ಮಹಿಳೆಯರೇ, ನಿಮ್ಮ ಆರೋಗ್ಯ ನಿಮ್ಮದೇ ಕೈಯ್ಯಲ್ಲಿ...

ಗುರುವಾರ , ಮೇ 23, 2019
27 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಮಹಿಳೆಯರೇ, ನಿಮ್ಮ ಆರೋಗ್ಯ ನಿಮ್ಮದೇ ಕೈಯ್ಯಲ್ಲಿ...

Published:
Updated:
Prajavani

ವೇದಾಳ ಗಂಡನಿಗೆ ವಿಪರೀತ ಜ್ವರ. ಪತಿಯ ವೇದನೆ ತಾಳಲಾರದೆ ವೇದಾ ಕಚೇರಿಗೆ ರಜೆ ಹಾಕಿ ವೈದ್ಯರಲ್ಲಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು. ಅದಾಗಿ ಎರಡೇ ದಿನಕ್ಕೆ ಮಗನಿಗೆ ಹರಡಿತ್ತು ಜ್ವರದ ವೈರಸ್‌. ಈಗಲೂ ವೇದಾಳಿಗೆ ಮಗುವಿನ ಆರೈಕೆಯ ಜವಾಬ್ದಾರಿ. ಇಬ್ಬರೂ ಚೇತರಿಸಿಕೊಂಡು ಕೆಲಸ, ಶಾಲೆ ಎಂದು ಮರಳಿ ಹೋದ ಕೆಲದಿನಗಳಲ್ಲೇ ಬೆಂಬಿಡದ ಸೋಂಕು ವೇದಾಳನ್ನೂ ಬಿಡಲಿಲ್ಲ. ಆದರೆ ಮತ್ತೆ ವೇದಾ ರಜೆ ಹಾಕುವಂತಿರಲಿಲ್ಲ. ತನ್ನ ಆರೋಗ್ಯವನ್ನೂ ಲೆಕ್ಕಿಸದೆ ಜ್ವರದಲ್ಲೇ ಕಚೇರಿಗೆ ಹೋಗಿ ಬರಬೇಕಾದ ಅನಿವಾರ್ಯತೆ ಒದಗಿಬಂದಿತ್ತು.

ಇದು ವೇದಾ ಒಬ್ಬಳ ಸಮಸ್ಯೆಯಲ್ಲ. ಸಾಮಾನ್ಯವಾಗಿ ಮನೆಯಲ್ಲಿ ಪತಿ, ಮಕ್ಕಳು, ಮಾವ ಯಾರದೇ ಆರೋಗ್ಯ ಹದಗೆಟ್ಟರೂ ಹೆಗಲುಕೊಟ್ಟು ನಿಂತು ಆರೋಗ್ಯ ಪಾಲನೆ ಮಾಡುವವಳು ಮಹಿಳೆಯೇ. ಆದರೆ ಆಕೆಯ ಆರೋಗ್ಯವನ್ನು ಕಾಳಜಿ ಮಾಡುವವರೇ ಇಲ್ಲದಂತಾಗಿರುವುದು ವಿಪರ್ಯಾಸ.

ಕುಟುಂಬದಲ್ಲಿ ಯಾರಿಗೇ ಅನಾರೋಗ್ಯ ಉಂಟಾದರೂ ಅವರ ಬಗ್ಗೆ ಮೊದಲು ಕಾಳಜಿ ವಹಿಸುವವಳು ಹೆಣ್ಣೇ. ಹೀಗೆ ಶಕ್ತಿಕೇಂದ್ರ, ಶಕ್ತಿ ಸ್ವರೂಪಿಣಿಯಾದ ಹೆಣ್ಣು ತನಗೆ ಅನಾರೋಗ್ಯ ಉಂಟಾದಾಗ ಮಾತ್ರ ಆ ಬಗ್ಗೆ ಹೆಚ್ಚು ಲಕ್ಷ್ಯವಹಿಸುವುದಿಲ್ಲ. ತನ್ನ ಊದುತ್ತಿರುವ ಕಾಲುಗಳು, ಕುಂದುತ್ತಿರುವ ಕಣ್ಣುಗಳು, ಭಾದಿಸುವ ಹೊಟ್ಟೆನೋವು, ತಲೆನೋವು ಇತ್ಯಾದಿಗಳ ಬಗ್ಗೆ ಗಮನವಹಿಸುವುದಿಲ್ಲ. ಸಂಸಾರದ ಜಂಜಾಟ, ಮಕ್ಕಳ ಪರೀಕ್ಷೆ, ಗಂಡ-ಮಕ್ಕಳ ಊಟದ ತಯಾರಿ, ಸಭೆ-ಸಮಾರಂಭ, ಹಬ್ಬ-ಹರಿದಿನಗಳ ಜೊತೆಗೆ ಆಫೀಸ್‌ ಕೆಲಸ, ಇವೆಲ್ಲವೂ ಮೊದಲು, ನಂತರ ತನ್ನ ಸ್ವಂತದ್ದು ಎಂದುಕೊಳ್ಳುತ್ತಾರೆ ಮಹಿಳೆಯರು. ರೋಗಪತ್ತೆಗಾಗಿ ಹಣ ಖರ್ಚು ಮಾಡಲು ಎಷ್ಟೋಬಾರಿ ಹಿಂದೆ-ಮುಂದೆ ನೋಡುತ್ತಾರೆ. ಅದೇ ಗಂಡು ಮಕ್ಕಳಿಗಾದರೆ ಎಷ್ಟು ಖರ್ಚಿಗಾದರೂ ಚಿಂತಿಸುವುದಿಲ್ಲ.

ಶೇ.80ರಷ್ಟಕ್ಕೂ ಹೆಚ್ಚು ಭಾರತೀಯ ಮಹಿಳೆಯಲ್ಲಿರುವ ಈ ಧೋರಣೆಯನ್ನೇ ‘Saint syndrome’ ಅಥವಾ ‘ಸಂತರ ಕಾಯಿಲೆ’ ಎಂದು ಬಣ್ಣಿಸುವುದು. ಕುಟುಂಬದ ಆರೋಗ್ಯ ಕಾಪಾಡಲು ಹೋಗಿ ತಾನೂ ಆರೋಗ್ಯವಾಗಿದ್ದೀನೇ ಎಂದು ಭಾವಿಸುವುದೇ ಈ ಕಾಯಿಲೆ ಲಕ್ಷಣ. ಇದಕ್ಕೆ ಅಕ್ಷರಸ್ಥ ಹಾಗೂ ಉದ್ಯೋಗಸ್ಥ ಮಹಿಳೆಯರೂ ಹೊರತಾಗಿಲ್ಲ. ಹಳ್ಳಿ-ಪಟ್ಟಣವೆಂಬ ವ್ಯತ್ಯಾಸವಿಲ್ಲ. ಕೇವಲ ಬೆರಳೆಣಿಕೆಯಷ್ಟು ಎಚ್ಚರಿಕೆಯುಳ್ಳ ಮಹಿಳೆಯರನ್ನು ಬಿಟ್ಟು ಹೆಚ್ಚಿನ ಮಹಿಳೆಯರಿಗೆ ತಮ್ಮ ಬಾಯೊಳಗೆ ಹೋಗುತ್ತಿರುವುದೇನೆಂದು ತಿಳಿದಿರುವುದಿಲ್ಲ. ಉದ್ಯೋಗಸ್ಥ ಮಹಿಳೆಯರ ಜೀವನವಂತೂ ತಂತಿಯ ಮೇಲಿನ ನಡಿಗೆಯ ಹಾಗಾಗಿದೆ.

ಮೆನಾರ್ಕೆಯಿಂದ ಮೆನೋಪಾಸ್‍ವರೆಗೆ ಸಂತಾನೋತ್ಪತ್ತಿ ವಯಸ್ಸಿನುದ್ದಕ್ಕೂ ಮಹಿಳೆ ಹಾರ್ಮೋನುಗಳ ದಾಸಳಾಗಿಯೇ ಬದುಕಬೇಕಾದದ್ದು ಪ್ರಕೃತಿ ನಿರ್ಮಿಸಿದ ನಿಯಮ. ಹೆಚ್ಚಿನ ಮಹಿಳೆಯರು ಋತುಚಕ್ರದ ಸಮಯದಲ್ಲಿ ಸೊಂಟನೋವು, ಹೊಟ್ಟೆನೋವು, ಇನ್ನಿತರ ದೈಹಿಕ, ಮಾನಸಿಕ ಕಿರಿಕಿರಿಗಳನ್ನು ಅನುಭವಿಸುತ್ತಾರೆ. ಶೇ.40ಕ್ಕೂ ಹೆಚ್ಚು ಮಹಿಳೆಯರಲ್ಲಿ ಒಂದಲ್ಲ ಒಂದು ರೀತಿಯ ಋತುಸ್ರಾವದ ತೊಂದರೆ ಕಂಡುಬರುತ್ತದೆ. ಇದನ್ನೇ ಕ್ಯಾನ್ಸರ್ ಎಂದು ಹೆದರಿ ಹೆಚ್ಚಿನ ಮಹಿಳೆಯರು ಗರ್ಭಕೋಶ ತೆಗೆಸಲು ಮುಂದಾಗುತ್ತಾರೆ. ಏಕೆಂದರೆ ಅವರಿಗೆ ಗರ್ಭಕೋಶ, ಅಂಡಾಶಯಗಳ ಕಾರ್ಯವೈಖರಿ ಚೆನ್ನಾಗಿದ್ದರೆ ಮಾತ್ರ ತಮ್ಮ ಹೃದಯ ಹಾಗೂ ಮೂಳೆಗಳು ಗಟ್ಟಿಯಾಗಿದ್ದು ಮುಂದೆ ಮೂಳೆಮುರಿತ, ಹೃದಯಾಘಾತ ಸಂಭವಗಳು ಕಡಿಮೆ ಎನ್ನುವ ಸತ್ಯ ತಿಳಿದಿಲ್ಲ.

ಸಾಂಕ್ರಾಮಿಕವಲ್ಲದ ಸಾಂಕ್ರಾಮಿಕ ರೋಗವಾದ ಆಧುನಿಕ ಜೀವನಶೈಲಿಯ ಕೊಡುಗೆಯಾದ ಬೊಜ್ಜು ಮಹಿಳೆಯರಲ್ಲೂ ಹೆಚ್ಚುತ್ತಿದ್ದು ಅದರಲ್ಲೂ ಮುಖ್ಯವಾಗಿ ಸೊಂಟದ ಸುತ್ತಲು ಹೆಚ್ಚುತ್ತಿರುವ ಬೊಜ್ಜಿನಿಂದ (ಸೆಂಟ್ರಲ್ ಒಬೆಸಿಟಿ) ಇಂದು ಪಿ.ಸಿ.ಒ.ಡಿ ಸಮಸ್ಯೆ, ಮಧುಮೇಹ, ಹೃದ್ರೋಗ, ಏರುರಕ್ತದೊತ್ತಡ, ಕ್ಯಾನ್ಸರ್‌ನಂತಹ ಸಮಸ್ಯೆಗಳು ಹೆಚ್ಚುತ್ತಿವೆ. ಮೌನ ಕೊಲೆಗಾರನಂತೆ ಮಹಿಳೆಯರಲ್ಲಿ ಬಂದೆರಗುವ ಗರ್ಭಕೊರಳಿನ ಕ್ಯಾನ್ಸರ್‌ನಲ್ಲಂತೂ ಆರಂಭದಲ್ಲಿ ಯಾವುದೇ ಗುಣಲಕ್ಷಣಗಳು ಪತ್ತೆಯಾಗದಿರಬಹುದು. ಹಾಗೆಯೇ ಸ್ತನ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್‌ನಲ್ಲಿಯೂ ಆರಂಭದ ಹಂತದಲ್ಲಿಯೇ ಮಹಿಳೆ ತಪಾಸಣೆಗೊಳಪಡದೆ ಇರುವುದು ಸಾಮಾನ್ಯ.
ಒಮ್ಮೆ ಬಂದರೆ ಜೀವನವಿಡೀ ಕಾಡುವ ಥೈರಾಯಿಡ್ ಸಮಸ್ಯೆ ಪುರುಷರಿಗಿಂತ ಮಹಿಳೆಯರಲ್ಲಿ 8 ಪಟ್ಟು ಹೆಚ್ಚು. 50ಕ್ಕೂ ಮೇಲ್ಪಟ್ಟ ಮಹಿಳೆಯರಲ್ಲಿ ಶೇ.10ಕ್ಕೂ ಹೆಚ್ಚು ಮಹಿಳೆಯರಲ್ಲಿ ಥೈರಾಯಿಡ್ ಸಮಸ್ಯೆ ಇದೆ. ಬೆನ್ನು ನೋವು, ಆರ್ಥರೈಟಿಸ್ (ಸಂದುನೋವು), ಅಸಿಡಿಟಿ, ಅಲ್ಸರ್, ಅಸ್ತಮಾ, ಏಡ್ಸ್ ಇನ್ನಿತರ ಲೈಂಗಿಕ ಸೋಂಕುಗಳು ಮಹಿಳೆಯರನ್ನು ಹೆಚ್ಚಾಗಿ ಬಾಧಿಸುತ್ತಿವೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !