ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೊಬೆಲ್‌ 2020: ಭೌತವಿಜ್ಞಾನ ವಿಭಾಗದಲ್ಲಿ ಮೂವರು ವಿಜ್ಞಾನಿಗಳಿಗೆ ಪ್ರಶಸ್ತಿ

Last Updated 6 ಅಕ್ಟೋಬರ್ 2020, 11:29 IST
ಅಕ್ಷರ ಗಾತ್ರ

ಸ್ಟಾಕ್‌ಹೋಮ್‌: ಮಹಿಳಾ ವಿಜ್ಞಾನಿ ಸೇರಿ ಮೂವರಿಗೆ 2020ನೇ ಸಾಲಿನ ಭೌತಶಾಸ್ತ್ರ ನೊಬೆಲ್‌ ಪ್ರಶಸ್ತಿ ಘೋಷಣೆಯಾಗಿದೆ. ಕಪ್ಪು ಕುಳಿಗೆ (black hole) ಸಂಬಂಧಿಸಿದ ಮಹತ್ವದ ಸಂಶೋಧನೆಗಳಿಗಾಗಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯ ಅರ್ಧ ಮೊತ್ತ ರೋಜರ್‌ ಪೆನ್ರೋಸ್‌ ಹಾಗೂ ಉಳಿದ ಅರ್ಧ ಭಾಗವನ್ನು ರೈನ್‌ಹಾರ್ಡ್ ಗೆಂಜೆಲ್‌ ಮತ್ತು ಆ್ಯಂಡ್ರಿಯಾ ಘೇಜ್ ಅವರಿಗೆ ಹಂಚಿಕೆಯಾಗಲಿದೆ.

* ರೋಜರ್‌ ಪೆನ್‌ರೋಸ್‌, ಆಕ್ಸ್‌ಫರ್ಡ್‌ ಯೂನಿವರ್ಸಿಟಿ, ಇಂಗ್ಲೆಂಡ್‌

ಕಪ್ಪು ಕುಳಿಗಳು ಆಲ್ಬರ್ಟ್‌ ಐನ್‌ಸ್ಟೀನ್‌ ಅವರ ಸಾಪೇಕ್ಷ ಸಿದ್ಧಾಂತದ ನೇರ ಫಲಿತಾಂಶವಾಗಿರುವುದನ್ನು ಗಣಿತದ ವಿಧಾನಗಳಿಂದ ಪ್ರಮಾಣೀಕರಿಸಿದ್ದಾರೆ. ಕಪ್ಪು ಕುಳಿಗಳ ಇರುವಿಕೆಯನ್ನು ಸ್ವತಃ ಐನ್‌ಸ್ಟೀನ್‌ ಸಹ ನಂಬಿರಲಿಲ್ಲ. ದೈತ್ಯ ಮತ್ತು ಘನವಾದ ಕಪ್ಪು ಕುಳಿಗಳು ಅದರತ್ತ ಸಾಗುವ ಎಲ್ಲವನ್ನೂ ಸೆಳೆದುಕೊಂಡು ಬಿಡುತ್ತವೆ. ಬೆಳಕೂ ಸಹ ಕಪ್ಪು ಕುಳಿಯಿಂದ ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ.

1965ರಲ್ಲಿ ರೋಜರ್‌ ಅವರು ಕಪ್ಪು ಕುಳಿಗಳು ನಿಜಕ್ಕೂ ಸೃಷ್ಟಿಯಾಗಬಹುದೆಂದು ನಿರೂಪಿಸಿದರು ಹಾಗೂ ಆ ಬಗ್ಗೆ ವಿವರವಾಗಿ ಉಲ್ಲೇಖಿಸಿದರು.

* ಜರ್ಮಿಯ ಮ್ಯಾಕ್ಸ್‌ ಪ್ಲ್ಯಾಂಕ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಎಕ್ಸ್‌ಟ್ರಾಟೆರೆಸ್ಟ್ರಿಯಲ್‌ ಫಿಸಿಕ್ಸ್‌ ಹಾಗೂ ಅಮೆರಿಕದ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯಲ್ಲಿ ರೈನ್‌ಹಾರ್ಡ್ ಗೆಂಜೆಲ್‌ ಸಂಶೋಧನೆ ನಡೆಸಿದ್ದಾರೆ. ಆ್ಯಂಡ್ರಿಯಾ ಘೇಜ್‌ ಅವರು ಅಮೆರಿಕದ ಯೂನಿವರ್ಸಿಟಿ ಆಫ್‌ ಕ್ಯಾಲಿಫೋರ್ನಿಯಾದಲ್ಲಿ ಸಂಶೋಧನೆ ಮಾಡಿದ್ದಾರೆ. ಇಬ್ಬರೂ ವಿಜ್ಞಾನಿಗಳು ನಮ್ಮ ನಕ್ಷತ್ರ ಪುಂಜದ ಮಧ್ಯ ಭಾಗದಲ್ಲಿ ಅತ್ಯಂತ ಘನವಾದ ವಸ್ತುವಿನ ಪತ್ತೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

'ಮತ್ತೊಬ್ಬ ಯುವ ಮಹಿಳೆಗೆ ನನ್ನಿಂದ ಸ್ಫೂರ್ತಿ ಸಿಗಬಹುದೆಂದು ನಂಬಿದ್ದೇನೆ. ಈ ಕ್ಷೇತ್ರದಲ್ಲಿ ಬಹಳಷ್ಟು ಸಂತೋಷ ಸಿಗುತ್ತದೆ ಹಾಗೂ ನೀವು ವಿಜ್ಞಾನದ ಬಗ್ಗೆ ಆಸಕ್ತಿ ಹೊಂದಿರುವವರು ಆಗಿದ್ದರೆ, ಇಲ್ಲಿ ಬಹಳಷ್ಟು ಕಾರ್ಯಗಳನ್ನು ನಡೆಸಬಹುದಾಗಿದೆ' ಎಂದು ನೊಬೆಲ್‌ಗೆ ಆಯ್ಕೆಯಾಗಿರುವ ಮಹಿಳಾ ವಿಜ್ಞಾನಿ ಆ್ಯಂಡ್ರಿಯಾ ಘೇಜ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT