ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳ: ಬೌದ್ಧ ಧರ್ಮ ಅಂತರರಾಷ್ಟ್ರೀಯ ಕೇಂದ್ರ ನಿರ್ಮಾಣಕ್ಕೆ ಅಡಿಗಲ್ಲು

Last Updated 16 ಮೇ 2022, 20:31 IST
ಅಕ್ಷರ ಗಾತ್ರ

ಲುಂಬಿನಿ, ನೇಪಾಳ: ಬೌದ್ಧರ ಪ್ರಮುಖ ಧಾರ್ಮಿಕ ಕೇಂದ್ರವಾದ ಇಲ್ಲಿನ ಲುಂಬಿನಿ ವಲಯದಲ್ಲಿ ನಿರ್ಮಾಣವಾಗಲಿರುವ ಅತ್ಯಾಧುನಿಕ ‘ಅಂತರರಾಷ್ಟ್ರೀಯ ಬೌದ್ಧ ಧರ್ಮ ಮತ್ತು ಪರಂಪರೆಯ ಭಾರತೀಯ ಕೇಂದ್ರ’ಕ್ಕೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಲಾಯಿತು.

ಬೌದ್ಧ ಧರ್ಮದ ಸಂಪ್ರದಾಯಗಳಾದ ತೆರವಾಡ, ಮಹಾಯಾನ, ವಜ್ರಯಾನ ಪ್ರತಿನಿಧಿಸುವ ಸನ್ಯಾಸಿಗಳು ಶಿಲಾನ್ಯಾಸ ನೆರವೇರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ, ನೇಪಾಳ ಪ್ರಧಾನಿ ಶೇರ್ ಬಹಾದ್ದೂರ್‌ ದೇವುಬಾ ಜಂಟಿಯಾಗಿ ಕೇಂದ್ರದ ಮಾದರಿ ಅನಾವರಣಗೊಳಿಸಿದರು.

ಉದ್ದೇಶಿತ ಕೇಂದ್ರದ ನಿರ್ಮಾಣ ಪೂರ್ಣಗೊಂಡ ಬಳಿಕ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಪ್ರವಾಸಿಗರನ್ನು ಸೆಳೆಯುವವಿಶ್ವದರ್ಜೆ ಗುಣಮಟ್ಟದ, ಅಂತರರಾಷ್ಟ್ರೀಯ ಕೇಂದ್ರವಾಗಿ ಇದು ಗಮನಸೆಳೆಯಲಿದೆ.

‘ಈ ಕೇಂದ್ರ ಆಧುನಿಕ ಶೈಲಿಯದ್ದಾಗಿರಲಿದೆ. ಇಂಧನ, ನೀರು, ತ್ಯಾಜ್ಯ ನಿರ್ವಹಣೆ ಸೌಲಭ್ಯ ಇರಲಿದೆ. ಪ್ರಾರ್ಥನಾಲಯ, ಧ್ಯಾನ ಮಂದಿರ, ಗ್ರಂಥಾಲಯ, ಪ್ರದರ್ಶನ ಸಭಾಂಗಣ, ಉಪಾಹಾರ ಕೇಂದ್ರ, ಕಚೇರಿ ಹೊಂದಿರಲಿದೆ’ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದೆ.

ನವದೆಹಲಿಯ ಅಂತರರಾಷ್ಟ್ರೀಯ ಬೌದ್ಧ ಕೇಂದ್ರ (ಐಬಿಸಿ) ಕೇಂದ್ರವನ್ನು ನಿರ್ಮಿಸಲಿದ್ದು, ಲುಂಬಿನಿ ಡೆವಲಪ್‌ಮೆಂಟ್‌ ಟ್ರಸ್ಟ್‌ (ಎಲ್‌ಡಿಟಿ) ಅಗತ್ಯ ನಿವೇಶನವನ್ನು ಒದಗಿಸಿದೆ.

ಬುದ್ಧ ಪೂರ್ಣಿಮೆ ದಿನವಾದ ಸೋಮವಾರ ನೇಪಾಳದ ಪ್ರಧಾನಿಯ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿಗೆ ಭೇಟಿ ನೀಡಿದ್ದರು. ಮಾತುಕತೆಗೆ ಮೊದಲು ಇಲ್ಲಿನ ಹೆಸರಾಂತ ಮಾಯಾದೇವಿ ದೇವಸ್ಥಾನಕ್ಕೆ ತೆರಳಿದ ಅವರು ಪ್ರಾರ್ಥನೆ ಸಲ್ಲಿಸಿದರು.

ವಿದ್ಯುತ್ ಉತ್ಪಾದನೆ: 695 ಮೆಗಾವಾಟ್‌ ಸಾಮರ್ಥ್ಯದ ಜಲವಿದ್ಯುತ್‌ ಸ್ಥಾವರವನ್ನು ಅಭಿವೃದ್ಧಿಪಡಿಸಲು ಉಭಯದ ದೇಶಗಳು ಸಮ್ಮತಿಸಿವೆ. ನೇಪಾಳದೊಂದಿಗೆ ವಿದ್ಯುತ್‌ ವ್ಯಾಪಾರ ವಹಿವಾಟು ಹೊಂದಿರುವ ಭಾರತವು, ಸ್ಥಾವರ ಸ್ಥಾಪನೆಗಾಗಿ ಬಂಡವಾಳ ಹೂಡಿಕೆ ಮಾಡಲಿದೆ.

ನೇಪಾಳದ ಪೂರ್ವದಲ್ಲಿನ ಅರುಣ ನದಿಗೆ ಅಡ್ಡಲಾಗಿ ಅರುಣ್–4 ಯೋಜನೆಯನ್ನು ಭಾರತದ ಸತ್ಲುಜ್‌ ಜಲ್‌ವಿದ್ಯುತ್ ನಿಗಮ (ಎಸ್‌ಜೆವಿಎನ್) ಕಾರ್ಯಗತಗೊಳಿಸಲಿದೆ. ಎಸ್‌ಜೆವಿಎನ್ ಮತ್ತು ನೇಪಾಳ ವಿದ್ಯುತ್ ಪ್ರಾಧಿಕಾರ ಕ್ರಮವಾಗಿ ಶೇ 51, ಶೇ 49ರಷ್ಟು ಹೂಡಿಕೆ ಮಾಡಲಿವೆ.

6 ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ

ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳದ ಪ್ರಧಾನಿ ಶೇರ್‌ ಬಹಾದ್ದೂರ್‌ ದೇವುಬಾ ಅವರು ಸೋಮವಾರ ಇಲ್ಲಿ ಉಭಯ ದೇಶಗಳ ದ್ವಿಪಕ್ಷೀಯ ಬಾಂಧವ್ಯ ಕುರಿತು ಮಾತುಕತೆ ನಡೆಸಿದರು. ಲುಂಬಿನಿಯು ಗೌತಮ ಬುದ್ಧ ಅವರ ಜನ್ಮ ಸ್ಥಳವಾಗಿದೆ.

ಮಾತುಕತೆಯ ಬಳಿಕ ಸಂಸ್ಕೃತಿ, ಸಹಕಾರ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿಂತೆ ಉಭಯ ದೇಶಗಳ ಪ್ರತಿನಿಧಿಗಳು ಆರು ಒಡಂಬಡಿಕೆಗಳಿಗೆ ಸಹಿ ಹಾಕಿದರು. 2004ರ ನಂತರ ನೇಪಾಳಕ್ಕೆ ಮೋದಿ ಅವರ 5ನೇ ಭೇಟಿ ಇದಾಗಿದೆ.

‘ಹಿಮಾಲಯದಷ್ಟೇ ಬಾಂಧವ್ಯ ದೃಢ’

ಭಾರತ ಮತ್ತು ನೇಪಾಳ ನಡುವಣ ಬಾಂಧವ್ಯ ಹಿಮಾಲಯ ಪರ್ವತದಷ್ಟೇ ದೃಢವಾದುದು. ಈ ಬಾಂಧವ್ಯವು ಇಡೀ ಮನುಕುಲಕ್ಕೆ ನೆರವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಇಲ್ಲಿ ‘ಅಂತರರಾಷ್ಟ್ರೀಯ ಬೌದ್ಧ ಸಮ್ಮೇಳನ’ ಉದ್ದೇಶಿಸಿ ಮಾತನಾಡಿದ ಅವರು, ‘ಬುದ್ಧನ ಚಿಂತನೆಯೊಂದಿಗೆ ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಉಭಯ ದೇಶಗಳು ಒತ್ತುನೀಡಲಿವೆ’ ಎಂದರು.

ಚೀನಾ ನೆರವಿನ ಏರ್‌ಪೋರ್ಟ್‌ ಬಳಸದ ಮೋದಿ

ಲುಂಬಿನಿಯಲ್ಲಿ ಚೀನಾ ನೆರವಿನಲ್ಲಿ ಅಭಿವೃದ್ಧಿಪಡಿಸಲಾದ ನೂತನ ವಿಮಾನನಿಲ್ದಾಣ ಸೋಮವಾರವೇ ಉದ್ಘಾಟನೆಗೊಂಡಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಈ ನೂತನ ವಿಮಾನ ನಿಲ್ದಾಣ ಬಳಸದೆ, ಭಾರತದ ವಿಮಾನನಿಲ್ದಾಣದಿಂದ ಹೆಲಿಕಾಪ್ಟರ್‌ನಲ್ಲಿ ನೇರವಾಗಿ ಕಾರ್ಯಕ್ರಮದ ಸ್ಥಳಕ್ಕೆ ತಲುಪಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT