ಶನಿವಾರ, ಜನವರಿ 23, 2021
18 °C
ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ನಿಂದ ಮೂರು ಟ್ರಕ್‌ಗಳಲ್ಲಿ ಮುಂಜಾನ 5ರ ಸುಮಾರಿನಲ್ಲಿ ವಿಮಾನ ನಿಲ್ದಾಣ ತಲುಪಿದ ಲಸಿಕೆ

ದೇಶದ 13 ಸ್ಥಳಗಳಿಗೆ ಮೊದಲ ಹಂತದ ಕೋವಿಶೀಲ್ಡ್‌ ಲಸಿಕೆ ರವಾನೆ

ಪಿಟಿಐ Updated:

ಅಕ್ಷರ ಗಾತ್ರ : | |

ಪುಣೆ: ಕೊರೊನಾ ವೈರಸ್‌ ವಿರುದ್ಧದ ಭಾರತದ ಹೋರಾಟದ ನಿರ್ಣಾಯಕ ಹಂತವು ಮಂಗಳವಾರ ಮುಂಜಾನೆ ಆರಂಭವಾಗಿದೆ. ಇನ್ನು ನಾಲ್ಕು ದಿನಗಳಲ್ಲಿ ಆರಂಭವಾಗಲಿರುವ ಸಾರ್ವತ್ರಿಕ ಲಸಿಕಾ ಕಾರ್ಯಕ್ಕಾಗಿ 'ಸೀರಂ ಇನ್‌ಸ್ಟಿಟ್ಯೂಟ್‌'ನಿಂದ ಲಸಿಕೆಗಳನ್ನು ಪುಣೆ ವಿಮಾನ ನಿಲ್ದಾಣಕ್ಕೆ ರವಾನಿಸಲಾಯಿತು. ಅಲ್ಲಿಂದ ವಿವಿಧ ಸ್ಥಳಗಳಿಗೆ ಲಸಿಕೆ ಸಾಗಿಸಲಾಗಿದೆ.

'ಮೂರು ತಾಪಮಾನ-ನಿಯಂತ್ರಿತ ಟ್ರಕ್‌ಗಳು 'ಸೀರಮ್ ಇನ್‌ಸ್ಟಿಟ್ಯೂಟ್'ನಿಂದ ಲಸಿಕೆಗೆಗಳನ್ನು ಹೊತ್ತು ಬೆಳಿಗ್ಗೆ 5 ಗಂಟೆಗೆ ಪುಣೆ ವಿಮಾನ ನಿಲ್ದಾಣಕ್ಕೆ ತೆರಳಿದವು. ಮೂರು ಟ್ರಕ್‌ಗಳು ಒಟ್ಟು 478 ಲಸಿಕೆ ಪೆಟ್ಟಿಗೆಗಳನ್ನು ಸಾಗಿಸಿದವು. ಪ್ರತಿ ಬಾಕ್ಸ್ 32 ಕೆಜಿ ತೂಕವಿರುತ್ತದೆ,' ಎಂದು ಲಸಿಕೆ ಸಾಗಾಟ ವ್ಯವಸ್ಥೆಯಲ್ಲಿ ತೊಡಗಿರುವ ಮೂಲಗಳು ಪಿಟಿಐಗೆ ತಿಳಿಸಿವೆ.

ಮಾಂಜರಿಯಲ್ಲಿರುವ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಆವರಣದಿಂದ ಹೊರಟು, 15 ಕಿ.ಮೀ ದೂರದಲ್ಲಿರುವ ಪುಣೆ ವಿಮಾನ ನಿಲ್ದಾಣವನ್ನು ಟ್ರಕ್‌ಗಳು ತಲುಪಿದವು. ವಿಮಾನ ನಿಲ್ದಾಣದಿಂದ ಲಸಿಕೆಗಳನ್ನು ಬೆಳಿಗ್ಗೆ 10ರ ಒಳಗಾಗಿ ದೇಶದ 13 ಸ್ಥಳಗಳಿಗೆ ರವಾನಿಸಲಾಗುತ್ತದೆ.

ಸೀರಂ ಇನ್‌ಸ್ಟಿಟ್ಯೂಟ್‌ ಆವರಣದಿಂದ ಟ್ರಕ್‌ಗಳು ಹೊರಡುವುದಕ್ಕೂ ಮೊದಲು, ಅವುಗಳಿಗೆ ಪೂಜೆ ಸಲ್ಲಿಸಲಾಯಿತು.

ಪುಣಿಯಿಂದ ಹೊರಟಿರುವ ಈ ಕೋವಿಶೀಲ್ಡ್ ಲಸಿಕೆಗಳನ್ನು ದೆಹಲಿ, ಅಹಮದಾಬಾದ್, ಕೋಲ್ಕತಾ, ಚೆನ್ನೈ, ಬೆಂಗಳೂರು, ಕರ್ನೂಲ್‌, ಹೈದರಾಬಾದ್, ವಿಜಯವಾಡ, ಗುವಾಹಟಿ, ಲಖನೌ, ಚಂಡೀಗಡ ಮತ್ತು ಭುವನೇಶ್ವರಕ್ಕೆ ತಲುಪಿಸಲಾಗುತ್ತದೆ. ಎರಡು ಕಾರ್ಗೋ ವಿಮಾನ ಸೇರಿದಂತೆ ಒಟ್ಟು 8 ವಾಣಿಜ್ಯ ವಿಮಾನಗಳ ಮೂಲಕ ಲಸಿಕೆಗಳನ್ನು ಸಾಗಿಸಲಾಗುತ್ತಿದೆ. ಮುಂಬೈಗೆ ರಸ್ತೆ ಮಾರ್ಗವಾಗಿ ಲಸಿಕೆ ತಲುಪಲಿದೆ.

ಜ.16ರಂದು ದೇಶದಲ್ಲಿ ಲಸಿಕಾ ಅಭಿಯಾನ ಆರಂಭವಾಗಲಿದೆ. 

‘ದೇಶದ ಮೂರು ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್‌ ಲಸಿಕೆ ನೀಡುವ, ಮೊದಲ ಹಂತದ ಲಸಿಕಾ ಕಾರ್ಯಕ್ರಮದ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ಲಸಿಕೆ ನೀಡಲಾಗುವುದು. ಇದರಲ್ಲಿ ಜನಪ್ರತಿನಿಧಿಗಳು, ರಾಜಕಾರಣಿಗಳು ಪಾಲ್ಗೊಳ್ಳಬಾರದು,' ಎಂದು ಪ್ರಧಾನಿ ಮನವಿ ಮಾಡಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು