ಬುಧವಾರ, ಸೆಪ್ಟೆಂಬರ್ 23, 2020
20 °C
ಎಲ್‌ಪಿಜಿ ಬೆಲೆ ಏರಿಕೆ; ಯುವ ಕಾಂಗ್ರೆಸ್‌ನಿಂದ ಪ್ರತಿಭಟನೆ

ಪ್ರಧಾನಿ ಮೋದಿ ಭಾವಚಿತ್ರಕ್ಕೆ ಬೆಂಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ವಿಜಯಪುರ: ಎಲ್‌ಪಿಜಿ ಬೆಲೆ ದಿನೇ ದಿನೇ ಗಗನಮುಖಿಯಾಗುತ್ತಿರುವುದನ್ನು ಖಂಡಿಸಿ ವಿಜಯಪುರ ಜಿಲ್ಲಾ ಯುವ ಕಾಂಗ್ರೆಸ್‌ ಸಮಿತಿಯ ಪದಾಧಿಕಾರಿಗಳು ಮಂಗಳವಾರ ನಗರದ ಗಾಂಧಿಚೌಕ್‌ನಲ್ಲಿ ಪ್ರತಿಭಟಿಸಿದರು.

ಗಾಂಧಿಚೌಕ್‌ನಲ್ಲಿ ಜಮಾಯಿಸಿದ ಯುವ ಕಾಂಗ್ರೆಸ್‌ ಕಾರ್ಯಕರ್ತರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಮೊಳಗಿಸಿ, ಪ್ರಧಾನಿ ಮೋದಿಯ ಭಾವಚಿತ್ರಕ್ಕೆ ಬೆಂಕಿ ಹಚ್ಚಿ, ಆಕ್ರೋಶ ವ್ಯಕ್ತಪಡಿಸಿದರು.

ಯುವ ಕಾಂಗ್ರೆಸ್‌ ಅಧ್ಯಕ್ಷ ಅಬ್ದುಲ್‌ ಖಾದರ್‌ ಮಾತನಾಡಿ ‘ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಒಂದು ಎಲ್‌ಪಿಜಿ ಸಿಲಿಂಡರ್‌ ಬೆಲೆ ₹ 1000 ಆಸುಪಾಸಿದೆ. ಬಡವರಿಗೆ ಸಿಲಿಂಡರ್‌ ಖರೀದಿ ಹೊರೆಯಾಗಿದೆ. ಸಬ್ಸಿಡಿಯಲ್ಲಿ ಮೋದಿ ಸರ್ಕಾರ ಭ್ರಷ್ಟಾಚಾರ ಎಸಗುತ್ತಿದೆ’ ಎಂದು ಆರೋಪಿಸಿದರು.

‘ನಾಲ್ಕುವರೆ ವರ್ಷದ ಅವಧಿಯಲ್ಲಿ ಕೇಂದ್ರ ಸರ್ಕಾರ ಬಡವರು, ರೈತರು, ಮಧ್ಯಮ ವರ್ಗದವರ ಹಣವನ್ನು ತಮ್ಮ ಹಿತೈಷಿಗಳಿಗೆ ನೀಡುವಲ್ಲೇ ಮಗ್ನವಾಗಿದೆ. ಒಬ್ಬೊಬ್ಬರನ್ನು ವಿದೇಶಕ್ಕೆ ಕಳುಹಿಸಿಕೊಡುತ್ತಿದೆ’ ಎಂದು ಖಾದರ್‌ ದೂರಿದರು.

ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ ಮಾತನಾಡಿ ‘ಮೋದಿ ದೇಶದ ಜನರಿಗೆ ಯಾವ್ಯಾವ ರೀತಿ ತೊಂದರೆ ನೀಡುತ್ತಿದ್ದಾರೆ ಎಂಬುದು ಆ ದೇವರಿಗೆ ಮಾತ್ರ ಗೊತ್ತು’ ಎಂದು ಕಿಡಿಕಾರಿದರು.

ಜಿಲ್ಲಾ ಕಾಂಗ್ರೆಸ್‌ನ ಉಪಾಧ್ಯಕ್ಷ ಚಾಂದ್‌ಸಾಬ್‌ ಗಡಗಲಾವ, ಗಂಗಾಧರ ಸಂಬಣ್ಣಿ, ವಸಂತ ಹೊನಮಡೆ, ವಿಜಯಪುರ ನಗರ ಯುವ ಕಾಂಗ್ರೆಸ್‌ ಅಧ್ಯಕ್ಷ ಮೊಹಿನ್‌ ಶೇಖ್‌, ಜಿಲ್ಲಾ ಯುವ ಕಾಂಗ್ರೆಸ್‌ ಉಪಾಧ್ಯಕ್ಷ ಲಿಂಬಾಜಿ ರಾಠೋಡ, ಪ್ರಧಾನ ಕಾರ್ಯದರ್ಶಿಗಳಾದ ಮಹ್ಮದ್‌ ಸಾಧಿಕ್‌ ಅರಬ, ಐಜಾಜ್‌ ಕಲಾದಗಿ, ಅನುಪ ಬಬಲೇಶ್ವರ, ಗುರು ದಳವಾಯಿ, ಚೌಕತ ಕೋತವಾಲ, ಫೈರೋಜ್‌ ಬಳಬಟ್ಟಿ, ವಿಜಯ ಚವ್ಹಾಣ, ಕಿಶೋರ ಪಾಟೀಲ, ಹಮೀದ ಅವಟಿ, ಅಶ್ರಫ್‌ ಇಂಡೀಕರ, ಹಾಫೀಜ್‌ ಡಾಲಾಯತ, ಅಯೂಬ್‌ ನದಾಫ, ತಾಜುದ್ಧೀನ್‌ ಖಲಿಫಾ, ಶರಣಪ್ಪ ಯಕ್ಕುಂಡಿ, ರಾಜೇಶ್ವರ ಚೋಳಕೆ, ಅಮಿತ ಚವ್ಹಾಣ, ರಾಜುಗೌಡ ಪೊಲೀಸ್‌ ಪಾಟೀಲ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.