಅರಣ್ಯಭೂಮಿ ನಾಶವಾಗುತ್ತದೆ ಹಾಗೂ ಭಾರಿ ಪ್ರಮಾಣದ ನೀರು ಬಳಕೆಯಾಗುತ್ತದೆ. ಹವಾಮಾನ ಬದಲಾವಣೆಯಲ್ಲಿ ನೀರು ಬಳಕೆ ಪ್ರಮಾಣ ಪ್ರಮುಖ ಪಾತ್ರ ವಹಿಸುತ್ತದೆ’ ಎಂದು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ. 

ಜನರು ಮಾಂಸಾಹಾರ ಸೇವನೆ ಕಡಿಮೆ ಮಾಡುವುದರಿಂದ ಹವಾಮಾನ ಸಂರಕ್ಷಣೆಗೆ ತಮ್ಮ ಪಾಲಿನ ಸಣ್ಣ ಕೊಡುಗೆ ನೀಡಬಹುದು ಎನ್ನುವುದು ತಜ್ಞರ ಅಭಿಮತವಾಗಿದೆ.

‘ಸಮಗ್ರ ಪರಿಹಾರ ಅವಶ್ಯ’

‘ಕೇವಲ ಒಂದೇ ಪರಿಹಾರದಿಂದ ಈ ಸವಾಲು ಎದುರಿಸಲು ಸಾಧ್ಯವಾಗುವುದಿಲ್ಲ. ಸಮಗ್ರ ಪರಿಹಾರ ಕಂಡುಕೊಂಡಾಗ ಮಾತ್ರ, ಹೆಚ್ಚುತ್ತಲೇ ಇರುವ ಜನಸಂಖ್ಯೆಗೆ ಆಹಾರ ಪೂರೈಕೆ ಸಾಧ್ಯ’ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಮ್ಯಾಕ್ರೊ ಸ್ಪ್ರಿಂಗ್‌ಮನ್‌ ತಿಳಿಸಿದ್ದಾರೆ. 

ಹೆಚ್ಚುತ್ತಿರುವ ಹವಾಮಾನ ವೈಪರೀತ್ಯಕ್ಕೆ ಕಡಿವಾಣ ಹಾಕಲು ವಿಶ್ವದಾದ್ಯಂತ ಹಿಂದೆಂದೂ ಆಗದ ಮಟ್ಟದಲ್ಲಿ ಸಾಮಾಜಿಕ ಹಾಗೂ ಜಾಗತಿಕ ಆರ್ಥಿಕ ಬದಲಾವಣೆಗಳು ಅವಶ್ಯ ಎಂದು ಈಚೆಗಷ್ಟೆ ವಿಶ್ವಸಂಸ್ಥೆ ತನ್ನ ವರದಿಯೊಂದರಲ್ಲಿ ಎಚ್ಚರಿಕೆ ನೀಡಿತ್ತು. 

ಹೈನುಗಾರಿಕೆಯಿಂದ ಅಪಾಯ: ತಜ್ಞರ ನಿಲುವು

‘ಪ್ರಾಣಿಗಳ ಮೇವಿಗಾಗಿ ದೊಡ್ಡ ಮಟ್ಟದಲ್ಲಿ ಜಾಗ ಮೀಸಲಿಡಲು ಅರಣ್ಯ ನಾಶ ಮಾಡಲಾಗುತ್ತದೆ. ಇದರಿಂದ ಇಂಗಾಲ ಹೀರುವ ಮರಗಳ ಸಂಖ್ಯೆ ಕಡಿಮೆಯಾಗುತ್ತದೆ. ಅಲ್ಲದೆ, ಪ್ರಾಣಿಗಳು ದೊಡ್ಡ ಮಟ್ಟದಲ್ಲಿ ಹೊರಸೂಸುವ ಮೀಥೇನ್‌ ಅನಿಲ ಹಸಿರುಮನೆಗೆ ಹಾನಿಕಾರಕ. ಈ ಎಲ್ಲ ಕಾರಣಗಳಿಂದ ಹೈನುಗಾರಿಕೆಯು ಪರಿಸರಕ್ಕೆ ಮೂರುಪಟ್ಟು ಹೆಚ್ಚು ಅಪಾಯ ಒಡ್ಡುತ್ತದೆ’ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. 

ಮುಖ್ಯಾಂಶಗಳು

* ಉತ್ತಮ ಶಿಕ್ಷಣ, ಕೈಗಾರಿಕಾ ಕ್ಷೇತ್ರದ ಸುಧಾರಣೆಗಳಿಂದ ಸಮಸ್ಯೆ ನಿರ್ವಹಣೆ ಸಾಧ್ಯ

* ಆರೋಗ್ಯಕರ ಹಾಗೂ ಸಸ್ಯಾಧಾರಿತ ಆಹಾರ ಸೇವನೆ ಶೈಲಿ ರೂಢಿಸಿಕೊಳ್ಳುವುದು ಉತ್ತಮ 

 

 

 

ಬರಹ ಇಷ್ಟವಾಯಿತೆ?

 • 25

  Happy
 • 1

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !