ಶುಕ್ರವಾರ, ಮೇ 20, 2022
20 °C

ಮಾನವೀಯತೆ ಮೆರೆದ ಪೊಲೀಸರು, ವೈದ್ಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೇವರ್ಗಿ: ತಾಲ್ಲೂಕು ಕೇಂದ್ರದಿಂದ ಕೇವಲ 6ಕಿ.ಮೀ. ಅಂತರದಲ್ಲಿ ಅವರಾದ ಬಳಿ ಶುಕ್ರವಾರ ಮಧ್ಯರಾತ್ರಿ 1ಗಂಟೆ ಸುಮಾರಿಗೆ ಭೀಕರ ರಸ್ತೆ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ ಎಂಟು ಜನರು ಮೃತಪಟ್ಟ ಸುದ್ದಿ ಗ್ರಾಮಸ್ಥರೊಬ್ಬರು ಪೊಲೀಸ್ ಠಾಣೆಗೆ ತಿಳಿಸಿದ್ದಾರೆ.ಸುದ್ದಿ ತಿಳಿಯುತ್ತಿದ್ದಂತೆಯೇ ಕೂಡಲೇ ಕಾರ್ಯ ಪ್ರವರ್ತರಾದ ಸರ್ಕಲ್ ಇನ್ಸಪೆಕ್ಟರ್ ವಿಶ್ವನಾಥರಾವ್ ಕುಲಕರ್ಣಿ, ಸಬ್ ಇನ್ಸಪೆಕ್ಟರ್ ಸಂಗಮೇಶ ಶಿವಯೋಗಿ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ.ಅಪಘಾತದ ಗಂಭೀರತೆ ಅರಿತ ಪೊಲೀಸ್ ಅಧಿಕಾರಿಗಳು ಪಟ್ಟಣದ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳು ಕ್ರೂಜರ್‌ನಲ್ಲಿ ಸಿಕ್ಕಿಕೊಂಡಿದ್ದ ಶವಗಳನ್ನು ಹೊರತೆಗೆಯಲು ಹರಸಾಹಸ ಮಾಡಿದ್ದಾರೆ. ರಾತ್ರಿ 1ರಿಂದ ಬೆಳಗಿನ ಜಾವ 5ರವರೆಗೆ ಕಾರ್ಯಾಚರಣೆ ನಡೆಸಿ, ಗಾಯಗೊಂಡವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.ಅದೇ ಸಮಯಕ್ಕೆ ಘಟನಾ ಸ್ಥಳಕ್ಕೆ ಧಾವಿಸಿದ ನಾಲ್ಕು ಜನ ವೈದ್ಯಾಧಿಕಾರಿಗಳು ಗಾಯಗೊಂಡರಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಗೊಂಡವರಿಗೆ ಅಗತ್ಯ ಚಿಕಿತ್ಸೆ ನೀಡಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಲು ಅಂಬ್ಯುಲೆನ್ಸ್‌ಗಳ ವ್ಯವಸ್ಥೆ ಮಾಡಿದ್ದಾರೆ.ಬೀದರ-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯ ಮೇಲಿರುವ ಅವರಾದ ಬಳಿ ರಸ್ತೆ ಅಪಘಾತ ಸಂಭವಿಸಿದ್ದರಿಂದ ರಸ್ತೆ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕ್ರೂಜರ್ ಹಾಗೂ ಲಾರಿಯನ್ನು ರಸ್ತೆ ಬದಿಗೆ ಸರಿಸಲು ಪೊಲೀಸ್ ಅಧಿಕಾರಿಗಳು ಶ್ರಮಿಸಿದ್ದಾರೆ. ರಾಜ್ಯ ಹೆದ್ದಾರಿಯ ಮೇಲೆ ಮೃತಪಟ್ಟವರ ರಕ್ತ, ದೇಹದ ಕೆಲ ಅಂಗಾಂಗಗಳು ಹೊರ ಬಿದ್ದಿವೆ. ಇದರಿಂದ ಅಪಘಾತದ ಭೀಕರತೆ ಎದ್ದು ಕಾಣುವಂತಾಗಿದೆ.ಅಪಘಾತ ನಡೆದ ಕೇವಲ 5ನಿಮಿಷಗಳಲ್ಲಿ ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಶವಗಳನ್ನು ಹೊರ ತೆಗೆಯುವುದು ಮತ್ತು ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದ್ದಾರೆ.ಒಟ್ಟಾರೆ ತಾಲ್ಲೂಕಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮಾನವೀಯತೆ ಮರೆದಿದ್ದಾರೆ. ಇಡೀ ರಾತ್ರಿ ಆಸ್ಪತ್ರೆಯಲ್ಲಿದ್ದು, ಗಾಯಗೊಂಡವರನ್ನು ಉಪಚರಿಸಿದ್ದಾರೆ.ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸಿದ್ದು ಪಾಟೀಲ, ಸರ್ಕಾರಿ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿಗಳಾದ ಡಾ.ಅಮರಪ್ಪ, ಡಾ. ಅಂಬಾರಾಯ ರುದ್ರವಾಡಿ, ಆಂದೋಲಾ ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ಡಾ. ಶರಣಬಸವ ಅಪಘಾತ ನಡೆದ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಉಪಚರಿಸಿದ್ದಾರೆ.ನಂತರ ಮೃತಪಟ್ಟವರ ಶವಗಳ ಮರಣೋತ್ತರ ಪರೀಕ್ಷೆ ನಡೆಸಿ, ಸಂಬಂಧಿಕರಿಗೆ ಹಸ್ತಾತರಿಸಿದ್ದಾರೆ. ನಂತರ ಶವಗಳನ್ನು ಪಡೆಯಲು ಜೇವರ್ಗಿಗೆ ಆಗಮಿಸಿದ್ದ ಬಿದನೂರ ಗ್ರಾಮಸ್ಥರು ಹಾಗೂ ಸಂಬಂಧಿಕರ ರೋದನ ನೋಡುಗರ ಮನ ಕಲುಕುವಂತಿತ್ತು. ಹಿಂದೆಂದೂ ಕಂಡರಿಯದಂಥ ದುರ್ಘಟನೆಯೊಂದು ಜೇವರ್ಗಿ ತಾಲ್ಲೂಕಿನಲ್ಲಿ ಸಂಭವಿಸಿರುವುದು ವಿಧಿಯ ವಿಪರ್ಯಾಸವೇ ಸರಿ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.