ಮಂಗಳವಾರ, ಜನವರಿ 28, 2020
29 °C

ಅಂಧ ಮಕ್ಕಳಿಗೆ ‘ಗುರು ಭಾಗ್ಯ!’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: 2 ವರ್ಷಗಳಿಂದ ‘ಬ್ರೈಲ್ ಪುಸ್ತಕ’ ದ ಮೇಲೆ ಬೆರಳಾಡಿಸುತ್ತ ‘ಏಕಲವ್ಯ’ ನಂತೆ ಓದಿನಲ್ಲಿ ತೊಡಗಿಸಿ ಕೊಂಡಿದ್ದ ವಿದ್ಯಾರ್ಥಿಗಳಿಗೆ ಈಗ ‘ಗುರು ಭಾಗ್ಯ’ ದೊರೆತಿದೆ.–ಇದು ಇಲ್ಲಿನ ಅಂಧ ಬಾಲಕರ ಸರ್ಕಾರಿ ಪ್ರೌಢಶಾಲೆ ಕಥೆ. ಹಲವು ವರ್ಷಗಳಿಂದ ‘ವಿಶೇಷ ಶಿಕ್ಷಕ’ರು ಇಲ್ಲದ್ದರಿಂದ ಈ ವಿದ್ಯಾರ್ಥಿಗಳು ಪಾಠ ಪ್ರವಚನಕ್ಕೆ ಪರದಾಡುವಂತಾಗಿತ್ತು. ಇದೀಗ, ತಾತ್ಕಾಲಿಕವಾಗಿ ಶಿಕ್ಷಕರನ್ನು ನೇಮಿಸಿಕೊಂಡಿದ್ದರಿಂದ ವಿದ್ಯಾ ರ್ಥಿಗಳ ಮೊಗದಲ್ಲಿ ಮಂದಹಾಸ ಮೂಡಿದೆ.1 ರಿಂದ 10ನೇ ತರಗತಿಯಲ್ಲಿ ಒಟ್ಟು 54 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಇವರಿಗೆ ಉಚಿತ ಊಟ, ವಸತಿ, ಪಠ್ಯಪುಸ್ತಕ, ಬ್ರೈಲ್ ಉಪಕರಣ ಸೇರಿದಂತೆ ಎಲ್ಲ ಸೌಲಭ್ಯ ಗಳನ್ನೂ ಒದಗಿಸಲಾಗಿದೆ. ಓದಿನಲ್ಲಿ ಸಾಮಾನ್ಯ ಮಕ್ಕಳಷ್ಟೇ ಚುರುಕಾಗಿರುವ ಇವರು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಕೆಲವರು ಅಂಧ ಮಕ್ಕಳ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.‘ಶಿಕ್ಷಕರ ಹುದ್ದೆಗಳು ಖಾಲಿ ಇದ್ದರಿಂದ ತೊಂದರೆ ಆಗಿತ್ತು. ಈಗ ಸಮಸ್ಯೆ ನೀಗಿದೆ. ಅಲ್ಲದೇ, ಸರ್ಕಾರ ಕೆಪಿಎಸ್‌ಸಿ ಮೂಲಕ ಕಾಯಂ ಶಿಕ್ಷಕರ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ. ಹೀಗಾಗಿ, ಶೀಘ್ರದಲ್ಲೇ ಕಾಯಂ ವಿಶೇಷ ಶಿಕ್ಷಕರು ನೇಮಕಗೊಳ್ಳುವರು. ಇಲ್ಲಿನ ಮುಖ್ಯ ಶಿಕ್ಷಕಿ ಮೀನಾಕ್ಷಮ್ಮ ಪಾಟೀಲ ಅವರು ವಿದ್ಯಾರ್ಥಿಗಳ ಪ್ರಗತಿಗೆ ಶ್ರಮಿಸುತ್ತಿದ್ದು, ಅವರಿಗೆ ಈ ಸಾಲಿನ ರಾಜ್ಯಮಟ್ಟದ ಅತ್ತುತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಿದೆ’ ಎಂದು ಪ್ರಭಾರ ಶಿಕ್ಷಕ ಚನ್ನಬಸಯ್ಯ ಹೇಳುತ್ತಾರೆ.‘1983ರಲ್ಲಿ ಬಿ.ಇಡಿ ವ್ಯಾಸಂಗ ಮಾಡುವವರೆಗೆ ಎರಡೂ ಕಣ್ಣು ಸರಿ ಯಾಗಿದ್ದವು. ರೆಟಿನಾದಲ್ಲಿ ಸಮಸ್ಯೆ ಆದ್ದರಿಂದ 83ರಲ್ಲೇ ಎರಡೂ ಕಣ್ಣು ಕಳೆದುಕೊಂಡೆ. ಬಳಿಕ ಚೆನ್ನೈನಲ್ಲಿ ತರಬೇತಿ ಪಡೆದು ಖಾಸಗಿ ಶಾಲೆಯಲ್ಲಿ 7 ವರ್ಷ ಸೇವೆ ಸಲ್ಲಿಸಿದೆ. 1994ರಲ್ಲಿ ಈ ಶಾಲೆಗೆ ನೇಮಕವಾಗಿ ಬಂದೆ. ಅಂದಿನಿಂದ ಈವರೆಗೆ ಬೋಧನೆಯಲ್ಲಿ ತೊಡಗಿದ್ದೇನೆ. ನಾನೂ ಅಂಧನಾದ್ದ ರಿಂದ ಅಂಧರ ಸಮಸ್ಯೆಗಳನ್ನು ಚೆನ್ನಾಗಿ ಬಲ್ಲೆ’ ಎಂದು ಅವರು ಹೇಳುತ್ತಾರೆ.

ಶಿಕ್ಷಕರ ಕೊರತೆ ನೀಗಿದೆ

ಎರಡು ವರ್ಷ ಶಿಕ್ಷಕರು ಇಲ್ಲದ್ದರಿಂದ ಪಾಠ ಪ್ರವಚನಗಳಿಗೆ ಅಡ್ಡಿಯಾಗಿತ್ತು. ಈಗ 12 ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗಿದ್ದು, ಸಮಸ್ಯೆ ಬಗೆಹರಿದಿದೆ.

–ಚನ್ನಬಸಯ್ಯ, ಶಿಕ್ಷಕ

ಪ್ರತಿಕ್ರಿಯಿಸಿ (+)