ಶನಿವಾರ, ಡಿಸೆಂಬರ್ 4, 2021
20 °C
ಕುವೈತ್‌ನಿಂದ ಭಾರತಕ್ಕೆ ಕಚ್ಚಾತೈಲ ತರುತ್ತಿದ್ದ ಹಡಗಿನಲ್ಲಿ ಅಗ್ನಿ ಅವಘಡ

ಶ್ರೀಲಂಕಾ: ತೈಲ ಟ್ಯಾಂಕರ್‌ಗೆ ಬೆಂಕಿ, ರಕ್ಷಣಾ ಕಾರ್ಯ ಚುರುಕು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೊಲಂಬೊ:  ಶ್ರೀಲಂಕಾದ ಪೂರ್ವ ಕಡಲಿನಲ್ಲಿ ಸಾಗುತ್ತಿದ್ದ ತೈಲ ಹೊತ್ತ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸಿಂಗಪುರ ಸೇರಿದಂತೆ ವಿವಿಧ ದೇಶಗಳ ತಜ್ಞರು ಹಡಗು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.

ಪನಾಮಾ ಮೂಲದ ‘ಎಂಟಿ ನ್ಯೂ ಡೈಮಂಡ್‌’ ಹೆಸರಿನ ಹಡಗಿನಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡಿದ್ದು, ರಕ್ಷಣಾ ಕಾರ್ಯ ಇನ್ನೂ ನಡೆಯುತ್ತಿದೆ. 2.70 ಲಕ್ಷ ಟನ್‌ ಕಚ್ಚಾ ತೈಲ ಹೊತ್ತ ಈ ಹಡಗು ಕುವೈತ್‌ನಿಂದ ಭಾರತಕ್ಕೆ ತೆರಳುತ್ತಿತ್ತು. 

ಫಿಲಿಪ್ಪೀನ್‌ನ 18 ಹಾಗೂ ಗ್ರೀಕ್‌ನ 5 ಜನ ಸೇರಿದಂತೆ ಒಟ್ಟು 23 ಸಿಬ್ಬಂದಿ ಹಡಗಿನಲ್ಲಿದ್ದರು. ಬಾಯ್ಲರ್‌ ಸ್ಫೋಟಗೊಂಡ ಪರಿಣಾಮ ಫಿಲಿಪ್ಪೀನ್‌ ಮೂಲದ ನಾವಿಕರೊಬ್ಬರು ಮೃತಪಟ್ಟಿದ್ದಾರೆ. ಉಳಿದವರನ್ನು ರಕ್ಷಿಸಲಾಗಿದೆ ಎಂದು ಶ್ರೀಲಂಕಾ ನೌಕಾಪಡೆ ತಿಳಿಸಿದೆ. 

ಭಾರತದ ನೌಕಾಪಡೆಯ ಒಂದು, ಇಂಡಿಯನ್‌ ಕೋಸ್ಟ್‌ ಗಾರ್ಡ್‌ನ ಸಾರಂಗ್‌, ಸುಜಯ್‌ ಹಾಗೂ ಬೆಂಕಿ ನಂದಿಸುವ ಸಾಧನಗಳಿರುವ ಟಿಟಿಟಿ ಒನ್ ಸೇರಿದಂತೆ ಐದು ಹಡಗುಗಳು ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ನಿರತವಾಗಿವೆ. ಭಾರತದ ವಾಯುಪಡೆ ಸಹ ಈ ಕಾರ್ಯಕ್ಕೆ ಕೈಜೋಡಿಸಿದೆ. 

ಬ್ರಿಟನ್‌ ಹಾಗೂ ನೆದರ್ಲೆಂಡ್‌ನ 10 ಜನ ತಜ್ಞರನ್ನು ಒಳಗೊಂಡ ತಂಡವೂ ಈ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ವಿಪತ್ತು ನಿರ್ವಹಣೆ, ಕಾನೂನಾತ್ಮಕ ವಿಷಯಗಳಲ್ಲಿ ಈ ತಂಡ ವಿಶೇಷ ಪರಿಣತಿ ಹೊಂದಿದೆ ಎಂದು ಶ್ರೀಲಂಕಾ ನೌಕಾಪಡೆ ಮೂಲಗಳು ಹೇಳಿವೆ.

ಈ ಹಡಗಿನ ಮಾಲೀಕರು ಸಿಂಗಪುರ ಮೂಲದ ಕಂಪನಿಯನ್ನು ರಕ್ಷಣಾ ಕಾರ್ಯಕ್ಕಾಗಿ ನೇಮಕ ಮಾಡಿಕೊಂಡಿದ್ದು, ಕಂಪನಿಯ ತಜ್ಞರು ಕೂಡ ಘಟನಾ ಸ್ಥಳಕ್ಕೆ ತೆರಳಿದ್ದಾರೆ ಎಂದು ಇವೇ ಮೂಲಗಳು ಹೇಳಿವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು