ಮಂಗಳವಾರ, ಮೇ 11, 2021
28 °C

ಕವನಗಳು ಮನದಾಳದ ಮಾತು: ಶಂಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಕವನಗಳು ಮನದಾಳದ ಮಾತು. ಜೀವನದ ಅನುಭವ ಹಾಗೂ ಸ್ಪಂದನೆಯ ಭಾವಾಭಿವ್ಯಕ್ತಿ ಎಂದು ಹಿರಿಯ ವೈದ್ಯ ಸಾಹಿತಿ ಡಾ.ಪಿ.ಎಸ್.ಶಂಕರ್ ಹೇಳಿದರು.ಶಾಂತಾ ಪಸ್ತಾಪುರ ಅವರ `ನೆನಪಿನಂಗಳ' ಕವನ ಸಂಕಲನವನ್ನು ನಗರದ ಕನ್ನಡ ಭವನ ಸಭಾಂಗಣದಲ್ಲಿ ಭಾನುವಾರ ಸಂಜೆ ಬಿಡುಗಡೆ ಮಾಡಿ ಅವರು ಮಾತನಾಡಿದರು. ಶಾಂತಾ ಪಸ್ತಾಪುರ ಅವರು ಬದುಕಿನ ರೀತಿ, ನಗುವಿನ ಬಗ್ಗೆ, ಸಮಕಾಲೀನ ವಿಚಾರ, ಜೀವನದ ಸಲಹೆಗಳನ್ನು ತಮ್ಮ ಕವನದಲ್ಲಿ ನೀಡಿದ್ದಾರೆ. ತಮ್ಮ ಬದುಕಿನ ಭಾವನೆಗಳನ್ನು ಕವನ ರೂಪದಲ್ಲಿ ಅಭಿವ್ಯಕ್ತಿಸಿದ್ದಾರೆ ಎಂದರು.`ಸಮಾರಂಭಗಳು ಸರಳವಾಗಿರಬೇಕು' ಎಂದು ತಮ್ಮ ಅಮೆರಿಕಾದ ಅನುಭವೊಂದನ್ನು ವಿವರಿಸಿದ ಅವರು, `ಅಲ್ಲಿ ಕೇವಲ ಒಂದು ಗಂಟೆಯಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ಮುಕ್ತಾಯಗೊಂಡಿತ್ತು. ಈ ಪೈಕಿ ಆರಂಭಿಕ ಕೆಲವು ನಿಮಿಷ ಲೇಖಕರ ಪರಿಚಯ ಮಾಡಿದರೆ, ಮುಂದಿನ 45 ನಿಮಿಷಗಳಲ್ಲಿ ಲೇಖಕರು ಕೃತಿಯ ಆಯ್ದ ಭಾಗಗಳನ್ನು ಓದಿದರು.

ಬಳಿಕ ಸಭಿಕರ ಪ್ರಶ್ನೆಗಳಿಗೆ ಕೃತಿಕಾರರು ಉತ್ತರಿಸಿದರು. ನಿಗದಿತ ಸಮಯಕ್ಕೆ ಕಾರ್ಯಕ್ರಮ ಆರಂಭವಾಯಿತು. ಎಲ್ಲಿಯೂ ಸಮಯ ವ್ಯರ್ಥವಾಗಲಿಲ್ಲ. ಹಾರ- ತುರಾಯಿ, ಹೊಗಳಿಕೆ, ಸನ್ಮಾನಗಳಿರಲಿಲ್ಲ. ಯಾರೂ ಯಾರಿಗೂ ಕಾದು ಕುಳಿತುಕೊಳ್ಳಬೇಕಾದ ಪ್ರಮೇಯವೂ ಇರಲಿಲ್ಲ. ಈ ಮಾದರಿಯಲ್ಲಿ ನಮ್ಮಲ್ಲೂ ಕಾರ್ಯಕ್ರಮ ನಡೆಯಬೇಕು' ಎಂದು ಆಶಿಸಿದರು.ಕವಯತ್ರಿ ಕಾವ್ಯಶ್ರೀ ಮಹಾಗಾಂವಕರ ಮಾತನಾಡಿ, `ಬಡತನ ಹಾಗೂ ಭಾವತೀವ್ರತೆ ಇದ್ದಲ್ಲಿ ಅತ್ಯುತ್ತಮ ಸಾಹಿತ್ಯ ಬರುತ್ತದೆ ಎಂದು ಸಾಹಿತಿ ಮ್ಯಾಕ್ಸಿಂ ಗಾರ್ಕಿ ಹೇಳಿದ್ದಾರೆ. ಅವರ ಮಾತಿನಂತೆ ಭಕ್ತಿ ಹಾಗೂ ನೋವಿಗೆ ಸ್ಪಂದಿಸಿದ ಶಾಂತಾ ಅವರಿಂದ ಕವನ ಹೊರಹೊಮ್ಮಿದೆ' ಎಂದರು. ಕನ್ನಡ ಪುಸ್ತಕ ಪ್ರಾಧಿಕಾರ ಸದಸ್ಯ ಎ.ಕೆ.ರಾಮೇಶ್ವರ, ಕನ್ನಡ ಸಾಹಿತ್ಯ ಪರಿಷತ್ತು ಜೇವರ್ಗಿ ತಾಲ್ಲೂಕು ಘಟಕದ ಅಧ್ಯಕ್ಷ ಶಿವಕವಿ ಹಿರೇಮಠ ಜೋಗುರ, ನಿವೃತ್ತ ಎಂಜಿನಿಯರ್ ಗುರುಶಾಂತಪ್ಪ ಪಸ್ತಾಪುರ, ಡಾ. ಗಿರಿಜಾ ಸಂಜಯ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.