ಸೋಮವಾರ, ಮೇ 17, 2021
27 °C

ಆಶಯ ಬಿಟ್ಟ ಆಚರಣೆ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಮೂಲ ಆಶಯವನ್ನು ಬಿಟ್ಟು ಆಚರಣೆಗೆ ಸೀಮಿತಗೊಳ್ಳುವ ಪದ್ಧತಿಗಳೂ ಅಪಾಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಕಾರ್ಯವಾಹ ಭಯ್ಯಾಜಿ ಜೋಶಿ ಹೇಳಿದರು.

ಗುಲ್ಬರ್ಗದ ಎಚ್‌ಕೆಸಿಸಿಐ ಸಭಾಂಗಣದಲ್ಲಿ ಮಂಗಳವಾರ ಸಂಜೆ ನಡೆದ `ಸಾಮಾಜಿಕ ಸಾಮರಸ್ಯ~ ಸಂವಾದ ಗೋಷ್ಠಿಯಲ್ಲಿ ಅವರು ಮಾತನಾಡಿದರು.ಹಿಂದೆ ಪರಿಸರ ರಕ್ಷಣೆ ಆಶಯದಲ್ಲಿ ಮಂದಿರ, ಮನೆಗಳ ಮುಂದೆ ಮರವಿತ್ತು. ಈಗ ಮರದ ಗೆಲ್ಲು ಮುರಿದು ತಂದು ಪೂಜೆ ಮಾಡುತ್ತಾರೆ. ಆಚರಣೆ ಹೆಸರಲ್ಲಿ ಪ್ರಕೃತಿ ನಾಶದ ವಿಕೃತಿ ಮಾಡುತ್ತಾರೆ. ದೇವಿಯನ್ನು ಪೂಜಿಸುವವರೇ, ಹೆಣ್ಣು ಹುಟ್ಟಿದರೆ ಹಳಿಯುತ್ತೇವೆ. ಭ್ರೂಣ ಹತ್ಯೆ ನಡೆಯುತ್ತದೆ. ನದಿಯನ್ನು ಪೂಜಿಸುತ್ತಾರೆ, ಆದರೆ ಸ್ವಚ್ಛತೆ ಕಾಪಾಡುವುದಿಲ್ಲ ಎಂದ ಅವರು, ವರದಕ್ಷಿಣೆ ಸ್ವೀಕರಿಸಿ ನಮ್ಮ ಮೌಲ್ಯವನ್ನೇ ಹರಾಜು ಹಾಕುವ ಸ್ಥಿತಿಯೂ ಇದೆ ಎಂದು ಖೇದ ವ್ಯಕ್ತಪಡಿಸಿದರು.ಹಿಂದೂ ಧರ್ಮವೊಂದು ಮೆಟ್ಟಿಲುಗಳಿಲ್ಲದ ಬಹುಮಹಡಿ ಕಟ್ಟಡ. ಇಲ್ಲಿ ಆರು ಸಾವಿರ ಜಾತಿಗಳಿವೆ. ಮೇಲೆ-ಕೆಳಗೆ ಹೋಗಲು ಅವಕಾಶವಿಲ್ಲ. ಹುಟ್ಟಿದಲ್ಲೇ ಇರಬೇಕು ಎಂಬ ಅಂಬೇಡ್ಕರ್ ವ್ಯಾಖ್ಯಾನವನ್ನು ಶ್ಲಾಘಿಸಿದ ಅವರು, ಹಿಂದೂ ಧರ್ಮದ ಯಾವ ಗ್ರಂಥ, ಪುರಾಣಗಳಲ್ಲಿ ಜಾತಿಭೇದ ಮಾಡಬೇಕು ಎಂದಿದೆ ಎಂದು ಪ್ರಶ್ನಿಸಿದರು. ಜಾತಿಭೇದವು ಧರ್ಮಕ್ಕೆ ಆಂತರಿಕವಾಗಿ ಅಂಟಿಕೊಂಡ ಅಪಾಯ ಎಂದು ಎಚ್ಚರಿಸಿದರು.ಇವು ಹಿಂದೂ ಧರ್ಮದ ಆಂತರಿಕ ಸಮಸ್ಯೆಗಳಾದರೆ, ಬಾಹ್ಯ ಅಪಾಯಗಳೂ ಇವೆ. ಹಿಂದೂಗಳ ಬಡತನ, ಕಷ್ಟ, ಅಜ್ಞಾನದ ಲಾಭ ಪಡೆದು ಮತಾಂತರ ನಡೆಯುತ್ತವೆ. ಗುತ್ತಿಗೆ ಆಧಾರಿತ ಪಾಶ್ಚಾತ್ಯ ಜೀವನ ಶೈಲಿಯ ದಬ್ಬಾಳಿಕೆ ಕುಟುಂಬ ಕೇಂದ್ರಿತ ಹಿಂದೂ ಜೀವನ ಪದ್ಧತಿ ಮೇಲೆ ನಡೆಯುತ್ತಿದೆ. ಇಂತಹ ಬಾಹ್ಯ ಅಪಾಯಗಳಿವೆ ಎಂದ ಅವರು, ಆಂತರಿಕ ಮತ್ತು ಬಾಹ್ಯ ಅಪಾಯಗಳನ್ನು ಮೆಟ್ಟಿ ನಿಲ್ಲುವ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಪರಿವರ್ತನೆಯ ಮೂಕ ಸಾಕ್ಷಿಗಳಾಗುವ ಬದಲು ಪರಿವರ್ತನಕಾರರು ನಾವಾಗಬೇಕು ಎಂದರು.ನಮ್ಮದೇ ಸತ್ಯ, ಉಳಿದೆಲ್ಲವೂ ಮಿಥ್ಯ ಎಂದು ಹಿಂದೂ ಧರ್ಮ ಹೇಳುವುದಿಲ್ಲ. ಒಂದು ಗ್ರಂಥ- ಆಚರಣೆ- ಪದ್ಧತಿಗೆ ಸೀಮಿತವಲ್ಲ. ಅದು ವೈವಿಧ್ಯತೆಯಿಂದ ಕೂಡಿದೆ. ನಾಮಧಾರಿ- ನಾಮರಹಿತನೂ, ಪೂಜಿಸುವವನೂ- ಪೂಜಿಸದವನೂ ಎಲ್ಲರೂ ಹಿಂದೂಗಳೇ. ಹಿಂದೂ ಎಂದರೆ ಸ್ವತಂತ್ರ ಮಾರ್ಗದಲ್ಲಿ ಸಾಗುವ ಜೀವನ ವಿಧಾನ. ಹೀಗಾಗಿ ಜಗತ್ತಿನಲ್ಲಿಯೇ ಅನನ್ಯ ಧರ್ಮ ಎಂದರು.  ಕರ್ನಾಟಕ ಉತ್ತರ ಪ್ರಾಂತದ ಸಂಘಚಾಲಕ ಡಾ. ಖಗೇಶನ್ ಪಟ್ಟಣಶೆಟ್ಟಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.