ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಆಫ್ರಿಕಾದಲ್ಲಿ ಇಂದು ಗಾಂಧೀಜಿಯ ಸ್ಮರಣೆ: ಏನಿದರ ವಿಶೇಷ?

Last Updated 8 ಜೂನ್ 2021, 8:10 IST
ಅಕ್ಷರ ಗಾತ್ರ

ಜೊಹಾನ್ಸ್‌ಬರ್ಗ್‌: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರನ್ನು ಇಂದು ದಕ್ಷಿಣ ಆಫ್ರಿಕಾದಲ್ಲಿ ಸ್ಮರಿಸಲಾಗುತ್ತಿದೆ. ಅವರ ಸಂದೇಶಗಳ ಪ್ರಸ್ತುತತೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ದಕ್ಷಿಣ ಆಫ್ರಿಕಾದ ಪೀಟರ್‌ಮರಿಟ್ಜ್‌ಬರ್ಗ್‌ ಎಂಬಲ್ಲಿ 1893ರಲ್ಲಿ ಮಹಾತ್ಮಾ ಗಾಂಧಿ ಅವರನ್ನು ರೈಲಿನಿಂದ ಹೊರದಬ್ಬಿ ವರ್ಣಭೇದ ಮಾಡಲಾಗಿತ್ತು. ಅಂದಿನ ಈ ದಿನದ ಅಂಗವಾಗಿ ಮಹಾತ್ಮಾ ಗಾಂಧಿ ಅವರನ್ನು ದಕ್ಷಿಣ ಆಫ್ರಿಕಾದಲ್ಲಿ ನೆನಪು ಮಾಡಿಕೊಳ್ಳಲಾಗುತ್ತಿದೆ.

ಪೀಟರ್‌ಮರಿಟ್ಜ್‌ಬರ್ಗ್‌ ಘಟನೆ ಮತ್ತು ಅಂದು ಆ ಘಟನೆಯಿಂದ ಗಾಂಧಿ ಅವರ ಮೇಲೆ ಆಗಿದ್ದ ಪರಿಣಾಮಗಳನ್ನು ಪ್ರತಿ ವರ್ಷ ಸ್ಮರಿಸಬೇಕು ಎಂದು ಪೀಟರ್‌ಮರಿಟ್ಜ್‌ಬರ್ಗ್‌ನ ಗಾಂಧಿ ಸ್ಮಾರಕ ಸಮಿತಿ ಕೆಲ ವರ್ಷಗಳ ಹಿಂದೆ ನಿರ್ಧಾರ ಕೈಗೊಂಡಿತ್ತು. ಅದರಂತೆ ಈ ಸ್ಮರಣೆ ನಡೆಯುತ್ತಿದೆ ಎಂದು ಸಮಿತಿಯ ಮುಖ್ಯಸ್ಥ ಡೇವಿಡ್‌ ಗೆಂಗನ್‌ ಮಾಹಿತಿ ನೀಡಿದ್ದಾರೆ.

‘ಅಹಿಂಸಾ ಸತ್ಯಾಗ್ರಹ’ದ ಬೀಜವನ್ನು 1893ರ ಜೂನ್ 7ರ ರಾತ್ರಿ ಪೀಟರ್‌ಮರಿಟ್ಜ್‌ಬರ್ಗ್‌ನಲ್ಲಿಯೇ ಬಿತ್ತಲಾಗಿತ್ತು ಎಂದು ಡೇವಿಡ್‌ ಗೆಂಗನ್‌ ಅಭಿಪ್ರಾಯಪಟ್ಟಿದ್ದಾರೆ.

21 ವರ್ಷಗಳ ಕಾಲ ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿದ್ದರು. ಅಹಿಂಸೆ, ಶಾಂತಿಗೆ ಸಂಬಂಧಿಸಿದ ಅವರ ಸಿದ್ಧಾಂತ ಇಲ್ಲಿಯೇ ರೂಪುಗೊಂಡಿತ್ತು ಎಂದು ಗೆಂಗನ್ ವಿವರಿಸಿದರು. ಗಾಂಧೀಜಿ ಅವರನ್ನು ಹೊರದಬ್ಬಿದ್ದ ರೈಲು ನಿಲ್ದಾಣದಲ್ಲಿ ಪ್ರತಿವರ್ಷ ಅವರನ್ನು ಸ್ಮರಿಸಲಾಗುತ್ತಿದೆ. ಆದರೆ, ಕಳೆದ ವರ್ಷ ಕೋವಿಡ್‌ನಿಂದಾಗಿ ಸ್ಮರಣೆ ಕಾರ್ಯಕ್ರಮ ನಡೆಯಲಿಲ್ಲ ಎಂದೂ ಅವರು ಮಾಹಿತಿ ನೀಡಿದ್ದಾರೆ.

‘ತಮ್ಮ ಜೀವಿತಾವಧಿಯಲ್ಲಿ ಗಾಂಧಿ ಅನೇಕ ಸತ್ಯಗಳನ್ನು ಕಂಡುಕೊಂಡಿದ್ದಾರೆ. ಕೋವಿಡ್‌ ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಆ ಸತ್ಯಗಳು ನಮಗೆ ಬಹಳ ಪ್ರಸ್ತುತವೆನಿಸಿವೆ,’ ಎಂದು ಗಾಂಧಿ ಮೊಮ್ಮಗಳು ಇಳಾ ಗಾಂಧಿ (80) ಅಭಿಪ್ರಾಯಪಟ್ಟಿದ್ದಾರೆ. ಇಳಾ ಅವರು ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ಗಾಂಧಿ ಅಭಿವೃದ್ಧಿ ಟ್ರಸ್ಟ್‌ ಆರಂಭಿಸಿದ್ದು, ಅದರ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT