ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೋಲಿಕೆ... ಮಾಡೀರಿ ಜೋಕೆ

ಹೋಲಿಕೆ... ಹೋಲ್ಡ್ ಆನ್!
Last Updated 9 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಪತ್ನಿಯನ್ನು ಪರಸ್ತ್ರೀಯೊಂದಿಗೆ ಹೋಲಿಸಿ, ಮೂದಲಿಸುವುದು ಮಾನಸಿಕ ಕ್ರೌರ್ಯಕ್ಕೆ ಸಮ ಎಂದು ಈಚೆಗೆ ಕೇರಳ ಹೈಕೋರ್ಟ್‌ ಹೇಳಿದೆ. ಹೋಲಿಕೆ ಮೂದಲಿಕೆಯಾಗದಂತೆ ಪತಿ–ಪತ್ನಿಯರು ಪರಸ್ಪರ ಎಚ್ಚರ ವಹಿಸುವುದು ಅಗತ್ಯ.

ಘಟನೆ–1

ಧೂಮ್ ಮಚಾಲೆ... ಧೂಮ್ ಮಚಾಲೆ... ಧೂಮ್...

ಹಾಡಿಗೆ ಹೆಜ್ಜೆ ಹಾಕುತ್ತಿರುವವಳ ಮೂರಿಂಚಿನ ಹೊಳೆವ ಸೊಂಟವನ್ನು ತದೇಕಚಿತ್ತ ದಿಟ್ಟಿಸುತ್ತಿದ್ದವ, ‘ಏನ್ ಫಿಗರ್‍ರ್ ಅವಳದು... ನೀನೂ ಇದ್ದೀಯ... ನೀರು ತುಂಬಿದ ಡ್ರಮ್ಮಿಗೆ ನೈಟಿ ತೊಡಿಸಿದ ಹಾಗೆ...’ ಅಂತನ್ನುತ್ತಾನೆ. ಒಂದು ಮಾತು, ಒಂದೇ ಕ್ಷಣದಲ್ಲಿ ತನ್ನ ಅಸ್ತಿತ್ವವನ್ನು ತಾನೇ ಪ್ರಶ್ನಿಸಿಕೊಳ್ಳುವಂತೆ ಮಾಡಿಬಿಟ್ಟಿತ್ತು.

ಘಟನೆ–2

‘ರೀ ಇವತ್ತು ಕಾನ್ಪರನ್ಸ್ ಇದೆ. ನಾ ಬೇಗ ಹೋಗಬೇಕು’ ಅಂದವಳ ಮಾತಿಗೆ ಗಹಗಹಿಸಿ ನಗುತ್ತಾನೆ. ‘ಇಂಗ್ಲಿಷ್ ಮೇಷ್ಟ್ರ ಮಗಳಾಗಿ ಕಾನ್ಫರೆನ್ಸ್ ಅನ್ನೋಕೂ ಬರಲ್ಲವಲ್ಲ...’ ಮತ್ತೊಂದು ಅವಮಾನದ ಪ್ರಸಂಗ. ಅವನಿಗಿಂತ ಮೇಲಿನ ಹುದ್ದೆಯಲ್ಲಿರುವ, ಹೆಚ್ಚು ಸಂಬಳ ತರುವ ಅವಳು, ‘ಅಬ್ಬಾ! ಗಂಡಸೆ ನನ್ನದೊಂದು ತಪ್ಪಿಗಾಗಿ ನೀನೂ ಕಾಯುತ್ತಿರುತ್ತಿಯಲ್ಲ!’ ಅಂದುಕೊಂಡು ಸುಮ್ಮನಾಗುತ್ತಾಳೆ.

ಘಟನೆ–3

‘ನೀನು ನಿಜಕ್ಕೂ ಪುಣ್ಯವತಿ ಕಣೆ, ನಿನ್ನಪ್ಪ ಸರಿಯಾಗಿ ಹೆಸರಿಟ್ಟಿದ್ದಾನೆ... ರಾಣಿ ಥರಾ ಮೂರು ಹೊತ್ತೂ ಮನೆಯಲ್ಲಿ ಕೂತು ತಿಂದು ಹೇಗಾಗಿದ್ದೀಯ ನೋಡು... ನಿನ್ನ ತಂಗಿ ಮನೆ ಹೊರಗೂ–ಮನೆ ಒಳಗೂ ದುಡಿದರೂ ಹ್ಯಾಗೆ ಮೈಮಾಟ ಕಾಪಾಡಿಕೊಂಡಿದ್ದಾಳೆ! ಲವ್ಲಿ ಯು ನೋ?’ ಅಂದ ಅವನ ಮಾತಿಗೆ ಬೆಪ್ಪಾಗುತ್ತಾಳೆ ಇವಳು.

ಇವೆಲ್ಲ ಯಾವತ್ತೊ ಒಂದು ಬಾರಿ ಬಂದು ಹೋಗುವ ಮಾತುಗಳಲ್ಲ. ಅವಳನ್ನು ನೋಯಿಸಬೇಕು, ಹಿಂಸಿಸಬೇಕು ಎನ್ನುವ ಉದ್ದೇಶವೂ ಇರುವುದಿಲ್ಲ. ಆದರೆ, ಮತ್ತೆ–ಮತ್ತೆ ಮರುಕಳಿಸುತ್ತಲೇ ಇರುತ್ತವೆ! ಅವಳ ಸೌಂದರ್ಯ, ಸಾಮರ್ಥ್ಯ, ಸಹನಶೀಲತೆಯನ್ನು ಕೆಣಕುತ್ತಿರುತ್ತವೆ. ಒಂದು ಗಾಯ ಆರುವುದರೊಳಗೆ ಮತ್ತೊಂದು ಬಾಣ ಅದೇ ಗಾಯವನ್ನು ಸೋಕಿ ಹೋಗುತ್ತಲೇ ಇರುತ್ತದೆ.

ಇಂಥವನ್ನೆಲ್ಲಾ ಬಗೆಹರಿಸುವ ಬಗೆ ಒಬ್ಬೊಬ್ಬರದೂ ಒಂದೊಂದು ಥರ. ಕೆಲ ಮಹಿಳೆಯರು ಸರಿಯಾದ ತಿರುಗೇಟು ನೀಡಿಯೊ, ತಾವೂ ಅವರೊಂದಿಗೆ ನಕ್ಕೊ ಸುಮ್ಮನಾಗುತ್ತಾರೆ. ಇನ್ನೂ ಕೆಲವರು ಅಣಕಿಸಿದ ಒಂದು ಮಾತನ್ನೇ ಮನಸ್ಸಿನಾಳಕ್ಕೆ ಇಳಿಸಿಕೊಂಡು ಒಳಗೊಳಗೇ ಅಧೀರರಾಗಬಹುದು. ಇಂತಹ ಮಾತುಗಳು ಕೌಟುಂಬಿಕ ಶಾಂತಿಯನ್ನು ಕದಡಿದ, ಮನೋವ್ಯಾಕುಲಕ್ಕೆ ಕಾರಣವಾದ, ಸಂಸಾರಸೂತ್ರವನ್ನೇ ಸಡಿಲಗೊಳಿಸಿದ ಉದಾಹರಣೆಗಳೂ ಉಂಟು.

ಇಂಥ ಹೋಲಿಕೆಗಳು,ಮೂದಲಿಕೆಗಳು, ಅವಮಾನ, ಅಪಹಾಸ್ಯ, ತಿರಸ್ಕಾರಗಳು ಮಾನಸಿಕ ಕ್ರೌರ್ಯಕ್ಕೆ ಸಮಾನ ಎಂದು ಇತ್ತೀಚೆಗಷ್ಟೇ ಕೇರಳ ಹೈಕೋರ್ಟ್‌ ಒತ್ತಿ ಹೇಳಿರುವುದೂ ಇದೇ ಹಿನ್ನೆಲೆಯಲ್ಲಿ. ಪತ್ನಿಯನ್ನು ಬೇರೆ ಮಹಿಳೆಯರಿಗೆ ಹೋಲಿಸುವುದು, ಮೂದಲಿಸುವುದು ಸಹ ಮಾನಸಿಕ ಕ್ರೌರ್ಯ ಎಂದು ಅದು ಎಚ್ಚರಿಸಿದೆ.

ಬೇಡ ಈ ಹೋಲಿಕೆ...

ಹೆಂಡತಿಯನ್ನು ಯಾವುದೋ ಸಿನಿಮಾ ನಾಯಕಿಗೆ ಹೋಲಿಸುವುದು ಅಥವಾ ಅವರ ಮುಂದೆ ಇವರ ದೈಹಿಕ–ಆಂಗಿಕ ರಚನೆಯನ್ನು ಪ್ರಶ್ನಿಸುವುದು ಮೇಲ್ನೋಟಕ್ಕೆ ಕಾಣುವಷ್ಟು ಸಣ್ಣ ವಿಚಾರವಲ್ಲ. ಇಂತಹ ಹೋಲಿಕೆಯನ್ನು ಅವಳು ಹೇಗೆ ಸ್ವೀಕರಿಸುತ್ತಾಳೆ, ಹೇಗೆ ಪ್ರತಿಕ್ರಿಯಿಸುತ್ತಾಳೆ ಎನ್ನುವುದು ಮುಖ್ಯವಾಗುತ್ತದೆ. ಅವನ ಮಾತಿಗೆ ಅವಳು ನಕ್ಕರೆ ಅದು ಸಣ್ಣ ವಿಚಾರ, ಅವಳಿಗದು ನೋವನ್ನುಂಟು ಮಾಡಿದರೆ ಅದು ಗಂಭೀರ ವಿಚಾರ. ಹಾಗೆಯೇ, ಆಡುವವರ ಮಾತಿನ ಆಳ, ಉದ್ದೇಶ ಹಾಗೂ ಪರಿಸ್ಥಿತಿಯ ಮೇಲೂ ಈ ಮಾತಿನ ಅರ್ಥ ಬದಲಾಗುತ್ತ ಹೋಗುತ್ತದೆ.

ಪತ್ನಿ ದಪ್ಪಗಿದ್ದಾಳಾ, ಕಪ್ಪಗಿದ್ದಾಳಾ, ಕುಳ್ಳಗಿದ್ದಾಳಾ… ಅವಳು ಹೇಗೇ ಇದ್ದರೂ ನೀವು ಅವಳನ್ನು ಮೆಚ್ಚಿದ್ದೀರಿ. ನೀವು ಮೆಚ್ಚಿದ್ದಕ್ಕಾಗಿಯೇ ಅವಳು ನಿಮ್ಮ ಮನೆ–ಮನ ಸೇರಿದ್ದಾಳೆ. ಮದುವೆ, ಗರ್ಭಧಾರಣೆ, ಹೆರಿಗೆ, ಬಾಣಂತನದಂತಹ ಪರಿಸ್ಥಿತಿಗಳಲ್ಲಿ ಹೆಣ್ಣಿನ ದೇಹದಲ್ಲಿ ಕ್ಷಿಪ್ರ ಬದಲಾವಣೆಯಾವುದು ಸಾಮಾನ್ಯ. ಅವಳುಮೊದಲಿನಂತೆಯೇ ಅಂಗಸೌಷ್ಠವವನ್ನು ಕಾಪಾಡಿಕೊಂಡಿರಬೇಕೆಂದು ಬಯಸುವುದು ಮೂರ್ಖತನ. ಹೆಂಡತಿ ಎನ್ನುವುದೊಂದು ‘ಆಬ್ಜೆಕ್ಟ್’ ಅಲ್ಲ, ಅವಳು ಮನುಷ್ಯಳು, ರಾಗ–ದ್ವೇಷ, ಸಿಟ್ಟು–ಸೆಡವುಗಳೊಂದಿಗೆ ಅಖಂಡ ಪ್ರೇಮವನ್ನೂ ಹೊಂದಿರುವ ‘ವ್ಯಕ್ತಿತ್ವ’ ಎನ್ನುವುದನ್ನು ಅರ್ಥ ಮಾಡಿಕೊಳ್ಳಲೇಬೇಕು.

ಲಘುಮಾತಿಗೆ ಜಾಗವಿರಲಿ

ದಿನಬೆಳಗಾದರೆ ಇಂತಹ ಮಾತುಗಳನ್ನು ಕಾರಣವಾಗಿಟ್ಟು ಕೊಂಡು ಕಾದಾಡಲು ಆಗದು. ಈ ಮಾತುಗಳನ್ನೇ ಆಧಾರವಾಗಿಟ್ಟುಕೊಂಡು ಕೋರ್ಟ್‌ ಮೆಟ್ಟಿಲು ಹತ್ತಿದರೆ ಕುಟುಂಬಗಳು ಉಳಿಯಲಾರವು. ದಾಂಪತ್ಯಕ್ಕೆ ಒಂದು ಸೊಗಸಾದ–ಸ್ನೇಹಮಯ ಮಣೆ ಹಾಕಿದರೆ ಈ ಸಮಸ್ಯೆ ಬಾರದು. ಹಾಸ್ಯವನ್ನು ಹೇಗೆ ಗ್ರಹಿಸಬೇಕು, ಮನಸ್ಸಿಗೊಪ್ಪದ ಹಾಸ್ಯವನ್ನು ಹೇಗೆ ತಡೆಯಬೇಕು, ಎಲ್ಲಿ ಬ್ರೇಕ್‌ ಹಾಕಬೇಕು ಎನ್ನುವುದನ್ನು ಪತಿಪತ್ನಿ ತಿಳಿದುಕೊಳ್ಳಬೇಕು.

‘ಮದುವೆ ಅಥವಾ ದಾಂಪತ್ಯ ಎನ್ನುವುದು ಒಂದು ಸಹಬಾಳ್ವೆಯ ಪಯಣ! ಈ ಸಂಬಂಧ ಮಧುರವಾಗಿ ಬೆಸೆಯಲು ಸಮಯವೂ ಬೇಕು, ಸಂಯಮವೂ ಬೇಕು’ ಎನ್ನುತ್ತಾರೆಮನೋವೈದ್ಯೆ ಡಾ. ಅರುಣಾ ಯಡಿಯಾಳ್.

‘ಅಹಂ ಈ ಅನುಬಂಧಕ್ಕೆ ಅಡ್ಡ ಬರದಂತೆ ಎಚ್ಚರಿಕೆ ವಹಿಸಬೇಕು. ಪ್ರತಿಮಾತು, ಪ್ರತಿ ನಡವಳಿಕೆಯನ್ನು ತೀರ ಗಂಭೀರವಾಗಿ ಪರಿಗಣಿಸದೇ ಹಗುರವಾಗಿ ತೆಗೆದು
ಕೊಳ್ಳಲು ಪ್ರಯತ್ನಿಸಬೇಕು. ಒಂದಿಷ್ಟು ಹಾಸ್ಯ ಪ್ರವೃತ್ತಿ ಬೆಳೆಸಿ
ಕೊಂಡರೆ, ಸದಾ ಕಾಲ ಇತರರನ್ನು ಪ್ರೀತಿ–ಗೌರವದಿಂದ ನಡೆಸಿಕೊಂಡರೆ, ಸಂಭಾಷಣೆಗಳನ್ನು ಪ್ರಾಮಾಣಿಕವಾಗಿ ಹಾಗೂ ಮುಕ್ತವಾಗಿಟ್ಟಕೊಂಡರೆ, ಅನಗತ್ಯ ಹೊಯ್ದಾಟಕ್ಕೆ ಆಸ್ಪದ ನೀಡದಂತೆ ಮನಸ್ಸನ್ನು ಶಾಂತವಾಗಿಟ್ಟುಕೊಂಡರೆ ಎಲ್ಲಾ ಸಂಬಂಧಗಳೂ ಗಟ್ಟಿಯಾಗಿ ಬೇರೂರಿ, ನಳನಳಿಸುತ್ತವೆ.ಹಾಗೆಯೇ, ದಾಂಪತ್ಯದಲ್ಲಿ ಪ್ರೀತಿ ಜೊತೆ ಒಂದಿಷ್ಟು ಖಾಸಾಗೀತನಕ್ಕೂ ಜಾಗವಿರಬೇಕು. ಒಬ್ಬರಿಗೊಬ್ಬರು ಈ ಸ್ಪೇಸ್‌ ನೀಡುವ ಔದಾರ್ಯವೂ ಇರಬೇಕು. ಸದಾ ಒಬ್ಬರಿಗೊಬ್ಬರು ಅಂಟಿಕೊಂಡಿರುವುದೇ ಪ್ರೀತಿಯಲ್ಲ. ಜೊತೆಗಿದ್ದೂ ಸ್ವತಂತ್ರವಾಗಿರುವುದು ಬಹಳ ಮುಖ್ಯ’ಎನ್ನುತ್ತಾರೆ ಅವರು.

ಇಬ್ಬರದೂ ಜವಾಬ್ದಾರಿ

ಹೋಲಿಕೆ ಮಾಡುವುದು ಮನುಷ್ಯನ ಸಹಜ ಸ್ವಭಾವ. ಆದರೆ, ಆ ಹೋಲಿಕೆ ಯಾರ ಜೊತೆ, ಯಾವ ಸಂದರ್ಭದಲ್ಲಿ ಮತ್ತು ಯಾವ ಉದ್ದೇಶದಿಂದ ಮಾಡಿದ್ದು ಎನ್ನುವುದು ಅದರ ಅರ್ಥವನ್ನು ನಿರ್ಧರಿಸುತ್ತದೆ. ಅದು ಮಾನಸಿಕ ಕಿರುಕುಳವೇ, ದೌರ್ಜನ್ಯವೇ ಅಥವಾ ಹಿಂಸೆಯೇ ಎನ್ನುವುದನ್ನು ನಿರ್ಧರಿಸುವುದು ಬಹಳ ಸೂಕ್ಷ್ಮ ವಿಚಾರ. ಹಿಂಸೆಗೆ, ದೌರ್ಜನ್ಯಕ್ಕೆ ಒಂದು ನಿರ್ದಿಷ್ಟವಾದ ವ್ಯಾಖ್ಯಾನವಿದೆ. ಆದರೆ, ಕಿರುಕುಳ ಎನ್ನುವುದು ವ್ಯಕ್ತಿಯ ಆಗಿನ ಮಾನಸಿಕ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಹಾಗೆಯೇ, ಇದನ್ನು ಏಕಮುಖವಾಗಿ ನಿರ್ಣಯಿಸುವ ಅಗತ್ಯವೂ ಇಲ್ಲ. ಏಕೆಂದರೆ, ಗಂಡನನ್ನು ತನ್ನ ಸಹೋದ್ಯೋಗಿಗೆ, ಅಣ್ಣತಮ್ಮಂದಿರಿಗೆ, ಭಾವ ಮೈದುನರಿಗೆ ಹೋಲಿಸಿ ಮೂದಲಿಸುವ ಹೆಣ್ಣಿನ ನಡೆ ಕೂಡ ದೌರ್ಜನ್ಯವೆ! ಹೋಲಿಕೆ ಅವಮಾನಕ್ಕೆ ನಿಂದನೆಗೆ ತಿರುಗದಂತೆ ಎಚ್ಚರಿಕೆ ವಹಿಸುವುದು ಇಬ್ಬರದೂ ಜವಾಬ್ದಾರಿ.

-ಅಂಜಲಿ ರಾಮಣ್ಣ, ವಕೀಲೆ

***

ಅತೀ ನಿರೀಕ್ಷೆ ಬೇಡ

ಗಂಡ/ಹೆಂಡತಿ ಸದಾ ಕಾಲ ತಮ್ಮನ್ನು ಹೊಗಳುತ್ತಾ, ಐ ಲವ್ ಯೂ ಅನ್ನುತ್ತಾ, ಖುಷಿಯಾಗಿಡಬೇಕು ಎಂಬ ನಿರೀಕ್ಷೆಯೇ ತಪ್ಪು! ನಮ್ಮ ಖುಷಿ, ನಮ್ಮ ಕ್ಷೇಮ ನಮ್ಮದೇ ಜವಾಬ್ದಾರಿ. ನಮ್ಮ ಬದುಕನ್ನು ನಾವು ಪ್ರೀತಿಸುತ್ತ, ನಮ್ಮ ಬಗ್ಗೆ ನಾವು ಗೌರವವನ್ನಿಟ್ಟುಕೊಂಡು ಹಾಯಾಗಿದ್ದರೆ ನಾವೂ ಖುಷಿಯಾಗಿರಬಹುದು, ಇತರರಿಗೂ ಖುಷಿ ಹಂಚಬಹುದು.

-ಡಾ. ಅರುಣಾ ಯಡಿಯಾಳ್, ಮನೋವೈದ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT