ಶನಿವಾರ, ಮಾರ್ಚ್ 6, 2021
20 °C
ಜಿಲ್ಲಾ ಉಸ್ತುವಾರಿ ಸಚಿವರ ಕೆಡಿಪಿ ಸಭೆಯಲ್ಲಿ ನಾಗಠಾಣ ಶಾಸಕ ದೇವಾನಂದ ಚವ್ಹಾಣ ಗರಂ

ಸಾಹೇಬ್ರೇ ನೀವ್ ಬಿಸ್ಲೇರಿ ನೀರ್‌ ಕುಡಿತೀರಿ... ಜನರೇನು ಮಾಡ್ಬೇಕು..?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಸಾಹೇಬ್ರೇ ನೀವ್ಯಾರು ನಮ್‌ ಹಳ್ಳಿಗಳಲ್ಲಿಲ್ಲ. ನೀವ್‌ ಬಿಸ್ಲೇರಿ ನೀರ್‌ ಕುಡ್ಕೊಂಡು ಜೀವ್ನಾ ಮಾಡ್ತೀರಿ. ನಮ್‌ ಜನ ಏನ್‌ ಕುಡಿಬೇಕ್ರೀ...’

‘ಹೊನ್ನಳ್ಳಿಗೆ ಹೋಗೋಣ ನಡ್ರೀ. ಅಲ್ಲಿ ಎಂಥ ಸ್ಥಿತಿಯಿದೆ ಎಂಬುದನ್ನು ನೀವೇ ಒಮ್ಮೆ ಕಣ್ಣಾರೆ ನೋಡ್ರೀ. ಬಹುಹಳ್ಳಿ ಗ್ರಾಮ ಕುಡಿಯುವ ನೀರಿನ ಯೋಜನೆ ಇಂದಿಗೂ ಪೂರ್ಣಗೊಂಡಿಲ್ಲ. ಯೋಜನೆ ಹೆಸರಲ್ಲಿ ಹಣ ಬಿಡುಗಡೆಯಾಗಿದೆ. ಆದ್ರೇ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ...’

‘ಯಾಡ್‌ ದಿನಕ್ಕೊಮ್ಮೆ ಮೋಟರ್ ಸುಡುತ್ತೆ. ಪೈಪ್‌ಲೈನ್‌ನಲ್ಲಿ ಲೀಕೇಜ್‌ ಇದೆ. ಆಳಕ್ಕೆ ಪೈಪ್‌ ಹೂತಿಲ್ಲ. ಇದೊಂದು ವಿಫಲ ಯೋಜನೆ. ಅಕ್ರಮ, ಭ್ರಷ್ಟಾಚಾರ ನಡೆದಿದೆ. ಉನ್ನತ ಮಟ್ಟದ ಸಮಿತಿ ರಚಿಸಿ, ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಿ...’

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಮ್ಮದೇ ಪಕ್ಷದ ಹಿರಿಯ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಅವರನ್ನು ನಾಗಠಾಣ ಶಾಸಕ ದೇವಾನಂದ ಚವ್ಹಾಣ ಆಗ್ರಹಿಸಿದ ಪರಿಯಿದು.

‘ತಿಡಗುಂದಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕುಡಿಯಲು ಒಂದ್ ಚೆರಿಗೆ ನೀರು ಸಿಗೋದು ಕಷ್ಟವಾಗೈತಿ. ಟ್ಯಾಂಕರ್ ನೀರು ಕೊಟ್ರೂ ರಾಡಿ ನೀರು ಕೊಡ್ತ್ವಾರೆ. ಯಾವೊಬ್ಬ ತಳ ಹಂತದ ಅಧಿಕಾರಿ ಗ್ರಾಮಗಳಲ್ಲಿ ವಾಸವಿಲ್ಲದಿರುವುದರಿಂದ ಅವರ್‌್ಯಾರಿಗೂ ಸಮಸ್ಯೆಯ ಅರಿವಿಲ್ಲದಾಗಿದೆ’ ಎಂದು ದೇವಾನಂದ ಕಿಡಿಕಾರಿದರು.

‘ಭೀಕರ ಬರ ಎದುರಾಗೈತಿ. ಮುಂದಿನ ನಾಲ್ಕ್‌ ತಿಂಗಳ್ ತ್ರಾಸೈತಿ. ಸಮಸ್ಯೆ ಎದಿರಿಸೋದು ಕಷ್ಟವಾಗೈತಿ. ಯಾವೊಬ್ಬ ಅಧಿಕಾರಿ ಹಳ್ಳೀಲಿ ಇರ್ತಿಲ್ಲ. ಜನರ ಜತೆ ಚೆಲ್ಲಾಟ ಆಡಬ್ಯಾಡ್ರೀ ಸಾಹೇಬ್ರಾ..! ಮುಂದಿನ ನಾಲ್ಕ್‌ ತಿಂಗಳು ದಯಮಾಡಿ ಸಹಕರಿಸಿ..’ ಎಂದು ಶಾಸಕರು ಸಭೆಯಲ್ಲಿದ್ದ ಅಧಿಕಾರಿ ವರ್ಗಕ್ಕೆ ಮನವಿ ಮಾಡಿದರು.

‘ವಿಜಯಪುರದಿಂದ 18 ಕಿ.ಮೀ. ದೂರದಲ್ಲಿ ಮಿಂಚಿನಾಳ ತಾಂಡವಿದೆ. ನೀವಾದ್ರೂ ಬನ್ರೀ ಸಾಹೇಬ್ರಾ’ ಎಂದು ದೇವಾನಂದ ಜಿಲ್ಲಾಧಿಕಾರಿಗೆ ವಿನಂತಿಸಿಕೊಂಡರು.

‘ಎಸ್‌ಎಸ್‌ಎಲ್‌ಸಿ, ಪಿಯುಸಿ ವಾರ್ಷಿಕ ಪರೀಕ್ಷೆ ಶೀಘ್ರದಲ್ಲೇ ನಡೆಯಲಿವೆ. ವಿದ್ಯಾರ್ಥಿ ಜೀವನದ ಮಹತ್ವ ಘಟ್ಟವಿದು. ಆದರೆ ನಿತ್ಯ ರಾತ್ರಿ ಚಡಚಣ ತಾಲ್ಲೂಕಿನಲ್ಲಿ ಲೋಡ್‌ಶೆಡ್ಡಿಂಗ್‌ ಮಾಡಲಾಗುತ್ತಿದೆ. ಪರೀಕ್ಷೆ ವೇಳೆಯೇ ವಿದ್ಯುತ್‌ ಇಲ್ಲದಿದ್ರೆ ಹೆಂಗೆ ? ಈ ಸಮಸ್ಯೆ ಮತ್ತೆ ಮರುಕಳಿಸಬಾರದು’ ಎಂದು ಶಾಸಕ ದೇವಾನಂದ ಹೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸಾಮಾಜಿಕ ಅರಣ್ಯ ಇಲಾಖೆಯ ಪ್ರಗತಿ ಪರಿಶೀಲನೆ ಸಂದರ್ಭ ಶಾಸಕ ದೇವಾನಂದ ಚವ್ಹಾಣ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ಮಹೇಶ್‌ ಖ್ಯಾತನ್‌ ವಿರುದ್ಧ ಹರಿಹಾಯ್ದರು. ವಿವಿಧ ಯೋಜನೆಯಡಿ ಫಲಾನುಭವಿಗಳಿಗೆ ನೀಡುವ ಸಾಲ ಸೌಲಭ್ಯದ ಬಗ್ಗೆ ತೀವ್ರ ತಕರಾರು ತೆಗೆದರು.

ಗೋಣ್‌ ಹಾಕ್ರೀ..; ಯತ್ನಾಳ ತಾಕೀತು..!

‘ದಶಕದಿಂದ ಸರ್ಕಾರಿ ಈಜುಕೊಳ ನಿರ್ಮಾಣ ಮಾಡಬೇಕು ಎಂಬ ಬೇಡಿಕೆಯಿದೆ. ಇದೀಗ ಅನುದಾನವೂ ಇದೆ. ಸುಮ್ನೇ ತಕರಾರು ಮಾಡ್ಕೊಂಡು ಕೂರಬೇಡ್ರೀ’ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಚಿವ ಮನಗೂಳಿ ಅವರಿಗೆ ಆಗ್ರಹಿಸಿದರು.

ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ ಸಚಿವರ ಮನವೊಲಿಕೆಗೆ ಮುಂದಾದರು. ಸಚಿವರು ಸ್ಪಂದಿಸದಿದ್ದಕ್ಕೆ ವಾಗ್ವಾದ ನಡೆಸಿ, ನೀವೇ ಅಧ್ಯಕ್ಷರು, ನಿಮ್ಮದೇ ಅಂತಿಮ ನಿರ್ಧಾರ ಎಂದು ಸಭೆಯಲ್ಲೇ ಪ್ರತಿಕ್ರಿಯಿಸಿದರು.

ಸಚಿವ ಮನಗೂಳಿ ಮೌನಕ್ಕೆ ಶರಣಾಗಿದ್ದಕ್ಕೆ ಯತ್ನಾಳ ದಯವಿಟ್ಟು ಗೋಣ್‌ ಹಾಕ್ರೀ ಎಂದು ಛೇಡಿಸಿದರು. ಹಂಗೆಲ್ಲ ದಯವಿಟ್ಟು ಎಂದರೇ ಆಗಲ್ಲ. ನೋಡೋಣ. ಒಪ್ಪಿಗೆ ಕೊಡುವೆ ಎಂದು ಮನಗೂಳಿ ಹೇಳಿದ್ದಕ್ಕೆ ಬಸನಗೌಡ ಧನ್ಯವಾದ ಎಂದರು.

ಕೇಂದ್ರದ ಹಲವು ಯೋಜನೆಗಳ ಫಲಾನುಭವಿಗಳಿಗೆ ಬ್ಯಾಂಕ್‌ಗಳು ಸಾಲ ನೀಡುತ್ತಿಲ್ಲ. ಸುಮ್ನೆ ಕಿರಿಕಿರಿ ಮಾಡ್ತ್ವಾರೆ. ಈ ಕುರಿತಂತೆ ಸಭೆ ನಡೆಸಿ. ಆ ಸಭೆಗೆ ನಮ್ಮನ್ನು ಆಹ್ವಾನಿಸಿ. ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರ ಜತೆ ಚರ್ಚಿಸೋಣ ಎಂದು ಶಾಸಕ ಯತ್ನಾಳ ಸಲಹೆ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.