ಭಾನುವಾರ, ಮೇ 29, 2022
30 °C

ಅಬುಧಾಬಿ ದಾಳಿ: ಮೃತ ಭಾರತೀಯರ ಗುರುತು ಪತ್ತೆ, ಗಾಯಗೊಂಡವರಲ್ಲೂ ಇಬ್ಬರು ಭಾರತೀಯರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಅಬುಧಾಬಿಯಲ್ಲಿ ಸೋಮವಾರ ಶಂಕಿತ ಡ್ರೋನ್‌ ದಾಳಿಯಿಂದ ಸ್ಫೋಟ ಸಂಭವಿಸಿ ಮೃತಪಟ್ಟ ಇಬ್ಬರು ಭಾರತೀಯರ ಗುರುತು ಪತ್ತೆಯಾಗಿದ್ದು, ಗಾಯಗೊಂಡ ಆರು ಮಂದಿಯಲ್ಲಿ ಇಬ್ಬರು ಭಾರತೀಯರು ಎಂಬುದು ತಿಳಿದುಬಂದಿದೆ.

ಗಾಯಗೊಂಡ ಈ ಇಬ್ಬರು ಭಾರತೀಯರನ್ನು ಚಿಕಿತ್ಸೆ ನೀಡಿ ಸೋಮವಾರ ರಾತ್ರಿಯೇ ಮನೆಗೆ ಕಳುಹಿಸಿಕೊಡಲಾಗಿದೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

‘ಮೃತಪಟ್ಟಿರುವ ಇಬ್ಬರು ಭಾರತೀಯರ ಗುರುತನ್ನು  ಪತ್ತೆಹಚ್ಚಲಾಗಿದೆ. ಅವರ ಕುಟುಂಬದವರೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ. ಮೃತದೇಹವನ್ನು ಭಾರತಕ್ಕೆ ತರುವ ನಿಟ್ಟಿನಲ್ಲಿ ಯುಎಇ ಅಧಿಕಾರಿಗಳು ಹಾಗೂ ಎಡಿಎನ್ಒಸಿ ತೈಲ ಕಂಪನಿ ಜತೆಗೆ ಸಂಪರ್ಕದಲ್ಲಿದ್ದೇವೆ’ ಎಂದು ಭಾರತೀಯ ರಾಯಭಾರ ಕಚೇರಿ ಟ್ವೀಟ್‌ ಮಾಡಿದೆ. ಆದರೆ ಮೃತರ ಹೆಸರು, ಅವರ ಊರನ್ನು ಇನ್ನೂ ಬಹಿರಂಗಪಡಿಸಿಲ್ಲ.

ಅಗತ್ಯದ ನೆರವು:  ‘ಮೃತಪಟ್ಟ ಭಾರತೀಯರ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲಾ ನೆರವನ್ನೂ ನೀಡಲಾಗುವುದು’ ಎಂದು ಯುಎಇಯಲ್ಲಿರುವ ಭಾರತದ ರಾಯಭಾರಿ ಸಂಜಯ್‌ ಸುಧೀರ್ ಅವರು ‘ದಿ ನ್ಯಾಷನಲ್‌’ ಪತ್ರಿಕೆಗೆ ತಿಳಿಸಿದ್ದಾರೆ.

ದಾಳಿ ಬಳಿಕದ ಉಪಗ್ರಹ ಚಿತ್ರ ಬಿಡುಗಡೆ: ಶಂಕಿತ ಹೂತಿ ಬಂಡುಕೋರರು ದಾಳಿ ನಡೆಸಿದ ನಂತರದ ಉಪಗ್ರಹ ಚಿತ್ರವನ್ನು ಪ್ಲಾನೆಟ್‌ ಲ್ಯಾಬ್ಸ್‌ ಪಿಬಿಸಿ ತೆಗೆದಿದ್ದು, ಎಪಿ ಸುದ್ದಿಸಂಸ್ಥೆ ಅದನ್ನು ಪಡೆದುಕೊಂಡು ಪ್ರಕಟಿಸಿದೆ. ಅಬುಧಾಬಿ ಹೊರವಲಯದ ಮುಸಾಫಾದಲ್ಲಿರುವ ಅಬುಧಾಬಿ ನ್ಯಾಷನಲ್‌ ಆಯಿಲ್ ಕಂಪನಿಯ ತೈಲ ಸಂಗ್ರಹಾಗಾರದ ಬಳಿ ದಟ್ಟ ಹೊಗೆ ಮೇಲೇಳುತ್ತಿರುವುದು ಈ ಚಿತ್ರದಲ್ಲಿ ದಾಖಲಾಗಿದೆ.

ದಾಳಿಯಿಂದ ಎಂತಹ ಹಾನಿ ಆಗಿದೆ ಎಂಬ ಬಗ್ಗೆ ಕಂಪನಿಯ ಇದುವರೆಗೆ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ.

ಈ ಮಧ್ಯೆ, ಹೂತಿ ಬಂಡುಕೋರರ ವಿರುದ್ಧ ಪ್ರತೀಕಾರ ಕ್ರಮಗಳು ಸೋಮವಾರ ರಾತ್ರಿಯಿಂದಲೇ ಆರಂಭವಾಗಿದ್ದು, ಯೆಮನ್‌ನ ರಾಜಧಾನಿ ಸಾನಾದಲ್ಲಿ ಬಂಡುಕೋರರ ನೆಲೆಗಳನ್ನೇ ಗುರಿಯಾಗಿ ಇಟ್ಟುಕೊಂಡು ಬಾಂಬ್ ದಾಳಿ ನಡೆದಿದೆ. ಈ ದಾಳಿಗಳಲ್ಲಿ ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ ಎಂದು ಬಂಡುಕೋರರು ಹೇಳಿದ್ದಾರೆ. ಈ ದಾಳಿಯ ವಿಡಿಯೊ ದೃಶ್ಯಗಳನ್ನು ಸಹ ಬಿಡುಗಡೆ ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು