ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ಜತೆಗಿನ ಸಂಬಂಧ ಮರು ಪರಿಶೀಲನೆಗೆ ಅಮೆರಿಕ ಸಂಸದರ ಒತ್ತಾಯ

Last Updated 14 ಸೆಪ್ಟೆಂಬರ್ 2021, 7:57 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕದಲ್ಲಿ ನಡೆದ 9/11 ಭಯೋತ್ಪಾದಕ ದಾಳಿಯ ಬಳಿಕ ಅಫ್ಗಾನಿಸ್ತಾನದ ವಿಚಾರದಲ್ಲಿ ಪಾಕಿಸ್ತಾನವು ದ್ವಂದ್ವ ನಿಲುವುಗಳನ್ನೇ ತೆಗೆದುಕೊಂಡಿದೆ. ಹಾಗಾಗಿ ಅಮೆರಿಕವು ಇಸ್ಲಾಮಾಬಾದ್ ಜೊತೆಗಿನ ಸಂಬಂಧದ ಕುರಿತು ಮರು ಪರಿಶೀಲಿಸಬೇಕಿದೆ ಎಂದು ಅಮೆರಿಕದ ಹಿರಿಯ ಸಂಸದರು ಆಗ್ರಹಿಸಿದ್ದಾರೆ.

‘ನ್ಯಾಟೊ’ಯೇತರ ಪ್ರಮುಖ ಮಿತ್ರ ರಾಷ್ಟ್ರ ಎಂದು ಪಾಕಿಸ್ತಾನವನ್ನು ಪರಿಗಣಿಸಿರುವ ವಿಚಾರವನ್ನು ಮರು ಪರಿಶೀಲಿಸಬೇಕು ಎಂದು ಸಂಸದರು ಇದೇ ವೇಳೆ ಜೋ ಬೈಡನ್‌ ಆಡಳಿತವನ್ನು ಒತ್ತಾಯಿಸಿದರು.

ಪಾಕಿಸ್ತಾನವು 20 ವರ್ಷಗಳಲ್ಲಿ ನಿರ್ವಹಿಸಿದ ಪಾತ್ರವನ್ನು ಅಮೆರಿಕ ಗಮನಿಸಿದೆ. ಅದೇ ರೀತಿ ಮುಂದಿನ ವರ್ಷಗಳಲ್ಲಿ ಅದು ಯಾವ ರೀತಿ ಪಾತ್ರ ನಿರ್ವಹಿಸುತ್ತದೆ ಎಂಬುದನ್ನೂ ಗಮನಿಸುತ್ತದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಟೋನಿ ಬ್ಲಿಂಕೆನ್ ಸಂಸದರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಅಫ್ಗನ್‌ ಸರ್ಕಾರದ ತ್ವರಿತ ಕುಸಿತ ಮತ್ತು ಅಮೆರಿಕದ ಪ್ರಜೆಗಳು ಮತ್ತು ಇತರರನ್ನು ಸ್ಥಳಾಂತರರಿಸುವ ಕುರಿತ ವಿಚಾರಗಳನ್ನು ಸಂಸದರು ಈ ವೇಳೆ ಬ್ಲಿಂಕನ್‌ ಅವರಲ್ಲಿ ಕೇಳಿದರು.

ಪಾಕಿಸ್ತಾನವು ದೀರ್ಘಕಾಲದಿಂದ ತಾಲಿಬಾನ್‌ಗೆ ಬೆಂಬಲ ನೀಡಿಕೊಂಡು ಬಂದಿದೆ ಹಾಗೂ ಆ ಗುಂಪಿನ ನಾಯಕರಿಗೆ ಆಶ್ರಯವನ್ನೂ ನೀಡುತ್ತಿದೆ. ಹೀಗಾಗಿ ಪಾಕ್‌ ಜತಗಿನ ಸಂಬಂಧ ಮತ್ತು ನ್ಯಾಟೊಯೇತರ ಪ್ರಮುಖ ಮಿತ್ರ ರಾಷ್ಟ್ರ ಎಂದು ನೀಡಿರುವ ಸ್ಥಾನಮಾನದ ಕುರಿತು ಮರು ಮೌಲ್ಯಮಾಪನ ನಡೆಸಲು ಇದು ಸಕಾಲವಾಗಿದೆ ಎಂದು ಸಂಸದ ಜೋಕ್ವಿನ್‌ ಕ್ಯಾಸ್ಟ್ರೊ ಆಗ್ರಹಿಸಿದರು.

ಅಫ್ಗಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ದೇಶ ತ್ಯಜಿಸಲು ಸಿದ್ಧವಾಗಿದ್ದ ವಿಷಯ ತಮಗೆ ಮೊದಲೇ ತಿಳಿದಿತ್ತೇ ಎಂದು ಸಂಸದರು ವಿದೇಶಾಂಗ ಕಾರ್ಯದರ್ಶಿಯವರನ್ನು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಬ್ಲಿಂಕೆನ್‌, ಆಗಸ್ಟ್‌ 14ರ ರಾತ್ರಿ ಘನಿ ಜತೆ ಮಾತನಾಡಿದ್ದೆ. ಅವರು ಹೋರಾಡುವುದಾಗಿ ಭರವಸೆ ನೀಡಿದ್ದರು. ಆದರೆ ಅವರು ಅಫ್ಗಾನಿಸ್ತಾನ ತೊರೆಯುವ ಯೋಜನೆಯ ಬಗ್ಗೆ ನನಗೆ ತಿಳಿದಿರಲಿಲ್ಲ ಎಂದು ತಿಳಿಸಿದರು.

ಅಮೆರಿಕದ ಮತ್ತೊಬ್ಬ ಸಂಸದ ಬಿಲ್‌ ಕೀಟಿಂಗ್‌, ಪಾಕಿಸ್ತಾನವು 2010ರಲ್ಲಿ ತಾಲಿಬಾನ್‌ ಮರುಸಂಘಟನೆಗೆ ನೆರವಾಗಿದೆ. ಅವರಿಗೆ ಆರ್ಥಿಕ ನೆರವನ್ನೂ ಒದಗಿಸಿದೆ. ಹಖ್ಖಾನಿ ಜಾಲದ ಜತೆಗೆ ಐಎಸ್‌ಐ ಬಲವಾದ ಸಂಬಂಧವನ್ನು ಹೊಂದಿದೆ. ಇದು ಅಮೆರಿಕದ ಸೈನಿಕರ ಸಾವಿಗೂ ಕಾರಣವಾಗಿದೆ ಎಂದು ದೂರಿದರು. ಅಲ್ಲದೆ ಪಾಕ್‌ನ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಕಾಬೂಲ್‌ ಅನ್ನು ತಾಲಿಬಾನ್‌ ಸ್ವಾಧೀನಕ್ಕೆ ಪಡೆದಾಗ ಸಂಭ್ರಮಿಸಿದ್ದರು ಎಂದು ಅವರು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT