ಬುಧವಾರ, ನವೆಂಬರ್ 20, 2019
20 °C

`ಹೇಳೊದೊಂದು ಮಾಡೊದೊಂದು'

Published:
Updated:

ಗುಲ್ಬರ್ಗ: ಆಳಂದ ಮತಕ್ಷೇತ್ರದಲ್ಲಿ ಸೋಲು ಖಚಿತ ಎಂದು ಗೊತ್ತಾದ ಕೂಡಲೇ ಬಿ.ಆರ್. ಪಾಟೀಲ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಸರಸಂಬಾ ವರದಾಶಂಕರನ ಮೇಲೆ ಬಿ.ಆರ್. ಕಡೆಯವರೇ ಸೇರಿಕೊಂಡು ಹಲ್ಲೆ ಮಾಡಿದ್ದಾರೆ. ವರದಾಶಂಕರನೇ ಬಂದೂಕು ತೋರಿಸಿ ಬೆದರಿಕೆ ಹಾಕಿದ ಎಂದು ಆಳಂದ ಠಾಣೆಯಲ್ಲಿ ಆನಂತರ ಎಫ್‌ಐಆರ್ ಮಾಡಿಸಿದ್ದಾರೆ. ಬಿ.ಆರ್. ಪಾಟೀಲ ಹೇಳುವುದೊಂದು ಮಾಡುವುದೊಂದು ಎಂದು ಶಾಸಕ ಸುಭಾಷ್ ಗುತ್ತೇದಾರ ಶುಕ್ರವಾರ ಹೇಳಿದರು.`ಸರಸಂಬಾದಲ್ಲಿ ದಬ್ಬಾಳಿಕೆ ನಡೆಸುತ್ತಿರುವವರು ನಾವಲ್ಲ. ಖುದ್ದಾಗಿ ಗ್ರಾಮಕ್ಕೆ ಭೇಟಿ ಕೊಟ್ಟವರಿಗೆ ಗೊತ್ತಾಗುತ್ತದೆ. ಗ್ರಾಮದಲ್ಲಿ ಜೆಡಿಎಸ್ ಕಚೇರಿ ತೆರೆದ ಎನ್ನುವ ಕಾರಣಕ್ಕಾಗಿ ವರದಾಶಂಕರನ ಮೇಲೆ ಗುಂಪಾಗಿ ಹಲ್ಲೆ ನಡೆಸಿದರು. ಇದೀಗ ಬಿ.ಆರ್. ಪಾಟೀಲ ಕಡೆಯವರು ವರದಾಶಂಕರನನ್ನು ಕೊಲೆಮಾಡಿ ನನ್ನ ಮೇಲೆ ಆರೋಪ ಹಾಕುವ ಯತ್ನ ನಡೆಸಿದ್ದಾರೆ ಎನ್ನುವುದು ಈಗ ಮಾಡುತ್ತಿರುವ ಆರೋಪದಿಂದ ಸಂಶಯ ಬರುತ್ತಿದೆ' ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.`ಹಲ್ಲೆ ಘಟನೆಯನ್ನು ತಿರುಚಿದ ಬಗ್ಗೆ ಪೊಲೀಸರು ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ಒತ್ತಾಯಿಸಿದರು. `ಗ್ರಾಮಕ್ಕೆ ನೀರು ಕೊಟ್ಟಿಲ್ಲ, ರಸ್ತೆಯಾಗಿಲ್ಲ ಎಂದು ರಾಜಕೀಯ ಪ್ರಚಾರದ ಸಭೆಗಳಲ್ಲಿ ಬಿ.ಆರ್. ಪಾಟೀಲರು ಆರೋಪ ಮಾಡಲಿ. ಆದರೆ ತೀರಾ ವ್ಯಕ್ತಿಗತ ಚಾರಿತ್ರ್ಯ ಹರಣವಾಗುವಂತೆ ಮಾತನಾಡುತ್ತಿದ್ದಾರೆ. ಸೇಂದಿ, ಸಾರಾಯಿ ಮಾರಾಟ ಮಾಡುವವರ ಜಾತಿಯಲ್ಲಿ ನಾನು ಹುಟ್ಟಿದ್ದು ನಿಜ. ಅದಕ್ಕಾಗಿ ಬಾಯಿಗೆ ಬಂದಂತೆ ಮಾತನಾಡುವುದು ಎಷ್ಟು ಸರಿ? ಅವರಂತೆ ನಾನು ಮಾತನಾಡಿದರೆ ವ್ಯತ್ಯಾಸ ಉಳಿಯುವುದಿಲ್ಲ' ಎಂದರು.`ನನ್ನ ಪ್ರಜಾಪ್ರಭುತ್ವ ಹಕ್ಕನ್ನು ಹತ್ತಿಕ್ಕಲಾಗುತ್ತಿದೆ. ಇದೀಗ ನನಗೆ ಬಿ.ಆರ್. ಪಾಟೀಲ ಅವರ ಕಡೆಯಿಂದ ಜೀವ ಬೆದರಿಕೆ ಇದೆ. ಜೀವ ಭಯದಲ್ಲಿ ಕಾಲ ಕಳೆಯುತ್ತಿದ್ದೇನೆ. ಸೂಕ್ತ ರಕ್ಷಣೆಗೆ ಜಿಲ್ಲಾ ಪೊಲೀಸ್ ವರಿಷ್ಠರಿಗೆ ಮನವಿ ಮಾಡಿಕೊಳ್ಳುತ್ತೇನೆ' ಎಂದು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ವರದಾಶಂಕರ ಹೇಳಿದರು. ಹರ್ಷಾನಂದ ಗುತ್ತೇದಾರ್, ಸುಭಾಷ್ ರಾಠೋಡ, ಸಲಾಂ ಸಗರಿ, ಅಜೀಂ ಸಗರಿ, ಚೆನ್ನು ಪಾಟೀಲ, ಹರಜತ್ ಮತ್ತಿತರರು ಹಾಜರಿದ್ದರು.

ಪ್ರತಿಕ್ರಿಯಿಸಿ (+)