ಶನಿವಾರ, ಮಾರ್ಚ್ 25, 2023
29 °C

ಬ್ರಿಟನ್‌: ಸಂಸತ್‌ನಲ್ಲಿ ಗದ್ದಲಕ್ಕೆ ಕಾರಣವಾದ ಜಾನ್ಸನ್‌–ಮೋದಿ ಹಸ್ತಲಾಘವದ ಚಿತ್ರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್‌ (ಪಿಟಿಐ): ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಪ್ರಧಾನಿ ಬೋರಿಸ್‌ ಜಾನ್ಸನ್‌ ಹಸ್ತಲಾಘವ ಮಾಡುತ್ತಿದ್ದ ಚಿತ್ರವನ್ನು ಒಳಗೊಂಡ ಕರಪತ್ರ ಹಾಗೂ ಅದರಲ್ಲಿ ಮುದ್ರಿತ ವಿಷಯ ಬ್ರಿಟನ್‌ನ ಸಂಸತ್‌ನಲ್ಲಿ ಕಾವೇರಿದ ಚರ್ಚೆ ಹಾಗೂ ಗದ್ದಲಕ್ಕೆ ಕಾರಣವಾಯಿತು.

ಈ ವಿಷಯವಾಗಿ ಪ್ರಧಾನಿ ಜಾನ್ಸನ್‌ ಹಾಗೂ ವಿರೋಧ ಪಕ್ಷದ ನಾಯಕ ಕೀರ್‌ ಸ್ಟಾರ್ಮರ್‌ ನಡುವೆ ಆರಂಭವಾದ ಮಾತಿನ ಚಕಮಕಿ ಒಂದು ಹಂತದಲ್ಲಿ ವಿಕೋಪಕ್ಕೆ ಹೋಗಿ, ಗದ್ದಲಕ್ಕೂ ಕಾರಣವಾಯಿತು.

ಬ್ಯಾಟ್ಲೆ–ಸ್ಪೆನ್‌ ಕ್ಷೇತ್ರಕ್ಕೆ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಈ ಕರಪತ್ರವನ್ನು ಹಂಚಲಾಗಿತ್ತು. 2019ರಲ್ಲಿ ನಡೆದ ಜಿ–7 ಶೃಂಗಸಭೆಯಲ್ಲಿ ಮೋದಿ ಹಾಗೂ ಜಾನ್ಸನ್‌ ಅವರು ಭೇಟಿಯಾಗಿದ್ದಾಗ, ಉಭಯ ನಾಯಕರು ಹಸ್ತಲಾಘವ ಮಾಡಿದ್ದ ಚಿತ್ರವನ್ನು ಈ ಕರಪತ್ರದಲ್ಲಿ ಮುದ್ರಿಸಲಾಗಿತ್ತು. ಭಾರತೀಯರನ್ನು ಅವಹೇಳನ ಮಾಡುವ ವಾಕ್ಯಗಳನ್ನು ಕರಪತ್ರದಲ್ಲಿ ಮುದ್ರಿಸಲಾಗಿತ್ತು.

ಈ ಕರಪತ್ರದ ಬಗ್ಗೆ ಆಗ ಬ್ರಿಟನ್‌ನಲ್ಲಿ ಭಾರಿ ಅಸಮಾಧಾನ ವ್ಯಕ್ತವಾಗಿತ್ತು. ಅದರಲ್ಲೂ ಅಲ್ಲಿನ ಭಾರತೀಯರು ಕರಪತ್ರದಲ್ಲಿನ ವಿಷಯವನ್ನು ಖಂಡಿಸಿದ್ದರು.

ಬ್ರಿಟನ್‌ನಲ್ಲಿರುವ ಭಾರತೀಯರನ್ನು ವಿರೋಧಿಸುವ ಮನಸ್ಥಿತಿ ಹಾಗೂ ಜನರಲ್ಲಿ ಒಡಕನ್ನುಂಟು ಮಾಡುವ ತಮ್ಮ ಮನೋಭಾವವನ್ನು ಲೇಬರ್‌ ಪಾರ್ಟಿ ಮುಖಂಡರು ಈ ಕರಪತ್ರದ ಮೂಲಕ ಹೊರಹಾಕಿದ್ದಾರೆ ಎಂದು ಜಾನ್ಸನ್‌ ದೂರಿದರು.

‘ಲೇಬರ್‌ ಪಾರ್ಟಿ ಮುಖಂಡರು ಈ ಕರಪತ್ರವನ್ನು ಹಿಂಪಡೆದುಕೊಳ್ಳಬೇಕು’ ಎಂದು ಜಾನ್ಸನ್‌ ಆಗ್ರಹಿಸಿದರು.

ಈ ಮಾತಿಗೆ ಒಪ್ಪದ ವಿರೋಧ ಪಕ್ಷದ ನಾಯಕ ಸ್ಟಾರ್ಮರ್‌, ‘ಬ್ರಿಟನ್‌ನ ಫುಟ್ಬಾಲ್‌ ಆಟಗಾರರ ವಿರುದ್ಧ ಕೇಳಿ ಬಂದ ಜನಾಂಗೀಯ ನಿಂದನೆಯ ವಿರುದ್ಧ ಆಡಳಿತಾರೂಢ ಕನ್ಸರ್ವೇಟಿವ್‌ ಪಾರ್ಟಿ ಯಾಕೆ ಹೋರಾಡಲಿಲ್ಲ’ ಎಂದು ಹರಿಹಾಯ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು