ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಸಂಸ್ಥೆ: ಮ್ಯಾನ್ಮಾರ್‌ ಕುರಿತ ನಿರ್ಣಯ ಅಂಗೀಕಾರದಿಂದ ದೂರ ಉಳಿದ ಭಾರತ

‘ಕರಡು ನಿರ್ಣಯದಲ್ಲಿ ಭಾರತ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವ ಅಂಶಗಳೇ ಇಲ್ಲ‘
Last Updated 19 ಜೂನ್ 2021, 5:48 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಮ್ಯಾನ್ಮಾರ್‌ನ ಪ್ರಸ್ತುತದ ಪರಿಸ್ಥಿತಿ ಕುರಿತು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಕೈಗೊಂಡಿರುವ ಕರಡು ನಿರ್ಣಯದಲ್ಲಿ ತನ್ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವ ಅಂಶಗಳಿಲ್ಲ. ಹೀಗಾಗಿ, ಆ ನಿರ್ಣಯದಿಂದ ದೂರು ಉಳಿದಿರುವುದಾಗಿ ಭಾರತ ಸ್ಪಷ್ಟಪಡಿಸಿದೆ.

ತರಾತುರಿಯಲ್ಲಿ ಮಂಡಿಸಿರುವ ಈ ನಿರ್ಣಯ, ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಬಲಪಡಿಸುವ ಪ್ರಯತ್ನಗಳಿಗೆ ಪೂರಕವಾಗುತ್ತದೆ ಎಂಬುದರ ಬಗ್ಗೆ ನಮಗೆ ವಿಶ್ವಾಸವಿಲ್ಲ ಎಂದು ಭಾರತ ತಿಳಿಸಿದೆ.

ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ‘ಮ್ಯಾನ್ಮಾರ್‌ನ ಪರಿಸ್ಥಿತಿʼಕುರಿತು ಕರಡು ನಿರ್ಣಯವನ್ನು ಅಂಗೀಕರಿಸಲಾಯಿತು. ವಿಶ್ವಸಂಸ್ಥೆಯ 119 ಸದಸ್ಯ ರಾಷ್ಟ್ರಗಳು ಕರಡು ನಿರ್ಣಯದ ಪರ ಮತ ಚಲಾಯಿಸಿದವು. ಮ್ಯಾನ್ಮಾರ್ ಸೇರಿದಂತೆ ನೆರೆಯ ರಾಷ್ಟ್ರಗಳಾದ ಭಾರತ, ಬಾಂಗ್ಲಾದೇಶ, ಭೂತಾನ್, ಚೀನಾ, ಲಾವೋಸ್, ನೇಪಾಳ ಮತ್ತು ಥಾಯ್ಲೆಂಡ್‌ ಸೇರಿದಂತೆ 36 ರಾಷ್ಟ್ರಗಳು ನಿರ್ಣಯದ ಅಂಗೀಕಾರ ದಿಂದ ದೂರ ಉಳಿದವು. ರಷ್ಯಾ ಕೂಡ ನಿರ್ಣಯದಿಂದ ದೂರ ಉಳಿಯಿತು.ಬೆಲಾರಸ್ ಈ ನಿರ್ಣಯದ ವಿರುದ್ಧ ಮತ ಚಲಾಯಿಸಿದ ಏಕೈಕ ರಾಷ್ಟ್ರವಾಯಿತು.

‘ಮ್ಯಾನ್ಮಾರ್‌ ರಾಷ್ಟ್ರದ ನೆರೆಹೊರೆಯ ರಾಷ್ಟ್ರಗಳು ಮತ್ತು ಪ್ರಾದೇಶಿಕ ದೇಶಗಳೊಂದಿಗೆ ಸಮರ್ಪಕವಾಗಿ ಸಮಾಲೋಚನೆ ನಡೆಸದೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ತರಾತುರಿಯಲ್ಲಿ ನಿರ್ಣಯವನ್ನು ಮಂಡಿಸಲಾಯಿತು. ಇದು ಮ್ಯಾನ್ಮಾರ್‌ಗೆ ಸಹಕಾರಿಯಾಗುವುದಿಲ್ಲ, ಹಾಗೆಯೇ ಮ್ಯಾನರ್‌ನಲ್ಲಿನ ಪ್ರಸ್ತುತ ಪರಿಸ್ಥಿತಿಯ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದ ‘ಆಸಿಯಾನ್ ರಾಷ್ಟ್ರಗಳʼಪ್ರಯತ್ನಗಳಿಗೆ ಪ್ರತಿಕ್ರಿಯೆ ನೀಡುವ ಪ್ರಯತ್ನದಂತೆ ಕಾಣುತ್ತದೆʼಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್. ತಿರುಮೂರ್ತಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT