ಗುರುವಾರ , ಫೆಬ್ರವರಿ 25, 2021
29 °C

ಎಸ್ಸೆಸ್ಸೆಲ್ಸಿ ನಂತರ ಸರ್ಕಾರಿ ಕಾಲೇಜು ಪ್ರವೇಶ ಸುಲಭ

ಪ್ರಜಾವಾಣಿ ವಾರ್ತೆ/ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

ಎಸ್ಸೆಸ್ಸೆಲ್ಸಿ ನಂತರ ಸರ್ಕಾರಿ ಕಾಲೇಜು ಪ್ರವೇಶ ಸುಲಭ

ಗುಲ್ಬರ್ಗ: ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗಳು ಪಿಯುಸಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಷಯಗಳಲ್ಲಿ ತಮಗೆ ಆಸಕ್ತಿ ಇರುವ ವಿಷಯ ಆಯ್ಕೆ ಮಾಡಿಕೊಂಡು ಓದು ಮುಂದು­ವರೆಸುವವರಿಗೆ ಗುಲ್ಬರ್ಗ ಜಿಲ್ಲೆಯ ಸರ್ಕಾರಿ ಕಾಲೇಜುಗಳು ಪ್ರವೇಶ ನೀಡಲು ಸಜ್ಜಾಗಿವೆ.

ಪ್ರವೇಶಕ್ಕಾಗಿ ಅರ್ಜಿ ಹಾಕುವ ಎಲ್ಲ ವಿದ್ಯಾ­ರ್ಥಿಗಳಿಗೂ ಅವಕಾಶ ನೀಡಬೇಕೆನ್ನುವ ನಿಯಮವನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಅನುಸರಿಸುತ್ತಿದೆ.ಗುಲ್ಬರ್ಗ ಜಿಲ್ಲೆಯಾದ್ಯಂತ ಒಟ್ಟು 223 ಪಿಯುಸಿ ಕಾಲೇಜುಗಳು ಕಾರ್ಯನಿರ್ವ­ಹಿಸುತ್ತಿವೆ. ಅದರಲ್ಲಿ 45 ಮಾತ್ರ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿದ್ದು, 27 ಕಡೆಗಳಲ್ಲಿ ಪಿಯುಸಿ ವಿಜ್ಞಾನಕ್ಕೆ ಪ್ರವೇಶ ಪಡೆದುಕೊಳ್ಳಬಹುದಾಗಿದೆ. ಸರ್ಕಾರಿ/­ಅನುದಾನಿತ/ಅನುದಾನ ರಹಿತ ಕಾಲೇಜುಗಳಲ್ಲಿ ಪ್ರತಿ ವಿಭಾಗದಲ್ಲಿ 80 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕು ಎನ್ನುವ ನಿಯಮವಿದೆ. ಆದರೆ ಸರ್ಕಾರಿ ಕಾಲೇಜುಗಳಿಗೆ ಪ್ರವೇಶ ಸಂಖ್ಯಾ ಮಿತಿ ಅನ್ವಯಿಸುವುದಿಲ್ಲ. ಹೀಗಾಗಿ ಆಸಕ್ತ ವಿದ್ಯಾರ್ಥಿ­ಗಳು ಸರ್ಕಾರಿ ಪಿಯುಸಿ ಕಾಲೇಜು­ಗಳಲ್ಲಿ ಪ್ರವೇಶ ಪಡೆದುಕೊಳ್ಳುವುದಕ್ಕೆ ಇದು ಸಕಾಲ.ಜಿಲ್ಲೆಯಾದ್ಯಂತ ಇರುವ ಒಟ್ಟು 27 ವಿಜ್ಞಾನ ಕಾಲೇಜುಗಳ ಪೈಕಿ, ಜೇವರ್ಗಿ ತಾಲ್ಲೂಕಿನಲ್ಲಿ 4, ಚಿತ್ತಾಪುರ ತಾಲ್ಲೂಕಿನಲ್ಲಿ 3,  ಆಳಂದ ತಾಲ್ಲೂಕಿನಲ್ಲಿ 6, ಅಫಜಲಪುರ ತಾಲ್ಲೂಕಿನಲ್ಲಿ 3, ಸೇಡಂ ತಾಲ್ಲೂಕಿನಲ್ಲಿ 2, ಚಿಂಚೋಳಿ ತಾಲ್ಲೂಕಿನಲ್ಲಿ 3  ಹಾಗೂ ಗುಲ್ಬರ್ಗ ನಗರದಲ್ಲಿ 6 ವಿಜ್ಞಾನ ಪಿಯುಸಿ ಕಾಲೇಜುಗಳಿವೆ.‘ಸದ್ಯ ಎಲ್ಲ ಕಡೆಗೂ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಕಲಿಕೆ ಗುಣಾತ್ಮಕವಾಗಿರುವ ಕಾಲೇಜುಗಳ ಪ್ರವೇಶಕ್ಕೆ ಸಹಜವಾಗಿ ಹೆಚ್ಚಿನ ಬೇಡಿಕೆ ಇರುತ್ತದೆ. ಕೊನೆ ದಿನಾಂಕದವರೆಗೂ ಪ್ರವೇಶ ಬಯಸಿ ಅರ್ಜಿ ಸಲ್ಲಿಸುವವರೆಲ್ಲರಿಗೂ ಪ್ರವೇಶ ನೀಡಲಾಗುವುದು. ವಾಣಿಜ್ಯ ಮತ್ತು ಕಲಾ ವಿಭಾಗಗಳಲ್ಲಿ ಒಂದು ವರ್ಗಕ್ಕೆ 80 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕು 

ಎನ್ನುವುದು ಸಾಮಾನ್ಯ ನಿಯಮವಿದೆ. ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ಬಯಸಿ ಬರುವ ವಿದ್ಯಾರ್ಥಿಗಳನ್ನು ವಾಪಸ್ ಕಳುಹಿಸಬಾರದು ಎಂದು ತಿಳಿಸಲಾಗಿದೆ. ವರ್ಗದ ಕೋಣೆಗಳು ಖಾಲಿ ಉಳಿಯಬಾರದು’ ಎನ್ನುವುದು ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕರ ವಿವರಣೆ.ವಿಜ್ಞಾನ ಕಾಲೇಜುಗಳ ವಿವರ: ಸರ್ಕಾರಿ ಪಿಯು ಕಾಲೇಜು, ಸ್ಟೇಷನ್‌ ಬಜಾರ್‌. ಸರ್ಕಾರಿ ಬಾಲಕಿಯರ ಪಿಯು ಕಾಲೇಜು, ಎಸ್‌ಪಿ ಕಚೇರಿ ಎದುರು. ಸರ್ಕಾರಿ ಪಿಯು ಕಾಲೇಜು, ಸೂಪರ್‌ ಮಾರ್ಕೆಟ್‌. ಸರ್ಕಾರಿ ಪಿಯು ಕಾಲೇಜು, ಆದರ್ಶನಗರ. ಸರ್ಕಾರಿ ಪಿಯು ಕಾಲೇಜು, ಜಿಲಾನಾಬಾದ್. ಸರ್ಕಾರಿ ಪಿಯು ಕಾಲೇಜು, ಜೇವರ್ಗಿ ಕಾಲೊನಿ.ಈಗಾಗಲೇ ಪಿಯುಸಿ ಕಾಲೇಜುಗಳ ಪ್ರವೇಶ ಶುಲ್ಕವನ್ನು ಸರ್ಕಾರ ನಿಗದಿಗೊಳಿಸಿದೆ. ಪಿಯುಸಿ ಪ್ರಥಮ ವರ್ಷದ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪ್ರವೇಶ ಶುಲ್ಕದ ವಿವರವನ್ನು ಮೇಲಿನ ಪಟ್ಟಿಯಲ್ಲಿ ನೀಡಲಾಗಿದೆ.


 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.