ಬ್ರಿಟನ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಲು ಒಪ್ಪಿಕೊಂಡ ಬೋರಿಸ್ ಜಾನ್ಸನ್
ಲಂಡನ್: ರಾಜಕೀಯ ಬಿಕ್ಕಟ್ಟು ಎದುರಿಸುತ್ತಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಅಂತಿಮವಾಗಿ ರಾಜೀನಾಮೆ ನೀಡಲು ಒಪ್ಪಿಕೊಂಡಿದ್ದಾರೆ. ಮುಂದಿನ ಪ್ರಧಾನಿ ಆಯ್ಕೆಯಾಗುವ ವರೆಗೆ ಹುದ್ದೆಯಲ್ಲಿ ಮುಂದುವರಿಯುವುದಾಗಿ ಗುರುವಾರ ತಿಳಿಸಿದ್ದಾರೆ.
ಗುರುವಾರ ಸಂಜೆ ಜಾನ್ಸನ್ ಅವರು ಔಪಚಾರಿಕವಾಗಿ ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿ, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ.
ಹಲವು ಸಚಿವರು ರಾಜೀನಾಮೆ ಸಲ್ಲಿಸಿದ್ದರೂ, ಪ್ರಧಾನಿ ಹುದ್ದೆ ತೊರೆಯುವುದಿಲ್ಲ ಎಂದು ಜಾನ್ಸನ್ ಪಟ್ಟು ಹಿಡಿದಿದ್ದರು.
ರಿಷಿ ಸುನಕ್ ಸಹಿತ ಎಂಟು ಹಿರಿಯ ಸಚಿವರು ಮತ್ತು ಐವರು ಕಿರಿಯ ಸಚಿವರು ಸರ್ಕಾರದಿಂದ ಹೊರ ನಡೆದ ಬಳಿಕ ಬೋರಿಸ್ ಜಾನ್ಸನ್ ರಾಜೀನಾಮೆ ನೀಡುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಈ ಬೆಳವಣಿಗೆಯು ಹೊಸ ಪ್ರಧಾನಿ ಆಯ್ಕೆಯ ಚುನಾವಣೆಗೆ ದಾರಿ ಮಾಡಿಕೊಟ್ಟಿದೆ. ಅಕ್ಟೋಬರ್ ತಿಂಗಳಲ್ಲಿ ಚುನಾವಣೆ ನಡೆಯಲಿದೆ.
ಜಾನ್ಸನ್ ಅವರ ಸ್ಥಾನಕ್ಕೆ ಪ್ರಮುಖವಾಗಿ ಇರಾಕ್ ಸಂಜಾತ ನಧೀಂ ಜಹಾವಿ ಅವರು ಸ್ಪರ್ಧೆಯಲ್ಲಿದ್ದಾರೆ. ರಿಷಿ ಸುನಕ್ ಸ್ಥಾನಕ್ಕೆ ಜಹಾವಿ ಅವರನ್ನು ನೇಮಿಸಲಾಗಿತ್ತು. ಇದರ ಬೆನ್ನಲ್ಲೇ ಜಹಾವಿ ಅವರು 'ಪ್ರಧಾನಿಯವರೆ ನಿಮ್ಮ ಹೃದಯಕ್ಕೆ ಸರಿಯೇನು ಎಂಬುದು ಗೊತ್ತಿದೆ. ಈಗ ಹೊರಟು ಹೋಗಿ' ಎಂದು ಸಾರ್ವಜನಿಕವಾಗಿ ಪತ್ರ ಬರೆದಿದ್ದಾರೆ.
ಅಕ್ರಮಗಳು ಮತ್ತು ಕೋವಿಡ್ ಸಂಬಂಧಿತ ನಿಯಮಾವಳಿ ಉಲ್ಲಂಘಿಸಿ ನಡೆಸಿದ ಔತಣ ಕೂಟದಿಂದಾಗಿ ಬೋರಿಸ್ ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಬೋರಿಸ್ ಅವರು ಪ್ರತಿನಿಧಿಸುವ ಕನ್ಸರ್ವೇಟಿವ್ ಪಕ್ಷದ ಸಂಸದರೇ ಬೋರಿಸ್ ನಾಯಕತ್ವದ ವಿರುದ್ಧ ಸಿಡಿದೆದ್ದಿದ್ದರು. ಇದರಿಂದಾಗಿ ಕಳೆದ ತಿಂಗಳು ಎದುರಾದ ಅವಿಶ್ವಾಸ ನಿಲುವಳಿ ಸಂದರ್ಭ ಜಾನ್ಸನ್ ಅವರು ಪ್ರಯಾಸದಿಂದ ವಿಶ್ವಾಸಮತ ಗಳಿಸಿ, ಅಧಿಕಾರ ಉಳಿಸಿಕೊಂಡಿದ್ದರು.
ಬೋರಿಸ್ ಜಾನ್ಸನ್ ರಾಜೀನಾಮೆ: ಟ್ವಿಟರ್ನಲ್ಲಿ ಸದ್ದು ಮಾಡಿದ 'ಬುಲ್ಡೋಜರ್'!
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.