ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರೆಜಿಲ್‌ ಅಧ್ಯಕ್ಷರಾಗಿ ಲುಲಾ ಆಯ್ಕೆ

Last Updated 31 ಅಕ್ಟೋಬರ್ 2022, 12:41 IST
ಅಕ್ಷರ ಗಾತ್ರ

ಸಾವೊ‍‍ಪಾಲೊ: ವರ್ಕರ್ಸ್‌ ಪಕ್ಷದ ನಾಯಕ ಲೂಯಿಸ್‌ ಇನಾಸಿಯೊ ಲುಲಾ ಡಾ ಸಿಲ್ವ ಅವರು ಬ್ರೆಜಿಲ್‌ನ 39ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷೀಯ ಚುನಾವಣೆಯಲ್ಲಿ77 ವರ್ಷದ ಲುಲಾ ಅವರು ಹಾಲಿ ಅಧ್ಯಕ್ಷ ಹಾಗೂ ಲಿಬರಲ್‌ ಪಕ್ಷದ ನಾಯಕ ಜೈರ್‌ ಬೊಲ್ಸೊನಾರೊ ಅವರನ್ನು ಮಣಿಸಿದ್ದಾರೆ.

‘ಚಲಾವಣೆಯಾಗಿದ್ದ ಒಟ್ಟು ಮತಗಳ ಪೈಕಿಲುಲಾ ಅವರಿಗೆ ಶೇ 50.9 ರಷ್ಟು ಮತಗಳು ದೊರೆತಿವೆ.ಬೊಲ್ಸೊನಾರೊ ಅವರು ಶೇ 49.1 ರಷ್ಟು ಮತಗಳನ್ನು ಪಡೆದಿದ್ದಾರೆ’ ಎಂದು ಚುನಾವಣಾ ಪ್ರಾಧಿಕಾರ ಭಾನುವಾರ ತಿಳಿಸಿದೆ.

ಲುಲಾ ಅವರು 2003 ರಿಂದ 2010ರವರೆಗೂ ಬ್ರೆಜಿಲ್‌ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಭ್ರಷ್ಟಾಚಾರ ಹಗರಣದಲ್ಲಿ ಭಾಗಿಯಾಗಿದ್ದ ಅವರು ಸೆರೆವಾಸ ಅನುಭವಿಸಿದ್ದರು. ಹೀಗಾಗಿ 2018ರಲ್ಲಿ ನಡೆದಿದ್ದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಕಳೆದುಕೊಂಡಿದ್ದರು. 2023ರ ಜನವರಿ 1ರಂದು ನಡೆಯುವ ಸಮಾರಂಭದಲ್ಲಿ ಲುಲಾ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಲುಲಾ ಅವರು ಚುನಾವಣಾ ಪ್ರಚಾರದ ವೇಳೆಬ್ರೆಜಿಲ್‌ನ ಗತವೈಭವವನ್ನು ಮರುಸ್ಥಾಪಿಸುವ ಭರವಸೆ ನೀಡಿದ್ದರು. ಹೀಗಾಗಿ ಮತದಾರರು ಎಡಪಂಥೀಯ ನಾಯಕನ ಆಯ್ಕೆಗೆ ಒಲವು ತೋರಿದ್ದರು ಎಂದು ಹೇಳಲಾಗಿದೆ.

ಮತ ಎಣಿಕೆಯ ಮೊದಲಾರ್ಧದವರೆಗೂಬೊಲ್ಸೊನಾರೊ ಮುನ್ನಡೆ ಕಾಯ್ದುಕೊಂಡಿದ್ದರು. ನಂತರ ಲುಲಾ ಅವರು ಹಾಲಿ ಅಧ್ಯಕ್ಷರನ್ನು ಹಿಂದಿಕ್ಕಿದರು. ಲುಲಾ ಅವರ ಗೆಲುವು ಖಾತರಿಯಾಗುತ್ತಿದ್ದಂತೆ ಸಾವೊ ಪಾಲೊ, ರಿಯೊ ಡಿ ಜನೈರೊ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಅವರ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದರು.ಹಸಿರು ಮತ್ತು ಹಳದಿ ಬಾವುಟವನ್ನು ಹಾರಿಸಿ ಖುಷಿಪಟ್ಟರು. ಕೆಲವರು ಎದೆಯ ಮೇಲೆ ಕೈ ಇಟ್ಟುಕೊಂಡು ರಾಷ್ಟ್ರಗೀತೆ ಹಾಡಿದರು.

‘ಇದು ಬ್ರೆಜಿಲ್‌ನ ಜನರಿಗೆ ದೊರೆತ ಗೆಲುವು. ಪ್ರಜಾಪ್ರಭುತ್ವದ ಚಳವಳಿಗೆ ಸಂದ ಜಯ’ ಎಂದು ಲುಲಾ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಸೇರಿದಂತೆ ಹಲವರು ಲುಲಾ ಅವರನ್ನು ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT