ಖಾಕಿ ಕ್ಷೇತ್ರದತ್ತ ಯುವತಿಯರ ಚಿತ್ತ...

7

ಖಾಕಿ ಕ್ಷೇತ್ರದತ್ತ ಯುವತಿಯರ ಚಿತ್ತ...

Published:
Updated:

ಕನ್ನಡ ಎಂ.ಎ ಪದವೀಧರೆ ನಿರ್ಮಲಾ. ಅವರಿಗೆ ಉಪನ್ಯಾಸಕಿಯಾಗಬೇಕೆಂಬ ಅದಮ್ಯ ಆಸೆಯಿತ್ತು. ಆದರೆ, ಆಗಿದ್ದು ಕಾನ್‌ಸ್ಟೆಬಲ್. ಅದಕ್ಕಾಗಿ ಅವರಿಗೆ ಬೇಸರವೂ ಇಲ್ಲ. ಬಂದ ಸವಾಲುಗಳನ್ನು ಎದುರಿಸುತ್ತಲೇ ಖಾಕಿ ದಿರಿಸು ಧರಿಸಿದ್ದಾರೆ.

ಏನಾಯಿತೆಂದರೆ; ಕಾನ್‌ಸ್ಟೆಬಲ್‌ ಆಗಿದ್ದ ಅವರ ಪತಿ, ಅಪಘಾತದಲ್ಲಿ ಮೃತಪಟ್ಟರು. ಇದೇ ಘಟನೆಯಲ್ಲಿ ಇವರ ಕಾಲು ಊನವಾಯಿತು. ಪತಿಯ ನಿಧನದಿಂದ ಅನುಕಂಪದ ಆಧಾರದ ಮೇಲೆ ನೌಕರಿಗಾಗಿ ವಾಕರ್‌ ಹಿಡಿದು ಅಲೆದರು. ಮೂರು ವರ್ಷಗಳವರೆಗೆ ಕೆಲಸ ಸಿಗಲಿಲ್ಲ. ಆಮೇಲೆ ಕಾನ್‌ಸ್ಟೆಬಲ್‌ ಹುದ್ದೆಗೆ ಆಯ್ಕೆಯಾಗಿ ಮೈಸೂರಿನ ಪೊಲೀಸ್‌ ತರಬೇತಿ ಶಾಲೆಗೆ ಸೇರಿದರು.

***

ಕಾನ್‌ಸ್ಟೆಬಲ್ ಆಗಿ ತರಬೇತಿಗೆ ಸೇರಿದ್ದ ಸುಮಾ ಅವರದ್ದೂ ಇಂಥದ್ದೇ ಕತೆ. ಅವರು ಏಳು ವರ್ಷವಾಗಿದ್ದಾಗ ತಂದೆ ಬೇರೆಯಾದರು. ತಾಯಿ ಕೂಲಿ ಮಾಡಿ ಇವರನ್ನು ಸಾಕಿದರು. ನಂತರ ಎಂಟನೇ ಕ್ಲಾಸ್‌ನಿಂದಲೇ ತಾನೂ ಕೆಲಸ ಮಾಡಿ, ಬಂದ ಹಣದಲ್ಲಿ ಪಿಯುಸಿವರೆಗೆ ಓದಿದರು. ಸಾಲ ಮಾಡಿ ಐಟಿಐ ಮುಗಿಸಿ, ಕಂಪ್ಯೂಟರ್ ಕಲಿತರು. ‘ಫೋಟೊ ಸ್ಟುಡಿಯೊವೊಂದರಲ್ಲಿ ಕೆಲಸ ಮಾಡುತ್ತಾ, ಕಾನ್‌ಸ್ಟೆಬಲ್‌ ನೌಕರಿಗೆ ಅರ್ಜಿ ಹಾಕಿದೆ. ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆಗಳಲ್ಲಿ ಪಾಸಾದೆ’ ಎನ್ನುತ್ತಾ ಪೊಲೀಸ್ ಹುದ್ದೆಗೆ ಬಂದಿದ್ದನ್ನು ಒಂದೇ ಉಸಿರಿಗೆ ಹೇಳಿ ಮುಗಿಸಿದರು ಸುಮಾ.

***

ಮೈಸೂರಿನ ಮಹಿಳಾ ಪೊಲೀಸ್‌ ತರಬೇತಿ ಶಾಲೆಯಲ್ಲಿ ಕಾನ್‌ಸ್ಟೆಬಲ್‌ ಆಗಿ ನೇಮಕಗೊಂಡ ನಂತರ ಒಂಬತ್ತು ತಿಂಗಳವರೆಗೆ ತರಬೇತಿ ಪೂರೈಸಿದವರ ಮನದಾಳದ ಮಾತುಗಳಿವು. 2015ರಲ್ಲಿ ಆರಂಭಗೊಂಡ ಈ ಶಾಲೆಯಲ್ಲಿ ಎರಡು ಬ್ಯಾಚುಗಳಲ್ಲಿ 500 ಮಹಿಳಾ ಕಾನ್‌ಸ್ಟೆಬಲ್‌ಗಳು ತರಬೇತಿ ಪಡೆದಿದ್ದಾರೆ. ಈಚೆಗೆ 150 ಮಹಿಳಾ ಹೆಡ್‌ ಕಾನ್‌ಸ್ಟೆಬಲ್‌ಗಳಿಗೆ ಕೇಂದ್ರದಲ್ಲಿ ತರಬೇತಿ ನಡೆಯಿತು.

ತರಬೇತಿ ಹೇಗಿರುತ್ತದೆ?

ಪುರುಷರಿಗೆ ಇರುವ ತರಬೇತಿಯನ್ನು ಮಹಿಳಾ ಕಾನ್‌ಸ್ಟೆಬಲ್‌ಗಳೂ ಪಡೆಯುತ್ತಾರೆ. ಒಳಾಂಗಣ ಹಾಗೂ ಹೊರಾಂಗಣ ಎಂದು ಎರಡು ಬಗೆಯ ತರಬೇತಿಗಳಿರುತ್ತವೆ. ಒಳಾಂಗಣ ತರಬೇತಿಯಲ್ಲಿ ಭಾರತದ ದಂಡ ಸಂಹಿತೆ, ದಂಡ ಪ್ರಕ್ರಿಯಾ ಸಮಿತಿ, ವಿಶೇಷ ಹಾಗೂ ಸ್ಥಳೀಯ ಕಾಯ್ದೆಗಳು, ಪೊಲೀಸ್‌ ವಿಜ್ಞಾನದಲ್ಲಿ ಫಿಂಗರ್‌ ಪ್ರಿಂಟ್, ವಿಧಿವಿಜ್ಞಾನ, ಸೈಬರ್‌ ಅಪರಾಧ, ಕಂಪ್ಯೂಟರ್, ವೈರ್‌ಲೆಸ್, ವಿಐಪಿ ಸೆಕ್ಯುರಿಟಿ, ಆಧುನಿಕ ಭಾರತ ಹಾಗೂ ಪೊಲೀಸರ ಪಾತ್ರ, ಪೊಲೀಸ್‌ ಸಂಘಟನೆ, ಆಡಳಿತ, ಮನಶಾಸ್ತ್ರ ಒಳಗೊಂಡಿರುತ್ತದೆ. 

