ಶನಿವಾರ, ಮೇ 15, 2021
23 °C

ಷರೀಫ್ ಖಾನಸಾಹೇಬ ಉರುಸು ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಧನೂರು:  ತಾಲ್ಲೂಕಿನ ಹಸಮಕಲ್ ಗ್ರಾಮದ ಷರೀಫ್ ಖಾನಸಾಹೇಬ ದರ್ಗಾವು ಹಿಂದು-ಮುಸ್ಲಿಮರ ಬಾಂಧವ್ಯವನ್ನು ಬೆಸೆದಿದೆ.

ಗ್ರಾಮದಲ್ಲಿ ಹಿಂದು-ಮಸ್ಲಿಮರು ಭೇದಭಾವವಿಲ್ಲದೆ ಇಂದಿಗೂ ದರ್ಗಾಕ್ಕೆ ನಡೆದುಕೊಳ್ಳುತ್ತಾರೆ. ಖಾನಸಾಹೇಬರ ಗೋರಿಯ ಮುಂಭಾಗದಲ್ಲಿ ಆಧಾರದೊಂದಿಗೆ ವಿಭೂತಿಯ ಗಟ್ಟಿ ಇಡಲಾಗಿದೆ.19ನೇ ಶತಮಾನದಲ್ಲಿ ಆಗಿಹೋದ ಮುಸ್ಲಿಂ ಸೂಫಿ ಸಂತರಲ್ಲಿ ಮಹ್ಮದ್ ಷರೀಫ್ ಖಾನಸಾಹೇಬರು ಒಬ್ಬರು. ಮೂಲತಃ ಲಿಂಗಸಗೂರು ತಾಲ್ಲೂಕಿನ ಸಂತೆಕೆಲ್ಲೂರು ಗ್ರಾಮದವರಾದ ಖಾನಸಾಹೇಬರು ಆ ಸಂದರ್ಭದಲ್ಲಿ ಹಸಮಕಲ್ ಗ್ರಾಮದಲ್ಲಿ ಹರಡಿದ್ದ ಪ್ಲೇಗ್ ಮಹಾಮಾರಿಯನ್ನು ಪ್ರಾಣಾರ್ಪಣೆಗೈಯ್ಯವ ಮೂಲಕ ತೊಲಗಿಸಿದರು ಎನ್ನುವುದು ಪ್ರತೀತಿ ಇದೆ.ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಹಲವೆಡೆ ಹಿಂದು-ಮುಸ್ಲಿಮರ ನಡುವೆ ಗಲಭೆಗಳು ನಡೆದರೆ, ಈ ಗ್ರಾಮದಲ್ಲಿ ಯಾವುದೇ ಆತಂಕವಿಲ್ಲದೆ ಅತ್ಯಂತ ಸಡಗರ, ಸಂಭ್ರಮದಿಂದ ಉರುಸು ಆಚರಿಸಲಾಯಿತು ಎಂದು  ಗ್ರಾಮದ ಪಂಪಯ್ಯಸ್ವಾಮಿ ಹಿರೇಮಠ ನೆನಪಿಸಿಕೊಳ್ಳುತ್ತಾರೆ. ಪ್ರತಿವರ್ಷವೂ ಉರುಸು ಸಂದರ್ಭದಲ್ಲಿ ಸಂತೆಕೆಲ್ಲೂರಿನ ಘನಮಠೇಶ್ವರ ಮಠದ ಗುರುಬಸವ ಸ್ವಾಮೀಜಿ ನೇತೃತ್ವದಲ್ಲಿ ಹಸಮಕಲ್ ಗ್ರಾಮಕ್ಕೆ ಗಂಧವನ್ನು  ತರಲಾಗುತ್ತದೆ.ಮಸ್ಕಿಯ ಶೇಖ ಖಾಜಾ ಮೊಹಿನುದ್ದೀನ್ ಖಾಜಿ ಅವರಿಂದ ಖುರಾನ್ ಪಠಣ, ಸ್ವಾಮೀಜಿಗಳಿಂದ ಆಶೀರ್ವಚನ ಮತ್ತಿತರ ಕಾರ್ಯಕ್ರಮಗಳು ನಡೆಯುತ್ತವೆ. ದರ್ಗಾದಲ್ಲಿ ಯಾವುದೇ ಕಾರ್ಯಕ್ರಮಗಳು  ನಡೆದರೂ ಪಕ್ಕದಲ್ಲಿರುವ ಅಂಕಲಿಮಠದ ವೀರಭದ್ರ ಸ್ವಾಮಿಗಳ ಕಲ್ಯಾಣ ಮಂಟಪದಲ್ಲಿ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗುತ್ತದೆ.ಜೂ.5ರಂದು ಮಹ್ಮದ್ ಷರೀಫ್ ಖಾನಸಾಹೇಬ ದರ್ಗಾದ ಉರುಸು ನಡೆಯುವುದು. ಗುರುನಾಥ ಮಹಾರಾಜ, ಮಹಾಂತದೇವರು ಮಹಾಂತಿನಮಠ, ಚುನಾಯಿತ ಜನಪ್ರತಿನಿಧಿಗಳು ಸೇರಿದಂತೆ ಹರಗುರುಚರಮೂರ್ತಿಗಳು ಭಾಗವಹಿಸುವರು. ಉರುಸಿಗೆ ರಂಗಾಪುರ, ಗುಡದೂರು, ಗೋನಾಳ, ದೀನಸಮುದ್ರ, ಪರಾಪುರ ಗ್ರಾಮ ಹಾಗೂ ಲಿಂಗಸಗೂರು, ಮಾನ್ವಿ, ಗಂಗಾವತಿ ತಾಲ್ಲೂಕುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.