ಶನಿವಾರ, ಜನವರಿ 25, 2020
28 °C

ವ್ಯಾಪಾರ ಸಾಕಾಯ್ತು; ಬೇಸಾಯ ಬೇಕಾಯ್ತು

ಪ್ರಜಾವಾಣಿ ವಾರ್ತೆ / –ಅಶೋಕ ಸಾಲವಾಡಗಿ Updated:

ಅಕ್ಷರ ಗಾತ್ರ : | |

ಸುರಪುರ: ಸುರಪುರದಿಂದ ವಾಗಣಗೇ­ರಿಗೆ ಬೈಕ್‌ ಮೇಲೆ ಹೊರಟಿದ್ದೆ. ನರಸಿಂಗನಪೇಟೆ ಗ್ರಾಮದ ರಸ್ತೆಯ ಪಕ್ಕ ಹೊಲದ ದಂಡೆ ಗುಂಟಾ ಸಾಲಾಗಿ ಬೆಳೆದಿದ್ದ ತೊಗಚಿ ಗಿಡಗಳು, ವಿವಿಧ ತರಕಾರಿ ಬೆಳೆಗಳು, ಹನಿ ನೀರಾವರಿ, ಸುಂದರ ಬೇಲಿ ನನ್ನನ್ನು ಹೊಲಕ್ಕೆ ಭೇಟಿ ನೀಡಲು ಪ್ರೇರೆಪಿಸಿದವು.ಕ್ಷಣವೂ ತಡ ಮಾಡದೆ ಹೊಲದ ಬಳಿ ಹೊರಟೆ. ಹೊಲದ ಆಳು ‘ನಿಲ್ಲಿ ಸರ್, ಬೇಲಿ ತಂತಿ ಮುಟ್ಟಬೇಡಿ’ ಎಂದ. ಹೆದರಿ ಹಾಗೇ ನಿಂತೆ. ನನ್ನನ್ನು ವಿಚಾರಿಸಿ ಇನ್ನೊಂದು ಬದಿಯಿಂದ ಗೇಟ್ ಮುಖಾಂತರ ಹೊಲದ ಒಳಗೆ ಕರೆದುಕೊಂಡು ಹೋದ. ಹೊಲದ ಒಳಗಿನ ಸ್ವಚ್ಛತೆ ಕಂಡು ದಂಗಾದೆ. ರೈತ ಸತೀಶಕುಮಾರ ವೆಂಕ­ಟೇಶ್ವರರಾವ ಕೃಷಿ ಕಾಯಕದಲ್ಲಿ ತನ್ಮಯ­ರಾಗಿದ್ದರು. ಕಸ, ಕಡ್ಡಿಯನ್ನು ತೆಗೆದು ಹಾಕುತ್ತಿದ್ದರು. ತರಕಾರಿ ಗಿಡ, ಬಳ್ಳಿಗಳಿಗೆ ಹನಿ ನೀರಾವರಿ ಪದ್ಧತಿ­ಯಿಂದ ನೀರು ಬಿಡುತ್ತಿದ್ದರು. ನಂತರ ಹನಿ ನೀರಾವರಿ ಪೈಪ್‌ನಿಂದಲೆ ಗೊಬ್ಬರ­ವನ್ನು ಬಿಟ್ಟರು.ಸತೀಶ ಅವರೊಂದಿಗಿನ ಮಾತು­ಕತೆಯ ಸಂದರ್ಭದಲ್ಲಿ ಅವರು ಕೃಷಿ ಮೇಲೆ ವ್ಯಾಮೋಹಿತರಾದ ಬಗ್ಗೆ ವಿವರವನ್ನು ಬಿಚ್ಚಿಟ್ಟರು.

‘ನನ್ನ ಹಿರಿಯರು ಸಿರುಗುಪ್ಪದವರು. ನಾನು ವ್ಯಾಪಾರಕ್ಕೆಂದು ಸುರಪುರಕ್ಕೆ ಬಂದೆ. ಸುರಪುರದ ಬಸ್‌ ನಿಲ್ದಾಣದ ಹತ್ತಿರ ಬಿತ್ತನೆ ಬೀಜ ಮಾರಾಟ ಮಾಡುತ್ತಿದ್ದೇನೆ. ಸ್ನೇಹಿತರೊಬ್ಬರು ಬೇರೆ ಊರಿಗೆ ತಮ್ಮ ಸಂಸಾರ ಬದಲಿ­ಸಿದ್ದರಿಂದ ಅವರ ಹೊಲವನ್ನು ನನಗೆ ಮಾರಾಟ ಮಾಡಿದರು. ನಾನು ಮತ್ತು ನನ್ನ ಮಾವ ಇಬ್ಬರು ಸೇರಿ ಆರು ಎಕರೆ ಹೊಲ ಖರೀದಿ ಮಾಡಿದೆವು’ ಎಂದು ವಿವರಿಸಿದರು.ಮಾವ ಕೃಷಿಕರು. ಅವರು ತಮ್ಮ ಮೂರು ಎಕರೆಯಲ್ಲಿ ಪಪ್ಪಾಯ ಬೆಳೆದಿ­ದ್ದಾರೆ. ಸತೀಶ್‌ ಹೀರೇಕಾಯಿ, ಮೆಣ­ಸಿನ­­ಕಾಯಿ, ಚೆಂಡು ಹೂ, ಹತ್ತಿ, ಅಂಜೂರ ಬೆಳೆದಿದ್ದಾರೆ. ಇವರ ಅಕ್ಕ ಪಕ್ಕ ಹೊಲದವರು ಭತ್ತ ಬೆಳೆದಿದ್ದಾರೆ. ಇವರು ಮಾತ್ರ ತರಕಾರಿಗೆ ಹೆಚ್ಚು ಒತ್ತು ನೀಡಿದ್ದಾರೆ.

‘ಹತ್ತು ಗುಂಟೆಯಲ್ಲಿ ನಾಮಧಾರಿ ತಳಿಯ ಚೆಂಡು ಹೂ ಹಾಕಿದ್ದೆ.

ದೀಪಾ­ವಳಿ ಸಮಯದಲ್ಲಿ ಇಳುವರಿ ಬಂತು. ಎಲ್ಲ ಖರ್ಚು ತೆಗೆದು ₨ 19 ಸಾವಿರ ಲಾಭವಾಯಿತು. ಹತ್ತು ಗುಂಟೆಯಲ್ಲಿ ಹಿರೇಕಾಯಿ ಬೆಳೆದಿದ್ದೇನೆ. ನಾಗಾ ಮತ್ತು ಮೈಕೋ ತಳಿಯ ಹೀರೇಕಾಯಿ ನನ್ನ ಕೈ ಹಿಡಿದಿದೆ. ಒಂದು ವರ್ಷದ ಅವಧಿಯಲ್ಲಿ ಖರ್ಚು ತೆಗೆದು ₨ 1 ಲಕ್ಷ ಲಾಭವಾಗಿದೆ. ಇನ್ನೂ ಇಳು­ವರಿ ಬರು­ತ್ತಿದೆ’ ಎಂದು ಖುಷಿಯಿಂದ ಹೇಳಿದರು.ವಿ.ಎನ್.ಆರ್.145 ತಳಿಯ ಮೆಣ­ಸಿನಕಾಯಿ ಒಳ್ಳೆಯ ಇಳುವರಿ ಕೊಡು­ತ್ತಿದೆ. ಉತ್ತಮ ಲಾಭ ಬರುತ್ತಿದೆ. ಇದಕ್ಕೂ ಮೊದಲು ಸೌತೆ, ಬೆಂಡೆ ಬೆಳೆದಿದ್ದರು. ಈಗ ಹತ್ತಿ ಕೈಗೆ ಬರುತ್ತಿದೆ. ಅಂಜೂರ ಗಿಡ ಬೆಳೆಯುದ್ದಾರೆ. ‘ತರಕಾರಿ ಕೃಷಿಯಲ್ಲಿ ನನಗೆ ಇಷ್ಟೊಂದು ಲಾಭವಿದೆಯೆಂದು ತಿಳಿದಿ­ರ­ಲಿಲ್ಲ.

ತರಕಾರಿ ಉತ್ಪನ್ನ ಲಾಭದಿಂದ ಕುಟುಂಬವೇ ಪುಳಕ­ಗೊಂಡಿದೆ. ನನ್ನ ಪತ್ನಿ ಕೂಡಾ ಈಗ ಹೊಲದಲ್ಲಿ ಕೆಲಸ ಮಾಡುತ್ತಾರೆ. ನನಗೆ ಈಗ ವ್ಯಾಪಾ­ರಕ್ಕಿಂತ ಕೃಷಿಯ ಮೇಲೆ ಹೆಚ್ಚು ನಂಬಿಕೆ ಬಂದಿದೆ’ ಎನ್ನುತ್ತಾರೆ ಸತೀಶಕುಮಾರ.ಎಕರೆ ಮೂರಾದರೇನು? ಮುನ್ನೂರಾ­ದರೇನು? ಬೆವರು ಸುರಿಸಿ ಹೊನ್ನು ಬೆಳೆಯುವ ಮನಸ್ಸು ಇರಬೇಕಲ್ಲವೆ? (ಸತೀಶಕುಮಾರ ಮೊ: 9449289890).

ಸತೀಶಕುಮಾರ ರೈತನಾದ ಬಗೆ

ಸತೀಶಕುಮಾರ ಮೊದಲು ಪಕ್ಕಾ ವ್ಯಾಪಾರಿ. ಬಿತ್ತನೆ ಬೀಜ ಮಾರಾಟ ಇವರ ಕಸುಬು. ಒಮ್ಮೆ ಇವರು ಮಾರಾಟ ಮಾಡಿದ ಒಂದು ಕಂಪೆನಿಯ ಬೀಜ ಮೊಳಕೆ ಒಡೆಯಲೇ ಇಲ್ಲ. ಹೀಗೆ ಎರಡು ಮೂರು ಬಾರಿಯಾಯಿತು. ಬೀಜ ಖರೀದಿಸಿದ ರೈತರು ಇವರ ಮೇಲೆ ಜಗಳ ಕಾಯ್ದರು. ತೀವ್ರ ನೊಂದ ಸತೀಶ ಒತ್ತಡದಿಂದ ಬಳಲತೊಡಗಿದರು. ಮನಶಾಂತಿ ಇಲ್ಲದಾಯಿತು.

ತಿರುಗಿ ತಮ್ಮ ಊರು ಸಿರುಗುಪ್ಪಕ್ಕೆ ಹೊರಡಲು ಸಿದ್ಧತೆ ನಡೆಸಿದ್ದರು. ಆ ಸಮಯದಲ್ಲಿ ಸ್ನೇಹಿತರೊಬ್ಬರು ತಮ್ಮ ಹೊಲವನ್ನು ಒತ್ತಾಯದಿಂದ ಇವರಿಗೆ ಮಾರಾಟ ಮಾಡಿದರು. ಇದು ಸತೀಶ ಅವರ ಜೀವನ ಶೈಲಿಯನ್ನು ಬದಲಿಸಿತು. ತರಕಾರಿ ಕೃಷಿಯಲ್ಲಿ ಖುಷಿ ಕಾಣತೊಡಗಿದರು. ಈಗ ಒತ್ತಡ ಮುಕ್ತ ಜೀವನ ನಡೆಸುತ್ತಿರುವ ಸತೀಶ ತಮ್ಮ ವ್ಯಾಪಾರಕ್ಕಿಂತ ಕೃಷಿಯಲ್ಲಿ ಹೆಚ್ಚು ನೆಮ್ಮದಿ ಕಾಣುತ್ತಿದ್ದಾರೆ.

ಮಾದರಿ ರೈತ

‘ಸತೀಶಕುಮಾರ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಪಡೆ­ದುಕೊಂಡು ಉತ್ತಮ ಕೃಷಿ ಮಾಡುತ್ತಿದ್ದಾರೆ. ಅಧು­ನಿಕ ತಂತ್ರಜ್ಞಾನ ಅಳವಡಿಸಿದ್ದಾರೆ. ಹನಿ ನೀರಾವರಿಗೆ ಶೇ 90 ರಿಯಾಯಿತಿ ಒದಗಿಸಲಾಗಿದೆ. ಸೋಲಾರ್ ತಂತಿ ಬೇಲಿಗೆ ರಿಯಾಯಿತಿ ನೀಡಲಾಗಿದೆ. ಕೃಷಿಯಲ್ಲಿ ಅಗತ್ಯ ಸಲಹೆ, ಸೂಚನೆಗಳನ್ನು ನೀಡಲಾಗುತ್ತಿದೆ. ತರಕಾರಿ ಪ್ರತಿನಿತ್ಯ ಆದಾಯ ತಂದು ಕೊಡುತ್ತಿದೆ. ಸತೀಶ ಮಾದರಿ ರೈತ’.

–ಶ್ರೀಶೈಲ ವಾಗ್ಮೊರೆ, ಹಿರಿಯ ಸಹಾಯಕ, ತೋಟಗಾರಿಕೆ ನಿರ್ದೇಶಕರು, ಸುರಪುರ.

ಮಾರುಕಟ್ಟೆ ಒದಗಿಸಲಿ

‘ಸತೀಶಕುಮಾರ ತರಕಾರಿ ಕೃಷಿ ಮಾಡಿ ಸಾಧನೆ ಮಾಡಿ­ದ್ದಾರೆ. ತರಕಾರಿ ಆದಾಯದ ಕೃಷಿ ಎಂದು ನಿರೂ­ಪಿಸಿದ್ದಾರೆ. ಭೂಮಿಯನ್ನು ಸವಳು ಜವಳು ಮಾಡುವ ಭಾರಿ ನೀರಾವರಿ ಬೆಳೆಗಳನ್ನು ಬೆಳೆಯುವುದಕ್ಕಿಂತ ಅತಿ ಕಡಿಮೆ ನೀರು ಉಪಯೋಗಿಸಿ ತರಕಾರಿ ಬೆಳೆ ಬೆಳೆಯು­ತ್ತಿರುವ ಕಾರ್ಯ ಪ್ರಶಂಸನೀಯ. ತರಕಾರಿಗೆ ಉತ್ತಮ ಮಾರುಕಟ್ಟೆ ಒದಗಿಸಿ ರೈತರಿಗೆ ಈ ಕೃಷಿಯತ್ತ ಒಲವು ಬೆಳೆಸಬೇಕು’.

–ಮಲ್ಲಿಕಾರ್ಜುನ ಸತ್ಯಂಪೇಟೆ, ರೈತ ಮುಖಂಡ

ಪ್ರತಿಕ್ರಿಯಿಸಿ (+)