ಗುರುವಾರ , ಮೇ 6, 2021
23 °C

`ವಚನಗಳನ್ನು ಅಂತರಂಗಕ್ಕೆ ಇಳಿಸಿಕೊಳ್ಳಬೇಕು'

ಚಿದಾನಂದ ಕಮ್ಮಾರ್/ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ವಿಲಾಸವತಿ ಖೂಬಾ `ಬಸವ ಸಮಿತಿ'ಯ     ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಶರಣ ಸಂಪ್ರದಾಯದ ಹಿರಿಯಜೀವ. `ಮನೆಮನೆಯೂ ಅರಿವಿನ ಮನೆ', `ಬಸವವಾಹಿನಿ', `ಅನುಭವ ಮಂಟಪ' `ಮಹಾದೇವಿ ಅಕ್ಕಗಳ ಸಮ್ಮೇಳನ'ದಂತಹ ಹಲವು ಸಂಘಟನಾತ್ಮಕ ಕಾರ್ಯಕ್ಷೇತ್ರವುಳ್ಳ ಅವರ ಬದುಕು ಹಲವು ಏಳು-ಬೀಳುಗಳನ್ನು ಕಂಡಿದೆ. ನೋವಿನ ಒರತೆಯಲ್ಲಿ ಆಗಾಗ ಬುಗ್ಗೆಯೂ ಎದ್ದಿದೆ. ಇದೆಲ್ಲದರ ನಡುವೆಯೇ ಶರಣ ಜೀವನ ಅವರಿಗೆ ನೆಮ್ಮದಿಯ ಹಾದಿ ತೋರಿದೆ.ಗುಲ್ಬರ್ಗದ ವಿಶ್ವೇಶ್ವರಯ್ಯ ಭವನದಲ್ಲಿ ಜೂನ್ 8, 9 ರಂದು ನಡೆಯಲಿರುವ ಮೊದಲ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿರುವ ವಿಲಾಸವತಿ ಅವರು ಬಸವಾದಿ ಶರಣರ ತತ್ವ ಪ್ರಚಾರದ ಹಾದಿಯಲ್ಲಿ ನಡೆದು ಬಂದ ಅನುಭವಗಳನ್ನು `ಪ್ರಜಾವಾಣಿ'ಗಾಗಿ ನೀಡಿದ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.ಶರಣರ ಬದುಕಿನೆಡೆಗೆ ಒಲವು ಮೂಡಿದ್ದು ಹೇಗೆ?

ನಾನೊಬ್ಬ ಗೃಹಿಣಿ. ಶ್ರೀಮಂತ ಮನೆತನದ ಸೊಸೆ. 60 ವರ್ಷಗಳವರೆಗೆ ಮನೆಯ ಹೊರಗೆ ಕಾಲಿಟ್ಟಿರಲಿಲ್ಲ. ನಾಲ್ಕು ಗೋಡೆಗಳ ನಡುವೆಯೇ ಇದ್ದವಳು. ಶರಣರ ಬದುಕಿನೆಡೆಗೆ ಸಾಗಲು ತಂದೆ, ತಾಯಿ ನೀಡಿದ ಸಂಸ್ಕಾರವೇ ಕಾರಣ. ಗುಲ್ಬರ್ಗದ ಬಸವಾಭಿಮಾನಿಗಳೆಲ್ಲ `ಬಸವ ಸಮಿತಿ'ಯ ಜವಾಬ್ದಾರಿ ಹೊರಿಸಿದ್ರು. 12 ವರ್ಷ ಆಯ್ತು. ಈಗ ಅದು ಹೆಮ್ಮರವಾಗಿ ಬೆಳೆಯುತ್ತಿದೆ. ಬಸವ ಬಳಗದ ಸಹಕಾರದಿಂದ ಇದೆಲ್ಲ ಸಾಧ್ಯವಾಯ್ತು.ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಕುರಿತು ಏನು ಅನ್ನಿಸುತ್ತಿದೆ?

ಬಸವ ಸಮಿತಿ ವತಿಯಿಂದ ಪ್ರತಿ ವರ್ಷ ಮಹಾದೇವಿ ಅಕ್ಕಗಳ ಸಮ್ಮೇಳನ ಹಮ್ಮಿಕೊಳ್ಳಲಾಗುತ್ತಿದೆ. ಒಮ್ಮೆ ಈ ಸಮ್ಮೇಳನದ ಅಧ್ಯಕ್ಷಳಾಗಿದ್ದೆ. ಇದೇ ಮೊದಲ ಬಾರಿಗೆ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ ನಡೀತಾ ಇದೆ.  ಸಮ್ಮೇಳನದ ಅಧ್ಯಕ್ಷತೆ ಶರಣರ ಮೌಲ್ಯ ಪ್ರತಿಪಾದನೆಗೆ ಒಂದು ಅವಕಾಶ ಅಷ್ಟೆ.

`ಬಸವ ಸಮಿತಿ', `ಅನುಭವ ಮಂಟಪ'ಗಳ ಮೂಲಕ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೀರಿ. ನಿಮ್ಮನೀರಿಕ್ಷೆಗಳು ಎಷ್ಟರಮಟ್ಟಿಗೆ ಫಲಿಸಿವೆ? 

900 ವರ್ಷಗಳಾದವು ನೋಡ್ರಿ. ಬಸವಾದಿ ಶರಣರು ಮಾಡಿದ್ದು ಬಹಳ ಇದೆ. ಅದು ಇನ್ನೂ ಸಮಾಜದಲ್ಲಿ ಕಾಣಿಸುತ್ತಿಲ್ಲ. ಅವರ ಆಶಯಗಳನ್ನು ಸಾಕಾರಗೊಳಿಸಲು ಸಾಕಷ್ಟು ಪ್ರಯತ್ನಗಳಾಗುತ್ತಿವೆ. ಆದರೂ ಶರಣರ ಬದುಕಿನ ಮೌಲ್ಯಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳವುದು ಮುಖ್ಯ.ಈ ನಿಟ್ಟಿನಲ್ಲಿ ಏನೇನಾಗಬೇಕು ಅಂತೀರಿ?

ಶರಣರದು ನುಡಿದಂತೆ ನಡೆದ ಬದುಕು. ಈಗ ಮಾತಾಡುವುದೇ ಹೆಚ್ಚಾಗಿದೆ. ದೊಡ್ಡ ದೊಡ್ಡ ವೇದಿಕೆಗಳಲ್ಲಿ ಮಾತಾಡುವುದು, ಪುಸ್ತಕ ಬರೆಯುವುದು, ವಚನಗಳನ್ನು ಹಾಡುವುದು ಇಷ್ಟೇ ಆಗುತ್ತಿದೆ. ಇಷ್ಟೇ ಆದರೆ ಶರಣರ ಸಾಹಿತ್ಯದ ಸಾರ್ಥಕತೆ ಆಗುವುದಿಲ್ಲ. ವಚನಗಳನ್ನು ಅಂತರಂಗಕ್ಕೆ ಇಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಮಗೆ ನಾವೇ ಪ್ರಶ್ನೆ ಹಾಕಿ ಕೊಳ್ಳಬೇಕು.ಶರಣರ ಜೀವನ ಮೌಲ್ಯಗಳು ಜನರನ್ನು ತಟ್ಟುವುದು ಹೇಗೆ?

ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿವೆ. ಒಂದೆಡೆ ಸುಶಿಕ್ಷಿತರ ಸಂಖ್ಯೆ ಹೆಚ್ಚುತ್ತಾ ಇದೆ. ಆದರೆ,  ಮೂಢನಂಬಿಕೆಗಳು ಈಗೀಗ ಮತ್ತಷ್ಟು ಗಟ್ಟಿಯಾಗುತ್ತಿವೆ. ಶರಣರ ವಚನಗಳನ್ನು ಎಲ್ಲಿಯವರೆಗೆ ನಮ್ಮ ಜನ ಅರ್ಥ ಮಾಡಿಕೊಳ್ಳುವುದಿಲ್ಲವೋ, ಅವು ಬರೀ ಹಾಡಲಿಕ್ಕೆ, ಬರೀಲಿಕ್ಕೆ ಮಾತ್ರ ಅಂತ ತಿಳ್ಕೊಂಡಿರ‌್ತೇವೋ ಅಲ್ಲಿಯವರೆಗೆ ಮೂಢನಂಬಿಕೆಗಳು, ಕಂದಾಚಾರ ನಮ್ಮ ತಲಿಯೊಳಗಿಂದ ಹೋಗುವುದಿಲ್ಲ.ಶರಣರು ಎಲ್ಲರೂ ನಮ್ಮವರು ಎಂದರು. ಮನುಷ್ಯ-ಮನುಷ್ಯರ ನಡುವೆ ಭೇದಭಾವ ಮಾಡಲಿಲ್ಲ. ಎಲ್ಲ ಜೀವಿಗಳಲ್ಲೂ ದಯೆ ಇರಬೇಕು ಎಂದರು. ಆದರೆ, ನಮ್ಮ ನಡುವೆ ಹಾಗೆ ಆಗ್ತಾ ಇಲ್ಲ. ಬಡವರು-ಶ್ರೀಮಂತರು, ಮೇಲು-ಕೀಳು ಅನ್ನುವ ಭಾವನೆ ಕಿತ್ತು ಹೋಗ್ತಾ ಇಲ್ಲ.

ಮಠ-ಮಾನ್ಯಗಳು ಮಾಡಬೇಕಾದ ಕೆಲಸ ಮಾಡುತ್ತಿದ್ದೀರಿ... ಶರಣರು ಸಮಾಜದಲ್ಲಿ ಸಮಾನತೆ ತರಬೇಕು ಅಂತ ಕ್ರಾಂತಿ ಮಾಡಿದ್ರು. ವಚನಗಳ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದರು.ಈ ಕೆಲಸವನ್ನು ನಮ್ಮ ಮಠ-ಮಾನ್ಯಗಳು ಎಷ್ಟು ಮಾಡಬೇಕಿತ್ತೋ ಅಷ್ಟು ಮಾಡಲಿಲ್ಲ. ಬರೀ ಬಹಿರಂಗ ಶುದ್ಧಿಯ ಕಡೆಗೇ ಎಲ್ಲರ ಲಕ್ಷ್ಯ ಇದ್ದಂತೆ ಕಾಣುತ್ತದೆ. ಆದರೆ, ಅಂತರಂಗದ ಶುದ್ಧಿಯೂ ಆಗಬೇಕು. ಶರಣರು ಮಹಿಳೆಗೆ ದೊಡ್ಡ ಸ್ಥಾನ ಕಲ್ಪಿಸಿದ್ದಾರೆ. ಮಹಿಳೆಯರ ಮೇಲೆ ಎಲ್ಲ ನಿಟ್ಟಿನಿಂದಲೂ ದೌರ್ಜನ್ಯ ನಡೆಯುತ್ತಲೇ ಇದೆ....

ಮಹಿಳೆಯರ ಮೇಲೆ ಸಾಮಾಜಿಕವಾಗಿ, ಕೌಟುಂಬಿಕವಾಗಿ ಹಲವು ಒತ್ತಡಗಳು ಇವೆ. ಇದರಿಂದ ತಪ್ಪಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಮಹಿಳೆಯರಾಗಲೀ, ಪುರುಷರಾಗಲೀ ಎಲ್ಲರೂ ಬಿಸಿಲುಗುದುರೆ ಬೆನ್ನುಹತ್ತಿ ಹೊರಟಂತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ.ನಿಮ್ಮ ಸಮಾಜಸೇವಾ ಕಾರ್ಯಗಳಲ್ಲಿ ಕುಟುಂಬ ಸದಸ್ಯರ ಸಹಕಾರ ಹೇಗಿದೆ?

ಸಮಾಜಸೇವೆಯ ನನ್ನ ಎಲ್ಲ ಕೆಲಸಗಳಿಗೂ ನನ್ನ ಮಕ್ಕಳು, ಮೊಮ್ಮಕ್ಕಳು ಸಹಕಾರ ನೀಡುತ್ತಿದ್ದಾರೆ. ಇಲ್ಲದಿದ್ದರೆ ನನ್ನಿಂದ ಏನೂ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಮ್ಮಿಂದ ಸಮಾಜಕ್ಕೆ ಸ್ವಲ್ಪವಾದ್ರೂ ಉಪಯೋಗವಾದರೆ ಅಷ್ಟರಮಟ್ಟಿಗೆ ನಮ್ಮ ಜೀವನ ಸಾರ್ಥಕ. ಪ್ರತಿಯೊಬ್ಬರೂ ಅವರವರ ಕೈಲಾದ ಸೇವೆ ಮಾಡಬೇಕು.ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿಮ್ಮ ನೀರಿಕ್ಷೆ ಏನು?

ಬರೀ ಸಮ್ಮೇಳನ ಆಯೋಜಿಸುವುದರಿಂದ ಶರಣರ ಆಶಯಗಳನ್ನು ಸಾಕಾರಗೊಳಿಸಲು ಸಾಧ್ಯವಿಲ್ಲ. ಎಲ್ಲ ಕಾಯಕ ಸಮುದಾಯಗಳ ಜನರೂ ಇಂತಹ ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತಾಗಬೇಕು. ಶರಣರ ನಡೆದ ಹಾದಿಯಲ್ಲಿ ನಡೆಯಬೇಕು. ಆ ಮೂಲಕ ಸಮಾಜದಲ್ಲಿ ಪರಿವರ್ತನೆಯಾಗಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.