ಶುಕ್ರವಾರ, ಜೂಲೈ 10, 2020
27 °C

ಅಪಾಯ ಆಹ್ವಾನಿಸುವ ವಿದ್ಯುತ್ ಪರಿವರ್ತಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ತಾಪುರ: ಇಲ್ಲಿನ ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳಲ್ಲಿ ಜೆಸ್ಕಾಂ ಇಲಾಖೆ ಅಳವಡಿಸಿರುವ ಸುಮಾರು 72 ವಿದ್ಯುತ್ ಪರಿವರ್ತಕಗಳಿಗೆ ಸೂಕ್ತವಾದ ರಕ್ಷಣಾ ಬೇಲಿ ಅಳವಡಿಸಿಲ್ಲ. ವಿದ್ಯುತ್ ಪರಿವರ್ತಕದ ಹತ್ತಿರ ಯಾವ ಗಳಿಗೆಯಲ್ಲೂ ಅಪಾಯವಾಗುವ ಸಾಧ್ಯತೆ ಇದೆ ಎಂದು ಪಟ್ಟಣದ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.ಪಟ್ಟಣಕ್ಕೆ ವಿದ್ಯುತ್ ಸರಬರಾಜಿಗಾಗಿ 72 ವಿದ್ಯುತ್ ಪರಿವರ್ತಕ ಅಳವಡಿಸಲಾಗಿದೆ. 250 ಕೆ.ವಿ. ಸಾಮರ್ಥ್ಯದ 8, 100 ಕೆ.ವಿಯ 23, 63 ಕೆ.ವಿಯ 21, 25 ಕೆ.ವಿಯ 21 ವಿದ್ಯುತ್ ಪರಿವರ್ತಕಗಳನ್ನುಅಳವಡಿಸ ಲಾಗಿದೆ ಎಂದು ಜೆಸ್ಕಾಂ ಮೂಲಗಳು ತಿಳಿಸಿವೆ.ಮುಖ್ಯ ರಸ್ತೆಗಳ ಪಕ್ಕದಲ್ಲಿ ಅಳವಡಿಸಿರುವ ವಿದ್ಯುತ್ ಪರಿವರ್ತಕಗಳಿಗೆ ಅಗತ್ಯ ರಕ್ಷಣೆ ಬೇಲಿ ಹಾಕಿಲ್ಲ. ಜನರು ನಡೆದಾಡುವಾಗ, ವಾಹನಗಳ ಓಡಾಟದ ಸಮಯದಲ್ಲಿ, ರೈತರ ಎತ್ತಿನ ಗಾಡಿ ಚಲಿಸುವ ಸಮಯದಲ್ಲಿ ಅಪಾಯ ಆಗಬಹುದು ಎಂಬ ಆತಂಕ ವ್ಯಕ್ತವಾಗಿದೆ.ತಹಸೀಲ್ದಾರ್ ಕಚೇರಿ ಪಕ್ಕದಲ್ಲಿ ಪುರಸಭೆಗೆ ಹೋಗುವ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಪರಿವರ್ತಕಕ್ಕೆ ಕನಿಷ್ಠ ರಕ್ಷಣೆಯೂ ಇಲ್ಲ. ಬಾಲಾಜಿ ಮಂದಿರದ ಮುಂದುಗಡೆ ವೆಂಕಟೇಶ್ವರ ನಗರಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಪರಿವರ್ತಕ ಚಿಕ್ಕ ಮಕ್ಕಳ ಕೈಗೆ ಸಿಗುವಂತಿದೆ. ಇಲ್ಲಿ ಜವರಾಯ ಯಾವಾಗ ಅನಾಹುತ ಪಡೆಯುತ್ತಾನೆ ಎಂದು ಹೇಳಲಿಕ್ಕಾಗದು ಎಂಬ ಆತಂಕದ ನುಡಿ ಜನರದು.ಸ್ಟೇಷನ್ ಏರಿಯಾದ ಮುಖ್ಯ ರಸ್ತೆಯಲ್ಲಿನ ಪರಿವರ್ತಕ ಬಾಯಿ ತೆರೆದು ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಇದೇ ಪ್ರದೇಶದಲ್ಲಿನ ಇನ್ನೊಂದು ಪರಿವರ್ತಕ ಮಹಿಳೆಯರು, ಮಕ್ಕಳು ತಿರುಗಾಡುವ ಸ್ಥಳದಲ್ಲಿದೆ. ಪಟ್ಟಣದ ಹೃದಯ ಭಾಗವಾಗಿರುವ ಜನತಾ ಚೌಕ್‌ದಲ್ಲಿ ರಸ್ತೆಯ ಮಧ್ಯದಲ್ಲಿರುವ ಪರಿವರ್ತಕ, ಒಂಭತ್ತು ಕಮಾನ್‌ಗೆ ಹೋಗುವ ದಾರಿಯ ಪಕ್ಕದಲ್ಲಿರುವ ಪರಿವರ್ತಕ, ನ್ಯಾಯಾಲಯದ ರಕ್ಷಣಾ ಗೋಡೆ ಪಕ್ಕದಲ್ಲಿರುವ ಪರಿವರ್ತಕ, ಚಿತಾವಲಿ ದರ್ಗಾದ ಹತ್ತಿರ ಇರುವ ಪರಿವರ್ತಕಗಳು ರಕ್ಷಣಾ ಬೇಲಿ ಇಲ್ಲದೆ ಅಪಾಯವನ್ನು ಆಹ್ವಾನಿಸುತ್ತಿವೆ.ರಕ್ಷಣಾ ಬೇಲಿ ಇಲ್ಲದ್ದರಿಂದಾಗಿ ವಿದ್ಯುತ್ ಪರಿವರ್ತಕ ಸ್ಥಳದಲ್ಲಿ ವಿದ್ಯುತ್ ಹರಿದು ಜಾನುವಾರುಗಳೂ  ಸಾವನ್ನಪ್ಪಿವೆ. ಸಂಬಂಧಿತರು ಕೂಡಲೇ ಪಟ್ಟಣದ ಎಲ್ಲಾ ಪರಿವರ್ತಕಗಳಿಗೆ ಸೂಕ್ತ ರಕ್ಷಣಾ ಬೇಲಿ ಹಾಕಬೇಕು. ಕೆಲವು ಸ್ಥಳಗಳಿಂದ ಪರಿವರ್ತಕಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಬೇಕು ಎಂದು ಕನ್ನಡ ಸೇನೆ ತಾಲ್ಲೂಕು ಅಧ್ಯಕ್ಷ ರವೀಂದ್ರನಾಥ ಎನ್. ಇವಣಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.