ಬುಧವಾರ, ಮೇ 12, 2021
20 °C

ಗಾಥಿಕ್ ಶೈಲಿಯ ಪ್ರಧಾನಾಲಯ ಸಮರ್ಪಣೆ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ:  ನಗರದ ಕ್ಯಾಥೋಲಿಕ ಕ್ರೈಸ್ತ ಸಮುದಾಯಕ್ಕೆ ಜೂನ್ 19 ಸಂಭ್ರಮದ ದಿನ.ಗುಲ್ಬರ್ಗ, ಯಾದಗಿರಿ, ಬೀದರ್ ಮತ್ತು ವಿಜಾಪುರ ಕಂದಾಯ ಜಿಲ್ಲೆಗಳ ಅಧಿಕಾರ ವ್ಯಾಪ್ತಿಯ ಗುಲ್ಬರ್ಗ ಕ್ಯಾಥೋಲಿಕ ಧರ್ಮ ಪ್ರಾಂತದ ಪ್ರಧಾನಾಲಯದ ನೂತನ ಕಟ್ಟಡವು ಧಾರ್ಮಿಕ ಸೇವೆಗೆ ಸಮರ್ಪಣೆಗೊಳ್ಳಲಿದೆ.ಗಾಥಿಕ್ ಶೈಲಿಯ ಕಮಾನು ಕಿಟಕಿ ಮತ್ತು ಬಾಗಿಲುಗಳಿರುವ ಇದು, ಗುಮ್ಮಟಗಳ ನಗರ ಗುಲ್ಬರ್ಗದಲ್ಲಿ ವಿಶಿಷ್ಟ ಶೈಲಿಯ ಎರಡು ಗೋಪುರಗಳು ಮತ್ತು ಒಂದು ಗುಮ್ಮಟದಿಂದ ಪ್ರಮುಖ ಹೆಗ್ಗುರುತಾಗಲಿದೆ.ಫ್ರೆಂಚರು ಮತ್ತು ಬ್ರಿಟಿಷ್‌ರ ಮೊದಲು ಭಾರತಕ್ಕೆ ಕಾಲಿರಿಸಿದ್ದ ಪೋರ್ಚುಗೀಸರು ಗೋವಾದಲ್ಲಿ ತಳವೂರಿ ವಿಜಾಪುರದ ಆದಿಲ್ ಶಾಹಿಗಳೊಂದಿಗೆ ವ್ಯಾಪಾರ  ಸಂಬಂಧ ಇರಿಸಿಕೊಂಡಿದ್ದರು, ಪರಸ್ಪರ ಯುದ್ಧಗಳಲ್ಲೂ ತೊಡಗಿದ್ದರು. ಆಗ ವಿಜಾಪುರದಲ್ಲೂ ಕ್ರೈಸ್ತರಿದ್ದರು. ವಿಜಾಪುರವನ್ನು ಕೇಂದ್ರವಾಗಿರಿಸಿಕೊಂಡು ಕ್ಯಾಥೋಲಿಕ್ ಧರ್ಮಪ್ರಾಂತ್ಯ ರಚಿಸಿ ಅಲ್ಲಿಗೆ ಗೋವಾದಿಂದ ಒಬ್ಬ ಬಿಷಪ್‌ರನ್ನು ನಿಯೋಜಿಸಲಾಗಿತ್ತು.ಈ ಹಿಂದೆ ಗುಲ್ಬರ್ಗ ಜಿಲ್ಲೆಯ ಭಾಗವಾಗಿದ್ದ, ಈಗ ಯಾದಗಿರಿ ಜಿಲ್ಲೆಯಲ್ಲಿರುವ ಸುರಪುರದ ಹಿಂದಿನ ಸಂಸ್ಥಾನದಲ್ಲಿ ಅಲ್ಲಿನ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಕರ್ನಲ್ ಫಿಲಿಪ್ ಮೆಡೋಸ್ ಟೈಲರ್, ತನ್ನ ಆತ್ಮಕಥೆಯಲ್ಲಿ 19ನೇ ಶತಮಾನದ ಆದಿ ಭಾಗದಲ್ಲಿ ಚಿತ್ತಾಪುರ ಪಟ್ಟಣದಲ್ಲಿ ಕ್ರೈಸ್ತ ಸಮುದಾಯವಿತ್ತು ಎಂದು ದಾಖಲಿಸಿದ್ದಾನೆ. ಈಗಲೂ ಅಲ್ಲಿ ಕ್ರೈಸ್ತರಿದ್ದಾರೆ. ಅಲ್ಲೊಂದು ಪುರಾತನ ಚರ್ಚ್ ಇದೆ. ಯಾದಗಿರಿ ಜಿಲ್ಲೆಯ ಶಹಾಪುರದ್ಲ್ಲಲೂ ಒಂದು ಕ್ರೈಸ್ತ ಮಿಷನ್ ಇತ್ತೆಂದು ಫಾದರ್ ಅಂತಪ್ಪ ಜೆಸುಯಿಟ್ ಮಿಷನರಿಗಳ ವರದಿಗಳನ್ನು ಆಧರಿಸಿ ಬರೆದಿರುವ ಪುಸ್ತಕಗಳಲ್ಲಿ ದಾಖಲಿಸಿದ್ದಾರೆ.ಇಪ್ಪತ್ತನೇ ಶತಮಾನ: ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಸ್ಥಳೀಯರೊಂದಿಗೆ ತಮಿಳುನಾಡು ಮತ್ತು ಕೇರಳ ಮೂಲದ ಕ್ರೈಸ್ತರು ಗುಲ್ಬರ್ಗ ಪಟ್ಟಣದಲ್ಲಿ ಬಂದು ನೆಲೆಸತೊಡಗಿದರು. 1960ರಲ್ಲಿ ಬೆರಳೆಣಿಕೆಯಷ್ಟಿದ್ದ ಕಥೋಲಿಕ್ ಕ್ರೈಸ್ತ ಸಮುದಾಯದ ಆಧ್ಯಾತ್ಮಿಕ ಅವಶ್ಯಕತೆಗಳನ್ನು ಪೂರೈಸುವ ಜವಾಬ್ದಾರಿಯನ್ನು ರಾಯಚೂರಿನಲ್ಲಿರುವ ಚರ್ಚಿನ ಧರ್ಮಕೇಂದ್ರದ ಪಾಲನಾ ಗುರುಗಳಿಗೆ ಒಪ್ಪಿಸಲಾಗಿತ್ತು.ಆಗ ಈ ಪ್ರದೇಶ ಹೈದ್ರಾಬಾದ್ ಕಥೋಲಿಕ್ ಧರ್ಮಪ್ರಾಂತ್ಯಕ್ಕೆ ಸೇರಿತ್ತು. ರಾಜ್ಯ ಪುನರ್ ವಿಂಗಡಣೆಯ ನಂತರ, ಹೈದ್ರಾಬಾದ್ ಕರ್ನಾಟಕದ ವ್ಯಾಪ್ತಿಯ ಎಲ್ಲ ಜಿಲ್ಲೆಗಳೊಂದಿಗೆ ಗುಲ್ಬರ್ಗ ಕಂದಾಯ ಜಿಲ್ಲೆಯು ಬಳ್ಳಾರಿ ಧರ್ಮಪ್ರಾಂತ್ಯದ ವ್ಯಾಪ್ತಿಗೆ ಬಂದಿತು. ಮುಂದೆ 1962ರಲ್ಲಿ ಫಾದರ್ ಪಾಪಯ್ಯ ಎಡನಪಲ್ಲಿ ಗುಲ್ಬರ್ಗ ಧರ್ಮಕೇಂದ್ರದ ಪ್ರಥಮ ಸ್ಥಾನಿಕ ಪಾಲನಾ ಗುರುಗಳಾಗಿ ನೇಮಕಗೊಂಡ ನಂತರ ಗುಲ್ಬರ್ಗಲ್ಲಿರುವ ದೈವಾನುಗ್ರಹ ಮಾತೆ ಮರಿಯಳ ಚರ್ಚಿನ ಇತಿಹಾಸ ಆರಂಭವಾಗುತ್ತದೆ.ಅದೇ ಸಮಯದಲ್ಲಿ ಕೇರಳದ ಸಂತ ತೆರೆಸಾಳ ಕಾರ್ಮೆಲೈಟ್ ಕ್ರೈಸ್ತ ಸನ್ಯಾಸಿನಿಯರು ಗುಲ್ಬರ್ಗಕ್ಕೆ ಕಾಲಿರಿಸಿದರು. 1967ರಲ್ಲಿ ಇಂದು ಚರ್ಚಿನ ಪಾಲನಾ ಗುರುಗಳ ಮನೆಯಿರುವ ಜಾಗದಲ್ಲಿ ಚಾಪೆಲ್ ಅಸ್ತಿತ್ವದಲ್ಲಿ ಬಂದಿತು. ಮುಂದೆ 1975ರಲ್ಲಿ ದೈವಾನುಗ್ರಹ ಮಾತೆ ಸಂತ ಮರಿಯಳ ಚರ್ಚ್ ಕಟ್ಟಲಾಯಿತು.ಪ್ರತ್ಯೇಕ ಧರ್ಮಪ್ರಾಂತ್ಯ: ನಿಧಾನವಾಗಿ ಗುಲ್ಬರ್ಗ ಮತ್ತು ನೆರೆಹೊರೆಯ ಜಿಲ್ಲೆಗಳಾದ ಬೀದರ್ ಮತ್ತು ವಿಜಾಪುರ ಜಿಲ್ಲೆಗಳಲ್ಲಿ ಕ್ರೈಸ್ತರ ಸಂಖ್ಯೆ ಬೆಳೆಯಿತು. ಇಲ್ಲಿ ಪ್ರತ್ಯೇಕ ಧರ್ಮಪ್ರಾಂತ್ಯದ ಅಗತ್ಯ ಕಾಣಿಸಿಕೊಂಡಿತು. ಕ್ಯಾಥೋಲಿಕ್ ಕ್ರೈಸ್ತ ಧರ್ಮಸಭೆಯ ಜಗದ್ಗುರುಗಳು ಪ್ರತ್ಯೇಕ ಧರ್ಮಪ್ರಾಂತ್ಯ ರಚನೆಗೆ ಮುಂದಾದರು. 2005ರಲ್ಲಿ ಗುಲ್ಬರ್ಗ ಕಥೋಲಿಕ್ ಕ್ರೈಸ್ತರ ಧರ್ಮಪ್ರಾಂತ್ಯವು ಅಸ್ತಿತ್ವಕ್ಕೆ ಬಂದಿತು. ಬೀದರ್ ಜಿಲ್ಲೆಯಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದ್ದ ರೆ.ಫಾ. ರಾಬರ್ಟ್. ಮೈಕಲ್ ಮಿರಾಂಡ್‌ರನ್ನು ಈ ಹೊಸ ಧರ್ಮಪ್ರಾಂತ್ಯದ ಪ್ರಥಮ ಬಿಷಪ್‌ರೆಂದು ನೇಮಕ ಮಾಡಲಾಯಿತು. ಗುಲ್ಬರ್ಗದಲ್ಲಿನ ದೈವಾನುಗ್ರಹ ಮಾತೆ ಸಂತ ಮರಿಯಳ ಚರ್ಚ್ ಪ್ರಧಾನಾಲಯ(ಕ್ಯಾಥೆಡ್ರಲ್)ವಾಗಿ ಮೇಲ್ದರ್ಜೆಗೆ ಏರಿತು.ಹೆಚ್ಚಿದ ಕ್ಯಾಥೋಲಿಕ ಕ್ರೈಸ್ತರ ಸಂಖ್ಯೆಗೆ ಈ ಮಹಾದೇವಾಲಯ ಸಾಲದಾಯಿತು. ಬಿಷಪ್ ಡಾ.ಮಿರಾಂಡ್ ಮತ್ತು ಧರ್ಮಕೇಂದ್ರದ ಪಾಲನಾಗುರು ಫಾ. ವಿಕ್ಟರ್ ಮೆಚಾಡೋ ಪ್ರಧಾನಾಲಯದ ನೂತನ ಕಟ್ಟಡದ ಕನಸು ಕಂಡರು.ಕೊಡುಗೈ ದಾನಿಗಳು ಮತ್ತು ಭಕ್ತರ ಆಸಕ್ತಿಯಿಂದ ಸುಮಾರು ರೂ 5 ಕೋಟಿ ವೆಚ್ಚದಲ್ಲಿ ಪ್ರಧಾನಾಲಯದ ನೂತನ ಕಟ್ಟಡವನ್ನು ಕಟ್ಟಲಾಗಿದೆ. ಈ ಹೊಸ ಕಟ್ಟಡದಲ್ಲಿ ಏಕ ಕಾಲಕ್ಕೆ 800 ಮಂದಿ ಭಕ್ತರು ಪೂಜೆಯಲ್ಲಿ ಪಾಲ್ಗೊಗೊಳ್ಳಬಹುದಾಗಿದೆ. ಅದರಷ್ಟೇ ವಿಶಾಲವಾದ ನೆಲಮಹಡಿಯಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶ ಕಲ್ಪಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.