ಶನಿವಾರ, ಮೇ 8, 2021
26 °C

ಭೀಮೆಗೆ ಪ್ರವಾಹ, ನದಿ ಪಾತ್ರದ ಗ್ರಾಮಸ್ಥರ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೇವರ್ಗಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದ ಉಜನಿ ವೀರಭಟ್ಕಳ ಜಲಾಶಯಗಳು ಭರ್ತಿಯಾಗಿದ್ದು, ಸೆ.5ರಂದು ಬೆಳಗಿನ ಜಾವ 1.57ಲಕ್ಷ ಕ್ಯೂಸೆಕ್ ಹೆಚ್ಚುವರಿ ನೀರನ್ನು  ಜಲಾಶಯದಿಂದ ಭೀಮಾ ನದಿಗೆ ಬಿಟ್ಟಿದ್ದರಿಂದ ನದಿ ತಟದ ಗ್ರಾಮಸ್ಥರ ಆತಂಕ ಇಮ್ಮಡಿಸಿದೆ.ತಾಲ್ಲೂಕಿನ ಇಟಗಾದಿಂದ ಹೊನ್ನಾಳವರೆಗೆ 36 ಗ್ರಾಮಗಳು ನದಿ ತಟದಲ್ಲಿವೆ. ಕಳೆದ ಎರಡು ದಿನಗಳಿಂದ ಭೀಮೆಯ ಪ್ರವಾಹ ಹೆಚ್ಚುತ್ತಿರುವುದರಿಂದ ಗ್ರಾಮಸ್ಥರು ನದಿಗೆ ತೆರಳಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.ತಾಲ್ಲೂಕಿನ ಭೀಮಾ ತೀರದ ಗ್ರಾಮಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆಯಿರುವುದರಿಂದ ಗ್ರಾಮಗಳ ಜನರು ತಮ್ಮಜಾನುವಾರು, ನದಿಗೆ ಅಳವಡಿಸಿದ ಪಂಪಸೆಟ್ ಮತ್ತಿತರ ಆಸ್ತಿ ಪಾಸ್ತಿಗಳೊಂದಿಗೆ ಸುರಕ್ಷಿತ ಹಾಗೂ ಎತ್ತರದ ಸ್ಥಳಕ್ಕೆ ತೆರಳುವಂತೆ ತಹಸೀಲ್ದಾರ್ ಡಿ.ವೈ.ಪಾಟೀಲ ಕೋರಿದ್ದಾರೆ.ನದಿ ತೀರಕ್ಕೆ ಜಾನುವಾರು ಬಿಡದಂತೆ ಮತ್ತು ಜನರು ಬಟ್ಟೆ ಒಗೆಯಲು ತೆರಳದಂತೆ ನದಿ ತಟದ ಗ್ರಾಮಗಳಲ್ಲಿ ಡಂಗುರ ಸಾರಲಾಗಿದೆ ಎಂದು ತಹಸೀಲ್ದಾರರು ಮಂಗಳವಾರ ತಮ್ಮನ್ನು ಭೇಟಿ ಮಾಡಿದ

`ಪ್ರಜಾವಾಣಿ~ಗೆ ವಿವರಿಸಿದ್ದಾರೆ.ಕೇಂದ್ರ ಸ್ಥಾನದಲ್ಲಿರಲು ಸೂಚನೆ: ನದಿ ತಟದಲ್ಲಿರುವ ಗ್ರಾಮಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಂದಾಯ ನಿರೀಕ್ಷಕರು, ಗ್ರಾಮಲೆಕ್ಕಿಗರು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು. ಪ್ರವಾಹ ಪರಿಸ್ಥಿತಿಯ ಅವಲೋಕನ ನಡೆಸಬೇಕು. ಪ್ರವಾಹದ ಬಗ್ಗೆ ತಾಲ್ಲೂಕು ಕಚೇರಿಗೆ ತಕ್ಷಣ ಮಾಹಿತಿ ನೀಡಬೇಕೆಂದುತಿಳಿಸಲಾಗಿದೆ ಎಂದು ತಹಸೀಲ್ದಾರರು ಹೇಳಿದರು. ಭೀಮಾ ಪರಿಸ್ಥಿತಿ ಕುರಿತು ತಾಲ್ಲೂಕು ಆಡಳಿತ ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅವರು ತಿಳಿಸಿದ್ದಾರೆ.ರಸ್ತೆ ಸಂಪರ್ಕ ಕಡಿತ: ಭೀಮಾ ನದಿಗೆ ಪ್ರವಾಹ ಹೆಚ್ಚಾಗಿರುವುದರಿಂದ ಬ್ಯಾರೇಜ್‌ಗಳು ಭರ್ತಿಯಾಗಿವೆ. ಹೆಚ್ಚುವರಿ ನೀರು ಸೇತುವೆ ಮೇಲೆ ಬರುವ ಸಾಧ್ಯತೆಗಳಿವೆ. ಜೇವರ್ಗಿ ತಾಲ್ಲೂಕಿನಿಂದ ಅಫಜಲ್‌ಪುರ ತಾಲ್ಲೂಕಿಗೆ ಸಂಪರ್ಕ ಕಲ್ಪಿಸುವ ಇಟಗಾ-ಗಾಣಗಾಪುರ ಬ್ರಿಡ್ಜ್-ಕಂ ಬ್ಯಾರೇಜ್ ರಸ್ತೆ ಹಾಗೂ ಕಲ್ಲೂರ (ಬಿ)-ಚಿನಮಳ್ಳಿ ಬ್ರಿಡ್ಜ್‌ಕಂ ಬ್ಯಾರೇಜ್ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಸರ್ಕಲ್ ಇನ್ಸಪೆಕ್ಟರ್ ವಿಶ್ವನಾಥರಾವ್ ಕುಲಕರ್ಣಿ ತಿಳಿಸಿದ್ದಾರೆ. ಮಂಗಳವಾರ ರಾತ್ರಿವರೆಗೆ ಭೀಮೆಯ ಪ್ರವಾಹದಲ್ಲಿ ಗಣನೀಯ ಹೆಚ್ಚಳ ಕಂಡುಬರುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.     

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.