ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ ಮಿಲ್‌ಗ್ರೋಮ್‌, ವಿಲ್ಸನ್‌ಗೆ ಅರ್ಥಶಾಸ್ತ್ರದಲ್ಲಿ ನೊಬೆಲ್‌

Last Updated 12 ಅಕ್ಟೋಬರ್ 2020, 12:20 IST
ಅಕ್ಷರ ಗಾತ್ರ

ಸ್ಟಾಕ್‌ಹೊಮ್‌: ವಾಣಿಜ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಹರಾಜು ಪ್ರಕ್ರಿಯೆ ಮೇಲಿನ ಕೆಲಸಕ್ಕಾಗಿ ಅಮೆರಿಕದ ಅರ್ಥಶಾಸ್ತ್ರಜ್ಞರಾದ ಪೌಲ್‌ ಆರ್‌.ಮಿಲ್‌ಗ್ರೋಮ್‌ ಹಾಗೂ ರಾಬರ್ಟ್ ಬಿ.ವಿಲ್ಸನ್‌ ಅವರು 2020ನೇ ಸಾಲಿನ ಅರ್ಥಶಾಸ್ತ್ರ ವಿಭಾಗದ ನೊಬೆಲ್‌ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸಾಂಪ್ರದಾಯಿಕವಾದ ರೇಡಿಯೊ ತರಂಗಾಂತರಗಳ ಮುಖಾಂತರ ಮಾರಾಟ ಮಾಡಲು ಸಾಧ್ಯವಾಗದಂಥ ಸರಕು ಮತ್ತು ಸೇವೆಗಳನ್ನೂ ಹರಾಜು ಹಾಕಲು ಇದೀಗ ಸಾಧ್ಯವಾಗಿದೆ. ಹರಾಜು ಸಿದ್ಧಾಂತಕ್ಕೆ ಸುಧಾರಣೆ ಹಾಗೂ ಹೊಸ ಮಾದರಿಯ ಹರಾಜು ಪ್ರಕ್ರಿಯೆಗಳನ್ನು ಆವಿಷ್ಕರಿಸಿದ್ದಕ್ಕಾಗಿ ಈ ಗೌರವ ಸಲ್ಲಿಸಲಾಗಿದೆ ಎಂದು ನೊಬೆಲ್‌ ಸಮಿತಿಯು ತಿಳಿಸಿದೆ.

‘ಈ ಇಬ್ಬರು ಅರ್ಥಶಾಸ್ತ್ರಜ್ಞರ ಆವಿಷ್ಕಾರಗಳಿಂದ ವಿಶ್ವದಾದ್ಯಂತ ಇರುವ ಮಾರಾಟಗಾರರು, ಖರೀದಿದಾರರು ಹಾಗೂ ತೆರಿಗೆ ಪಾವತಿದಾರರು ಪ್ರಯೋಜನ ಪಡೆದಿದ್ದಾರೆ’ ಎಂದು ಪ್ರಕಟಣೆಯಲ್ಲಿ ರಾಯಲ್‌ ಸ್ವೀಡಿಷ್‌ ಅಕಾಡೆಮಿ ಆಫ್‌ ಸೈನ್ಸ್‌ ಉಲ್ಲೇಖಿಸಿದೆ.

ಅಮೆರಿಕದ ಸ್ಟ್ಯಾನ್ಫರ್ಡ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿರುವ 83 ವರ್ಷದ ವಿಲ್ಸನ್‌, ‘ಕಾಮಲ್‌ ವ್ಯಾಲ್ಯೂ’ ಹರಾಜು ಸಿದ್ಧಾಂತವನ್ನು ಅಭಿವೃದ್ಧಿಪಡಿಸಿದ್ದರು. ಈ ಸಿದ್ಧಾಂತದಲ್ಲಿ ಮಾರಾಟಕ್ಕಿರುವ ವಸ್ತುವಿನ ಬೆಲೆ ಎಲ್ಲರಿಗೂ ಒಂದೇ ಆಗಿರುತ್ತದೆ. ಆದರೆ, ವಸ್ತುವಿನ ಬೆಲೆಯ ಬಗ್ಗೆ ಬಿಡ್‌ ಮಾಡುವವರಿಗೆ ಪ್ರತ್ಯೇಕ ಮಾಹಿತಿ ಇರುತ್ತದೆ.ಸ್ಟ್ಯಾನ್ಫರ್ಡ್‌ ವಿಶ್ವವಿದ್ಯಾಲಯದಲ್ಲೇ ಪ್ರಾಧ್ಯಾಪಕರಾಗಿರುವ ಮಿಲ್‌ಗ್ರೋಮ್‌ ಅವರು, ವಿವಿಧ ಹರಾಜು ವಿಧಾನಗಳಲ್ಲಿ ಬಿಡ್ಡಿಂಗ್‌ ತಂತ್ರಗಳನ್ನು ವಿಶ್ಲೇಷಿಸಿ ಹೊಸ ಸಿದ್ಧಾಂತವನ್ನು ಅಭಿವೃದ್ಧಿಪಡಿಸಿದ್ದರು.

ಪ್ರಶಸ್ತಿ ಕುರಿತು ಟೆಲಿಫೋನ್‌ ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿದ ವಿಲ್ಸನ್‌, ‘ನಾನು ಹರಾಜಿನ ಕುರಿತು ಸಂಶೋಧನೆ ಮಾಡಿದ್ದರೂ, ಇಲ್ಲಿಯವರೆಗೂ ಯಾವುದೇ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿಲ್ಲ. ಆದರೆ,
ಇ–ಬೇ ಮುಖಾಂತರ ಒಮ್ಮೆ ಸ್ಕೀಬೂಟ್ಸ್‌ ಖರೀದಿಸಿದ್ದೆವು ಎಂದು ಹೆಂಡತಿ ನೆನಪಿಸುತ್ತಿದ್ದಾಳೆ. ಇದು ಹರಾಜು ಎಂದುಕೊಳ್ಳುತ್ತೇನೆ. ಪ್ರಶಸ್ತಿ ದೊರೆತಿರುವುದಕ್ಕೆ ಸಂತೋಷವಾಗಿದೆ’ ಎಂದರು.

ಪ್ರಶಸ್ತಿ ಮೊತ್ತ ಅಂದಾಜು ₹8.17 ಕೋಟಿ ಆಗಿದ್ದು, ಇಬ್ಬರು ಈ ಮೊತ್ತವನ್ನು ಹಂಚಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT