ಶನಿವಾರ, ಮೇ 21, 2022
25 °C

ಬಲಿಗಾಗಿ ಕಾದಿದೆ ತೆರೆದ ಚರಂಡಿ

ಪ್ರಜಾವಾಣಿ ವಾರ್ತೆ/ನವೀನ್‌ಕುಮಾರ್ ಜಿ. Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ವಿವಿಧೆಡೆ ಗಬ್ಬು ನಾರುವ ತೆರೆದ ಚರಂಡಿ, ಅಲ್ಲಲ್ಲಿ ದೊಡ್ಡ ದೊಡ್ಡ ಬಿರುಕು, ನಡೆಯುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಚರಂಡಿ ಒಳಗೆ ಬೀಳುವುದು ಗ್ಯಾರಂಟಿ. ಮಳೆ ಬಂದರೆ ರಸ್ತೆ ಯಾವುದು, ಚರಂಡಿ ಯಾವುದು ಎಂದು ತಿಳಿಯದೆ ಪಾಲಿಕೆಗೆ ಹಿಡಿ ಶಾಪ ಹಾಕುವ ಜನತೆ. ಇದು ಗುಲ್ಬರ್ಗ ನಗರದ ಜನರ ವಾಸ್ತವ ಸ್ಥಿತಿ.ಮಳೆಗಾಲ ಈಗಾಗಲೇ ಆರಂಭವಾಗಿದೆ. ಜೋರಾಗಿ ಮಳೆ ಬಂದರೆ ಕೆಲವೆಡೆ ಚರಂಡಿ ನೀರು ಉಕ್ಕಿ ರಸ್ತೆಯ ಮೇಲೆ ಹರಿಯುತ್ತಿದೆ. ಇದು ವಾಹನ ಸವಾರರಿಗೆ ಮಾತ್ರವಲ್ಲ, ಪಾದಚಾರಿಗಳೂ ಸಂಕಷ್ಟವನ್ನನುಂಟು  ಮಾಡುತ್ತಿದೆ. ಒಂದು ಕಡೆ ರಸ್ತೆ ಕಾಮಗಾರಿಗಾಗಿ ಅಲ್ಲಲ್ಲಿ ಅಗೆಯಲಾಗಿದೆ. ಜೊತೆಗೆ ಜನರಿಗೆ ನಡೆದಾಡಲು ಕಾಲುದಾರಿಯೂ ಇಲ್ಲದೆ ಬವಣೆ ಪಡುವಂತಾಗಿದೆ.ನಗರದ ಎಸ್.ಎಂ. ಪಂಡಿತ ರಂಗಮಂದಿರ ಎದುರುಗಡೆ ದೊಡ್ಡ ಚರಂಡಿ ಇದ್ದು, ಇದರಲ್ಲಿ ಅಲ್ಲಲ್ಲಿ ರಂಧ್ರ ತೆರೆದು ಮುಚ್ಚದೆ ಹಾಗೇ ಬಿಡಲಾಗಿದೆ. ಇದು ಪಾದಚಾರಿಗಳಿಗೆ ಸಂಚಕಾರವನ್ನುಂಟು ಮಾಡುತ್ತಿದೆ.  ರಾತ್ರಿ ವೇಳೆ ಜನರು ನಡೆದಾಡುವಾಗ ಸ್ಪಲ್ಪ ಎಡವಿದರೂ ನೇರ ಚರಂಡಿಗೆ ಬೀಳುವ ಅಪಾಯವಿದೆ. ಅಲ್ಲಿ ಅಂಗಡಿಗಳ ಮುಂದೆಯೇ ಈ ರೀತಿ ಚರಂಡಿ ಇದ್ದು ಹೆಚ್ಚಿನ ಅಪಾಯ ಆಹ್ವಾನಿಸುತ್ತದೆ.ಜಗತ್ ಸರ್ಕಲ್ ಬಳಿ ಸಿಗ್ನಲ್ ದಾಟಿ ಮುಂದೆ ಸಾಗುವಲ್ಲಿ ಆಳವಾದ ಚರಂಡಿ ಬಾಯ್ತೆರೆದು ನಿಂತಿದೆ. ಚರಂಡಿಗೆ ಸ್ಲ್ಯಾಬ್ ಅಳವಡಿಸದೆ ಇರುವುದರಿಂದ ವಾಹನ ಸವಾರರಲ್ಲಿ ಭೀತಿ ಮೂಡಿಸುತ್ತಿದೆ. ಈ ಚರಂಡಿಯಿಂದಾಗಿ ಇಲ್ಲಿ ಆಗಾಗ ವಾಹನ ಸಂಚಾರಕ್ಕೆ ಅಡಚಣೆಯೂ ಉಂಟಾಗುತ್ತಿದೆ.`ರಾತ್ರಿ ವೇಳೆ ಸಿಗ್ನಲ್‌ನಲ್ಲಿ ಸಂಚರಿಸುವಾಗ ವಾಹನ ಸವಾರರು ಸ್ಪಲ್ವ ಎಚ್ಚರ ತಪ್ಪಿ ಮುಂದೆ ಸಾಗಿದರೂ ವಾಹನ ಚರಂಡಿಗೆ ಬೀಳುವ ಅಪಾಯವಿದೆ. ಅಲ್ಲದೆ ಆಗಾಗ್ಗೆ ರಸ್ತೆ ಸಂಚಾರಕ್ಕೂ ಇಲ್ಲಿ ತೊಡಕು ಉಂಟಾಗುತ್ತಿದೆ. ಮೂರು ರಸ್ತೆ ಸೇರುವಲ್ಲಿ ಚರಂಡಿ ತೆರೆದ ಸ್ಥಿತಿಯಲ್ಲಿರುವುದರಿಂದ ರಾತ್ರಿ ವೇಳೆ ವಾಹನ ಚಾಲಕರಿಗೆ ಇದು ಗೋಚರವಾಗದೆ ಅಪಾಯ ಉಂಟಾಗಬಹುದು' ಎನ್ನುತ್ತಾರೆ ನಗರದ ಆಟೊ ರಿಕ್ಷಾ ಚಾಲಕ ಅಭಿಷೇಕ.ಇನ್ನು ಶರಣ ಬಸವೇಶ್ವರ ದೇವಾಲಯ ರಸ್ತೆಯ ಬದಿಯಲ್ಲೂ ಚರಂಡಿಯನ್ನು ಸ್ಲ್ಯಾಬ್ ಹಾಕಿ ಮುಚ್ಚದೆ ಭೀತಿ ಸೃಷ್ಟಿಸುತ್ತಿದೆ. ಕೆಲವೆಡೆ ತೆರೆದ ಚರಂಡಿಯಿಂದ ಗಬ್ಬು ವಾಸನೆ ಬರುತ್ತಿದ್ದು ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದೆ.`ಚರಂಡಿ ಕಾಮಗಾರಿ ನಡೆಸುವಾಗ ಅಲ್ಲಲ್ಲಿ ಮುಚ್ಚದೆ ಹಾಗೆ ಬಿಟ್ಟಿದ್ದು, ಮಕ್ಕಳು, ಜಾನುವಾರುಗಳು ಬೀಳುವ ಅಪಾಯವಿದೆ. ಮಳೆ ಬಂದರೆ ಚರಂಡಿಯಲ್ಲಿ ರಭಸವಾಗಿ ನೀರು ಹರಿಯುವುದರಿಂದ ಮತ್ತಷ್ಟು ಅಪಾಯವಿದೆ' ಎನ್ನುತ್ತಾರೆ. ಎಸ್. ಎಂ. ಪಂಡಿತ ರಂಗಮಂದಿರ ಬಳಿಯ ವ್ಯಾಪಾರಿಯೊಬ್ಬರು.`ಶೀಘ್ರ ಕ್ರಮ'

ಜಗತ್ ಸರ್ಕಲ್ ಬಳಿ ತೆರೆದ ಸ್ಥಿತಿಯಲ್ಲಿರುವ ಚರಂಡಿಗೆ ಸ್ಲ್ಯಾಬ್ ಅಳವಡಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು. ನಗರದ ವಿವಿಧೆಡೆ ಚರಂಡಿ ತೆರೆದ ಸ್ಥಿತಿಯಲ್ಲಿರುವುದು ನಿಜ. ಆದರೆ ಇವೆಲ್ಲಕ್ಕೂ ಸ್ಲ್ಯಾಬ್ ಅಳವಡಿಸುವ ಯೋಜನೆ ಸದ್ಯಕ್ಕೆ ಇಲ್ಲ. ಈ ಕುರಿತು ಪರಿಗಣಿಸಲಾಗುವುದು. ಕೆಲವು ಕಡೆ ಚರಂಡಿ ಸ್ವಚ್ಛಗೊಳಿಸುವ ಸಲುವಾಗಿ ಸ್ಲ್ಯಾಬ್ ಅಳವಡಿಸಿಲ್ಲ. ಇನ್ನು ಕೆಲವು ಕಡೆ ಚರಂಡಿ ಸ್ಚಚ್ಛತೆಗಾಗಿ ಇರಿಸಿದ ರಂಧ್ರಗಳ ಮುಚ್ಚಳವನ್ನು ಸ್ಥಳೀಯರೇ ತೆಗೆದು ಕಸ ಸುರಿಯುವುದರಿಂದ ಚರಂಡಿ ಅಲ್ಲಲ್ಲಿ ಕಟ್ಟಿ ನಿಲ್ಲುತ್ತಿದೆ. ಸ್ವಚ್ಫತೆ ದೃಷ್ಟಿಯಿಂದ ಸ್ಥಳೀಯರ ಸಹಕಾರ ಅಗತ್ಯ.

-ಆರ್.ಪಿ ಜಾಧವ್,

ಕಾರ್ಯ ನಿರ್ವಾಹಕ ಎಂಜಿನಿಯರ್,

ಮಹಾನಗರ ಪಾಲಿಕೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.