ಶುಕ್ರವಾರ, ಮೇ 27, 2022
29 °C

ಭಿನ್ನಮತ ನಿವಾರಣೆಗೆ ನಾಯಕರ ದಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ- ಉಪಾಧ್ಯಕ್ಷರ ವಿರುದ್ಧ ಬಂಡಾಯ ಸಾರಿರುವ ಸದಸ್ಯರ ಮನವೊಲಿಕೆ ಯತ್ನ ಮುಂದುವರಿದಿದೆ. ಅಧ್ಯಕ್ಷ ಶಿವಪ್ರಭು ಪಾಟೀಲ ಹಾಗೂ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಕಾಂಗ್ರೆಸ್ ಸಲ್ಲಿಸಿದ ಮನವಿ ಪತ್ರಕ್ಕೆ ಬಿಜೆಪಿಯ ಸದಸ್ಯರೂ ಸಹಿ ಹಾಕಿದ್ದು, ಭಿನ್ನರನ್ನು ಕರೆದು ಬಂಡಾಯ ಶಮನಗೊಳಿಸುವ ಕೆಲಸವನ್ನು ಪಕ್ಷದ ನಾಯಕರು ನಡೆಸಿದ್ದಾರೆ.ಸಚಿವ ರೇವುನಾಯಕ ಬೆಳಮಗಿ ಹಾಗೂ ಎಚ್‌ಕೆಡಿಬಿ ಅಧ್ಯಕ್ಷ ಅಮರನಾಥ ಪಾಟೀಲ  ಸೋಮವಾರ `ಬಂಡುಕೋರ~ ಸದಸ್ಯರನ್ನು ಕರೆದು ಚರ್ಚಿಸಿದರು. ಯಾವುದೇ ಕಾರಣಕ್ಕೂ ಜಿಲ್ಲಾ ಪಂಚಾಯಿತಿ ಆಡಳಿತ ಬಿಜೆಪಿ ಕೈಯಿಂದ ಬೇರೆಯವರಿಗೆ ಹೋಗಬಾರದು ಎಂಬ ಛಲದೊಂದಿಗೆ ಭಿನ್ನಮತ ನಿವಾರಣೆಗೆ ಸತತ ಯತ್ನ ನಡೆಸಿದರು ಎಂದು ತಿಳಿದುಬಂದಿದೆ.“ಸತತ ಹೋರಾಟದ ಬಳಿಕ ಎಂಟು ತಿಂಗಳ ಹಿಂದಷ್ಟೇ ಬಿಜೆಪಿ ವಶಕ್ಕೆ ಜಿಲ್ಲಾ ಪಂಚಾಯಿತಿ ಸಿಕ್ಕಿದೆ. ಭಿನ್ನಮತದ ಒಂದೇ ಕಾರಣದಿಂದಾಗಿ ಇದನ್ನು ಕಳೆದುಕೊಳ್ಳುವುದು ಬೇಡ ಎಂದು ಅತೃಪ್ತ ಸದಸ್ಯರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಸದಸ್ಯರ ಜತೆ ಚರ್ಚಿಸಲಾಯಿತು” ಎಂದು ಬಿಜೆಪಿ ಸದಸ್ಯರೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.ತಾಂತ್ರಿಕ ಅಂಶ: ಬಿಜೆಪಿ ಸದಸ್ಯರ ಬಂಡಾಯವನ್ನೇ ಗಟ್ಟಿಯಾಗಿ ನಂಬಿಕೊಂಡಿರುವ ಕಾಂಗ್ರೆಸ್ ಈಗಾಗಲೇ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವ ಕುರಿತು ಮನವಿ ಸಲ್ಲಿಸಿದೆ. ಇದಕ್ಕೆ ಬಿಜೆಪಿಯ ಆರು ಸದಸ್ಯರು ಸಹಿ ಮಾಡಿದ್ದಾರೆ. ಆದರೆ ಈ ಪೈಕಿ ಒಬ್ಬರು ಜೆಡಿಎಸ್‌ನಿಂದ ಆಯ್ಕೆಯಾಗಿ, ಬಿಜೆಪಿ ಬೆಂಬಲಿಸಿದ್ದಾರೆ.ಅವಿಶ್ವಾಸ ನಿರ್ಣಯ ಮಂಡನೆಗೆ ಬಿಜೆಪಿ ಸದಸ್ಯರು ಒಪ್ಪಿಗೆ ಸೂಚಿಸುವ ಮುನ್ನ ಪಕ್ಷಾಂತರ ವಿರೋಧಿ ಕಾಯ್ದೆಯ ಪರಿಣಾಮವನ್ನೂ ಗಮನಿಸುವಂತೆ ಸೂಚಿಸಲಾಗಿದೆ. ಒಂದು ವೇಳೆ `ಅವಿಶ್ವಾಸ ಗೊತ್ತುವಳಿ ವಿರುದ್ಧ ಮತ ಚಲಾಯಿಸಿ~ ಎಂದು ಪಕ್ಷ ವಿಪ್ ಜಾರಿಗೊಳಿಸಿದರೆ ಅದನ್ನು ಉಲ್ಲಂಘಿಸಿದ ಸದಸ್ಯರು ಅನರ್ಹಗೊಳ್ಳುತ್ತಾರೆ.ಪ್ರಸ್ತುತ 23 ಸದಸ್ಯ ಬಲದ (ಮೂವರು ಬಿಜೆಪಿ ಬೆಂಬಲಿತ ಸದಸ್ಯರೂ ಸೇರಿದಂತೆ) ಬಿಜೆಪಿ ಬಣದಲ್ಲಿನ ಸದಸ್ಯರು ಈ ಕಾಯ್ದೆಯಿಂದ `ಪಾರಾಗುವ~ ಗುರಿಯಿದ್ದರೆ ಕನಿಷ್ಠ 8 ಸದಸ್ಯರು ಪಕ್ಷದಿಂದ ಹೊರಬರಬೇಕು.ಈ ಎಲ್ಲ ಅಂಶಗಳನ್ನು ಭಿನ್ನಮತೀಯರಿಗೆ ವಿವರಿಸಿರುವ ಪಕ್ಷದ ಮುಖಂಡರು, ನಾಲ್ಕೈದು ಸದಸ್ಯರು ಗುಂಪಾಗಿ ಹೋದರೆ ಅವರ ಸದಸ್ಯತ್ವವೇ ರದ್ದಾಗಲಿದೆ ಎಂಬ ಪರೋಕ್ಷ ಎಚ್ಚರಿಕೆಯನ್ನು ನೀಡಿದ್ದಾರೆ. ಎಲ್ಲಕ್ಕೂ ಮಿಗಿಲಾಗಿ, `ಅಧಿಕಾರ ಸಿಕ್ಕು ವರ್ಷ ಕೂಡ ಆಗಿಲ್ಲ. ಈಗಲೇ ಹೀಗಾದರೆ ಹೇಗೆ? ಇಂಥ ಅವಕಾಶವನ್ನು ಕಾಂಗ್ರೆಸ್ ಯಾವತ್ತಿಗೂ ಬಿಡುವುದಿಲ್ಲ~ ಎಂದು ತಿಳಿವಳಿಕೆ ಹೇಳಿದ್ದಾರೆ ಎನ್ನಲಾಗಿದೆ.ಗೊಂದಲ-ನಿರಾಶೆ...


ಈವರೆಗೆ ಬಂಡಾಯ ಬಣದಲ್ಲಿ ಗುರುತಿಸಿಕೊಂಡಿದ್ದ ಸದಸ್ಯರು, ಮುಖಂಡರು ಎಸೆದ ಕಾಯ್ದೆಯ ದಾಳಕ್ಕೆ ಸಿಲುಕಿದ್ದಾರೆ. `ಅತ್ತ ಕಾಂಗ್ರೆಸ್ ಕಡೆಗೋ... ಇತ್ತ ಬಿಜೆಪಿಯಲ್ಲೋ...~ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ. ಇನ್ನು, ಬಿಜೆಪಿ ಸದಸ್ಯರ ಬೆಂಬಲದೊಂದಿಗೆ ಜಿಲ್ಲಾ ಪಂಚಾಯಿತಿಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಸಿದ್ಧವಾಗಿದ್ದ ಕಾಂಗ್ರೆಸ್ ಪಾಳೆಯದಲ್ಲಿ ಕೂಡ ಕೊಂಚ ನಿರಾಶೆ ಮೂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.