ಸೋಮವಾರ, ಸೆಪ್ಟೆಂಬರ್ 28, 2020
28 °C

ಸೇತುವೆ ಶೀಘ್ರ ದುರಸ್ತಿಗೆ ಕ್ರಮ: ಖರ್ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೇತುವೆ ಶೀಘ್ರ ದುರಸ್ತಿಗೆ ಕ್ರಮ: ಖರ್ಗೆ

ಗುಲ್ಬರ್ಗ: ಬೀದರ್ -ಶ್ರೀರಂಗ ಪಟ್ಟಣ ರಾಷ್ಟ್ರೀಯ ಹೆದ್ದಾರಿ ಮೇಲಿರುವ ಕುರಿಕೋಟಾ ಸೇತುವೆ ದುರಸ್ತಿಯನ್ನು ಅತೀಶೀಘ್ರ  ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಇಲ್ಲಿ ಹೇಳಿದರು.ಕುರಿಕೋಟಾ ಸೇತುವೆ ಕುಸಿದಿರುವುದನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ದುರಸ್ತಿ ಕಾರ್ಯಕ್ಕಾಗಿ ಈಗಾಗಲೇ ಹತ್ತು ಕಂಪೆನಿಗಳಿಂದ ಅರ್ಜಿ ಸಲ್ಲಿಕೆಯಾಗಿದೆ. ಅದರಲ್ಲಿ ಎಂಟು ಕಂಪೆನಿಗಳು ಸಮರ್ಪಕವಾಗಿಲ್ಲದ ಕಾರಣದಿಂದ ಕೈಬಿಡಲಾಗಿದೆ. ಹೈದರಾಬಾದ್ ಮೂಲದ ರೆಪ್ಕಾನ್ ಹಾಗೂ ಮುಂಬೈ ಮೂಲದ ಫಾಸ್ಟೆಕ್ ಬಿಲ್ಡ್ ಇಂಡಿಯಾ ಕಂಪೆನಿಗಳ ಅರ್ಜಿ ಪರಿಶೀಲಿಸಲಾಗುತ್ತಿದೆ. ರೆಪ್ಕಾನ್ ಕಂಪೆನಿಯು ದುರಸ್ತಿ ಕೆಲಸಕ್ಕೆ ಮೂರು ತಿಂಗಳಾವಧಿ ಬೇಕಾಗುತ್ತದೆ ಎಂದು ತಿಳಿಸಿರುವುದಾಗಿ ಹೇಳಿದರು.ಸಮುದ್ರ, ನದಿಗಳಲ್ಲಿ ಸೇತುವೆ ನಿರ್ಮಿಸಿದ ಅನುಭವವಿರುವ ಕಂಪೆನಿಗೆ ದುರಸ್ತಿ ಕಾಮಗಾರಿ ವಹಿಸುವಂತೆ ಗುಲ್ಬರ್ಗ ಮುಖ್ಯ ಎಂಜಿನಿಯರ್ ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್ ಅವರಿಗೆ ಸೂಚಿಸಿದ್ದೇನೆ. ಒಟ್ಟಾರೆ 70 ದಿನಗಳಲ್ಲಿ ದುರಸ್ತಿಕಾರ್ಯ ಪೂರ್ಣಗೊಳಿಸುವ ಬಗ್ಗೆ ಕ್ರಮ ಜರುಗಿಸುವಂತೆ ಸೂಚಿಸಲಾಗಿದೆ ಎಂದರು.ಹೊಸ ಸೇತುವೆ ನಿರ್ಮಾಣಕ್ಕೆ ಮನವಿ: ಕುರಿಕೋಟಾ ಹಳೇ ಸೇತುವೆಗೆ ಹೊಂದಿಕೊಂಡು ಹೊಸ ಸೇತುವೆ ನಿರ್ಮಾಣ ಕಾಮಗಾರಿ ವಿಷಯ ಕೋರ್ಟ್‌ನಲ್ಲಿದೆ. ವಿವಾದ ಬಗೆಹರಿಸಿಕೊಂಡು ರಾಜ್ಯ ಸರ್ಕಾರ ವಹಿಸಿಕೊಟ್ಟರೆ, ಕೇಂದ್ರದ ರಾಷ್ಟ್ರೀಯ ಹೆದ್ದಾರಿ ಸಚಿವಾಲಯವು ಸೇತುವೆ ನಿರ್ಮಾಣವನ್ನು ವಹಿಸಿಕೊಳ್ಳಲು ಸಿದ್ಧವಿದೆ. ಈ ಬಗ್ಗೆ ಕೇಂದ್ರ ಸಚಿವ ಸಿ.ಪಿ. ಜೋಶಿ ಅವರಿಗೆ ಮನವಿ ಸಲ್ಲಿಸಿದ್ದೇನೆ. ಆ ಮನವಿ ಈಗಾಗಲೇ ರಾಜ್ಯದಲ್ಲಿರುವ ಎನ್‌ಎಚ್ ಇಲಾಖೆಗೆ ಬಂದಿದೆ. ಮುಂದಿನ ವಿಚಾರ ರಾಜ್ಯ ಸರ್ಕಾರ ಕೈಗೊಳ್ಳುವ ನಿರ್ಧಾರದ ಮೇಲೆ ಅವಲಂಬನೆಯಾಗಿದೆ ಎಂದರು.ಒಟ್ಟು 56 ಕಿಲೋ ಮೀಟರ್ ಉದ್ದದ ಚೌಡಾಪುರ-ಹೊಸೂರ  ರಸ್ತೆ ನಿರ್ಮಾಣಕ್ಕೆ ಈಗಾಗಲೇ ಅಂತರರಾಜ್ಯ ಸಂಪರ್ಕ ರಸ್ತೆ ವಿಶೇಷ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದಕ್ಕಾಗಿ ಬಿಡುಗಡೆ ಮಾಡಿರುವ ಮೊತ್ತ ಬಹಳ ಕಡಿಮೆ ಇರುವ ಕಾರಣ, ಮತ್ತೆ ಈ ಬಗ್ಗೆ ಮರುಮನವಿ ಮಾಡಿಕೊಳ್ಳಲಾಗಿದೆ. ಮುಂದಿನ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಹೊರಬರಲಿದೆ ಎಂದರು.ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ನಿರ್ಮಾಣ ಸಮರ್ಪಕವಾಗಿ ನಡೆದರೂ ಸೇತುವೆಗಳ ಬಗ್ಗೆ ಏಕೆ ಗಮನ ಹರಿಸುತ್ತಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವ ಖರ್ಗೆ, `ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿದ ಮೊದಲ ಮೂರು ವರ್ಷ ರಾಜ್ಯ ಸರ್ಕಾರವು ಅದನ್ನು ನಿರ್ವಹಿಸಬೇಕಾಗುತ್ತದೆ. ಸೇತುವೆ ನಿರ್ಮಾಣವು ರಾಜ್ಯ ಸರ್ಕಾರಕ್ಕೆ ಸೇರಿದೆ.ರಾಜ್ಯ ಸರ್ಕಾರ ಕೋರಿದರೆ ಮಾತ್ರ, ಕೇಂದ್ರ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಇಲಾಖೆ ವಹಿಸಿಕೊಳ್ಳುತ್ತದೆ. ರಾಜ್ಯ ಸರ್ಕಾರವು ಕೇಂದ್ರದ ಅನೇಕ ಯೋಜನೆಗಳಿಗೆ ಸರಿಯಾಗಿ ಸ್ಪಂದಿಸುವುದಿಲ್ಲ. ಎಲ್ಲ ಸಮಸ್ಯೆಗಳಿಗೆ ಇದೇ ಮೂಲ ಕಾರಣ~ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.