ಅದಾರ್ ಪೂನವಾಲಾಗೆ ‘ಏಷಿಯನ್ಸ್ ಆಫ್ ದಿ ಇಯರ್’ ಪ್ರಶಸ್ತಿ

ಸಿಂಗಪುರ: ಪುಣೆ ಮೂಲದ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಸಂಸ್ಥೆಯ ಪ್ರಧಾನ ಕಾರ್ಯನಿರ್ವಾಹಕ ಅಧಿಕಾರಿ ಅದಾರ್ ಪೂನಾವಾಲಾ ಅವರು ‘ಏಷಿಯನ್ಸ್ ಆಫ್ ದಿ ಇಯರ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಿಂಗಪುರದ ದಿ ಸ್ಟ್ರೈಟ್ಸ್ ಟೈಮ್ಸ್ ದಿನಪತ್ರಿಕೆಯು, ಕೋವಿಡ್ ವಿರುದ್ಧದ ಹೋರಾಟ ಕಾರ್ಯದಲ್ಲಿ ನಿರತರಾಗಿರುವ ಏಷ್ಯಾದ ಆರು ಮಂದಿಗೆ ‘ಏಷಿಯನ್ಸ್ ಆಫ್ ದಿ ಇಯರ್’ ಪ್ರಶಸ್ತಿಯನ್ನು ನೀಡಿದೆ.
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಬ್ರಿಟಿಷ್–ಸ್ವೀಡಿಷ್ ಔಷಧೀಯ ಕಂಪನಿ ಆಸ್ಟ್ರಾಜೆನೆಕಾ ಸಹಭಾಗಿತ್ವದಲ್ಲಿ ಕೋವಿಡ್–19 ಲಸಿಕೆ ‘ಕೋವಿಡ್‌ಶೀಲ್ಡ್’ ಅನ್ನು ಎಸ್‌ಐಐ ತಯಾರಿಸುತ್ತಿದೆ.
‘ಸಾರ್ಸ್–ಕೋವ್-2’ (SARS-CoV-2) ವೈರಸ್ ರಚನೆಯನ್ನು ತಳಿವಿಜ್ಞಾನ ಆಧಾರದಲ್ಲಿ ವಿಶ್ಲೇಷಿಸಿ, ಆನ್‌ಲೈನ್‌ನಲ್ಲಿ ಪ್ರಕಟಿಸಿದ ಚೀನಾದ ಸಂಶೋಧಕ ಜಾಂಗ್ ಯಾಂಗ್‌ಜೆನ್, ಲಸಿಕೆ ಅಭಿವೃದ್ಧಿಪಡಿಸುತ್ತಿರುವ ತಜ್ಞರಾದ ಚೀನಾದ ಮೇಜರ್ ಜನರಲ್ ಚೆನ್ ವಿ, ಜಪಾನಿನ ಡಾ. ರಿಯಿಚಿ ಮೋರಿಶಿಟ, ಸಿಂಗಪುರದ ಪ್ರೊ.ಊಯಿ ಎಂಗ್ ಎಂಗ್ ಇಯಾಂಗ್, ದಕ್ಷಿಣ ಕೊರಿಯಾದ ಉದ್ಯಮಿ ಸಿಯೊ ಜಂಗ್-ಜಿನ್ ಕೂಡ ‘ಏಷಿಯನ್ಸ್ ಆಫ್ ದಿ ಇಯರ್’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
‘ನಿಮ್ಮ ಧೈರ್ಯ, ಕಾಳಜಿ, ಬದ್ಧತೆ ಮತ್ತು ಸೃಜನಶೀಲತೆಯನ್ನು ನಾವು ಗೌರವಿಸುತ್ತೇವೆ. ನೀವು ಏಷ್ಯಾ ಮತ್ತು ಪ್ರಪಂಚಕ್ಕೆ ಭರವಸೆಯ ಸಂಕೇತ’ ಎಂದು ಪ್ರಶಸ್ತಿ ಪುರಸ್ಕೃತರನ್ನು ಪತ್ರಿಕೆ ಶ್ಲಾಘಿಸಿದೆ.
1966ರಲ್ಲಿ ಅದಾರ್ ಅವರ ತಂದೆ ಡಾ. ಸೈರಸ್ ಪೂನಾವಾಲಾ ಅವರು ಎಸ್‌ಐಐ ಸ್ಥಾಪಿಸಿದರು. 2001ರಲ್ಲಿ ಅದಾರ್ ಅವರು ಸಂಸ್ಥೆಯನ್ನು ಸೇರಿದರು. 2011ರಲ್ಲಿ ಸಂಸ್ಥೆಯ ಸಿಇಒ ಆಗಿ ಅಧಿಕಾರ ವಹಿಸಿಕೊಂಡರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.