ಶನಿವಾರ, ಏಪ್ರಿಲ್ 1, 2023
31 °C

ಕಾಬೂಲ್: ಸೇನಾ ಆಸ್ಪತ್ರೆ ಮೇಲೆ ದಾಳಿ, 19 ಮಂದಿ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಕಾಬೂಲ್: ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ನ ಸರ್ದಾರ್ ಮೊಹಮ್ಮದ್ ದಾವೂದ್ ಖಾನ್ ರಾಷ್ಟ್ರೀಯ ಮಿಲಿಟರಿ ಆಸ್ಪತ್ರೆಯ  ಮೇಲೆ ಮಂಗಳವಾರ ನಡೆದ ದಾಳಿಯಲ್ಲಿ ಕನಿಷ್ಠ 19 ಮಂದಿ ಸಾವಿಗೀಡಾಗಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಆಸ್ಪತ್ರೆಯ ಆವರಣದಲ್ಲಿನ ಪ್ರವೇಶ ದ್ವಾರದ ಸಮೀಪ ಎರಡು ಸ್ಫೋಟಗಳು ಸಂಭವಿಸಿದ್ದು, ಆಸ್ಪತ್ರೆಯೊಳಗೆ ಗುಂಡಿನ ದಾಳಿ ನಡೆದಿದೆ ಎಂದು ತಾಲಿಬಾನಿಗಳು ಮತ್ತು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ದಾಳಿಯ ಹೊಣೆಯನ್ನು ಇದುವರೆಗೆ ಯಾವ ಸಂಘಟನೆಯೂ ಹೊತ್ತುಕೊಂಡಿಲ್ಲ. ‘ಮಂಗಳವಾರ ಆಸ್ಪತ್ರೆಯ ಪ್ರದೇಶದಲ್ಲಿ ಎರಡು ಸ್ಫೋಟಗಳು ಸಂಭವಿಸಿವೆ’ ಎಂದು ತಾಲಿಬಾನ್ ಮಾಧ್ಯಮ ವಕ್ತಾರರು ಖಚಿತಪಡಿಸಿದ್ದಾರೆ.

‌‘ಘಟನಾ ಸ್ಥಳದಿಂದ 19 ಮೃತದೇಹಗಳು ಹಾಗೂ ಗಾಯಗೊಂಡ 50ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು’ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

‘ನಾನು ಆಸ್ಪತ್ರೆಯೊಳಗಿದ್ದೆ. ಮೊದಲ ಚೆಕ್‌ಪಾಯಿಂಟ್‌ನಿಂದ ದೊಡ್ಡ ಸ್ಫೋಟದ ಶಬ್ದ ಕೇಳಿಸಿತು. ಸುರಕ್ಷಿತ ಕೊಠಡಿಗಳಿಗೆ ಹೋಗುವಂತೆ ಹೇಳಲಾಯಿತು. ನಾನು ಬಂದೂಕುಗಳ ಗುಂಡಿನ ಸದ್ದನ್ನೂ ಕೇಳಿದೆ’ ಎಂದು ಸರ್ದಾರ್ ಮೊಹಮ್ಮದ್ ದಾವೂದ್ ಖಾನ್ ಆಸ್ಪತ್ರೆಯ ವೈದ್ಯರು ಎಎಫ್‌ಪಿಗೆ ತಿಳಿಸಿದರು.

‘ಬಾಂಬ್ ಸ್ಫೋಟದ ನಂತರ ತಾಲಿಬಾನ್ ವಿಶೇಷ ಪಡೆಗಳು ಆ ಪ್ರದೇಶವನ್ನು ರಕ್ಷಿಸಲು ಘಟನಾ ಸ್ಥಳಕ್ಕೆ ಧಾವಿಸಿವೆ’ ಎಂದು ಅಫ್ಗಾನಿಸ್ತಾನದ ಆಂತರಿಕ ಸಚಿವಾಲಯದ ವಕ್ತಾರ ಕ್ವಾರಿ ಸಯೀದ್ ಖೋಸ್ಟಿ ಹೇಳಿದ್ದಾರೆ.

ಆಗಸ್ಟ್ 15ರಂದು ಅಫ್ಗಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ, ಶಿಯಾ ಮುಸ್ಲಿಮರ ಮಸೀದಿಗಳನ್ನು ಗುರಿಯಾಗಿಸಿಕೊಂಡು ಆತ್ಮಹತ್ಯಾ ಬಾಂಬ್ ದಾಳಿಗಳು ಸೇರಿದಂತೆ ಒಟ್ಟು ನಾಲ್ಕು ದಾಳಿಗಳನ್ನು ನಡೆಸಿರುವುದಾಗಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಹೇಳಿಕೊಂಡಿದೆ.

 2017ರಲ್ಲಿ ಸೇನಾ ಆಸ್ಪತ್ರೆಯ ಮೇಲೂ ಇದೇ ಮಾದರಿಯಲ್ಲಿ ಉಗ್ರರು ದಾಳಿ ನಡೆಸಿದ್ದರು. ವೈದ್ಯಕೀಯ ವೇಷ ಧರಿಸಿ ಆಸ್ಪತ್ರೆಯ ವಾರ್ಡ್‌ಗಳಿಗೇ ನುಗ್ಗಿದ್ದ ಉಗ್ರರು ಜನರನ್ನು ಗುಂಡಿಕ್ಕಿ ಕೊಂದಿದ್ದರು. ಗುಂಡುಗಳು ಖಾಲಿಯಾದ ಬಳಿಕ ಚಾಕು ಬಳಸಿ ರೋಗಿಗಳನ್ನು ಹತ್ಯೆ ಮಾಡಿದ್ದರು. ದಾಳಿಯಲ್ಲಿ ಒಟ್ಟು 30 ಮಂದಿ ಸಾವಿಗೀಡಾಗಿದ್ದರು ಎಂದು ಮೂಲಗಳು ತಿಳಿಸಿವೆ.

2017ರ ದಾಳಿಯ ಹೊಣೆಯನ್ನು ಐಎಸ್ ಹೊತ್ತುಕೊಂಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು