ಶುಕ್ರವಾರ, ಏಪ್ರಿಲ್ 16, 2021
31 °C

ಚಿತ್ತಾಪುರ: ಪರಿಸರ ಕುರಿತು ಸಾರ್ವಜನಿಕ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ತಾಪುರ: ಈ ಭಾಗದ ರೈತರ, ರೈತ ಮುಖಂಡರ, ರಾಜಕೀಯ ಮುಖಂಡರ ಅತೃಪ್ತಿ, ಅಸಮಾಧಾನ, ಅತೀ ಕಡಿಮೆ ಬೆಲೆಗೆ ಭೂಮಿ ಖರೀದಿ ಮೊದಲಾದ ಮಾತುಗಳ ನಡುವೆಯೇ ತಾಲ್ಲೂಕಿನ ಇಟಗಾ ಗ್ರಾಮದಲ್ಲಿ ಓರಿಯಂಟಲ್ ಸಿಮೆಂಟ್ ಕಂಪೆನಿಯ ಘಟಕದ ಸ್ಥಾಪನೆಗೆ ಬುಧವಾರ ಸಾರ್ವಜನಿಕರು ತಮ್ಮ ಒಪ್ಪಿಗೆ ಸೂಚಿಸಿ, ಕಂಪೆನಿಯನ್ನು ಸ್ವಾಗತಿಸಿದರು.ಇಟಗಾ, ಮೊಗಲಾ, ದಿಗ್ಗಾಂವ್ ರೈತರಿಂದ ಭೂಮಿ ಖರೀದಿ ಮಾಡಿ ಸಿಮೆಂಟ್ ಕಂಪೆನಿ ಸ್ಥಾಪನೆಯ ಪ್ರಕ್ರಿಯೆಗೆ ಚಾಲನೆ ನೀಡಿರುವ ಓರಿಯಂಟಲ್ ಸಿಮೆಂಟ್ ಕಂಪೆನಿ ಘಟಕ ಸ್ಥಾಪನೆ ಬಗ್ಗೆ ಬುಧವಾರ ಇಟಗಾ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾಧ್ಯಕ್ಷ ಹಾಗೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ, ಮುಗ್ಧ ರೈತರ ಅತ್ಯಮೂಲ್ಯ ಭೂಮಿಯನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿ ಮಾಡಲಾಗಿದೆ ಎನ್ನುವ ಹತಾಶೆ ಸ್ಫೋಟಗೊಂಡಿತು. ಭೂಮಿ ಖರೀದಿ ಬೆಲೆ ಏರಿಸುವಂತೆ ಒತ್ತಾಯದ ಕೂಗು ಕೇಳಿ ಬಂದಿತು.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ್ ಮಾತನಾಡಿ, `ಕಂಪೆನಿ ಸ್ಥಾಪನೆಗೆ ಸರಕಾರದ ನಿಯಮದ ಪ್ರಕಾರ ಸಮಯ ನಿಗದಿ ಮಾಡಿಲ್ಲ. ಹೀಗಾಗಿ, ಕಂಪೆನಿ ಆಡಳಿತದವರು ತಮ್ಮ ಮನಸ್ಸಿಗೆ ಬಂದಂತೆ ಭೂಮಿ ಖರೀದಿ ಮಾಡುತ್ತಿದ್ದಾರೆ. ಈ ಭಾಗದಲ್ಲಿ ದಿನಾಲೂ ಭೂಮಿಯ ಬೆಲೆ ಏರುತ್ತಿದೆ. ಇದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಇದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು~ ಎಂದರು.

ಗ್ರಾಮದ ರೈತ ವೆಂಕಟೇಶ ಡಿಗ್ಗಿ ಮಾತನಾಡಿ, `ಸಿಮೆಂಟ್ ಕಂಪೆನಿ ಸ್ಥಾಪನೆಯಿಂದ ವಾಯು ಮಾಲಿನ್ಯ, ಭೂ ಮಾಲಿನ್ಯ, ನೀರು ಮಾಲಿನ್ಯ ಮತ್ತು ಶಬ್ಧ ಮಾಲಿನ್ಯ ಉಂಟಾಗುತ್ತದೆ. ಪರಿಣಾಮ ಜನರು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಹಲವಾರು ರೋಗಗಳಿಂದ ನರಳಬೇಕಾಗುತ್ತದೆ. ಇದರ ಬಗ್ಗೆ ಜಿಲ್ಲಾಡಳಿತ ಆಲೋಚಿಸಿ ಮಾಲಿನ್ಯ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡಬೇಕು~ ಎಂದು ಮನವಿ ಮಾಡಿದರು.ಶಾಸಕ ವಾಲ್ಮೀಕ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುಭಾಷ್ ರಾಠೋಡ್, ಯುವ ಮುಖಂಡ ಶಿವರುದ್ರ ಭೀಣಿ, ನ್ಯಾಯವಾದಿ ಚಂದ್ರಶೇಖರ ಅವಂಟಿ, ಕಾರ್ಮಿಕ ಮುಖಂಡ ಮೈನೋದ್ದಿನ್, ಬಸವರಾಜ ಚಿನ್ನಮಳ್ಳಿ, ರಾಮದಾಸ್ ಚವ್ಹಾಣ್ ಮಾತನಾಡಿದರು.ಅವರು `ರೈತರ ಅತ್ಯಮೂಲ್ಯ ಭೂಮಿ ಪಡೆದು ಕಂಪೆನಿ ಸ್ಥಾಪನೆಯ ನಂತರ ಈ ಭಾಗದಲ್ಲಿ ಮೂಲಸೌಕರ್ಯಗಳಾದ ಶಿಕ್ಷಣ, ಆರೋಗ್ಯ, ಉದ್ಯೋಗ, ಕುಡಿಯುವ ನೀರು, ರಸ್ತೆ, ವಿದ್ಯುತ್ ಮುಂತಾದವುಗಳನ್ನು ಕಡ್ಡಾಯವಾಗಿ  ಜನರಿಗೆ ಒದಗಿಸಬೇಕು. ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕು~ ಎಂದರು.ಜೊತೆಗೆ `ಹೊನ್ನಕೀರಣಗಿಯಲ್ಲಿ ಸರ್ಕಾರವೇ ನಿಗದಿ ಮಾಡಿದ ಎಕರೆಗೆ 9 ಲಕ್ಷ ರೂಪಾಯಿ ಬೆಲೆ ಇದೆ. ಅದನ್ನು ಇಲ್ಲಿ ಏಕೆ ಅನುಸರಿಸುತ್ತಿಲ್ಲ~ ಅವರು ಆಕ್ಷೇಪಿಸಿದರು. ರೈತರ, ರೈತ ಮುಖಂಡರ, ರಾಜಕೀಯ ಮತ್ತು ಕಾರ್ಮಿಕ ಮುಖಂಡರ ಮಾತುಗಳಿಗೆ ಉತ್ತರವಾಗಿ ಕಂಪೆನಿಯ ಅಧ್ಯಕ್ಷ ಭಾಗವತ ಪಾಂಡೆ ಮಾತನಾಡಿ, `ಸ್ಥಳಿಯರಿಗೆ ಉದ್ಯೋಗ, ಉತ್ತಮ ಪರಿಸರ ನಿರ್ಮಾಣ, ಶಿಕ್ಷಣ, ಆರೋಗ್ಯ ವ್ಯವಸ್ಥೆ, ಅಗತ್ಯ ಮೂಲಸೌಲರ್ಯ ಅಭಿವೃದ್ಧಿಗೆ ಆದ್ಯತೆ ನೀಡುವೆ~ಎಂದು ಭರವಸೆ ನೀಡಿದರು.ಸಭೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಅಧಿಕಾರಿ ಎಂ.ಎ. ಮಣಿಯಾರ್, ಬಳ್ಳಾರಿ ಹಿರಿಯ ಅಧಿಕಾರಿ ಸಿ.ಎಂ ಸತೀಶ್ ಉಪಸ್ಥಿತರಿದ್ದರು.ಚಲುವರಾಜ್ ಸ್ವಾಮಿ ಒಡೆಯರ್ ಅವರು, ಕಂಪೆನಿ ಸ್ಥಾಪನೆಗೆ ಖರೀದಿ ಮಾಡುತ್ತಿರುವ ಭೂಮಿ, ಹಣ ಹೂಡಿಕೆ, ಸಿಮೆಂಟ್ ಉತ್ಪಾದನೆ ಪ್ರಮಾಣ, ವಿದ್ಯುತ್ ಘಟಕ ಸ್ಥಾಪನೆಯ ಸಾಮರ್ಥ್ಯ, ನೀರು ಬಳಕೆಯ ಪ್ರಮಾಣ, ಕಂಪೆನಿ ಕಲ್ಪಿಸುವ ಉದ್ಯೋಗದ ಕುರಿತು ಅಂಕಿಸಂಖ್ಯೆಗಳ ಸಹಿತ ಸಮಗ್ರ ವಿವರಣೆ ನೀಡಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.