ಕೆಟ್ಟು ಹಳ್ಳಿ ಸೇರಿ ಉದ್ಧಾರವಾದ ಮಾರುತಿ!

7
ಪ್ರಜಾವಾಣಿ ವಿಶೇಷ : ಕೃಷಿ– ಋಷಿ

ಕೆಟ್ಟು ಹಳ್ಳಿ ಸೇರಿ ಉದ್ಧಾರವಾದ ಮಾರುತಿ!

Published:
Updated:

ಕುಕನೂರು: ಕುಕನೂರಿನ ವಿದ್ಯಾವಂತ ನಿರುದ್ಯೋಗಿ ಯುವಕ ಮಾರುತಿ ಕಳಕಪ್ಪ ದಿವಟರ್‌ ಬದುಕು ಕಂಡು­ಕೊಳ್ಳಲು ಬೆಂಗಳೂರು, ಮಂಗಳೂರು, ಉಡುಪಿ, ಚಿಕ್ಕಬಳ್ಳಾಪುರ, ಹೈದರಾ­ಬಾದ್‌ಗಳನ್ನು ಸುತ್ತಾಡಿದರು. ಆದರೆ ಎಲ್ಲಿಯೂ ನೆಲೆ ನಿಲ್ಲಲ್ಲಿಲ್ಲ. ಕೊನೆಗೆ ಸ್ವಂತ ಊರಲ್ಲಿ ಹೈನುಗಾರಿಕೆಗೆ ಮುಂದಾ­ದರು.ರೈತಾಪಿ ಕುಟುಂಬದಲ್ಲಿ ಜನಿಸಿದ ಮಾರುತಿ, ಎಸ್ಸೆಸ್ಸೆಲ್ಸಿ ನಂತರದಲ್ಲಿ 2 ವರ್ಷದ ತೋಟಗಾರಿಕೆ ಡಿಪ್ಲೊಮಾ ಶಿಕ್ಷಣ ಪಡೆದರು. ಹೆಚ್ಚಿನ ವ್ಯಾಸಂಗ ಮಾಡಬೇಕೆನ್ನುವ ಇಚ್ಛೆ ಇತ್ತು. ಆದರೆ ಮನೆಯ ಪರಿಸ್ಥಿತಿ ಅರಿತು ವ್ಯಾಸಂಗ­ವನ್ನು ಮೊಟಕುಗೊಳಿಸಿದರು. ವಿದ್ಯಾ­ರ್ಹತೆ ಮೇಲೆ ಯಾವುದಾದರೂ ಉದ್ಯೋಗ ಲಭಿಸಬಹುದೆಂದು ಎಲ್ಲೆಡೆ ಸುತ್ತಾಡಿದರು. ಖಾಸಗಿ ಕಂಪೆನಿಯಲ್ಲಿ ಉದ್ಯೋಗ ಸಿಕ್ಕಿತ್ತಾದರೂ ಕೈ ತುಂಬ ಸಂಬಳ ಸಿಗದೇ ತೊಳಲಾಡಿದರು. ಮತ್ತೊಂದು ಕಂಪೆನಿಗೆ ಹೋದರೆ ಅಲ್ಲಿ­ಯೂ ಪರಿಸ್ಥಿತಿ ಬದಲಾಗಲಿಲ್ಲ. ಒಬ್ಬ ಜೀವನ ನಡೆಸಲು ಇಷ್ಟು ಕಷ್ಟಪಡ­ಬೇಕಾದರೆ ತುಂಬಿದ ಕುಟುಂಬವನ್ನು ಸಾಕುವುದು ಅಸಾಧ್ಯ ಎಂದುಕೊಂಡು ಸ್ವಗ್ರಾಮದತ್ತ ಮುಖ ಮಾಡಿದರು.ಅವರ ಬಳಿ ಮೂರೂವರೆ ಎಕರೆ ಜಮೀನು ಇತ್ತು. ಸಾಲ ಮಾಡಿ ಕೊಳವೆಬಾವಿ ಕೊರೆಸಿದರು. ಆದರೆ ಕೊಳವೆಬಾವಿಯಲ್ಲಿ ಕೇವಲ 2 ಇಂಚು ನೀರು ಬಂದಿತು. ಕೊಳವೆಬಾವಿಯ ಅಲ್ಪ ನೀರಿನಿಂದ ನೀರಾವರಿ ಬೇಸಾಯ ಮಾಡಲು ಆಗುವುದಿಲ್ಲ ಎನ್ನುವುದನ್ನು ಅರಿತು ಹೈನುಗಾರಿಕೆಯತ್ತ ಮುಖ ಮಾಡಿದರು. ಹೀಗೆ 6 ವರ್ಷಗಳ ಹಿಂದೆ ತೆಗೆದುಕೊಂಡ ನಿರ್ಧಾರ ಅವರ ಜೀವನ ಶೈಲಿಯನ್ನೇ ಪವಾಡದಂತೆ ಬದಲಿಸಿದೆ.ಹಾಲು ಕರೆಯುತ್ತಾ..: ಒಂದು ಎಮ್ಮೆಗೆ ₨ 70 ಸಾವಿರದಂತೆ ಒಟ್ಟು 4 ಎಮ್ಮೆ ಗಳನ್ನು ಖರೀದಿಸಿ ಹೈನುಗಾರಿಕೆ ಪ್ರಾರಂಭಿಸಿದ್ದರು. ಎಮ್ಮೆಗಳಿಂದ ಅಂತಹ ಲಾಭ ಕಂಡುಬರದ ಕಾರಣ 3 ಎಮ್ಮೆ ಮಾರಾಟ ಮಾಡಿ ಅದರಿಂದ ಬಂದ ದುಡ್ಡಿನಲ್ಲಿ 2 ಸಾಧಾರಣ ಜರ್ಸಿ ಹಸುಗಳನ್ನು ಖರೀದಿಸಿದರು. ಅವು ದಿನಕ್ಕೆ ತಲಾ 10 ಲೀಟರ್‌ ಹಾಲು ಕರೆಯುತ್ತಿದ್ದವು.ಹೀಗಾಗಿ ಹೈನುಗಾರಿಕೆಯಲ್ಲಿಯೇ ಜೀವನ ಸಾಗಿ­ಸಬಹುದು ಎನ್ನುವ ನಂಬಿಕೆ ಉಂಟಾಗಿ ಅದೇ ಹಾದಿಯಲ್ಲಿ ಮುಂದುವರೆ­ಯಲು ಸಂಕಲ್ಪ ಮಾಡಿದರು. ಈಗ 14 ಹಸುಗಳನ್ನು ಸಾಕುತ್ತಿದ್ದಾರೆ.  6 ಹಸುಗಳಿಂದ  ಪ್ರತಿನಿತ್ಯ 80 ಲೀಟರ್ ಹಾಲು ಕರೆಯುತ್ತಿದ್ದಾರೆ.ಪ್ರತಿ ಲೀಟ­ರ್‌ಗೆ ₨26.25 ರಂತೆ ಮಾರಾಟ ಮಾಡಿ­ದರೆ ಪ್ರತಿ ದಿನದ ದುಡಿಮೆ ₨ 2,100. ಅಂದರೆ ತಿಂಗಳಿಗೆ ಸರಾಸರಿ ₨ 63,000 ಸಾವಿರ ಸಂಪಾದಿಸುತ್ತಾರೆ. ಅದರಲ್ಲಿ ₨15,000 ಖರ್ಚು ತೆಗೆದರೆ ನಿವ್ವಳವಾಗಿ ₨ 48 ಸಾವಿರ ಸಂಪಾದಿ­ಸುತ್ತಾರೆ. ಜೊತೆಗೆ ಸಗಣಿ ಮಾರಾಟ­ದಿಂದ ವರ್ಷಕ್ಕೆ ಕನಿಷ್ಠ ₨ 30–40 ಸಾವಿರ ಪಡೆಯುತ್ತಿದ್ದಾರೆ.ಹಸುಗಳ ನಿರ್ವಹಣೆ: ಪ್ರತಿಯೊಂದು ಹಸುವಿಗೆ ದಿನಕ್ಕೆ 8–9 ಕೆಜಿ ಆಹಾರ ಹಾಕುತ್ತಿದ್ದು, ಬೆಳಗಿನ ಹೊತ್ತು ಎನ್‌–44 ಹಸಿಹುಲ್ಲು, ಮಧ್ಯಾಹ್ನ ಒಣಮೇವು ರಾತ್ರಿ ಬಾರ್ಲಿ ಫುಡ್‌ನ್ನು ನೇರವಾಗಿ ತಿನ್ನಿಸಲಾಗುತ್ತದೆ.ಜ್ವರ, ಕಾಲುಬೇನೆ, ಬಾಯಿಬೇನೆ ರೋಗಗಳಿಗೆ ತಾತ್ಕಾಲಿಕ ಔಷಧಿ ಕೊಡಲಾಗುತ್ತಿದ್ದು, ಗಂಭೀರ ಸಮಸ್ಯೆ ಕಂಡು ಬಂದಲ್ಲಿ ಪಶು ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುತ್ತದೆ.ಜಮೀನಿನಲ್ಲಿ  ಸುಮಾರು 30–40 ತೆಂಗಿನ ಸಸಿಗಳಿವೆ. ಉಳಿದ ಜಾಗದಲ್ಲಿ  ಕಾಯಿಪಲ್ಲೆ ಬೆಳೆಯುತ್ತಿದ್ದಾರೆ.

ಕಾಲು ಎಕರೆಯಲ್ಲಿ ತಗಡಿನ ಬೃಹತ್‌ ಶೆಡ್‌ ನಿರ್ಮಿಸಿದ್ದು ವಿದ್ಯುತ್‌ ಮತ್ತು ಸಮರ್ಪಕ ನೀರು ಪೂರೈಕೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ವಿದ್ಯಾವಂತ ನಿರುದ್ಯೋಗಿ ಯುವಕ ಮಾರುತಿ ಕೇವಲ 6 ವರ್ಷದ ಹಿಂದೆ ಹೈನುಗಾರಿಕೆ ಕೈಗೊಂಡು ಇಡೀ ಕುಟುಂ­ಬ­ವನ್ನು ಸಂತೋಷದಿಂದ ನಿರ್ವಹಣೆ ಮಾಡುತ್ತಾ ಕೈತುಂಬ ದುಡ್ಡು ಸಂಪಾದಿ­ಸುತ್ತಿದ್ದಾರೆ. ಅವರಿಂದ ಪ್ರೇರೇಪಿತರಾಗಿ ಇಟಗಿ, ಮಸಬಹಂಚಿನಾಳ, ರಾಜೂರ, ತಿಪ್ಪರಸನಾಳ, ಬೆಣಕಲ್‌, ದ್ಯಾಂಪೂರ, ಚನಪನಹಳ್ಳಿ ಸೇರಿದಂತೆ ಮತ್ತಿತರೆ ಗ್ರಾಮಗಳ ಯುವಕರೂ ಹೈನು ­ಗಾರಿಕೆಗೆ ಮುಂದಾಗಿದ್ದಾರೆ.  (ಮೊ: 9379002855)

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry