ಗುರುವಾರ , ಆಗಸ್ಟ್ 18, 2022
26 °C

ಫಲ ನೀಡಿದ ಔಷಧಿ ಪ್ರಯೋಗ: ಕ್ಯಾನ್ಸರ್‌ನಿಂದ ಮುಕ್ತಗೊಂಡ ಭಾರತ ಮೂಲದ ಬ್ರಿಟನ್ ಮಹಿಳೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್: ಕ್ಯಾನ್ಸರ್ ಔಷಧಿಯ ಪ್ರಯೋಗ ಫಲ ನೀಡಿದ್ದು, 51 ವರ್ಷದ ಮಹಿಳೆ ಸ್ತನ ಕ್ಯಾನ್ಸರ್‌ನಿಂದ ಮುಕ್ತಗೊಂಡಿದ್ದಾರೆ ಎಂದು ಬ್ರಿಟನ್ನಿನ ಆಸ್ಪತ್ರೆಯೊಂದು ತಿಳಿಸಿದೆ.

ಕ್ಯಾನ್ಸರ್ ಪೀಡಿತರಾಗಿದ್ದ ಜಾಸ್ಮಿನ್ ಡೇವಿಡ್ ಅವರಿಗೆ ಇನ್ನು ಕೆಲವೇ ತಿಂಗಳು ಬದುಕುತ್ತೀರಾ ಎಂದು ಹೇಳಿದ್ದ ವೈದ್ಯರೇ ಇದೀಗ ಅವರು ಕ್ಯಾನ್ಸರ್‌ನಿಂದ ಸಂಪೂರ್ಣ ಗುಣಮುಖರಾಗಿದ್ದನ್ನು ಖಚಿತಪಡಿಸಿದ್ದಾರೆ.

ಜೀವನವೇ ಮುಗಿದುಹೋಯ್ತು ಎಂದು ಹತಾಶೆಗೊಂಡಿದ್ದ ಜಾಸ್ಮಿನ್ ಇದೀಗ ರಾಷ್ಟ್ರೀಯ ಆರೋಗ್ಯ ಪ್ರಯೋಗ(ಎನ್‌ಎಚ್‌ಎಸ್)ದಿಂದ ಪುನರ್ಜನ್ಮ ಪಡೆದಿದ್ದು, 25ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.

ಕ್ರಿಸ್ಟಿ ಎನ್‌ಎಚ್‌ಎಸ್ ಫೌಂಡೇಶನ್ ಟ್ರಸ್ಟ್‌ನಲ್ಲಿ ರಾಷ್ಟ್ರೀಯ ಆರೋಗ್ಯ ಸಂಶೋಧನೆ ಸಂಸ್ಥೆ(ಎನ್‌ಐಎಚ್‌ಆರ್), ಮ್ಯಾಂಚೆಸ್ಟರ್ ಕ್ಲಿನಿಕಲ್ ರಿಸರ್ಚ್ ಫೆಸಿಲಿಟಿ (ಸಿಆರ್‌ಎಫ್)ಗಳು ಎರಡು ವರ್ಷಗಳ ಪ್ರಾಯೋಗಿಕ ಔಷಧವನ್ನು ಬಳಸಿ ಜಾಸ್ಮಿನ್ ಡೇವಿಡ್ ಅವರ ಮೇಲೆ ಪ್ರಯೋಗ ನಡೆಸಿದ್ದವು..

‘ಪ್ರಯೋಗದಲ್ಲಿ ಭಾಗವಹಿಸಲು ನನಗೆ ಆಹ್ವಾನ ಕೊಟ್ಟಾಗ ಈ ಔಷಧವು ನನಗೆ ಅನುಕೂಲವಾಗುತ್ತದೆ ಎಂದು ನನಗೆ ಅನಿಸಿರಲಿಲ್ಲ. ನನ್ನ ದೇಹವನ್ನು ಪ್ರಯೋಗಕ್ಕೆ ಒಡ್ಡಿಕೊಳ್ಳುವ ಮೂಲಕ ಮುಂದಿನ ಪೀಳಿಗೆಗೆ ಏನಾದರೂ ಕೊಡುಗೆ ನೀಡಬಹುದು ಎಂದು ಎನಿಸಿತು. ಆರಂಭದಲ್ಲಿ ತಲೆನೋವು ಮತ್ತು ದೇಹದ ಉಷ್ಣತೆ ಹೆಚ್ಚಳದಂತಹ ಭಯಾನಕ ಅಡ್ಡಪರಿಣಾಮಗಳನ್ನು ನಾನು ಎದುರಿಸಿದೆ. ಕ್ರಿಸ್ಮಸ್ ಸಂಭ್ರಮದ ಸಮಯದಲ್ಲೂ ಆಸ್ಪತ್ರೆಯಲ್ಲಿದ್ದೆ. ಬಳಿಕ, ಕ್ರಮೇಣ ಔಷಧಿಗೆ ನನ್ನ ದೇಹ ಸ್ಪಂದಿಸಲು ಶುರುವಾಯಿತು’ಎಂದು ಜಾಸ್ಮಿನ್ ಹೇಳಿದ್ದಾರೆ.

ಇಬ್ಬರು ಮಕ್ಕಳ ತಾಯಿಯಾಗಿದ್ದ ಜಾಸ್ಮಿನ್‌ಗೆ 2017ರಲ್ಲಿ ಸ್ತನ ಕ್ಯಾನ್ಸರ್ ದೃಢಪಟ್ಟಿತ್ತು. ಬಳಿಕ, 6 ತಿಂಗಳ ಕಿಮೋಥೆರಪಿ, ಮಾಸ್ಟೆಕ್ಟಮಿ ಮತ್ತು 15 ಬಾರಿ ರೇಡಿಯೊಥೆರಪಿ ಮಾಡಿಸಿಕೊಂಡ ಬಳಿಕ ಕ್ಯಾನ್ಸರ್‌ನಿಂದ ಗುಣಮುಖರಾಗಿದ್ದರು.

ಆದರೆ, ಅಕ್ಟೋಬರ್ 2019ರಲ್ಲಿ ಕ್ಯಾನ್ಸರ್ ಮತ್ತೆ ಉಲ್ಬಣಗೊಂಡಿರುವುದು ಸ್ಕ್ಯಾನಿಂಗ್‌ನಲ್ಲಿ ಪತ್ತೆಯಾಗಿತ್ತು. ಶ್ವಾಸಕೋಶ, ಎದೆಭಾಗದ ಮೂಳೆಗಳಿಗೂ ಕ್ಯಾನ್ಸರ್ ವ್ಯಾಪಿಸಿತ್ತು. ಆಕೆಯ ಆಯಸ್ಸು ಕೇವಲ ಒಂದು ವರ್ಷಕ್ಕಿಂತ ಕಡಿಮೆ ಎಂಬ ಸುದ್ದಿ ಕಿವಿಗೆ ಬಿದ್ದಿತ್ತು. ಈ ಸಂದರ್ಭ ಕ್ಯಾನ್ಸರ್ ಔಷಧ ಪ್ರಯೋಗದಲ್ಲಿ ಭಾಗವಹಿಸಲು ಒಪ್ಪಿಗೆ ಸೂಚಿಸಿದ್ದರು. ಇದೀಗ, ಪ್ರಯೋಗ ಯಶಸ್ವಿಯಾಗಿದ್ದು, ಜಾಸ್ಮಿನ್ ಕ್ಯಾನ್ಸರ್‌ನಿಂದ ಮುಕ್ತರಾಗಿದ್ದಾರೆ.

‘ಫೆಬ್ರುವರಿ 2020ರಲ್ಲಿ ಪ್ರಯೋಗದ ಮಧ್ಯದಲ್ಲಿ ಭವಿಷ್ಯ ಏನೆಂಬುದನ್ನು ಅರಿಯದೆ ನಾನು ನನ್ನ 50ನೇ ಹುಟ್ಟುಹಬ್ಬವನ್ನು ಆಚರಿಸಿದ್ದೆ. ಎರಡೂವರೆ ವರ್ಷಗಳ ಹಿಂದೆ ಎಲ್ಲವೂ ಮುಗಿಯಿತು ಎಂದುಕೊಂಡಿದ್ದ ನನಗೆ ಈಗ ಮರುಹುಟ್ಟಿನ ಅನುಭವವಾಗುತ್ತಿದೆ’ಎಂದು ಜಾಸ್ಮಿನ್ ಡೇವಿಡ್ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು