ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಬೂಲ್ ಸುತ್ತುವರಿದಿರುವ ತಾಲಿಬಾನ್

ಅಫ್ಗಾನಿಸ್ತಾನದಲ್ಲಿ ಮತ್ತೊಮ್ಮೆ ಅಂತರ್ಯುದ್ಧದ ಭೀತಿ: ಸರ್ಕಾರದ ನಿಯಂತ್ರಣದಲ್ಲಿ ಕೆಲವೇ ನಗರಗಳು
Last Updated 14 ಆಗಸ್ಟ್ 2021, 19:31 IST
ಅಕ್ಷರ ಗಾತ್ರ

ಕಾಬೂಲ್‌ (ರಾಯಿಟರ್ಸ್‌, ಎಪಿ): ಅಫ್ಗಾನಿಸ್ತಾನದ ಬಹುತೇಕ ಪ್ರದೇಶಗಳನ್ನು ವಶಪಡಿಸಿಕೊಂಡಿರುವ ತಾಲಿಬಾನ್‌ ಈಗ ಮತ್ತೊಮ್ಮೆ ಆಡಳಿತ ನಡೆಸಲು ಸಜ್ಜಾಗಿದೆ. ಇದರಿಂದ, ದೇಶದಲ್ಲಿ ಅಂತರ್ಯುದ್ಧದ ಭೀತಿಯು ಸಹ ಆವರಿಸಿಕೊಂಡಿದೆ.

ತಾಲಿಬಾನ್‌ ಶನಿವಾರ ಮತ್ತೆ ಎರಡು ಪ್ರಮುಖ ಪ್ರಾಂತ್ಯಗಳನ್ನು ವಶಪಡಿಸಿಕೊಂಡಿದ್ದು, ರಾಜಧಾನಿ ಕಾಬೂಲ್‌ ಸುತ್ತುವರಿದಿದೆ.

ರಾಜಧಾನಿ ಕಾಬೂಲ್‌ನ ದಕ್ಷಿಣ ಭಾಗದಲ್ಲಿರುವ ಲೋಗಾರ್‌ ಪ್ರಾಂತ್ಯವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಂಡಿರುವ ತಾಲಿಬಾನ್‌ ಅಲ್ಲಿನ ಅಧಿಕಾರಿಗಳನ್ನು ವಶಕ್ಕೆ ತೆಗೆದುಕೊಂಡಿದೆ.

ಲೋಗಾರ್‌ ಪ್ರಾಂತ್ಯದ ರಾಜಧಾನಿ ಪಲ್‌–ಇ–ಅಲಂ ನಗರವನ್ನು ನಿರಾಯಾಸ
ವಾಗಿ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಸೇನೆಯಿಂದ ಪ್ರತಿರೋಧವೇ ವ್ಯಕ್ತವಾಗಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಾಬೂಲ್‌ ಮೇಲೆ ದಾಳಿ ನಡೆಸಲು ಈ ನಗರವು ಅತ್ಯಂತ ಮಹತ್ವದ್ದಾಗಿತ್ತು.

ಅಮೆರಿಕ ರಾಯಭಾರ ಕಚೇರಿ ಸಿಬ್ಬಂದಿ ಸೇರಿದಂತೆ ಎಲ್ಲರಿಗೂ ಅಫ್ಗಾನಿಸ್ತಾನದಿಂದ ತೆರಳಲು ಕಾಬೂಲ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮಾತ್ರ ಒಂದೇ ಮಾರ್ಗವಾಗಿ ಉಳಿದಿದೆ. ಹೀಗಾಗಿ, ಈ ವಿಮಾನ ನಿಲ್ದಾಣದಲ್ಲಿ ತೀವ್ರ ದಟ್ಟಣೆಯಾಗಿದೆ. ಶರನಾ ಪ್ರಾಂತ್ಯ ಹಾಗೂ ಪಾಕಿಸ್ತಾನ ಗಡಿಯಲ್ಲಿರುವ ಪಕ್ತಿಕಾ ಪ್ರಾಂತ್ಯವನ್ನು ಉಗ್ರರು ಶನಿವಾರ ವಶಪಡಿಸಿಕೊಂಡಿದ್ದಾರೆ.

ಮಝರ್‌–ಇ–ಷರೀಫ್‌ ನಗರವನ್ನು ವಶಪಡಿಸಿಕೊಳ್ಳಲು ತಾಲಿಬಾನ್‌ ಮತ್ತು ಅಫ್ಗನ್‌ ಸೇನೆ ನಡುವೆ ತೀವ್ರ ಸಂಘರ್ಷ ನಡೆದಿದೆ. ‘ನಗರದಲ್ಲಿ ಪರಿಸ್ಥಿತಿ ಭಯಾನಕವಾಗಿದೆ. ಜೀವಕ್ಕೆ ಅಪಾಯವಿದೆ. ನನಗೆ ಶಾಂತಿ, ಸ್ಥಿರತೆ, ನೆಮ್ಮದಿ ಮುಖ್ಯ. ಈ ಸಂಘರ್ಷವನ್ನು ಸ್ಥಗಿತಗೊಳಿಸಬೇಕು’ ಎಂದು ಮಝರ್‌ –ಇ–ಷರೀಫ್‌ ನಗರದ ನಿವಾಸಿ ಕಾವಾ ಬಷ್ರತ್‌ ಆತಂಕ ವ್ಯಕ್ತಪಡಿಸಿದರು.

ಜಲಾಲಾಬಾದ್‌, ಗಾರ್ಡೆಝ್‌ ಮತ್ತು ಖೋಸ್ತ್‌– ಪಸ್ತು ನಗರಗಳು ಮಾತ್ರ ಸದ್ಯ ಸರ್ಕಾರದ ನಿಯಂತ್ರಣದಲ್ಲಿವೆ. ಈ ನಗರಗಳನ್ನು ವಶಪಡಿಸಿಕೊಳ್ಳಲು ಹೆಚ್ಚಿನ ಪ್ರತಿರೋಧ ವ್ಯಕ್ತವಾಗುವುದಿಲ್ಲ ಎಂದು ತಾಲಿಬಾನ್‌ ನಿರೀಕ್ಷಿಸಿದೆ.

ಕಂದಾಹಾರ್‌ನ ಆಕಾಶವಾಣಿ ಕೇಂದ್ರ ವಶಕ್ಕೆ: ತಾಲಿಬಾನ್‌ ಶನಿವಾರ ಕಂದಾಹಾರ್‌ನ ಆಕಾಶವಾಣಿ ಕೇಂದ್ರವನ್ನು ತನ್ನ ವಶಕ್ಕೆ ಪಡೆದಿದೆ.

ಇದಕ್ಕೆ ಸಂಬಂಧಿಸಿ ತಾಲಿಬಾನ್‌ ವಿಡಿಯೊವೊಂದನ್ನು ಬಿಡುಗಡೆ ಮಾಡಿದೆ. ‘ಈ ಆಕಾಶವಾಣಿ ಕೇಂದ್ರಕ್ಕೆ ‘ವಾಯ್ಸ್‌ ಆಫ್‌ ಷರಿಯಾ’ ಎಂದು ಮರುನಾಮಕರಣ ಮಾಡಲಾಗಿದೆ. ಸಂಸ್ಥೆಯ ಎಲ್ಲಾ ಸಿಬ್ಬಂದಿ ಆಕಾಶವಾಣಿ ಕೇಂದ್ರದಲ್ಲಿಯೇ ಇದ್ದಾರೆ. ಇಲ್ಲಿ ಸುದ್ದಿ, ರಾಜಕೀಯ ವಿಶ್ಲೇಷಣೆ ಮತ್ತು ಕುರಾನ್‌ ಪಠಣ ಪ್ರಸಾರ ಮಾಡಲಾಗುವುದು’ ಎಂದು ತಿಳಿಸಲಾಗಿದೆ. ಈ ಕೇಂದ್ರದಿಂದ ಸಂಗೀತ ಪ್ರಸಾರವಾಗುವ ಸಾಧ್ಯತೆಗಳು ಕಡಿಮೆ ಎಂದು ಮೂಲಗಳು ಹೇಳಿವೆ.

ಸೇನಾ ಪಡೆ ಮರು ಒಗ್ಗೂಡಿಸುತ್ತೇನೆ: ಅಧ್ಯಕ್ಷ ಅಷ್ರಫ್‌ ಘನಿ

ತಾಲಿಬಾನ್‌ ದಾಳಿ ಆರಂಭಿಸಿದ ಬಳಿಕ ಇದೇ ಮೊದಲ ಬಾರಿ ಶನಿವಾರ ಸಾರ್ವಜನಿಕವಾಗಿ ಕಾಣಿಸಿಕೊಂಡು ಭಾಷಣ ಮಾಡಿದ ಅಫ್ಗಾನಿಸ್ತಾನದ ಅಧ್ಯಕ್ಷ ಅಷ್ರಫ್‌ ಘನಿ, ‘ದೇಶದ ಸೇನಾ ಪಡೆಗಳನ್ನು ಮರು ಒಗ್ಗೂಡಿಸುತ್ತೇನೆ’ ಎಂದು ಪ್ರತಿಜ್ಞೆ ಮಾಡಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಅಥವಾ ಪ್ರಸ್ತುತ ಸ್ಥಿತಿಯ ಹೊಣೆ ಹೊತ್ತುಕೊಳ್ಳುವ ಬಗ್ಗೆ ಅವರು ಯಾವುದೇ ಸುಳಿವು ನೀಡಲಿಲ್ಲ.

‘ಕಳೆದ 20 ವರ್ಷಗಳಲ್ಲಿ ಸಾಧನೆಯನ್ನು ಬಿಟ್ಟುಕೊಡುವುದಿಲ್ಲ. ಯುದ್ಧವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಹಿರಿಯರು, ರಾಜಕೀಯ ನಾಯಕರು ಮತ್ತು ಸಮುದಾಯದ ಪ್ರತಿನಿಧಿಗಳು ಹಾಗೂ ಮೈತ್ರಿ ರಾಷ್ಟ್ರಗಳ ಜತೆ ಸಮಾಲೋಚನೆ ನಡೆಸಲಾಗುತ್ತಿದೆ’ ಎಂದು ಟಿ.ವಿ. ಭಾಷಣದಲ್ಲಿ ತಿಳಿಸಿದರು.

’ಶೀಘ್ರ ರಾಜಕೀಯ ಪರಿಹಾರ ಕಂಡುಕೊಳ್ಳುವ ಮೂಲಕ ಶಾಂತಿ ಮತ್ತು ಸ್ಥಿರತೆ ಕಾಪಾಡಲು ಪ್ರಯತ್ನಿಸಲಾಗುವುದು’ ಎಂದು ಹೇಳಿದರು.

ಇತರೆ...

l ರಾಯಭಾರ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ಸ್ಥಳಾಂತರಕ್ಕೆ ನೆರವಾಗಲು ಅಫ್ಗಾನಿಸ್ತಾನಕ್ಕೆ ಬಂದ ಅಮೆರಿಕದ ಮೂರು ಸಾವಿರ ಯೋಧರ ಪಡೆ

l ರಾಯಭಾರ ಕಚೇರಿಯಿಂದ ಸಿಬ್ಬಂದಿಯನ್ನು ವಾಪಸ್‌ ಕರೆಯಿಸಿಕೊಳ್ಳುತ್ತಿರುವ ಬ್ರಿಟನ್‌, ಜರ್ಮನಿ, ಡೆನ್ಮಾರ್ಕ್‌, ಸ್ಪೇನ್‌

l ಕಂದಾಹಾರ್‌ನ ಬಹುತೇಕ ನಿವಾಸಿಗಳು ತಾಲಿಬಾನ್‌ ಸೂಚಿಸಿದ್ದ ಸಾಂಪ್ರದಾಯಿಕ ಬಟ್ಟೆ ಧರಿಸುತ್ತಿದ್ದಾರೆ.

l ಕಾಬೂಲ್‌ನಲ್ಲಿರುವ 257 ಅಫ್ಗನ್‌ ಹಿಂದೂ ಮತ್ತು ಸಿಖ್‌ ಕುಟುಂಬಗಳನ್ನು ಶೀಘ್ರ ವಾಪಸ್‌ ಕರೆಯಿಸಿಕೊಳ್ಳುವಂತೆ ವಿಶ್ವ ಪಂಜಾಬಿ ಸಂಘಟನೆ ಭಾರತದ ಗೃಹ ಸಚಿವ ಅಮಿತ್‌ ಷಾ ಅವರಿಗೆ ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT