ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರೂಪದ ಹೆಬ್ಬಾತು ಮ್ಯಾಗ್‌ಪೀ

Last Updated 22 ಜೂನ್ 2019, 6:23 IST
ಅಕ್ಷರ ಗಾತ್ರ

ಪುಟ್ಟ ಗಾತ್ರದ ಹಕ್ಕಿಗಳಿಗಿಂತ ದೊಡ್ಡಗಾತ್ರದ ಹಕ್ಕಿಗಳ ಜೀವನ ಶೈಲಿ ಹೆಚ್ಚು ಗಮನ ಸೆಳೆಯುತ್ತದೆ. ಅದರಲ್ಲೂ ನೀರು ಮತ್ತು ನೆಲ ಎರಡಕ್ಕೂ ಹೊಂದಿಕೊಂಡಿರುವ ದೊಡ್ಡ ಹಕ್ಕಿಗಳ ವರ್ತನೆ ಕುತೂಹಲಕರ. ಉಭಯವಾಸಿ ಹಕ್ಕಿಗಳು ಎಂದ ಕೂಡಲೇ, ಕೊಕ್ಕರೆ, ಬಾತುಕೋಳಿಗಳು ನೆನಪಾಗುತ್ತವೆ. ಬಾತುಕೋಳಿಗಳಲ್ಲಿ ಹಲವು ಪ್ರಭೇಧಗಳಿವೆ. ಅವುಗಳಲ್ಲಿ ಹೆಬ್ಬಾತುಗಳೂ ಇವೆ. ಇಂದಿನ ಪಕ್ಷಿ ಪ್ರಪಂಚದಲ್ಲಿ ಅಪರೂಪದ ಮ್ಯಾಗ್‌ಪೀ ಹೆಬ್ಬಾತು (Magpie Goose) ಬಗ್ಗೆ ತಿಳಿಯೋಣ. ಈ ಹಕ್ಕಿಯ ವೈಜ್ಞಾನಿಕ ಹೆಸರು (Anseranas semipalmata). ಇದು ಅನ್ಸೆರನಟಿಡೇ (Anseranatidae) ಕುಟುಂಬಕ್ಕೆ ಸೇರಿದ ಪ್ರಮುಖ ಹೆಬ್ಬಾತುಗಳಲ್ಲಿ ಒಂದು.

ಹೇಗಿರುತ್ತದೆ? :

ಬಿಳಿ, ಕಂದು ಮತ್ತು ಕಪ್ಪು ಬಣ್ಣದ ಪುಕ್ಕದಿಂದ ದೇಹ ಆವರಿಸಿರುತ್ತದೆ. ಕತ್ತು ನೀಳವಾಗಿದ್ದು, ತಲೆಯವರೆಗೆ ಸಂಪೂರ್ಣ ಕಪ್ಪು ಬಣ್ಣದಲ್ಲಿರುತ್ತದೆ. ದೇಹವೆಲ್ಲಾ ಬಿಳಿ ಬಣ್ಣದ ದಟ್ಟವಾದ ಪುಕ್ಕದಿಂದ ಆವರಿಸಿರುತ್ತದೆ. ರೆಕ್ಕೆಗಳು ಅಗಲವಾಗಿದ್ದು, ಕಪ್ಪು ಮತ್ತು ಕಂದು ಬಣ್ಣದ ಪುಕ್ಕದಿಂದ ಕೂಡಿರುತ್ತವೆ. ಬಾಲ ಪುಟ್ಟದಾಗಿದ್ದರೂ ದಟ್ಟವಾಗಿ ಗರಿಗಳು ಮೂಡಿರುತ್ತವೆ. ಕಾಲುಗಳು ನೀಳವಾಗಿದ್ದು, ತಿಳಿ ಹಳದಿ ಬಣ್ಣದಲ್ಲಿ ಇರುತ್ತವೆ. ದೇಹದಿಂದ ಮೊಣಕಾಲಿನ ಮೇಲ್ಭಾಗದವರೆಗೆ ಕಪ್ಪು ಪುಕ್ಕ ಆವರಿಸಿರುತ್ತದೆ. ಕೊಕ್ಕು ನೀಳವಾಗಿದ್ದು, ಮೂತಿಯನ್ನು ಆವರಿಸಿರುತ್ತದೆ. ಮುಖಧ ಭಾಗ ಕೆಂಪು ಬಣ್ಣದ ಚರ್ಮದಿಂದ ಕೂಡಿರುತ್ತದೆ. ಕೊಕ್ಕಿನ ತುದಿ ಬಾಗಿದ್ದು, ಬಲಿಷ್ಠವಾಗಿರುತ್ತದೆ. ಕಣ್ಣುಗಳು ಪುಟ್ಟದಾಗಿದ್ದು, ಕಪ್ಪು ಬಣ್ಣದಲ್ಲಿರುತ್ತವೆ. ಪಾದಗಳಲ್ಲಿನ ಬೆರಳುಗಳು ಬಿಡಿಯಾಗಿದ್ದರೂ ಆರಂಭದಲ್ಲಿ ಚರ್ಮದಿಂದ ಕೂಡಿಕೊಂಡಿರುತ್ತವೆ. ಉಗುರುಗಳು ನೀಳವಾಗಿ ಬೆಳೆದಿರುತ್ತವೆ.

ಸ್ವಾರಸ್ಯಕರ ಸಂಗತಿಗಳು

ಮರಗಳ ಮೇಲೆ ವಾಸಿಸುವ ಏಕೈಕ ಹೆಬ್ಬಾತು ಮ್ಯಾಗ್‌ಪೀ ಗೂಸ್‌

ಒಂದೇ ಗೂಡನ್ನು ಎರಡು ಹೆಣ್ಣು ಮ್ಯಾಗ್‌ಪೀಗಳು ಬಳಸಿಕೊಳ್ಳುತ್ತವೆ.

ಇದು ಬಾತುಕೋಳಿಗಳ ಕುಟುಂಬಕ್ಕೆ ಸೇರಿದ ಹಕ್ಕಿ ಎಂದು ಸಂಶೋಧಕರು ಪರಿಗಣಿಸಿದ್ದಾರೆ.

ಎಲ್ಲಿದೆ?

ಇದು ಆಸ್ಟ್ರೇಲಿಯಾದಲ್ಲಿ ಮಾತ್ರ ಕಾಣಸಿಗುವ ಹಕ್ಕಿ. ಉತ್ತರ ಆಸ್ಟ್ರೇಲಿಯಾದಲ್ಲಿ ಇದರ ಸಂತತಿ ಹೆಚ್ಚಾಗಿದೆ. ಈ ಹಿಂದೆ ದಕ್ಷಿಣ ಆಸ್ಟ್ರೇಲಿಯಾದಲ್ಲೂ ಹೆಚ್ಚಾಗಿ ಕಾಣಿಸುತ್ತಿತ್ತು. ಆದರೆ ವಾಸಸ್ಥಾನಗಳ ನಾಶದಿಂದಾಗಿ ಈಗ ಅಲ್ಲಿ ಕಾಣಿಸುತ್ತಿಲ್ಲ.ನದಿ ಪ್ರದೇಶಗಳು, ಜೌಗು ಪ್ರದೇಶಗಳು, ನೀರಿನಿಂದ ಕೂಡಿರುವ ಪ್ರದೇಶಗಳೇ ಇದರ ನೆಚ್ಚಿನ ವಾಸಸ್ಥಾನ.

ಜೀವನಕ್ರಮ ಮತ್ತು ವರ್ತನೆ

ಇದು ಗುಂಪಿನಲ್ಲಿ ವಾಸಿಸಲು ಇಷ್ಟಪಡುವ ಹಕ್ಕಿ. ಒಂದು ಗುಂಪಿನಲ್ಲಿ ಸಾವಿರಾರು ಮ್ಯಾಗ್ ಪೀಗಳು ಇರುತ್ತವೆ. ನದಿತೀರ ಅಥವಾ ನೀರು ಇರುವಂತಹ ಪ್ರದೇಶಗಳಿಗೆ ಸಮೀಪದಲ್ಲಿರುವ ಮರಗಳ ಮೇಲೆ ವಾಸಿಸುತ್ತವೆ. ಹೆಣ್ಣು ಹಕ್ಕಿ ಸಾಮಾನ್ಯವಾಗಿ ಒಂದೇ ಗೂಡಿನಲ್ಲಿ ಜೀವನವೆಲ್ಲಾ ಕಳೆಯುತ್ತದೆ. ಆಗಾಗ್ಗೆ ನವೀಕರಣ ಮಾಡಿಕೊಳ್ಳುತ್ತದೆ. ಒಂದೇ ಕಡೆ ಗುಂಪು ಸೇರಿ ಜೋರಾಗಿ ಕೂಗುವುದರಿಂದ ಇವುಗಳನ್ನು ಸುಲಭವಾಗಿ ಪತ್ತೆ ಮಾಡಬಹುದು. ರೆಕ್ಕೆಗಳನ್ನು ಬಡಿಯುವ ಮೂಲಕ ಮತ್ತು ವಿಶಿಷ್ಟ ಶಬ್ದಗಳ ಮೂಲಕ ಇದು ಸಂವಹನ ನಡೆಸುತ್ತದೆ. ಗಂಡು ಮತ್ತು ಹೆಣ್ಣು ಹಕ್ಕಿಗಳು ಜೀವನ ಪೂರ್ತಿ ಜೊತೆಯಾಗಿರುತ್ತವೆ. ಒಂದೇ ಹಕ್ಕಯೊಂದಿಗೆ ಸಾಂಗತ್ಯ ಬೆಳೆಸುತ್ತವೆ.

ಆಹಾರ

ಇದನ್ನು ಸಸ್ಯಹಾರಿ ಹಕ್ಕಿಯೆಂದೇ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ನೀರಿನಲ್ಲಿ ಬೆಳೆಯುವ ಜಲ ಸಸ್ಯಗಳೇ ಇದರ ಪ್ರಮುಖ ಆಹಾರ. ಹುಲ್ಲು, ವಿವಿಧ ಬಗೆಯ ಕಾಳುಗಳನ್ನೂ ತಿನ್ನುತ್ತದೆ. ನೆಲದಲ್ಲಿ ಹುದುಗಿರುವ ಕೆಲವು ಬಗೆಯ ಕೀಟಗಳನ್ನು ಮಾತ್ರ ತನ್ನ ಕೊಕ್ಕಿನಿಂದ ಹೆಕ್ಕಿ ತಿನ್ನುತ್ತದೆ.

ಸಂತಾನೋತ್ಪತ್ತಿ

ಫೆಬ್ರುವರಿಯಿಂದ ಮಾರ್ಚ್ ತಿಂಗಳವರೆಗಿನ ಅವಧಿ ಇದರ ಸಂತಾನೋತ್ಪತ್ತಿಗೆ ಪ್ರಶಸ್ತವಾಗಿರುತ್ತದೆ. ಗಂಡು ಹಕ್ಕಿ ಹೆಣ್ಣಿಗಾಗಿ ಗೂಡು ನಿರ್ಮಿಸಿ ಸಾಂಗತ್ಯ ಬೆಳೆಸುತ್ತದೆ. ಸಾಮಾನ್ಯವಾಗಿ 3ರಿಂದ 8 ಮೊಟ್ಟೆಗಳನ್ನು ಇಡುತ್ತದೆ. ಹೆಣ್ಣು ಮತ್ತು ಗಂಡು ಎರಡೂ ಹಕ್ಕಿಗಳು ಮೊಟ್ಟೆಗಳಿಗೆ 24ರಿಂದ 35 ದಿನಗಳ ವರೆಗೆ ಕಾವು ಕೊಡುತ್ತವೆ. ಮೊಟ್ಟೆಯಿಂದ ಹೊರಬಂದ ಮರಿಗಳು ಮೂರು ತಿಂಗಳ ವರೆಗೆ ಪೋಷಕ ಹಕ್ಕಿಗಳ ಆರೈಕೆಯಲ್ಲೇ ಬೆಳೆಯುತ್ತವೆ. ನಂತರ ಹಾರುವುದಕ್ಕೆ ಆರಂಭಿಸುತ್ತವೆ. ಎರಡು ವರ್ಷಗಳ ನಂತರ ವಯಸ್ಕ ಹಂತ ತಲುಪುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT