ಮಂಗಳವಾರ, ಜನವರಿ 28, 2020
19 °C

‘ಮಾನವ ಹಕ್ಕು ರಕ್ಷಣೆ ಸರ್ಕಾರದ ಕರ್ತವ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಪ್ರತಿ ಮನುಷ್ಯನು ಹುಟ್ಟಿನಿಂ­ದಲೇ ಮಾನವ ಹಕ್ಕುಗಳನ್ನು ಹೊಂದಿ­ರುತ್ತಾನೆ. ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದ್ದರೆ, ರಕ್ಷಣೆ ನೀಡುವುದು ಸರ್ಕಾರದ ಕರ್ತವ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಡಿ.ಆರ್.ವೆಂಕಟಸುದರ್ಶನ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ನಗರದ ಡಾ. ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಮಂಗಳವಾರ ‘ಮಾನವ ಹಕ್ಕುಗಳ ದಿನಾಚರಣೆ’ ಅಂಗವಾಗಿ ಹಮ್ಮಿ­ಕೊಂಡ ‘ಕಾನೂನು ಅರಿವು ಮತ್ತು ನೆರವು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಎರಡನೇ ವಿಶ್ವ ಯುದ್ಧದ ಹಾನಿ­ಯಿಂದ ಎಚ್ಚೆತ್ತ ವಿಶ್ವದ ರಾಷ್ಟ್ರಗಳು ಸೇರಿಕೊಂಡು ಶಾಂತಿಗಾಗಿ ವಿಶ್ವ ಸಂಸ್ಥೆಯನ್ನು ರಚಿಸಿದವು. 1948ರ ಡಿಸೆಂಬರ್ 10 ರಂದು ಮಾನವ ಹಕ್ಕುಗಳನ್ನು ರಚಿಸಲಾಯಿತು. ಇವು­ಗಳನ್ನು ಮನುಷ್ಯ ಮೂಲಭೂತವಾಗಿ ಪಡೆಯುತ್ತಾನೆಯೇ ಹೊರತು ಯಾರೂ ನೀಡುವುದಲ್ಲ. ಇವುಗಳ ರಕ್ಷಣೆಗೆ ಪ್ರಪಂಚದಲ್ಲಿ ಸ್ವಾತಂತ್ರ್ಯ, ನ್ಯಾಯ ಮತ್ತು ಶಾಂತಿ ನೆಲೆಸಬೇಕು. ಅದಕ್ಕೆ ವಿಶ್ವವೇ ಒಂದು ಕುಟುಂಬವಾಗಿ ಮಾರ್ಪಡಬೇಕು ಎಂದು ಆಶಿಸಿದರು.ಭಾರತದಲ್ಲಿ 1993ರಲ್ಲಿ ಮಾನವ ಹಕ್ಕುಗಳನ್ನು ರಚಿಸಲಾಯಿತು. 2006ರಲ್ಲಿ ಅದಕ್ಕೆ ತಿದ್ದುಪಡಿಗಳನ್ನು ಮಾಡ­ಲಾಯಿತು. ಇದಕ್ಕೂ ಹಿಂದೆ ಮಾನವ ಹಕ್ಕುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಹಲವಾರು ಕಾನೂನು­ಗಳನ್ನು ಜಾರಿಗೊಳಿಸ­ಲಾಗಿದೆ. 1829­ರಲ್ಲಿ ಸತಿ ಸಹಗಮನ ಪದ್ಧತಿ ನಿರ್ಮೂ­ಲನೆ, 1929ರಲ್ಲಿ ಬಾಲ್ಯ ವಿವಾಹ ನಿಷೇಧ, 1955ರಲ್ಲಿ ಮಹಿಳೆಯರಿಗೆ ಆಸ್ತಿಯಲ್ಲಿ ಸಮಾನ ಹಕ್ಕು, 1978­ರಲ್ಲಿ ಕಟ್ಟುಪಾಡುಗಳಿಂದ ವಿನಾಯಿತಿ, 1985 ರಿಂದ 86 ರಲ್ಲಿ ಮುಸ್ಲಿಂ ಮಹಿಳೆಯರು ವಿಚ್ಛೇದನವಾದಾಗ ಜೀವನಾಂಶ ನೀಡುವುದು ಮತ್ತಿತರ ಹಕ್ಕು ರಕ್ಷಣೆಯ ಕಾನೂನುಗಳು ಬಂದಿವೆ ಎಂದರು.ಜಿಲ್ಲಾಧಿಕಾರಿ ಡಾ. ಎನ್.ವಿ.­ಪ್ರಸಾದ್ ಮಾತನಾಡಿ, ಸಮಾಜದ ಎಲ್ಲ ವರ್ಗಗಳ ರಕ್ಷಣೆ ಮಾಡಲು ಕಾನೂನುಗಳನ್ನು ರಚಿಸಿ, ಹಕ್ಕುಗಳನ್ನು ನೀಡಲಾಗಿದೆ. ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಉಲ್ಲಂಘನೆ ಆದಾಗ ಕೈಗೊಳ್ಳುವ ಕ್ರಮಗಳು ಮತ್ತು ಹಕ್ಕು ಬಾಧ್ಯತೆಗಳ ಬಗ್ಗೆ ತಿಳಿವಳಿಕೆ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.ಜಿಲ್ಲಾಧಿಕಾರಿ ಕಾರ್ಯಾಲಯದ ಕಾನೂನು ಶಾಖೆಯ ಸಲಹೆಗಾರರು, ನಿವೃತ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಂ. ಬಿ. ಬಿರಾದಾರ್ ಉಪನ್ಯಾಸ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್‌ ಸಿಂಗ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ. ಎಚ್‌. ಎಂ. ಕುಮಾರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ. ಯೂಸುಫ್ ಇದ್ದರು.

ಪ್ರತಿಕ್ರಿಯಿಸಿ (+)