ಹೊರಾಂಗಣ ತರಬೇತಿಯಲ್ಲಿ ರೂಟ್‌ ಮಾರ್ಚ್‌, ಕ್ರಾಸ್ ಕಂಟ್ರಿ, ರೇಸ್‌, ನಡಿಗೆ, ಈಜು, ಓಟ, ಕರಾಟೆ, ಯೋಗ, ಆಯುಧಸಹಿತ ಡ್ರಿಲ್, ಆಯುಧರಹಿತ ಡ್ರಿಲ್, ಗಾರ್ಡ್‌ ಅಂಡ್‌ ಸೆಂಟ್ರಿ, ಗೌರವರಕ್ಷೆ, ಗುಂಪು ನಿಯಂತ್ರಣ, ಲಾಠಿ ಡ್ರಿಲ್, ಟಿನಲ್‌ ಗ್ಯಾಸ್, ಕಾನೂನುಬಾಹಿರ ಗುಂಪುಗಳ ನಿಯಂತ್ರಣದಲ್ಲಿ ಜಾತ್ರೆ, ಮೇಳ, ಮೆರವಣಿಗೆ ಸಂಬಂಧಪಟ್ಟ ಕರ್ತವ್ಯಗಳು, ಬ್ಯಾರಿಕೇಡ್‌ ಬಳಕೆ, ವಾಟರ್‌ ಕೆನನ್‌ ಬಳಕೆ, ಎಸ್ಕಾರ್ಟ್‌, ಸ್ಫೋಟಕಗಳ ಅನ್ವೇಷಕ ಉಪಕರಣ ಬಳಕೆ, ಹೆಲಿಪ್ಯಾಡ್, ಜೈಲಿನಲ್ಲಿ ಕೈದಿಗಳಿಗೆ ಎಸ್ಕಾರ್ಟ್‌, ನಕ್ಸ್‌ಲೈಟ್‌ ಕೂಂಬಿಂಗ್, ಕೋರ್ಟ್‌, ಆಸ್ಪತ್ರೆ, ಸಂಚಾರ ನಿಯಂತ್ರಣ... ಹೀಗೆ ಒಂಬತ್ತು ತಿಂಗಳ ತರಬೇತಿ ಪಡೆದು ಕರ್ತವ್ಯ ನಿರ್ವಹಣೆಗೆ ಸಜ್ಜುಗೊಳ್ಳುತ್ತಾರೆ.

‘ಕಾನ್ಸ್‌ಸ್ಟೆಬಲ್ ಆಗಿ ನೇಮಕಗೊಂಡು ಇಲ್ಲಿ ತರಬೇತಿ ಪಡೆದ ಮೇಲೆ ಜೀವನ ಎದುರಿಸುವ ಧೈರ್ಯ ಬಂತು. ಅಪಘಾತವಾದ ವೇಳೆ ಕಾಲಿಗೆ ರಾಡ್‌ ಹಾಕಿದ್ದರೂ, ಅದನ್ನು ಮರೆತು ಕರ್ತವ್ಯ ನಿರ್ವಹಿಸಲು ಸಜ್ಜಾಗುತ್ತಿದ್ದೇನೆ. ಕಾನ್‌ಸ್ಟೆಬಲ್‌ ಆಗಿದ್ದಕ್ಕೆ ವೃತ್ತಿಯ ಜತೆಗೆ ಜೀವನದ ಕಷ್ಟಗಳನ್ನು ಎದುರಿಸುವ ಧೈರ್ಯ ಬಂದಿದೆ’ ಎನ್ನುತ್ತಾ ತರಬೇತಿ ಅನುಭವ ಹಂಚಿಕೊಂಡರು ನಿರ್ಮಲಾ.

‘ತರಬೇತಿ ಕಠಿಣ ಅನ್ನಿಸುತ್ತಿತ್ತು. ಬೆಳಿಗ್ಗೆ ಆರು ಗಂಟೆಗೆ ಮೈದಾನದಲ್ಲಿರಬೇಕಿತ್ತು. ಎಂಟೂವರೆಯವರೆಗೆ ಕಸರತ್ತು. ಒಂಬತ್ತು ಗಂಟೆಗೆ ತರಗತಿಗೆ ಹಾಜರಿರಬೇಕು. ನಂತರ ಒಂದು ಗಂಟೆ ರೆಸ್ಟ್. ಆಮೇಲೆ ಮೈದಾನದಲ್ಲಿ ಪುನಃ ಸಂಜೆವರೆಗೆ ತರಬೇತಿ. ಮತ್ತೆ ಆಟದ ಸಮಯ’ ಎನ್ನುತ್ತಾ ತರಬೇತಿ ವೇಳಾಪಟ್ಟಿ ನೀಡಿದರು ಸುಮಾ. ‘ಕರ್ತವ್ಯಕ್ಕೆ ಹಾಜರಾದ ಮೇಲೆ, ಅಮ್ಮ ಕೂಲಿಗೆ ಹೋಗುವುದನ್ನು ಬಿಡಿಸಿದ್ದೇನೆ. ತಂಗಿಯನ್ನು ಓದಿಸುತ್ತಿದ್ದೇನೆ’ ಎಂದು ಅವರು ಹೆಮ್ಮೆಯಿಂದ ಹೇಳುವುದನ್ನು ಮರೆಯಲಿಲ್ಲ.

ಶಿವಮೊಗ್ಗದಲ್ಲಿ ಕಾನ್‌ಸ್ಟೆಬಲ್‌ ಆಗಿರುವ ಪೂರ್ಣಿಮಾ ಕೂಡ, ಕೃಷಿಕಾರ್ಮಿಕ ಕುಟುಂಬದ ಹಿನ್ನೆಲೆಯವರು. ಕಷ್ಟಪಟ್ಟು ಬಿ.ಎ, ಡಿ.ಇಡಿ ಓದಿ, ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡಿ, ಕಾನ್‌ಸ್ಟೇಬಲ್‌ ಆದರು. ‘24X7 ಕರ್ತವ್ಯ ಮಾಡಬೇಕು. ಮನೆ ಕಡೆ ಹೆಚ್ಚು ಗಮನ ಕೊಡಲಾಗುವುದಿಲ್ಲ. ಆದರೂ ನಿಭಾಯಿಸುತ್ತೇನೆ. ಆರ್ಥಿಕವಾಗಿ ಸದೃಢಳಾಗಿ, ಅಪ್ಪ–ಅಮ್ಮ ಕೂಲಿ ಮಾಡುವುದನ್ನು ಬಿಡಿಸಿದ್ದೇನೆ’ ಎನ್ನುತ್ತಾರೆ ಅವರು.

ಪುರುಷರಷ್ಟೇ ಪ್ರಮಾಣದಲ್ಲಿ ಮಹಿಳೆಯರು ಪೊಲೀಸ್ ಹುದ್ದೆಗೆ ಸೇರುತ್ತಿರುವುದು ವಿಶೇಷ. ಅದರಲ್ಲೂ ಗ್ರಾಮೀಣ ಭಾಗದ, ಆರ್ಥಿಕವಾಗಿ ದುರ್ಬಲ ಕುಟುಂಬದವರೇ ಹೆಚ್ಚಾಗಿದ್ದಾರೆ. ತರಬೇತಿಯಲ್ಲಿ ಪುರುಷರಿಗೆ ಸರಿ ಸಮಾನವಾಗಿ ಸವಾಲುಗಳನ್ನು ಎದುರಿಸುತ್ತಾರೆ. ಈ ಮಾತನ್ನು ಅನುಮೋದಿಸುವ ಪೊಲೀಸ್‌ ತರಬೇತಿ ಶಾಲೆಯ ಪ್ರಾಚಾರ್ಯೆ ಡಾ.ಧರಣಿದೇವಿ ಮಾಲಗತ್ತಿ, ‘ಮಹಿಳೆಯರು ಕುಟುಂಬದ ಜತೆಗೆ, ಡ್ಯೂಟಿಯಲ್ಲಿದ್ದಾಗಲೂ ಸವಾಲುಗಳನ್ನು ಎದುರಿಸುತ್ತಾರೆ. ಇದು ತರಬೇತಿ ಅವಧಿಯಿಂದಲೇ ಶುರುವಾಗುತ್ತದೆ’ ಎನ್ನುತ್ತಾರೆ. 


ಅತ್ಯುತ್ತಮವಾಗಿ ತರಬೇತಿ ಪೂರ್ಣಗೊಳಿಸಿ ಪಾರಿತೋಷಕ ಸ್ವೀಕರಿಸುತ್ತಿರುವ ಭಾವನಾ ಎಸ್‌.

‘ಪುರುಷ ಕಾನ್ಸ್‌ಸ್ಟೆಬಲ್‌ಗಳು ತರಬೇತಿಗೆ ಒಬ್ಬರೇ ಬರುತ್ತಾರೆ. ಆದರೆ, ಮಹಿಳೆಯರು ಬರುವಾಗ ತಮ್ಮೊಂದಿಗೆ ಪುಟ್ಟ ಮಕ್ಕಳನ್ನು ಕರೆತಂದು ಇಲ್ಲೇ ಸಲಹುತ್ತಾರೆ. ಅಂಥವರೂ ಈ ತರಬೇತಿಯಲ್ಲಿದ್ದಾರೆ’ ಎಂದು ಅವರು ಉಲ್ಲೇಖಿಸುತ್ತಾರೆ.

ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗೆ ಪಿಯು ವಿದ್ಯಾಭ್ಯಾಸ ಸಾಕು. ಆದರೆ, ಇಲ್ಲಿಗೆ ಬಂದವರಲ್ಲಿ ಬಿ.ಎ, ಬಿ.ಕಾಂ, ಬಿ.ಎಸ್ಸಿ, ಎಂಬಿಎ, ಎಂಎಸ್‌ಡಬ್ಲು, ಎಂ.ಕಾಂ, ಎಲ್‌ಎಲ್‌ಬಿ, ಲ್ಯಾಬ್‌ ಟೆಕ್ನಿಷಿಯನ್ ಓದಿದವರೂ ಇದ್ದಾರೆ. ಅದರಲ್ಲೂ ಗ್ರಾಮೀಣ ಪ್ರದೇಶದವರೇ ಹೆಚ್ಚು. ‘ಇಲ್ಲಿವರೆಗೂ ಮೂರು ವರ್ಷಗಳಿಂದ ತರಬೇತಿ ಪಡೆದ 500 ಮಂದಿ ಮಹಿಳೆಯರಲ್ಲಿ ನಗರದವರು 40 ಸಂಖ್ಯೆಯಲ್ಲಿದ್ದರೆ, ಗ್ರಾಮೀಣ ಭಾಗದವರು 450ರಷ್ಟಿದ್ದಾರೆ ಎಂದು ಅಂಕಿ ಅಂಶ ನೀಡುವ ಧರಣಿದೇವಿ, ಆರ್ಥಿಕ ದುರ್ಬಲರೇ ಅನಿವಾರ್ಯವಾಗಿ ಈ ಹುದ್ದೆಗೆ ಸೇರುತ್ತಾರೆ. ನಮ್ಮಲ್ಲಿ ತರಬೇತಿ ಪಡೆದ ನಂತರ ದೈಹಿಕವಾಗಿ ಗಟ್ಟಿಯಾಗುತ್ತಾರೆ. ನಾವು ಅವರನ್ನು ಮಾನಸಿಕವಾಗಿಯೂ ಗಟ್ಟಿಗೊಳಿಸುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.

**

ಧಾರವಾಡದಲ್ಲೂ ತರಬೇತಿ

ಮೈಸೂರಿನಲ್ಲಿ ಮಾತ್ರ ಮಹಿಳಾ ಪೊಲೀಸ್‌ ತರಬೇತಿ ಶಾಲೆ ಇರುವುದು. ಧಾರವಾಡದ ಸಾಧನಕೇರಿಯ ಎಸ್‌.ಪಿ ಕಚೇರಿ ಹಿಂಭಾಗದಲ್ಲಿ ಪೊಲೀಸ್‌ ತರಬೇತಿ ಶಾಲೆಯಿದೆ. ಆದರೆ, ಇಲ್ಲಿ ಪುರುಷರಿಗೂ ತರಬೇತಿ ನೀಡಲಾಗುತ್ತಿದೆ. ಇದು ತತ್ಕಾಲಿಕ ತರಬೇತಿ ಶಾಲೆ. ಅಂದರೆ ಪೂರ್ಣಾವಧಿಯದು ಅಲ್ಲ. ಇಲ್ಲಿ ಇದುವರೆಗೆ 20 ಬ್ಯಾಚುಗಳಲ್ಲಿ 2,486 ಮಹಿಳಾ ಕಾನ್‌ಸ್ಟೆಬಲ್‌ಗಳು ತರಬೇತಿ ಪಡೆದಿದ್ದಾರೆ ಎನ್ನುತ್ತಾರೆ ಈ ಶಾಲೆಯ ಪ್ರಾಚಾರ್ಯರೂ ಆದ ಧಾರವಾಡದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !