ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ವಿರುದ್ಧ ಹೋರಾಟ; ಸೇನೆ ಬಳಸಿ ತಾತ್ಕಾಲಿಕ ಆಸ್ಪತ್ರೆ ನಿರ್ಮಿಸಿ -ಅಮೆರಿಕ

ಅಮೆರಿಕದ ಸಾರ್ವಜನಿಕ ಆರೋಗ್ಯ ತಜ್ಞ ಡಾ. ಆಂಥೊನಿ ಫೌಸಿ ಭಾರತಕ್ಕೆ ಸಲಹೆ
Last Updated 4 ಮೇ 2021, 11:57 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಕೊರೊನಾ ಸೋಂಕು ಉಲ್ಬಣಗೊಂಡು ಭಾರತದಲ್ಲಿ ಪರಿಸ್ಥಿತಿ ತೀರಾ ಗಂಭೀರವಾಗಿದೆ. ಇದರಿಂದ ಹೊರಬರಬೇಕಾದರೆ, ತಮ್ಮಲ್ಲಿರುವ ಸೇನೆ ಮತ್ತು ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಂಡು ತಕ್ಷಣವೇ ತಾತ್ಕಾಲಿಕ ಆಸ್ಪತ್ರೆಗಳನ್ನು ನಿರ್ಮಿಸಬೇಕು‘ ಎಂದು ಅಮೆರಿಕದ ಸಾರ್ವಜನಿಕ ಆರೋಗ್ಯ ಕ್ಷೇತ್ರದ ತಜ್ಞ ಡಾ. ಆಂಥೊನಿ ಫೌಸಿ ಭಾರತ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

‘ಭಾರತದ ಪ್ರಯತ್ನಕ್ಕೆ ವಿಶ್ವದ ಬೇರೆ ಬೇರೆ ರಾಷ್ಟ್ರಗಳು ಕೈಜೋಡಿಸಬೇಕು. ತಾತ್ಕಾಲಿಕ ಆಸ್ಪತ್ರೆ ನಿರ್ಮಾಣಕ್ಕೆ ಅಗತ್ಯವಾದ ಸಾಮಗ್ರಿಗಳ ಜತೆಗೆ, ಸಿಬ್ಬಂದಿಯನ್ನೂ ನೀಡುವ ಮೂಲಕ ನೆರವಾಗಬೇಕು‘ ಎಂದು ಫೌಸಿ ಹೇಳಿದ್ದಾರೆ.

ಭಾರತ, ಈಗಿನ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕು ? ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ವಿಷಯ ಕುರಿತು ವಾಷಿಂಗ್ಟನ್‌ನಲ್ಲಿರುವ ಸುದ್ದಿ ಸಂಸ್ಥೆಯ ಪ್ರತಿನಿಧಿ ಡಾ.ಫೌಸಿಯವರೊಂದಿಗೆ ನಡೆಸಿದ ಸಂದರ್ಶನದ ಆಯ್ದ ವಿವರಗಳು ಇಲ್ಲಿವೆ.

ಪ್ರಶ್ನೆ: ನೀವು ಗಮನಿಸಿದಂತೆ, ಭಾರತದ ಪರಿಸ್ಥಿತಿ ಈಗ ಹೇಗಿದೆ, ವಿಶ್ಲೇಷಿಸಬಹುದೇ ?

ಫೌಸಿ: ಭಾರತದ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ಇದು ಎಲ್ಲರಿಗೂ ಸ್ಪಷ್ಟವಾಗಿ ತಿಳಿದಿದೆ ಎಂದು ನಾನು ಭಾವಿಸುತ್ತೇನೆ. ನನ್ನ ಪ್ರಕಾರ ಆ ದೇಶದಲ್ಲಿ ಹೊಸ ಅಲೆಯ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಆಸ್ಪತ್ರೆಯಲ್ಲಿ ಹಾಸಿಗೆಗಳು ಮತ್ತು ಆಮ್ಲಜನಕದ ಕೊರತೆ ಉಂಟಾಗಿದೆ. ವೈದ್ಯಕೀಯ ಸೌಲಭ್ಯದ ಕೊರತೆಯ ಕಾರಣ ಎಲ್ಲರಿಗೂ ಚಿಕಿತ್ಸೆ ನೀಡುವುದು ಕಷ್ಟವಾಗುತ್ತಿದೆ. ಇಂಥ ಸಮಸ್ಯೆಗಳು ಸಹಜವಾಗಿ ಹತಾಶೆ ಮೂಡಿಸುತ್ತವೆ. ಇಂಥ ಸಂದರ್ಭಗಳಲ್ಲಿ ವಿಶ್ವದ ಬೇರೆ ಬೇರೆ ರಾಷ್ಟ್ರಗಳು ನೆರವಿಗೆ ಧಾವಿಸಬೇಕು. ಭಾರತವೇ ಪ್ರಯತ್ನ ಪಟ್ಟರೆ, ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಸಾಧ್ಯವಿದೆ.

ಪ್ರಶ್ನೆ: ವಿಶ್ವದ ಬೇರೆ ಬೇರೆ ರಾಷ್ಟ್ರಗಳು ಭಾರತಕ್ಕೆ ಈಗ ಯಾವ ರೀತಿ ನೆರವಾಗಬಹುದು ?

ಫೌಸಿ: ನೋಡಿ, ನಿಮಗೆ ತಿಳಿದಿರುವಂತೆ ಅಮೆರಿಕ ಪ್ರಾಥಮಿಕ ಹಂತವಾಗಿ ಭಾರತಕ್ಕೆ 1 ಸಾವಿರ ಆಮ್ಲಜನಕದ ಸಿಲಿಂಡರ್‌ಗಳು, ಆಮ್ಲಜನಕ ಉತ್ಪಾದನೆಗೆ ಬಳಸುವ ಕಾನ್ಸನ್‌ಟ್ರೇಟರ್‌ಗಳು ಮತ್ತು ಆಮ್ಲಜನಕ ಉತ್ಪಾದಕ ಘಟಕಗಳನ್ನು ಪೂರೈಸುತ್ತಿದೆ. ಜತೆಗೆ, ವೈಯಕ್ತಿಕ ರಕ್ಷಣಾ ಸಾಧನ(ಪಿಪಿಇ ಕಿಟ್‌)ಗಳು, ಕೊರೊನಾ ಸೋಂಕು ಪರೀಕ್ಷಿಸಲು ಅಗತ್ಯವಾದ ರ‍್ಯಾಪಿಡ್‌ ಪರೀಕ್ಷಾ ಕಿಟ್‌ಗಳನ್ನು ಪೂರೈಸಿದೆ. ಇದರ ಜತೆಗೆ, ಲಕ್ಷಗಟ್ಟಲೆ ರೆಮ್‌ಡಿಸಿವಿರ್‌ನಂತಹ ಔಷಧಗಳನ್ನು ಕಳುಹಿಸಿದೆ. ಸಾಂಕ್ರಾಮಿಕ ರೋಗ ತಡೆಗೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ತಜ್ಞರು ಸಂಶೋಧನೆ ನಡೆಸುತ್ತಿದ್ದಾರೆ.

ಅಮೆರಿಕ ನೆರವು ನೀಡುತ್ತಿರುವಂತೆ ವಿಶ್ವದ ಬೇರೆ ಬೇರೆ ರಾಷ್ಟ್ರಗಳು ಭಾರತಕ್ಕೆ ಅಗತ್ಯವಾದ ಪರಿಕರಗಳು ಮತ್ತು ಸಿಬ್ಬಂದಿಯನ್ನು ಪೂರೈಸುವ ಮೂಲಕ ನೆರವಾಗಬಹುದು. ಅಗತ್ಯವಾದ ವಸ್ತುಗಳ ಪೂರೈಕೆಯಿಂದ ನಿಸ್ಸಂಶಯವಾಗಿ ಆ ದೇಶಕ್ಕೆ ಸಹಾಯವಾಗುತ್ತದೆ.

ಪ್ರಶ್ನೆ: ಈ ಸಮಸ್ಯೆಯಿಂದ ಹೊರ ಬರಲುಭಾರತ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ?

ಫೌಸಿ: ಎಲ್ಲ ಸಮಸ್ಯೆಗಳಿಗೂ ತಕ್ಷಣದ ಪರಿಹಾರವಾಗುವಂತಹ ಕ್ರಮಗಳಿರುತ್ತವೆ. ಮಧ್ಯಂತರ ಮತ್ತು ಧೀರ್ಘ ಕಾಲದಲ್ಲಿ ಪರಿಣಾಮವಾಗುವಂತ ಕ್ರಮಗಳೂ ಇರುತ್ತವೆ. ಸದ್ಯಕ್ಕೆ ಭಾರತ, ಮೊದಲು ದೇಶದಲ್ಲಿರುವ ಎಲ್ಲ ಜನರಿಗೂ ಲಸಿಕೆ ಹಾಕಿಸಬೇಕು. ತಾನು ತಯಾರಿಸುವ ಲಸಿಕೆಗಳ ಜತೆಗೆ, ಅಮೆರಿಕ, ರಷ್ಯಾ ಸೇರಿದಂತೆ ಲಸಿಕೆ ಪೂರೈಕೆದಾರ ರಾಷ್ಟ್ರಗಳಿಂದ ಹೆಚ್ಚುವರಿಯಾಗಿ ಲಸಿಕೆಗಳನ್ನು ತರಿಸಿಕೊಳ್ಳಬೇಕು. ಆದರೆ, ಈ ಲಸಿಕೆ ಹಾಕುವ ಪ್ರಕ್ರಿಯೆ ಇದೆಯಲ್ಲಾ, ಅದು ಈ ಹೊತ್ತಿನ ಸಮಸ್ಯೆಗೆ ಪರಿಹಾರ ನೀಡುವುದಿಲ್ಲ. ಈ ಲಸಿಕೆಯ ಪರಿಣಾಮ ಬೀರಲು ಕೆಲವು ವಾರಗಳೇ ಬೇಕಾಗುತ್ತವೆ. ಹಾಗಾಗಿ, ಮಧ್ಯಂತರವಾಗಿ ಕೈಗೊಳ್ಳುವ ಕ್ರಮಗಳ ಬಗ್ಗೆ ಹಾಗೂ ದೂರಗಾಮಿ ಪರಿಣಾಮ ಬೀರುವುದರ ಬಗ್ಗೆಯೂ ಚಿಂತಿಸಬೇಕು.

ಭಾರತ ಈಗಾಗಲೇ ಲಾಕ್‌ಡೌನ್‌ನಂತಹ ತಕ್ಷಣ ಪರಿಣಾಮ ಬೀರುವಂತಹ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿದಿದೆ. ಹಾಗಾಗಿ ಅವುಗಳನ್ನು ಇಲ್ಲಿ ಪುನರಾವರ್ತಿಸುವುದಿಲ್ಲ.

ನನಗೆ ತಿಳಿದಂತೆ, ಕಳೆದ ವರ್ಷ ಚೀನಾ, ಆಸ್ಟ್ರೇಲಿಯಾ ನ್ಯೂಜಿಲ್ಯಾಂಡ್‌ ರಾಷ್ಟ್ರಗಳು ಕೊರೊನಾ ಪ್ರಸರಣ ತಡೆಗೆ ದೀರ್ಘಕಾಲ ದೇಶವನ್ನೇ ಸಂಪೂರ್ಣ ಲಾಕ್‌ಡೌನ್‌ ಜಾರಿ ಮಾಡಿದ್ದವು. ಆದರೆ, ಭಾರತ, ಆ ದೇಶಗಳಂತೆ ದೀರ್ಘ ಕಾಲದವರೆಗೆ, ಅಂದರೆ ಆರು ತಿಂಗಳವರೆಗೆ ಲಾಕ್‌ಡೌನ್ ಮಾಡುವ ಅಗತ್ಯವಿಲ್ಲ. ಕೆಲವು ವಾರಗಳ ಕಾಲ ಲಾಕ್‌ಡೌನ್ ಮಾಡಿದರೆ ಸಾಕು. ಲಾಕ್‌ಡೌನ್‌ ಮಾಡಿದ್ದ ಬೇರೆ ದೇಶಗಳ ಅನುಭವದೊಂದಿಗೆ ಹೇಳುವುದಾದರೆ, ಲಾಕ್‌ಡೌನ್ ಮಾಡಿದಾಗ ಖಂಡಿತವಾಗಿಯೂ ವೈರಾಣು ಪ್ರಸರಣಕ್ಕೆ ಅಡ್ಡಿಯಾಗುತ್ತದೆ. ಈ ಮೂಲಕ ಸೋಂಕು ನಿರಂತರವಾಗಿ ಹರಡುವುದನ್ನು ತಡೆಯಬಹುದು. ಹಾಗಾಗಿ ನಾನು ಇದನ್ನು ಶಿಫಾರಸು ಮಾಡುತ್ತೇನೆ.

ಎರಡನೇ ಅಂಶವೆಂದರೆ; ಕಳೆದ ವರ್ಷ ಚೀನಾದಲ್ಲಿ ಕೊರೊನಾ ಸೋಂಕು ವ್ಯಾಪಕವಾದಾಗ, ಆ ಸಮಸ್ಯೆಯನ್ನು ಪರಿಹರಿಸಲು ಅಲ್ಲಿನ ಸರ್ಕಾರ ತ್ವರಿತಗತಿಯಲ್ಲಿ ತಾತ್ಕಾಲಿಕ ಆಸ್ಪತ್ರೆಗಳನ್ನು ನಿರ್ಮಿಸಿತು, ನಿಮಗೆ ನೆನಪಿರಬಹುದು. ಅಷ್ಟೇ ಅಲ್ಲ, ತಮ್ಮಲ್ಲಿರುವ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಂಡು ಆಸ್ಪತ್ರೆ ನಿರ್ವಹಣೆಗಾಗಿ ಸಿಬ್ಬಂದಿಯನ್ನು ನಿಯೋಜಿಸಿತು.

ಭಾರತದಲ್ಲಿ ಈಗ ಆಸ್ಪತ್ರೆಗಳು ಖಾಲಿ ಇಲ್ಲ, ಆಮ್ಲಜನಕ ಪೂರೈಕೆ ಸಮಸ್ಯೆಯಾಗಿದೆ ರೋಗಿಗಳಿಗೆ ತಾತ್ಕಾಲಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ನೋಡಿ ತಿಳಿದುಕೊಂಡೆ. ಇಂಥ ಪರಿಸ್ಥಿತಿಯಲ್ಲಿ ಭಾರತ, ತನ್ನಲ್ಲಿರುವ ಸೇನೆಯನ್ನು ಬಳಸಿಕೊಂಡು ತಕ್ಷಣವೇ ಅಗತ್ಯವಿರುವ ಕಡೆ ತಾತ್ಕಾಲಿಕ ಆಸ್ಪತ್ರೆಗಳನ್ನು ತೆರೆಯಬೇಕು. ಇಂಥ ಆಸ್ಪತ್ರೆಗಳು ಅನಾರೋಗ್ಯದಿಂದ ಬಳಲುತ್ತಿರುವ ಹಾಗೂ ಹಾಸಿಗೆ ಅಗತ್ಯವಿರುವ ಜನರಿಗೆ ಸಹಾಯವಾಗುತ್ತದೆ.

ಪ್ರಶ್ನೆ: ಭಾರತಕ್ಕೆ ಇನ್ನೇನಾದರೂ ಸಲಹೆ, ಅರಿವು ಮೂಡಿಸಲು ಬಯಸುವಿರಾ ?

ಫೌಸಿ: ಅಂಥದ್ದೇನೂ ಇಲ್ಲ. ಈಗ ಸೃಷ್ಟಿಯಾಗಿರುವ ಸಮಸ್ಯೆಯನ್ನು ಎದುರಿಸಲು ಅಮೆರಿಕ ಸೇರಿದಂತೆ ವಿಶ್ವದ ಎಲ್ಲ ರಾಷ್ಟ್ರಗಳು ಭಾರತದೊಂದಿಗೆ ಒಗ್ಗಟ್ಟು ಪ್ರದರ್ಶಿಸಬೇಕಾಗಿರುವುದು ಬಹಳ ಮುಖ್ಯವಾದ ಸಂಗತಿ ಎಂದು ನಾನು ಭಾವಿಸುತ್ತೇನೆ. ಅಮೆರಿಕ ಈಗಾಗಲೇ ಭಾರತದೊಂದಿಗೆ ಅಂತಹ ನಿಕಟ ಸಂಬಂಧವನ್ನು ಹೊಂದಿದೆ. ಭಾರತವು ತುಂಬಾ ಕಷ್ಟಕರ ಸಮಯವನ್ನು ಎದುರಿಸುತ್ತಿದೆ. ಈ ಬಗ್ಗೆ ನಮಗೆ ತುಂಬಾ ಬೇಸರವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT