ಸೋಮವಾರ, ಜೂನ್ 21, 2021
30 °C
ಪ್ರತಿ ಜಿಲ್ಲೆಗೂ ಫಲಾನುಭವಿಗಳ ಸಂಖ್ಯೆ ನಿಗದಿ: ಕುಕ್ಕುಟೋದ್ಯಮಕ್ಕೆ ಪ್ರೋತ್ಸಾಹಿಸಲು ಸರ್ಕಾರ ನಿರ್ಧಾರ

ಕೋಳಿ ಸಾಕಾಣಿಕೆಗೆ ಸಹಾಯಧನ ದ್ವಿಗುಣ

ನಾಗರಾಜ ಚಿನಗುಂಡಿ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ರಾಜ್ಯದಲ್ಲಿ ಮಾಂಸ ಮಾರಾಟ ಉದ್ದೇಶಿತ ಕೋಳಿ ಸಾಕಾಣಿಕೆಯನ್ನು ಪ್ರೋತ್ಸಾಹಿ ಸಲು ಘಟಕ (ಫಾರ್ಮ್‌) ಸ್ಥಾಪನೆಯ ಪ್ರಸ್ತಾವ ಮೊತ್ತ ಹಾಗೂ ಸಹಾಯಧನ ಪ್ರಮಾಣವನ್ನು ರಾಜ್ಯ ಸರ್ಕಾರ ಫೆಬ್ರುವರಿಯಿಂದ ದ್ವಿಗುಣಗೊಳಿಸಿದೆ.ಗ್ರಾಮೀಣ ಭಾಗದ ನಿರುದ್ಯೋಗಿ ಯುವಕರಿಗೆ ಕೋಳಿ ಸಾಕಾಣಿಕೆ ಬಗ್ಗೆ ತರಬೇತಿ ನೀಡಿ, ಸ್ವಯಂ ಉದ್ಯೋಗ ಕೈಗೊಳ್ಳಲು ಪ್ರೋತ್ಸಾಹ ನೀಡುತ್ತಿರುವ ‘ಕರ್ನಾಟಕ ಸಹಕಾರ ಕಕ್ಕುಟ ಮಹಾಮಂಡಳ ನಿಗಮ (ಕೆಸಿಪಿಎಫ್‌ಎಲ್‌) ಈ ಯೋಜನೆ ಜಾರಿಯ ಉಸ್ತುವಾರಿ ನಿರ್ವಹಿಸುತ್ತಿದೆ.ಫಲಾನುಭವಿಗಳ ಸಂಖ್ಯೆ ನಿಗದಿ: ಹೈದರಾಬಾದ್‌ ಕರ್ನಾಟಕ ಭಾಗದ ಆರು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಮಹಾಮಂಡಳ ನಿಗಮದ ಗುಲ್ಬರ್ಗ ಪ್ರಾದೇಶಿಕ ಕೇಂದ್ರಕ್ಕೆ ಒಟ್ಟು 39 ಫಲಾನುಭವಿಗಳ ಆಯ್ಕೆಗೊಳಿಸುವ ಗುರಿ ನೀಡಲಾಗಿದೆ. ಗುಲ್ಬರ್ಗ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಯಲ್ಲಿ ತಲಾ ಏಳು, ಬೀದರ್‌ ಜಿಲ್ಲೆ ಆರು ಹಾಗೂ ಯಾದಗಿರಿ ಜಿಲ್ಲೆಯ ಐದು ಫಲಾನುಭವಿಗಳು ಕಕ್ಕುಟೋದ್ಯಮ ಕೈಗೊಳ್ಳಬಹುದಾಗಿದೆ.500 ಮಾಂಸದ ಕೋಳಿಗಳ ಘಟಕ ಸ್ಥಾಪಿಸುವು ದಕ್ಕೆ ಯೋಜನಾ ಮೊತ್ತವನ್ನು ಇಲ್ಲಿಯವರೆಗೂ ರೂ.70 ಸಾವಿರ ಮಾತ್ರ ನಿಗದಿಪಡಿಸಲಾಗಿತ್ತು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಘಟಕ ಸ್ಥಾಪಿಸಿದರೆ ರೂ.23,100 (ಯೋಜನಾ ಮೊತ್ತದ ಶೇ 33), ಸಾಮಾನ್ಯ ವರ್ಗದವರು ಸ್ಥಾಪಿಸಿದರೆ ರೂ.17,500 ಸಹಾಯಧನ ನೀಡಲಾಗುತ್ತಿತ್ತು. ಇನ್ನು ಮುಂದೆ, 500 ಮಾಂಸದ ಕೋಳಿಗಳ ಘಟಕ ಸ್ಥಾಪಿಸುವುದಕ್ಕೆ ರೂ.1,39,750 ಮೊತ್ತದ ಪ್ರಸ್ತಾವ ಸಿದ್ಧಪಡಿಸಬಹುದು.ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ರೂ.46,200 ಹಾಗೂ ಸಾಮಾನ್ಯ ವರ್ಗದವರಿಗೆ ರೂ.35 ಸಾವಿರ ಸಹಾಯಧನ ನೀಡಲಾಗುತ್ತದೆ. ಉಳಿದ ಮೊತ್ತವನ್ನು ಬ್ಯಾಂಕ್‌ ನಲ್ಲಿ ಸಾಲ ಪಡೆದು ಯೋಜನೆ ಆರಂಭಿಸುವುದಕ್ಕೆ ಅಗತ್ಯ ಮಾರ್ಗದರ್ಶನವನ್ನು ಮಹಾಮಂಡಳದ ಅಧಿಕಾರಿಗಳು ನೀಡುತ್ತಾರೆ.2010ರಿಂದ ಮಾರ್ಚ್‌ 2014ರ ವರೆಗೆ ಆರು ಜಿಲ್ಲೆಗಳಲ್ಲಿ ಫಲಾನುಭವಿಗಳ ಆಯ್ಕೆಯಲ್ಲಿ ಒಟ್ಟು ಸಾಧಿಸಬೇಕಿದ್ದ 373 ಗುರಿಯ ಪೈಕಿ, 185 ಫಲಾನುಭವಿಗಳಿಗೆ ಗುಲ್ಬರ್ಗದ ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಗಮದ ಸಹಾಯಕ ನಿರ್ದೇಶಕರು ಸಹಾಯಧನ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಪರಿಶಿಷ್ಟ ಜಾತಿ 58, ಪರಿಶಿಷ್ಟ ಪಂಗಡ 16 ಹಾಗೂ ಸಾಮಾನ್ಯ 111 ಫಲಾನುಭವಿಗಳಿದ್ದಾರೆ. ನಿಗದಿತ ಯೋಜನೆಯ ಪ್ರಸ್ತಾವಕ್ಕೆ ಬ್ಯಾಂಕ್‌ ಸಾಲ ನೀಡುವುದನ್ನು ಖಾತರಿ ಪಡಿಸಿಕೊಂಡ ನಂತರವೇ ಸಹಾಯಧನದ ಮೊತ್ತವನ್ನು ಅದೇ ಬ್ಯಾಂಕ್‌ ಮೂಲಕ ಅಧಿಕಾರಿ ಗಳು ಬಿಡುಗಡೆಗೊಳಿಸುತ್ತಾರೆ.‘ಹೈದರಾಬಾದ್‌ ಕರ್ನಾಟಕದಲ್ಲಿ ಕುಕ್ಕುಟೋ ದ್ಯಮ ಬೆಳೆಸುವುದಕ್ಕೆ ಸಾಕಷ್ಟು ಅವಕಾಶವಿದೆ. ಆದರೆ ನಿರುದ್ಯೋಗಿ ಯುವಕರು ಬದ್ಧತೆಯಿಂದ ಕೋಳಿ ಸಾಕಾಣಿಕೆ ಹಾಗೂ ಮಾರಾಟವನ್ನು ಕೈಗೊಳ್ಳುವ ಅಗತ್ಯವಿದೆ. ಪ್ರತಿ ವರ್ಷವೂ ನೂರಾರು ಯುವಕರಿಗೆ ಕೋಳಿ ಸಾಕಾಣಿಕೆ ಬಗ್ಗೆ ಭತ್ಯೆ ಕೊಟ್ಟು ತರಬೇತಿ ನೀಡುತ್ತಿದ್ದೇವೆ. ಸಾಕಷ್ಟು ಯುವಕರು ಅದರ ಪ್ರಯೋಜನ ಪಡೆದಿದ್ದಾರೆ. ಇನ್ನು ಕೆಲವರು ಸಹಾಯಧನ ಪಡೆದು ಫಾರ್ಮ್‌ ಆರಂಭಿಸುವುದಷ್ಟೆ ಗೊತ್ತಾಗುತ್ತದೆ.ಸ್ಥಗಿತಗೊಳಿಸಿದ್ದನ್ನು ಇಲಾಖೆ ಗಮನಕ್ಕೆ ತರುವುದೇ ಇಲ್ಲ. ಹೈದರಾಬಾದ್‌ ಕಡೆಯಿಂದ ಇಲ್ಲಿಗೆ ಕೋಳಿಗಳು ಪೂರೈಕೆಯಾಗು ತ್ತಿವೆ. ಸ್ಥಳೀಯರು ಕೋಳಿ ಸಾಕಾಣಿಕೆ ಮಾಡಿ ಮಾರಾಟ ಮಾಡುವ ಬೆಲೆಗಿಂತಲೂ ಅವರು ಅಗ್ಗವಾಗಿ ಕೊಡುತ್ತಿದ್ದಾರೆ. ಹೀಗಾಗಿ ಈ ಭಾಗದಲ್ಲಿ ಕೋಳಿ, ಮೊಟ್ಟೆ ಉಪಯೋಗ ಹೆಚ್ಚಾಗಿದ್ದರೂ ಕುಕ್ಕುಟೋದ್ಯಮ ಬೆಳೆಯದಿರುವುದಕ್ಕೆ ಇದು ಪ್ರಮುಖವಾಗಿ ಹೊಡೆತ ನೀಡಿದೆ’ ಎಂದು ಪ್ರಾದೇಶಿಕ ಕೇಂದ್ರದ ಸಹಾಯಕ ನಿರ್ದೇಶಕ ಡಾ. ಬಸಟೆಪ್ಪ ಪಾಟೀಲ ಹೇಳುತ್ತಾರೆ.ಕೆಲವು ಕಡೆಗಳಲ್ಲಿ ಸರ್ಕಾರದ ಸಹಾಯಧನ ವಿಲ್ಲದೆ ದೊಡ್ಡ ಪ್ರಮಾಣದಲ್ಲಿ ಫಾರ್ಮ್‌ ಸ್ಥಾಪಿಸಿದವರು ಇದ್ದಾರೆ. ಆದರೆ ರಾಜ್ಯದ ಇನ್ನುಳಿದ ಭಾಗಕ್ಕೆ ಹೋಲಿಸಿದರೆ ಕುಕ್ಕುಟೋದ್ಯಮ ಇಲ್ಲಿ ಬೆಳೆಯಬೇಕಿದೆ. ಸರ್ಕಾರದ ಸಹಾಯದನ ಪಡೆದವರು ಕೊನೆಯವರೆಗೂ ಅದನ್ನು ಉಳಿಸಿ ಕೊಂಡು ಹೋಗುತ್ತಿಲ್ಲ. ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ 185 ಫಲಾನುಭವಿಗಳಿಗೆ ಸಹಾಯಧನ ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ 44 ಚೆಕ್‌ ವಾಪಸ್‌ ಬಂದಿವೆ.ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿದವರು ಘಟಕ ಆರಂಭಿಸುವ ಹಂತದಲ್ಲೆ ನಿರುತ್ಸಾಹ ತೋರಿಸಿದ್ದಾರೆ. ಇನ್ನು ಕೆಲವರು ಹಾಕಿದ ಬಂಡವಾಳ ವಾಪಸ್‌ ಬರದಂತಾಗಿ ಸ್ಥಗಿತಗೊಳಿ ಸಿದ್ದಾರೆ. ಸರ್ಕಾರ ಇದೀಗ ಯೋಜನಾ ಮೊತ್ತ ದ್ವಿಗುಣಗೊಳಿಸಿರುವುದರಿಂದ ಕೋಳಿ ಸಾಕಾಣಿಕೆ ಆರಂಭಿಸುವುದಕ್ಕೆ ತುಂಬಾ ಅನುಕೂಲವಾಗಲಿದೆ ಎನ್ನುವುದು ಅವರ ವಿವರಣೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.