ಇದು ‘ಪಾದರಸ’, ಬರಿಯ ಕಸ, ಕೊನೆಗೆ ವಿಧಿವಶ

5

ಇದು ‘ಪಾದರಸ’, ಬರಿಯ ಕಸ, ಕೊನೆಗೆ ವಿಧಿವಶ

Published:
Updated:
Deccan Herald

ಸಿನಿಮಾ: ಪಾದರಸ
ನಿರ್ಮಾಣ: ಆರ್ಟ್‌ ಆ್ಯಂಡ್‌ ಸೋಲ್‌ ಮೀಡಿಯಾ ಸರ್ವೀಸಸ್‌
ನಿರ್ದೇಶನ: ಹೃಷಿಕೇಶ್‌ ಜಂಬಗಿ
ತಾರಾಗಣ: ಸಂಚಾರಿ ವಿಜಯ್‌, ನಿರಂಜನ್‌ ದೇಶಪಾಂಡೆ, ವೈಷ್ಣವಿ ಮೆನನ್, ಮನಸ್ವಿನಿ, ವಿಜಯ ಚೆಂಡೂರ್‌, ಶೋಭರಾಜ್‌

ಒಬ್ಬ ವ್ಯಕ್ತಿಗೆ, ‘ನನಗೊಂದು ಮಾರಣಾಂತಿಕ ಕಾಯಿಲೆ ಇದೆ, ಇನ್ನೆರಡು ತಿಂಗಳಿಗೆ ಸಾಯಲಿದ್ದೇನೆ’ ಎಂದು ತಿಳಿದರೆ ಏನು ಮಾಡಬಹುದು? ಕೊಂಚ ಸಿನಿಮೀಯವಾಗಿ ಊಹಿಸುವುದಾದರೆ, ಇರುವ ಅಲ್ಪಜೀವನವನ್ನು ಮಜಾ ಉಡಾಯಿಸುತ್ತ ಕಳೆಯಲು ನಿರ್ಧರಿಸಬಹುದು ಅಥವಾ ಬದುಕಿನ ಕೊನೆಯನ್ನು ಉಳಿದವರಿಗೆ ಸಹಾಯ ಮಾಡುತ್ತ ಕಳೆದುಬಿಡೋಣ ಎಂದುಕೊಳ್ಳಬಹುದು. ‘ಪಾದರಸ’ ಚಿತ್ರದ ನಾಯಕ (ನಾಯಕನ ಹೆಸರೂ ಪಾದರಸ ಎಂದೇ) ಈ ಎರಡನ್ನೂ ಮಾಡುತ್ತಾನೆ!

ನೂರು ಪರಮಪಾತಕಗಳನ್ನು ಮಾಡಿ ಕೊನೆಗೆ ಅವುಳಲ್ಲೊಂದೆರಡು ಪರೋಪಕಾರಕ್ಕಾಗಿ ಮಾಡಿದವು ಎಂಬ ಸಮಜಾಯಿಷಿ ಕೊಟ್ಟುಕೊಂಡು, ತನಗೊಂದು ಕಾಯಿಲೆ ಅಂಟಿಸಿಕೊಂಡು, ಅನುಕಂಪದ ಅಲೆಯ ಮೇಲೆ ತಾನು ‘ಒಳ್ಳೆಯವನು’ ಎಂಬ ಹಣೆಪಟ್ಟಿ ಹಚ್ಚಿಕೊಳ್ಳಲು ಪ್ರಯತ್ನಿಸುತ್ತಾನೆ. ಇದು ತುಕ್ಕು ಹಿಡಿದ ಕಬ್ಬಿಣಕ್ಕೆ ಹೊಸಬಣ್ಣ ಬಳಿದಷ್ಟೇ ಅಸಹಜವಾಗಿ ಕಾಣುತ್ತದೆ.

 ಪಾದರಸ ಸದಾ ರಾಮರಸ (ಮದ್ಯ)ದಲ್ಲಿ ಮುಳುಗಿರುವವನು. ಬೆಳಿಗ್ಗೆ ಮಧ್ಯಾಹ್ನ ಸಂಜೆ ಎನ್ನದೆ ಸಿಗರೇಟು, ಮದ್ಯ ಬಿಟ್ಟರೆ ಜೂಜಾಟ, ಇಸ್ಪೀಟುಗಳ ಖಯಾಲಿ. ಕಂಡ ಕಂಡವರಿಗೆ ಮೋಸ ಮಾಡುವುದೇ ಅವನ ಉದ್ಯೋಗ. ಅವನಿಗೊಬ್ಬ ಪಾಪೇಶನೆಂಬ ಬಾವ. ಹಣಕ್ಕಾಗಿ ಏನು ಬೇಕಾದರೂ ಮಾಡಬಲ್ಲ ದುರಾತ್ಮರು ಅವರು. ಕ್ಯಾನ್ಸರ್‌ ಆಗಿರುವ ತಾಯಿಯ ಚಿಕಿತ್ಸೆಗೆ ಹಣ ಹೊಂದಿಸುವ ಸಂಕಷ್ಟದಲ್ಲಿರುವ ಹೆಣ್ಣಿನ ಜತೆ ಸುಖಿಸಿ ಅವಳ ಹಣವನ್ನೂ ಕಿತ್ತುಕೊಳ್ಳಬಲ್ಲ, ಮಗನಿಗೆ ಸರ್ಕಾರಿ ನೌಕರಿ ಕೊಡಿಸುತ್ತೇನೆಂದು ನಂಬಿಸಿ ಅಪ್ಪನ ಬಳಿ ಲಕ್ಷ ಲಕ್ಷ ಕಿತ್ತುಕೊಂಡು ಮೋಸ ಮಾಡಬಲ್ಲ ನಾಯಕ. 

ತೆರೆಯ ಮೇಲೆ ಪಾದರಸನ ಚೇಷ್ಟೆಗಳು ಬಹುಬೇಗ ಬೇಸರ ಹುಟ್ಟಿಸುತ್ತವೆ. ಹಲವು ಬಾರಿ ಕ್ರೌರ್ಯದ ಗಡಿ ದಾಟುವ ಅವನ ವರ್ತನೆಗಳಿಗೂ ಕೊನೆಯಲ್ಲಿ ನೀಡುವ ಸಮಜಾಯಿಷಿಗೂ ಹೊಂದಾಣಿಕೆಯೇ ಆಗುವುದಿಲ್ಲ. ಖುಷಿಯಾಗಿರುವುದು ಅಥವಾ ನೋವನ್ನು ಮರೆಯುವುದಕ್ಕೆ ದುಶ್ಚಟಗಳಿಗೆ ದಾಸರಾಗುವುದೊಂದೇ ಮಾರ್ಗ ಎಂದು ನಿರ್ದೇಶಕರು ಹೇಳಹೊರಟಿದ್ದಾರೆಯೇ ಎಂಬ ಅನುಮಾನವೂ ಹುಟ್ಟುತ್ತದೆ. ‘ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ಸಹಿಸ್ಕೋತೀನಿ. ಆದ್ರೆ ನನ್ನ ಅಭಿರುಚಿಗೆ ಧಕ್ಕೆಯಾದರೆ ಸಹಿಸಲ್ಲ’ ಎಂಬ ಒಂದು ಸಂಭಾಷಣೆ ಚಿತ್ರದಲ್ಲಿದೆ. ಆ ಸಂಭಾಷಣೆ ಹೇಳುವ ಸನ್ನಿವೇಶವೇ ಚಿತ್ರದ ಅಭಿರುಚಿಯನ್ನೂ ಸೂಚಿಸುವಂತಿದೆ. ಕೊನೆಯ ಇಪ್ಪತ್ತು ನಿಮಿಷಗಳಲ್ಲಿ ನಿರ್ದೇಶಕರು ಕಥೆಯ ದಾರಿಗೆ ಯರ್ರಾಬಿರ್ರಿ ತಿರುವು ನೀಡಿ ನಿಲ್ದಾಣಕ್ಕೆ ಮೊದಲೇ ಪ್ರಯಾಣಿಕರನ್ನು ಎಚ್ಚರಿಸುವ ಪ್ರಯತ್ನವನ್ನೂ ಮಾಡಿದ್ದಾರೆ.

ಯಾವ್ಯಾವುದೋ ನೆಪ ಮಾಡಿಕೊಂಡು ವೇದಿಕೆಯ ಮೇಲೆ ಬರುವ ಅಧಿಕಪ್ರಸಂಗಿ ಪೋರರ ಹಾಗೆ ಒಮ್ಮಿಂದೊಮ್ಮೆಲೇ ತೂರಿಬರುವ ಹಾಡುಗಳಲ್ಲಿ ಒಂದು ಮಾತ್ರ ತುಸು ಇಂಪಾಗಿದೆ.

ಸಂಚಾರಿ ವಿಜಯ್‌ ತಮ್ಮ ಪಾದದ ಗಾತ್ರಕ್ಕೆ ಸರಿಹೊಂದದ ಶೂ ತೊಟ್ಟುಕೊಂಡು ನಡೆಯಲು ಪ್ರಯಾಸ ಪಡುತ್ತಿರುವವರಂತೆ ಕಾಣುತ್ತಾರೆ. ನಿರಂಜನ್ ದೇಶಪಾಂಡೆ ತಮ್ಮ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. 

ಕೊನೆಯಲ್ಲಿ ನಾಯಕ ಅವನದೇ ತಪ್ಪು ಹೆಜ್ಜೆಯಿಂದ ವಿಧಿವಶನಾಗುತ್ತಾನೆ. ಈ ಸಾವು ಸಿನಿಮಾದ ಕುರಿತಾದ ವ್ಯಾಖ್ಯಾನಕ್ಕೂ ಒಳ್ಳೆಯ ರೂಪಕವಾಗಿ ಒದಗಿಬರುವ ಹಾಗಿದೆ.

ಬರಹ ಇಷ್ಟವಾಯಿತೆ?

 • 2

  Happy
 • 2

  Amused
 • 4

  Sad
 • 0

  Frustrated
 • 0

  Angry

Comments:

0 comments

Write the first review for this !