ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಚ್ಚರ ! ಪುಟ್ಟ ಮನಸ್ಸುಗಳು ಗಮನಿಸುತ್ತಿವೆ

Last Updated 8 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಜಗತ್ತಿನಲ್ಲಿ ಎರಡು ವಿಷಯಗಳಿಗೆ ‘ಸರ್ಟಿಫೈಡ್‌ ಕೋರ್ಸ್‌’ಗಳಿಲ್ಲವಂತೆ! ಯಾವುದೆಂದು ಅಚ್ಚರಿ ಪಡುತ್ತಿರುವಿರಾ? ಮದುವೆಯಾಗಲು ಮತ್ತು ಮಕ್ಕಳನ್ನು ಬೆಳೆಸಲು.

ಹೌದು, ಮಕ್ಕಳನ್ನು ಬೆಳೆಸುವ ರೀತಿಗೆ, ಪೋಷಕತ್ವ ಎನ್ನುತ್ತೇವೆ. ಮಕ್ಕಳನ್ನು ಬೆಳೆಸುವ ರೀತಿಯಲ್ಲಿ ಮಾದರಿಯಾದದ್ದು ‘Authoritative Parenting’ ಎಂದು ಮನಃಶಾಸ್ತ್ರದ ಅಧ್ಯಯನಗಳು ಹೇಳುತ್ತವೆ. ಆದರೆ ಪ್ರತಿಯೊಂದು ಮಗುವಿನ ಸ್ವಭಾವದಲ್ಲೂ ವ್ಯತ್ಯಾಸಗಳು ಇರುವುದರಿಂದ, ಆ ಕುಟುಂಬಕ್ಕೆ ತಕ್ಕಂತೆ, ಪರಿಸ್ಥಿತಿಗೆ ಅನುಗುಣವಾಗಿ, ಪೋಷಕರ ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.

ಪೋಷಕರು ಅತಿ ಕಠಿಣವಾಗಿದ್ದರೂ ಸಮಸ್ಯೆಯೇ. ಹಾಗೆಯೇ, ಮಕ್ಕಳು ಕೇಳಿದ್ದನ್ನೆಲ್ಲಾ ಕೊಡಿಸಿ, ಹೇಳಿದ್ದನ್ನೆಲ್ಲಾ ಕೇಳಿದರೆ ಕೂಡ ತೊಂದರೆಯೇ. ಅದೇ ಇನ್ನೊಂದು ಬದಿಯಲ್ಲಿ, ಮಗುವಿನ ಕಡೆ ನಿರ್ಲಕ್ಷ್ಯ ಮಾಡುವುದು; ಹೊಡೆಯುವುದು ಮುಂತಾದವುಗಳನ್ನು ಮಾಡಿದರೆ ಮತ್ತಷ್ಟು ಸಮಸ್ಯೆಗಳಿಗೆ ಎಡ ಮಾಡುತ್ತದೆ. ಮಾದರಿ ಪೋಷಕರಾಗಲು ನಾವೇನೂ ದೇವಮಾನವರಲ್ಲ, ಮಾದರಿ ವ್ಯಕ್ತಿಗಳಲ್ಲ. ಮೇಲೆ ಹೇಳಿದಂತೆ ಯಾವ ಹೊಸ ತಂದೆ-ತಾಯಿಗೂ ಮೊದಲೇ ಇದರ ಬಗ್ಗೆ ಪೂರ್ವಾನುಭವವಿರುವುದಿಲ್ಲ. ಪ್ರಸಿದ್ಧ ಸುಭಾಷಿತವೊಂದು ಹೀಗೆ ಹೇಳುತ್ತದೆ:‘ಲಾಲಯೇತ್ ಪಂಚವರ್ಷಾಣಿ, ದಶ ವರ್ಷಾಣಿ ತಾಡಯೇತ್, ಪ್ರಾಪ್ತೇತು ಷೋಡಶೇ ವರ್ಷೇ ಪುತ್ರಂ ಮಿತ್ರಂವದಾಚರೇತ್'’. ‘ಐದು ವರ್ಷಗಳ ತನಕ ಮಕ್ಕಳನ್ನು ಮುದ್ದು ಮಾಡಬೇಕು, ಹತ್ತು ವರ್ಷಗಳಾಗುವ ತನಕ ಶಿಕ್ಷೆಯ ಮೂಲಕ ಕಲಿಸಬೇಕು, ಹದಿನಾರು ವರ್ಷಗಳಾಗುತ್ತಿದ್ದಂತೆಯೇ ಮಗುವನ್ನು ಸ್ನೇಹಿತನಂತೆ ನೋಡಬೇಕು.’ ಸ್ಪರ್ಧಾತ್ಮಕ ಜಗತ್ತು, ತಂತ್ರಜ್ಞಾನ ಹಾಸುಹೊಕ್ಕಾಗಿರುವ ನಮ್ಮ ಜೀವನ ಮತ್ತು ಮನಃಶಾಸ್ತ್ರದ ತಿಳಿವಳಿಕೆ – ಇವುಗಳಿಂದ ನಾವು ಮಕ್ಕಳನ್ನು ಬೆಳೆಸುವ ರೀತಿಯನ್ನು ಬದಲಾಯಿಸಿಕೊಳ್ಳಲೇಬೇಕಾದ ಪರಿಸ್ಥಿತಿ ಬಂದೊದಗಿದೆ.

ನಮ್ಮ ದೇಶದದಲ್ಲಿ ತಂದೆ/ತಾಯಿ, ಮಕ್ಕಳು ಕಡೇ ಪಕ್ಷ 18 ವರ್ಷಗಳಾಗುವ ತನಕ ಒಂದೇ ಮನೆಯಲ್ಲಿ ಇರುವುದೇ ಹೆಚ್ಚು. ಪೋಷಕತ್ವದ ಮುಖ್ಯ ಆಯಾಮ ಪೋಷಕರನ್ನು ನೋಡಿ, ಅವರ ಆಚಾರ-ವಿಚಾರಗಳನ್ನು ಗಮನಿಸಿ ಮಕ್ಕಳು ಮೈರೂಢಿಸಿಕೊಳ್ಳುವ ಮೌಲ್ಯಗಳು. ಆದುದರಿಂದ, ನಮ್ಮ ಆಚಾರ-ವಿಚಾರಗಳ ಬಗ್ಗೆ ನಾವು ಯಾವಾಗಲೂ ಎಚ್ಚರದಿಂದಿರಬೇಕು. ಸುಮಾರು 2-3 ವರ್ಷಗಳಷ್ಟು ಪುಟ್ಟ ಮಗುವೂ ತಂದೆ-ತಾಯಿಯ ವರ್ತನೆ, ಮಾತನಾಡುವ ರೀತಿಯನ್ನು ಅನುಕರಣೆ ಮಾಡುತ್ತದೆ. ನಿಧಾನವಾಗಿ ಆ ಅಭ್ಯಾಸಗಳನ್ನು ತನ್ನದಾಗಿ ಮಾಡಿಕೊಳ್ಳುತ್ತದೆ. ಇದಕ್ಕೆ ‘Modelling’ ಎಂದು ಕರೆಯುತ್ತೇವೆ.

ವರ್ತನೆಯಲ್ಲಿ ಕಿರಿಕಿರಿ: ಯಾವಾಗಲೂ ಮನಸ್ಸು ಸಿಟ್ಟಿನಲ್ಲಿರುವುದು, ಸಿಡಿಮಿಡಿ ಎನ್ನುವುದು, ಬೈಯುವಾಗ ಕೆಟ್ಟ ಶಬ್ದಗಳನ್ನು ಉಪಯೋಗಿಸುವುದು, ದೈಹಿಕ ದೌರ್ಜನ್ಯ ನಡೆಸುವುದು.

ಸಂಶಯದ ಸ್ವಭಾವ: ಎಲ್ಲ ವ್ಯಕ್ತಿಗಳನ್ನು ಅನುಮಾನದಿಂದ ನೋಡುವುದು, ಬೇರೆಯವರ ವರ್ತನೆ ಬಗ್ಗೆ, ಉದ್ದೇಶದ ಬಗ್ಗೆ ಸಂಶಯ ವ್ಯಕ್ತಪಡಿಸುವುದು. ಯಾರಲ್ಲಿಯೂ ನಂಬಿಕೆ ಇಡದಿರುವುದು.

ಅಶಿಸ್ತು: ಮನೆಯನ್ನು, ನಮ್ಮ ವಸ್ತುಗಳನ್ನು ಸ್ವಚ್ಛವಾಗಿಡದೇ ಇರುವುದು, ಸುತ್ತಮುತ್ತ ಹರಡಿಕೊಂಡಿರುವುದು; ವೈಯಕ್ತಿಕ ಶುಚಿತ್ವವನ್ನು ಕಾಪಾಡಿಕೊಳ್ಳದಿರುವುದು.

ಹತಾಶೆ: ಯಾವಾಗಲೂ ಹತಾಶೆಯ ಭಾವನೆಯಲ್ಲಿ ಮಂಕಾಗಿರುವುದು. ಭವಿಷ್ಯದ ಬಗ್ಗೆ ನಿರಾಶಾದಾಯಕವಾಗಿ ಯೋಚಿಸುವುದು.

ನಿರ್ಲಕ್ಷ್ಯ: ಕುಟುಂಬದವರ ಬಗ್ಗೆ ಕಾಳಜಿ ವ್ಯಕ್ತಪಡಿಸದೇ ಇರುವುದು, ಮನೆಯಲ್ಲಿರುವ ವೃದ್ಧರಿಗೆ ಗೌರವ ಕೊಡದೇ ಹೀನಾಯವಾಗಿ ನೋಡುವುದು.

ಮೇಲೆ ಹೇಳಿದ ಆಚಾರ-ವಿಚಾರಗಳು ನಕಾರಾತ್ಮಕವಾದದ್ದಾದರೆ ನಮ್ಮ ಕೆಲವು ಸಕಾರಾತ್ಮಕ ನಡತೆಗಳೂ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರಿ, ಅವರು ಮುಂದಿನ ಜೀವನದಲ್ಲಿ ಕರಗತ ಮಾಡಿಕೊಂಡು ಒಳ್ಳೆಯದಾಗುತ್ತದೆ.

ಸಮಯಪಾಲನೆ: ಸಮಯದ ಮಿತಿ ಬಗ್ಗೆ ತಿಳಿದಿರುವುದು, ಕಾರ್ಯಕ್ರಮಗಳಿಗೆ ಸರಿಯಾದ ಸಮಯಕ್ಕೆ ಹೋಗುವುದು, ತಡವಾದಾಗ ಒಂದು ಮಾತು ಮುಂಚಿತವಾಗಿ ತಿಳಿಸುವುದು.

ಉದಾರತೆ: ಮನಸ್ಸು ಉದಾರವಾಗಿದ್ದರೆ, ನಮ್ಮ ವರ್ತನೆಯಲ್ಲೂ ಅದನ್ನು ಕಾಣಬಹುದು. ಇತರರಿಗೆ ಸಹಾಯ ಮಾಡಲು, ನಾವೇನೂ ಶ್ರೀಮಂತರಾಗಿರಬೇಕೆಂದಿಲ್ಲ. ಇರುವುದರಲ್ಲೇ ಅಗತ್ಯವಿರುವವರಿಗೆ ಸಹಾಯ ಮಾಡಬಹುದು. ಆಹಾರ, ಬಟ್ಟೆ, ಹಣ ಇತ್ಯಾದಿ ಯಾವುದರ ಮೂಲಕವಾದರೂ ಸಾಧ್ಯವಿದೆ.

ಪ್ರಸನ್ನವಾಗಿರುವುದು: ಬೆಳಿಗ್ಗೆ ಏಳುವಾಗ ನಗುತ್ತಾ ‘ಶುಭಮುಂಜಾನೆ’ ಹೇಳಿ ಏಳುವುದು, ಸಮಾಧಾನಿಯಾಗಿ ಸಂತಸದಿಂದ ದಿನನಿತ್ಯದ ಕೆಲಸಗಳನ್ನು ಮಾಡುವುದು, ಅತಿಯಾದ ಒತ್ತಡ ತೆಗೆದುಕೊಳ್ಳದೇ ಜವಾಬ್ದಾರಿಗಳನ್ನು ನಿರ್ವಹಿಸುವುದು.

ಕ್ಷಮಿಸುವುದು: ಸಂಸಾರದಲ್ಲಿ ಮಾತುಗಳು ಬರುತ್ತವೆ, ಜಗಳಗಳು ಆಗುತ್ತವೆ, ಸಂಬಂಧಿಕರ ಜೊತೆ ಮನಸ್ತಾಪಗಳಿರುತ್ತವೆ. ಆದರೆ ಯಾರೊಂದಿಗೂ ದೀರ್ಘ ಕಾಲದ ಹಗೆಯನ್ನು ಸಾಧಿಸದೇ ರಾಜಿ ಮಾಡಿಕೊಂಡು ನಾವೇ ಕ್ಷಮಾಪಣೆ ಕೇಳಿಯೋ ಅಥವಾ ನಾವೇ ಅವರನ್ನು ದೊಡ್ಡ ಮನಸ್ಸಿನಿಂದ ಕ್ಷಮಿಸಿಯೋ, ಇತ್ಯರ್ಥ ಮಾಡಿಕೊಳ್ಳುವುದು.

ನೆನಪಿಡಿ! ಆ ಪುಟ್ಟ ಕಣ್ಣುಗಳು ನಿಮ್ಮನ್ನೇ ನೋಡುತ್ತಿರುತ್ತವೆ. ಆ ಪುಟ್ಟ ಕೈಗಳು ನೀವು ಮಾಡುವ ಕೆಲಸವನ್ನೇ ಮಾಡಲಿಚ್ಛಿಸುತ್ತವೆ. ಆ ಪುಟ್ಟ ಮನಸ್ಸು, ತನ್ನ ಅಪ್ಪ ಮತ್ತು ಅಮ್ಮನನ್ನೇ ‘ಜಗತ್ತು’ ಎಂದು ನಂಬಿರುತ್ತದೆ. ಈ ಜಗತ್ತಿನಲ್ಲಿ ನಡೆಯುವ ಆಟವೇ ಆ ಪುಟ್ಟ ಮನಸ್ಸಿಗೆ ಪಾಠವಾಗಿರುತ್ತದೆ. ಪಾಠವನ್ನೇ ಸರಿಯಾಗಿ ಕಲಿಸದೇ ಮಕ್ಕಳು ದಾರಿ ತಪ್ಪಿದರೆ? ಈ ಜಗತ್ತನ್ನೇ ದೂಷಿಸಬೇಕಷ್ಟೇ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT